ನವದೆಹಲಿ: 'ನಮ್ಮ ವಿದ್ಯಾರ್ಥಿಗಳು ಬೀದಿಯಲ್ಲಿದ್ದಾರೆ, ನಾವು ಕೂಡ ಬೀದಿಗಿಳಿದಿದ್ದೇವೆ.. ನಮ್ಮನ್ನು ತಡೆಯಲು ಸಾಧ್ಯವಿಲ್ಲ.. ಧರ್ಮೇಂದ್ರ ಪ್ರಧಾನಿ ರಾಜಿನಾಮೆ ನೀಡಲೇಬೇಕು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ (INDIA) ಒಕ್ಕೂಟದ ಸಂಸದರು ಗುರುವಾರ ಗಾಂಧಿ ಸ್ಮೃತಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಆರಂಭದಲ್ಲಿ ದೆಹಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಮೆರವಣಿಗೆಯನ್ನು ತಡೆದರೂ, ಕೆಲ ಸಮಯದ ಬಳಿಕ ಗಾಂಧಿ ಸ್ಮೃತಿಯತ್ತ ತೆರಳಲು ಅನುಮತಿ ನೀಡಿದರು.
ಅದರಂತೆ ಗಾಂಧಿ ಸ್ಮೃತಿವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು, ಸಂವಿಧಾನದ ಪ್ರತಿಯೊಂದಿಗೆ ರಾಹುಲ್ ಮೆರವಣಿಗೆ ನಡೆಸಿದರು.
ಇದೇ ಸ್ಥಳದಲ್ಲಿ ಮಹಾತ್ಮ ಗಾಂಧಿ ಅವರು 1948ರ ಜನವರಿ 30ರಂದು ಹತ್ಯೆಯಾಗುವ ಮುನ್ನ ಕೊನೆಯ ದಿನಗಳನ್ನು ಕಳೆದಿದ್ದರು. ಗಾಂಧಿ ಸ್ಮೃತಿಯಲ್ಲಿ ಮಹಾತ್ಮ ಗಾಂಧಿಗೆ ಗೌರವ ನಮನ ಸಲ್ಲಿಸಿದ ರಾಹುಲ್ ಗಾಂಧಿ, ರಾಷ್ಟ್ರಧ್ವಜವನ್ನು ಹಾರಿಸಿದರು.
ಕಾಂಗ್ರೆಸ್ ನಾಯಕರು "ಪ್ರಶ್ನೆಪತ್ರಿಕೆ ಸೋರಿಕೆ" ಹಾಗೂ "ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು" ಎಂಬ ಬೇಡಿಕೆಗಳಿರುವ ಫಲಕಗಳನ್ನು ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಹಲವು ನಾಯಕರು ತಮ್ಮ ಮೊಬೈಲ್ ಫೋನ್‌ಗಳ ಫ್ಲ್ಯಾಶ್‌ಲೈಟ್ ಆನ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ರಾಹುಲ್ ನಿವಾಸದಿಂದ ಮೂರು ಬಸ್‌ಗಳಲ್ಲಿ ಪ್ರಯಾಣ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇಂಡಿಯಾ ಒಕ್ಕೂಟದ ಹಿರಿಯ ನಾಯಕರು ಮೊದಲು ರಾಹುಲ್ ಗಾಂಧಿಯವರ ನಿವಾಸದಲ್ಲಿ ಸಭೆ ನಡೆಸಿದರು. ಬಳಿಕ ಮೂರು ಬಸ್‌ಗಳಲ್ಲಿ ಗಾಂಧಿ ಸ್ಮೃತಿಯತ್ತ ಹೊರಟರು.
ಈ ಭೇಟಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಹಾಗೂ ಸಿಜೆಪಿ (Cockroach Janta Party) ನೇತೃತ್ವದ ಪ್ರತಿಭಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸುವ ಉದ್ದೇಶ ಹೊಂದಿದೆ ಎಂದು ಪ್ರತಿಪಕ್ಷ ನಾಯಕರು ತಿಳಿಸಿದರು.
ಮೆರವಣಿಗೆಯ ಮುಂಚೂಣಿ ಬಸ್‌ನಲ್ಲಿ ಚಾಲಕರ ಪಕ್ಕದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕುಳಿತು ಭದ್ರತಾ ಸಿಬ್ಬಂದಿಯೊಂದಿಗೆ ಮಾರ್ಗದ ಕುರಿತು ಚರ್ಚಿಸುತ್ತಿದ್ದರೆ, ರಾಹುಲ್ ಗಾಂಧಿ ಬಸ್‌ನೊಳಗೆ ಇತರ ಪ್ರತಿಪಕ್ಷ ನಾಯಕರೊಂದಿಗೆ ಪರಿಸ್ಥಿತಿಯನ್ನು ಗಮನಿಸುತ್ತಿದ್ದರು.
ಮಧ್ಯದಲ್ಲೇ ತಡೆದ ಪೊಲೀಸರು
ರಾಹುಲ್ ಗಾಂಧಿಯವರ ನಿವಾಸದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ದೆಹಲಿ ಪೊಲೀಸರು ಮೆರವಣಿಗೆಯನ್ನು ತಡೆದರು. ಒಂದು ಪೊಲೀಸ್ ಬಸ್ ಅನ್ನು ಮೆರವಣಿಗೆಯ ಮುಂದೆ ನಿಲ್ಲಿಸಿದರೆ, ಇನ್ನೆರಡು ಬಸ್‌ಗಳನ್ನು ಹಿಂಭಾಗದಲ್ಲಿ ನಿಲ್ಲಿಸಲಾಯಿತು. ಮಾರ್ಗದುದ್ದಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಲೌಡ್‌ಸ್ಪೀಕರ್ ಮೂಲಕ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163 ಜಾರಿಯಲ್ಲಿದೆ ಎಂದು ಪೊಲೀಸರು ಘೋಷಣೆ ಮಾಡುತ್ತಿದ್ದರು.
