ಕಿರಣ್ ರಿಜಿಜು 
ದೇಶ

ಚರ್ಚೆಗೆ ಪ್ರತಿಪಕ್ಷಗಳು ಗೈರಾದರೂ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಅಂಗೀಕಾರ ಶತಸಿದ್ಧ: ಕಿರಣ್ ರಿಜಿಜು

ಸಂಸತ್ತಿನಲ್ಲಿ ವಿಪಕ್ಷಗಳ ತೀವ್ರ ಗದ್ದಲದ ನಡುವೆಯೇ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಸೋಮವಾರ ಈ ಮಸೂದೆಯನ್ನು ಮಂಡಿಸಿದರು.

ನವದೆಹಲಿ: ಪ್ರತಿಪಕ್ಷಗಳು ಚರ್ಚೆಯನ್ನು ಬಹಿಷ್ಕರಿಸಿದರೂ ಸಹ, ಸರ್ಕಾರವು ಸಾರ್ವಜನಿಕ ಪರೀಕ್ಷೆಗಳ (ಅಕ್ರಮಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026 ಅನ್ನು ಅಂಗೀಕರಿಸುವುದನ್ನು ಖಚಿತಪಡಿಸಿಕೊಳ್ಳುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೋಮವಾರ ಹೇಳಿದರು.

ಲೋಕಸಭೆಯಲ್ಲಿ ಮಾತನಾಡಿದ ರಿಜಿಜು, ಸರ್ಕಾರ ಚರ್ಚೆಗೆ ಸಿದ್ಧವಾಗಿದೆ. ಆದರೆ, ವಿರೋಧ ಪಕ್ಷಗಳು ಚರ್ಚೆಯನ್ನು ಬಹಿಷ್ಕರಿಸಲು ನಿರ್ಧರಿಸಿದರೆ ಮಸೂದೆ ಅಂಗೀಕಾರ ವಿಳಂಬವಾಗಲು ಬಿಡುವುದಿಲ್ಲ ಎಂದು ಹೇಳಿದರು.

'ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮ ತಡೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಪರೀಕ್ಷಾ ಸುಧಾರಣಾ ಮಸೂದೆ ಕುರಿತು ಚರ್ಚಿಸಲು ಬಯಸದಿದ್ದರೆ, ಸರ್ಕಾರವು ಚರ್ಚೆಯಿಲ್ಲದೆಯೇ ಮಸೂದೆಯನ್ನು ಅಂಗೀಕರಿಸುತ್ತದೆ' ಎಂದರು.

ಕಿರಣ್ ರಿಜಿಜು ಅವರ ಹೇಳಿಕೆಯ ನಂತರ ಸ್ಪೀಕರ್, ಎಲ್ಲ ರಾಜಕೀಯ ಪಕ್ಷಗಳು ಈ ವಿಷಯವನ್ನು ತಮ್ಮೊಳಗೆ ಚರ್ಚಿಸಬೇಕು. ಮಸೂದೆ ಮೇಲಿನ ಚರ್ಚೆಯನ್ನು ಸಂಜೆ 5 ಗಂಟೆಗೆ ಕೈಗೆತ್ತಿಕೊಳ್ಳಬಹುದು ಎಂದರು.

ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸುವ ನಾಯಕರ ಪಟ್ಟಿಯನ್ನು ಬಿಜೆಪಿ ಮತ್ತು ಎನ್‌ಡಿಎ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿವೆ. ಬನ್ಸುರಿ ಸ್ವರಾಜ್, ತೇಜಸ್ವಿ ಸೂರ್ಯ, ಶಶಾಂಕ್ ಮಣಿ ತ್ರಿಪಾಠಿ, ಅನುರಾಗ್ ಠಾಕೂರ್, ಶ್ರೀಕಾಂತ್ ಶಿಂಧೆ, ಅರುಣ್ ಭಾರತಿ, ಅಲೋಕ್ ಸುಮನ್, ಅನುಪ್ರಿಯಾ ಪಟೇಲ್ ಮತ್ತು ಸಯಾಲಿ ಘೋಷ್ ಸೇರಿದಂತೆ ಸುಮಾರು 12 ಎನ್‌ಡಿಎ ನಾಯಕರು ಮಸೂದೆಯ ಕುರಿತು ಚರ್ಚೆಯಲ್ಲಿ ಪಾಲ್ಗೊಳ್ಳಲು ಹೆಸರನ್ನು ಅಂತಿಮಗೊಳಿಸಲಾಗಿದೆ.

ಈ ಮಸೂದೆಯ ಕುರಿತು ಸರ್ಕಾರ ಎಂಟು ಗಂಟೆಗಳ ಚರ್ಚೆ ನಡೆಸುವ ಸಾಧ್ಯತೆಯಿದೆ.

ಸಂಸತ್ತಿನಲ್ಲಿ ವಿಪಕ್ಷಗಳ ತೀವ್ರ ಗದ್ದಲದ ನಡುವೆಯೇ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಸೋಮವಾರ ಈ ಮಸೂದೆಯನ್ನು ಮಂಡಿಸಿದರು.

ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗುವವರಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, 5 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹50 ಲಕ್ಷದವರೆಗೆ ದಂಡ ವಿಧಿಸಲು ಪ್ರಸ್ತಾಪಿಸಲಾಗಿದೆ. ಪರೀಕ್ಷಾ ಮಾಫಿಯಾ ಅಥವಾ ಸಂಘಟಿತ ಜಾಲಗಳು ಅಕ್ರಮ ಎಸಗಿದರೆ ₹1 ಕೋಟಿವರೆಗೆ ದಂಡ ಮ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ಕ್ರಮಗಳನ್ನು ತಿದ್ದುಪಡಿಯಲ್ಲಿ ಸೇರಿಸಲಾಗಿದೆ.

