ಸಂಸತ್  
ದೇಶ

ಬದಲಾದ ಸಂಸತ್ ಬಲಾಬಲದ ನಡುವೆ ಮುಂಗಾರು ಅಧಿವೇಶನ; ಜು.19 ರಂದು ಸರ್ವಪಕ್ಷಗಳ ಸಭೆ; ಜಿದ್ದಾಜಿದ್ದಿನ ರಾಜಕೀಯಕ್ಕೆ ವೇದಿಕೆ ಸಜ್ಜು..!

ಅಧಿವೇಶನದಲ್ಲಿ ಸರ್ಕಾರ ಹಲವು ಪ್ರಮುಖ ಕಾನೂನುಗಳ ಜಾರಿಗೆ ತರಲು ಮುಂದಾಗಿದೆ. ಇದರಲ್ಲಿ ಗಂಭೀರ ಅಪರಾಧಗಳಿಗಾಗಿ ಪ್ರಧಾನಿ, ಸಿಎಂ ಅಥವಾ ಸಚಿವರು 30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರೆ ಅವರನ್ನು ಸ್ವಯಂಚಾಲಿತವಾಗಿ ಹುದ್ದೆಯಿಂದ ತೆಗೆದುಹಾಕುವ 130ನೇ ಸಂವಿಧಾನ ತಿದ್ದುಪಡಿ ವಿಧೇಯಕ ಒಳಗೊಂಡಿದೆ.

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲು ಒಂದು ದಿನ ಬಾಕಿ ಇರುವಂತೆ, ಕೇಂದ್ರ ಸರ್ಕಾರವು ಜುಲೈ 19 ರಂದು ಬೆಳಿಗ್ಗೆ 11:00 ಗಂಟೆಗೆ ಮಹತ್ವದ ಸರ್ವಪಕ್ಷ ಸಭೆಯನ್ನು ಕರೆದಿದೆ.

ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪ ಹಾಗೂ ಸರ್ಕಾರದ ಶಾಸನಾತ್ಮಕ ಕಾರ್ಯಸೂಚಿಗಳ ಕುರಿತು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಯಂತೆ ಮುಂಗಾರು ಅಧಿವೇಶನವು ಜುಲೈ 20 ರಿಂದ ಆಗಸ್ಟ್ 13, 2026 ರವರೆಗೆ ನಡೆಯಲಿದೆ.

ಈ ಬಾರಿಯ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಹಲವು ಪ್ರಮುಖ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿದೆ. ಇದರಲ್ಲಿ ಪ್ರಮುಖವಾಗಿ, ಗಂಭೀರ ಅಪರಾಧಗಳಿಗಾಗಿ ಪ್ರಧಾನಿ, ಮುಖ್ಯಮಂತ್ರಿಗಳು ಅಥವಾ ಸಚಿವರು 30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರೆ ಅವರನ್ನು ಸ್ವಯಂಚಾಲಿತವಾಗಿ ಹುದ್ದೆಯಿಂದ ತೆಗೆದುಹಾಕುವ 130ನೇ ಸಂವಿಧಾನ ತಿದ್ದುಪಡಿ ವಿಧೇಯಕ ಒಳಗೊಂಡಿದೆ. ಇದರೊಂದಿಗೆ ಮಹಿಳೆಯರಿಗೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಶೇ. 33 ರಷ್ಟು ಮೀಸಲಾತಿ ನೀಡುವ ವಿಧೇಯಕ ಹಾಗೂ ಕ್ಷೇತ್ರ ಮರುವಿಂಗಡಣೆ (Delimitation) ವಿಧೇಯಕಗಳು ಚರ್ಚೆಗೆ ಬರಲಿವೆ.

ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಒಕ್ಕೂಟವು ದೇಶದ ಪ್ರಚಲಿತ ವಿದ್ಯಮಾನಗಳ ಮುಖಾಂತರ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಲು ಸಜ್ಜಾಗಿದೆ.

ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಹಗರಣ, ಆಪರೇಷನ್ ಸಿಂಧೂರ್ ಸಾವು-ನೋವುಗಳ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿರುದ್ಧ ಹಕ್ಕುಚ್ಯುತಿ ಮಂಡನೆ, ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗ ಮತ್ತು ರೈತರ ಸಮಸ್ಯೆಗಳ ಬಗ್ಗೆ ಸದನದಲ್ಲಿ ತೀವ್ರ ಹೋರಾಟ ನಡೆಸಲು ಪ್ರತಿಪಕ್ಷಗಳು ನಿರ್ಧರಿಸಿವೆ.

ಇದಲ್ಲದೆ, ಇತ್ತೀಚೆಗೆ ನಡೆದ ಭಾರಿ ರಾಜಕೀಯ ಪಕ್ಷಾಂತರಗಳು ಈ ಅಧಿವೇಶನದಲ್ಲಿ ಪ್ರತಿಫಲಿಸಲಿವೆ. ಟಿಎಂಸಿ (TMC) ಪಕ್ಷದ 20 ಲೋಕಸಭಾ ಸದಸ್ಯರು ಎನ್‌ಸಿಪಿಐ (NCPI) ಜೊತೆ ವಿಲೀನಗೊಂಡು ಆಡಳಿತಾರೂಢ ಎನ್‌ಡಿಎ (NDA) ಒಕ್ಕೂಟಕ್ಕೆ ಬೆಂಬಲ ನೀಡಿದ್ದಾರೆ.

ಶಿವಸೇನಾ (UBT) ಮತ್ತು ಆಪ್ (AAP) ಪಕ್ಷಗಳ ಸಂಸದರೂ ಕೂಡ ಆಡಳಿತ ಪಕ್ಷದತ್ತ ಮುಖ ಮಾಡಿದ್ದಾರೆ. ಮತ್ತೊಂದೆಡೆ, ಡಿಎಂಕೆ (DMK) ಪಕ್ಷವು ಲೋಕಸಭೆಯಲ್ಲಿ ಕಾಂಗ್ರೆಸ್‌ನಿಂದ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಕಲ್ಪಿಸುವಂತೆ ಕೋರಿರುವುದು ಪ್ರತಿಪಕ್ಷಗಳ ಒಗ್ಗಟ್ಟಿಗೆ ಒಡೆತ ಬಿದ್ದಿರುವುದನ್ನು ಸೂಚಿಸುತ್ತಿದೆ.

ಒಟ್ಟಾರೆಯಾಗಿ, ಈ ಬಾರಿಯ ಮುಂಗಾರು ಅಧಿವೇಶನವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಭಾರಿ ರಾಜಕೀಯ ಜಟಾಪಟಿಗೆ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಜುಲೈ 17ರಂದು ಜೆಪಿಸಿ ವರದಿ

130ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ (JPC) ಜುಲೈ 17ರಂದು ತನ್ನ ವರದಿಯನ್ನು ಅಂಗೀಕರಿಸಿ ಸಂಸತ್ತಿಗೆ ಸಲ್ಲಿಸುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ಸಮಿತಿಯು ಪ್ರಧಾನಿ, ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಶಾಶ್ವತವಾಗಿ ಪದಚ್ಯುತಿಗೊಳಿಸುವ ಬದಲು, 30 ದಿನಗಳ ನಿರಂತರ ಬಂಧನದ ಬಳಿಕ ತಾತ್ಕಾಲಿಕ ಅಮಾನತು ಮಾಡುವಂತೆ ಶಿಫಾರಸು ಮಾಡಿದೆ.

ಇದಲ್ಲದೆ, ಸಂಬಂಧಿತ ವ್ಯಕ್ತಿ ನಂತರ ನ್ಯಾಯಾಲಯದಿಂದ ಖುಲಾಸೆಯಾದರೆ ಅಥವಾ ನಿಗದಿತ ಅವಧಿಯಲ್ಲಿ ಆರೋಪ ಸಾಬೀತಾಗದಿದ್ದರೆ, ಅವರನ್ನು ಮತ್ತೆ ಹುದ್ದೆಗೆ ಮರುಸ್ಥಾಪಿಸುವ ಸ್ವಯಂಚಾಲಿತ ಮರುನೇಮಕಾತಿ (Automatic Reversal) ವ್ಯವಸ್ಥೆಯನ್ನೂ ಶಿಫಾರಸು ಮಾಡಲಾಗಿದೆ.

