ಛತ್ತೀಸ್‌ಗಢದ ಜಿಲ್ಲಾ ಗ್ರಾಹಕ ಆಯೋಗವು, ವೈದ್ಯರೊಬ್ಬರು ಖರೀದಿಸಿದ ಕಾರನ್ನು ಹೊಸ E20 ಪೆಟ್ರೋಲ್-ಕಾಂಪ್ಲೈಂಟ್ ಮಾದರಿಯೊಂದಿಗೆ ಬದಲಾಯಿಸುವಂತೆ ಮಾರುತಿ ಸುಜುಕಿ ಡೀಲರ್‌ಗೆ ಸೂಚಿಸಿದೆ.
16 ತಿಂಗಳ ಹಿಂದೆ ತಯಾರಿಸಿದ ಈ ಕಾರು, ಮಾರಾಟ ಮಾಡಿದ ನಂತರ ಮತ್ತು ಪದೇ ಪದೇ ದುರಸ್ತಿ ಮಾಡಿದರೂ ಎಂಜಿನ್ ಸಮಸ್ಯೆ ಮರುಕಳಿಸುತ್ತಿದ್ದು, ಅದನ್ನು ಸರಿಪಡಿಸಲು ವಿಫಲವಾದ ನಂತರ, ಗ್ರಾಹಕ ನ್ಯಾಯಾಲಯವು ಜುಲೈ 14 ರ ಆದೇಶದಲ್ಲಿ, ಪ್ರತಿವಾದಿ(ಮಾರುತಿ ಸುಜುಕಿ ಮತ್ತು ಡೀಲರ್)ಗಳ ಸೇವೆಯಲ್ಲಿ ಕೊರತೆ ಇದೆ. ದೋಷಯುಕ್ತ ವಾಹನವನ್ನು ಹಿಂಪಡೆದು E20-ಹೊಂದಾಣಿಕೆಯ ಎಂಜಿನ್ ಹೊಂದಿರುವ ಅದೇ ಮಾದರಿಯ ಹೊಸ ಕಾರು ಒದಗಿಸುವಂತೆ ಆದೇಶಿಸಿದೆ.
45 ದಿನಗಳಲ್ಲಿ ಬದಲಿ ಹೊಸ ಕಾರು ಒದಗಿಸದಿದ್ದರೆ, ಡೀಲರ್ ಮತ್ತು ತಯಾರಕರು, ದೂರುದಾರರಿಗೆ ಕಾರು, ನೋಂದಣಿ ಮತ್ತು ವಿಮೆಗಾಗಿ ಪಾವತಿಸಿದ 20.50 ಲಕ್ಷ ರೂ.ಗಳನ್ನು ಮರುಪಾವತಿಸಬೇಕು. ಅಲ್ಲದೆ ಪರಿಹಾರ ಹಾಗೂ ಮೊಕದ್ದಮೆ ವೆಚ್ಚಗಳನ್ನು ಪಾವತಿಸಬೇಕು ಎಂದು ರಾಯ್‌ಪುರದ ಹೆಚ್ಚುವರಿ ಪೀಠದ ಜಿಲ್ಲಾ ಗ್ರಾಹಕ ನ್ಯಾಯಾಲಯ ನಿರ್ದೇಶಿಸಿದೆ.
ರಾಯ್‌ಪುರ ಮೂಲದ ವೈದ್ಯ ಪ್ರೇಮ್‌ರಾಜ್ ದೇಬ್ಟಾ ಸಲ್ಲಿಸಿದ ದೂರಿನ ಮೇರೆಗೆ ಗ್ರಾಹಕ ಆಯೋಗದ ಅಧ್ಯಕ್ಷ ಪ್ರಶಾಂತ್ ಕುಂಡು ಮತ್ತು ಸದಸ್ಯ ಡಾ. ಆನಂದ್ ವರ್ಗೀಸ್ ಅವರು ಈ ಆದೇಶ ಹೊರಡಿಸಿದ್ದಾರೆ.