'ವಿದ್ಯಾರ್ಥಿಗಳು ಬೀದಿಯಲ್ಲಿದ್ದಾರೆ, ನಾವೂ ಬಂದಿದ್ದೇವೆ'
ಮೆರವಣಿಗೆಯನ್ನು ತಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, "ನಮ್ಮ ವಿದ್ಯಾರ್ಥಿಗಳು ಬೀದಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅದಕ್ಕಾಗಿ ನಾವೂ ಬೀದಿಗಿಳಿದಿದ್ದೇವೆ. ಗಾಂಧಿ ಸ್ಮೃತಿಗೆ ತೆರಳುತ್ತಿದ್ದೆವು. ಆದರೆ ನಮ್ಮನ್ನು ತಡೆದಿದ್ದಾರೆ. ನಮ್ಮ ಎಲ್ಲಾ ಸಂಸದರು ಅಲ್ಲಿಗೆ ಹೋಗಲು ಬಯಸಿದ್ದರು. ಆದರೆ ಅನುಮತಿ ನೀಡಲಿಲ್ಲ" ಎಂದು ಆರೋಪಿಸಿದರು.
'ವಿದ್ಯಾರ್ಥಿಗಳು ಒಂಟಿಯಲ್ಲ'
ಮೆರವಣಿಗೆಗೂ ಮುನ್ನ ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, "ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳನ್ನು ಸ್ಮರಿಸಲು ಹಾಗೂ ನ್ಯಾಯಕ್ಕಾಗಿ ಶಾಂತಿಯುತವಾಗಿ ಪ್ರತಿಭಟಿಸಿದ ವೇಳೆ ಗಾಯಗೊಂಡ ವಿದ್ಯಾರ್ಥಿಗಳ ಬೆಂಬಲಕ್ಕೆ ನಾವು ಗಾಂಧಿ ಸ್ಮೃತಿಗೆ ತೆರಳುತ್ತಿದ್ದೇವೆ. ಭಾರತದ ವಿದ್ಯಾರ್ಥಿಗಳು ಒಂಟಿಯಲ್ಲ. ಅವರ ಬೇಡಿಕೆಗಳಿಗೆ ಸಂಪೂರ್ಣ ಪ್ರತಿಪಕ್ಷ ಬೆಂಬಲವಾಗಿ ನಿಂತಿದೆ," ಎಂದು ಹೇಳಿದ್ದಾರೆ.
'ನಾವು ಅಪರಾಧಿಗಳೇ?' – ಸಂದೀಪ್ ದೀಕ್ಷಿತ್ ಪ್ರಶ್ನೆ
ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಕೂಡ ಪೊಲೀಸ್ ಕ್ರಮವನ್ನು ಪ್ರಶ್ನಿಸಿದರು. "ಸಂಸತ್ತಿಗೆ ಪ್ರವೇಶಿಸಲು ಅವಕಾಶ ಇರುವ ನಮಗೆ ಗಾಂಧಿ ಸ್ಮೃತಿಗೆ ಹೋಗಲು ಅವಕಾಶ ಇಲ್ಲವೇ? ನಾವು ರೌಡಿಗಳೇ ಅಥವಾ ಅಪರಾಧಿಗಳೇ?" ಎಂದು ಅವರು ವಾಗ್ದಾಳಿ ನಡೆಸಿದರು.
ಬಿಗಿ ಭದ್ರತೆ, RAF ನಿಯೋಜನೆ
ಪ್ರತಿಪಕ್ಷಗಳ ಕಾರ್ಯಕ್ರಮದ ಬಗ್ಗೆ ಮುಂಚಿತ ಮಾಹಿತಿ ಪಡೆದಿದ್ದ ದೆಹಲಿ ಪೊಲೀಸರು ಗಾಂಧಿ ಸ್ಮೃತಿ ಹಾಗೂ ಲುಟ್ಯನ್ಸ್ ದೆಹಲಿ ಪ್ರದೇಶದಲ್ಲಿ ಭಾರೀ ಭದ್ರತೆ ಏರ್ಪಡಿಸಿದ್ದರು. ದೆಹಲಿ ಪೊಲೀಸ್, ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಹಾಗೂ ಅರೆಸೇನಾ ಪಡೆಗಳ ದೊಡ್ಡ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಗಲಭೆ ನಿಯಂತ್ರಣ ಸಾಮಗ್ರಿಗಳೊಂದಿಗೆ RAF ಸಿಬ್ಬಂದಿ ಸಜ್ಜಾಗಿರುವ ದೃಶ್ಯಗಳು ಕಂಡುಬಂದವು. ಗೃಹ ಸಚಿವ ಅಮಿತ್ ಶಾ ನಿವಾಸದತ್ತ ಸಾಗುವ ಅತಿ ಸೂಕ್ಷ್ಮ ಭದ್ರತಾ ವಲಯದ ಬಳಿ RAF ಸಿಬ್ಬಂದಿ ಮಾನವ ಸರಪಳಿ ನಿರ್ಮಿಸಲು ಸಿದ್ಧರಾಗಿದ್ದರು.
ಪ್ರತಿಭಟನೆ ಹಿನ್ನೆಲೆ
ಜೂನ್ 6ರಿಂದ ಸಿಜೆಪಿ ನೇತೃತ್ವದಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸಬೇಕು, ನೀಟ್ ಪ್ರಕರಣದ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.