ಈ ಮಸೂದೆಯನ್ನು ವಿರೋಧಿಸಿರುವ ಬಹುತೇಕ ವಿಪಕ್ಷಗಳು, ಇದು ತಾವು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಸಾಧನವಾಗಬಹುದು ಎಂದು ಆರೋಪಿಸಿ, ಜಂಟಿ ಸಂಸದೀಯ ಸಮಿತಿಯಿಂದ ದೂರ ಉಳಿದಿದ್ದವು.

ಸಮಿತಿಯ ವರದಿಯಲ್ಲಿ "ಗಂಭೀರ ಅಪರಾಧ" ಎಂಬ ಪದಕ್ಕೆ ವ್ಯಾಖ್ಯಾನ ನೀಡಲಾಗಿದ್ದು, ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಪಡುವ ಅಪರಾಧಗಳನ್ನು ಗಂಭೀರ ಅಪರಾಧಗಳೆಂದು ಪರಿಗಣಿಸಲು ಶಿಫಾರಸು ಮಾಡಲಾಗಿದೆ.

ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲೂ ಹಾಜರಿದ್ದು ಲಾಯಿಸುವ ಸದಸ್ಯರ ಮೂರನೇ ಎರಡರಷ್ಟು (2/3) ಬಹುಮತ ಅಗತ್ಯವಿದೆ.

ಈ ಲೆಕ್ಕಾಚಾರದಲ್ಲಿ ಎನ್‌ಡಿಎಗೆ ಸುಮಾರು 360 ಸದಸ್ಯರ ಬೆಂಬಲ ಬೇಕಾಗುತ್ತದೆ. ಪ್ರಸ್ತುತ ಎನ್‌ಡಿಎಗೆ 293 ಸದಸ್ಯರ ಬೆಂಬಲವಿದ್ದು, ಟಿಎಂಸಿಯ 20 ಬಂಡಾಯ ಸಂಸದರು ಹಾಗೂ ಶಿವಸೇನಾ (ಯುಬಿಟಿ)ಯ 6 ಬಂಡಾಯ ಸಂಸದರು ಬೆಂಬಲ ನೀಡಿದರೆ, ಈ ಸಂಖ್ಯೆ 319ಕ್ಕೆ ಏರಬಹುದು. ಆದರೆ, ಮಸೂದೆ ಅಂಗೀಕಾರಕ್ಕೆ ಇನ್ನೂ ಹೆಚ್ಚುವರಿ ಬೆಂಬಲ ಅಗತ್ಯವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran ಸಂಘರ್ಷ ತೀವ್ರ: Hormuz ಜಲಸಂಧಿ ಬಳಿ ಅಮೆರಿಕ ಭೀಕರ ವೈಮಾನಿಕ ದಾಳಿ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ..!

Bangkok pubನಲ್ಲಿ ಭೀಕರ ಅಗ್ನಿ ಅವಘಡ; 27 ಮಂದಿ ಸಜೀವ ದಹನ; 63ಕ್ಕೂ ಹೆಚ್ಚು ಮಂದಿಗೆ ಗಾಯ, ವಿದ್ಯುತ್ ದೋಷವೇ ದುರಂತಕ್ಕೆ ಕಾರಣ?

ರಾಹುಲ್ ದ್ರಾವಿಡ್ ಇಂಗ್ಲೆಂಡ್ ಟೆಸ್ಟ್ ತಂಡದ ಮುಂದಿನ ಕೋಚ್ ಆಗ್ತಾರಾ?

ನಾಳೆ ಅರ್ಧಕ್ಕೆ ಹಾರಲಿದೆ ತ್ರಿವರ್ಣ ಧ್ವಜ; ದೇಶಾದ್ಯಂತ ಶೋಕಾಚರಣೆ: ಕತಾರ್‌ನ ಮಾಜಿ ಅಮೀರ್ ನಿಧನಕ್ಕೆ PM ಮೋದಿ ಸಂತಾಪ

ಅಮೆರಿಕ ಜೊತೆ ಒಪ್ಪಂದ 'ಮುಗಿದಿದೆ': ಹೊಸ ದಾಳಿಗಳ ಬೆನ್ನಲ್ಲೇ ಇರಾನ್ ಘೋಷಣೆ