ದೂರುದಾರರಿಗೆ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ ಆಯೋಗವು 1 ಲಕ್ಷ ರೂ. ಪರಿಹಾರ ಮತ್ತು 10,000 ರೂ. ಮೊಕದ್ದಮೆ ವೆಚ್ಚವನ್ನು 45 ದಿನಗಳಲ್ಲಿ ಪಾವತಿಸುವಂತೆ ತೀರ್ಪು ನೀಡಿದೆ.
ದೂರುದಾರರ ಪ್ರಕಾರ, ಜೂನ್ 3, 2024 ರಂದು ಕಂಪನಿಯ ಅಧಿಕೃತ ಡೀಲರ್ ನೆಕ್ಸಾ ಮ್ಯಾಗ್ನೆಟೊ(ಸ್ಕಯಾ ಆಟೋಮೊಬೈಲ್ಸ್) ನಿಂದ 18.29 ಲಕ್ಷ ರೂ.ಗಳಿಗೆ ಮಾರುತಿ ಗ್ರ್ಯಾಂಡ್ ವಿಟಾರಾ ಇಂಟೆಲಿಜೆಂಟ್ ಎಲೆಕ್ಟ್ರಿಕ್(ಸ್ಟ್ರಾಂಗ್ ಹೈಬ್ರಿಡ್) ಜೀಟಾ ಪ್ಲಸ್ 1.5 ಸಿವಿಟಿಯನ್ನು ಖರೀದಿಸಿದ್ದರು. ವಿಮೆ ಮತ್ತು ಆರ್‌ಟಿಒ ಶುಲ್ಕ ಒಳಗೊಂಡಂತೆ, ಅವರು ಮಾರುತಿ ಸುಜುಕಿ ಡೀಲರ್‌ಗೆ ಒಟ್ಟು 20,50,494 ರೂ.ಗಳನ್ನು ಪಾವತಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಕಾರಿಗೆ ಮೇ 2029 ರವರೆಗೆ ಅಥವಾ ಒಂದು ಲಕ್ಷ ಕಿಲೋಮೀಟರ್ ಓಟ, ಯಾವುದು ಮೊದಲು ಬರುತ್ತದೆಯೋ ಅಲ್ಲಿಯವರೆಗೆ ಮಾನ್ಯವಾಗಿರುವ ವಿಸ್ತೃತ ವಾರಂಟಿ ನೀಡಲಾಗಿದೆ.
ವಿಚಾರಣೆಯ ಸಮಯದಲ್ಲಿ, ದೂರುದಾರರ ಪರ ವಕೀಲರು, ಕಾರು 21,913 ಕಿ.ಮೀ ಕ್ರಮಿಸಿದ ನಂತರ ನವೆಂಬರ್ 11, 2024 ರಂದು ಕಾರು ಕೆಟ್ಟುಹೋಯಿತು ಎಂದು ವಾದಿಸಿದ್ದಾರೆ. ಡೀಲರ್‌ನ ಸರ್ವಿಸ್ ಕೇಂದ್ರವು ಆರಂಭದಲ್ಲಿ ಸಮಸ್ಯೆಗೆ ಕಲಬೆರಕೆ ಇಂಧನ ಕಾರಣ ಎಂದು ಹೇಳಿತು ಮತ್ತು ಇಂಧನ ಟ್ಯಾಂಕ್ ಅನ್ನು ಖಾಲಿ ಮಾಡಿ ನಂತರ ಹೊಸ ಪೆಟ್ರೋಲ್ ತುಂಬಿಸಿತು. ಆದಾಗ್ಯೂ, ಸುಮಾರು 60 ಕಿ.ಮೀ ಪ್ರಯಾಣಿಸಿದ ನಂತರ ಕಾರು ಮತ್ತೆ ಕೆಟ್ಟು ನಿಂತಿತು ಎಂದು ಆರೋಪಿಸಲಾಗಿದೆ.