ಈಮಧ್ಯೆ, ಮಸೂದೆಯನ್ನು ನೇರ ಚರ್ಚೆಗೆ ತೆಗೆದುಕೊಳ್ಳಬಾರದು ಮತ್ತು ಬದಲಾಗಿ ಹೆಚ್ಚಿನ ಚರ್ಚೆಗಾಗಿ ಸಂಸದೀಯ ಸ್ಥಾಯಿ ಸಮಿತಿ ಅಥವಾ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ಉಲ್ಲೇಖಿಸಬೇಕೆಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಒತ್ತಾಯಿಸಿವೆ.

ವಿದ್ಯಾರ್ಥಿಗಳ ಮೇಲಿನ ಹಲ್ಲೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊದಲು ಲೋಕಸಭೆಯಲ್ಲಿ ಹೇಳಿಕೆ ನೀಡಬೇಕು. ನಂತರವೇ ಮಸೂದೆ ಕುರಿತು ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

'ವಿದ್ಯಾರ್ಥಿಗಳನ್ನು ನಡೆಸಿಕೊಂಡ ರೀತಿಗೆ ಪ್ರಧಾನಿ ಮತ್ತು ಸರ್ಕಾರ ಕ್ಷಮೆಯಾಚಿಸಬೇಕು ಎಂಬುದು ಕಾಂಗ್ರೆಸ್ ಪಕ್ಷದ ನಿಲುವು ಮತ್ತು ರಾಹುಲ್ ಗಾಂಧಿ ಅವರು ಇದನ್ನು ಹಲವಾರು ಬಾರಿ ಪುನರುಚ್ಚರಿಸಿದ್ದಾರೆ. ಜನರಲ್ಲಿ ಬಹಳಷ್ಟು ಕೋಪವಿದೆ. ದುರಂತವೆಂದರೆ, ಡಬಲ್ ಎಂಜಿನ್ ಸರ್ಕಾರವು ವಿದ್ಯಾರ್ಥಿಗಳನ್ನು ದಮನಿಸಲು ಮುಂದಾಗಿದೆ. ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವ ಧೈರ್ಯ ಅವರಿಗೆ (ಪೊಲೀಸರಿಗೆ) ಹೇಗೆ ಬಂತು?' ಎಂದು ಕಾಂಗ್ರೆಸ್ ಸಂಸದ ತಾರಿಕ್ ಅನ್ವರ್ ಹೇಳಿದರು.

ಆದಾಗ್ಯೂ, ಸರ್ಕಾರವು ಲೋಕಸಭೆಯಲ್ಲಿ ಮಸೂದೆಯ ಕುರಿತು ನೇರ ಚರ್ಚೆ ನಡೆಸಲು ಒಲವು ತೋರಿದೆ.

ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಿಜಿಜು, ದೇಶದಾದ್ಯಂತ ವಿದ್ಯಾರ್ಥಿಗಳು ಎತ್ತಿರುವ ಕಳವಳಗಳಿಗೆ ಪ್ರತಿಕ್ರಿಯೆಯಾಗಿ ಈ ಮಸೂದೆಯನ್ನು ಮಂಡಿಸಲಾಗುತ್ತಿದೆ. ಶಾಸನದ ಕುರಿತು 'ಸಂಪೂರ್ಣ ಮತ್ತು ಮುಕ್ತ ಚರ್ಚೆ' ನಡೆಸುವಂತೆ ವಿರೋಧ ಪಕ್ಷಗಳನ್ನು ಒತ್ತಾಯಿಸಿದರು.

'ಇಂದು, ದೇಶಾದ್ಯಂತ ವಿದ್ಯಾರ್ಥಿಗಳು ಎತ್ತಿರುವ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಲೋಕಸಭೆಯಲ್ಲಿ ನಿರ್ಣಾಯಕ ಮಸೂದೆಯನ್ನು ಪರಿಚಯಿಸಲಾಗುತ್ತಿದೆ. ಆದಾಗ್ಯೂ, ಕಾಂಗ್ರೆಸ್ ಮತ್ತು ಕೆಲವು ವಿರೋಧ ಪಕ್ಷದ ಸದಸ್ಯರು ಅದರ ಬಗ್ಗೆ ಚರ್ಚಿಸಲು ನಿರಾಕರಿಸುತ್ತಿದ್ದಾರೆ; ಬದಲಾಗಿ, ಅವರು ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ' ಎಂದು ರಿಜಿಜು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರ ಇಲ್ಲ; ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ಸಿದ್ಧರಾಗಿ: ಸಿಟಿ ರವಿಗೆ ಪ್ರಿಯಾಂಕ್‌ ಖರ್ಗೆ ಖಡಕ್ ಎಚ್ಚರಿಕೆ

ಕೃಷ್ಣಾ ನದಿ ನೀರಿಗೆ ಮಹಾರಾಷ್ಟ್ರ ಕನ್ನ: ಹೊಸ ಯೋಜನೆ ಘೋಷಿಸಿದ ಫಡ್ನವೀಸ್; ಗಡಿ ಭಾಗದ ಜನರಲ್ಲಿ ಆತಂಕ

ವಿದ್ಯಾರ್ಥಿಗಳ ಮೇಲೆ ಎಕೆ-47 ಬಳಕೆ, ಲಾಠಿಚಾರ್ಜ್ ತಪ್ಪು, ಇದನ್ನು ವಿರೋಧಿಸುತ್ತೇವೆ: ತಮ್ಮದೇ ಸರ್ಕಾರದ ವಿರುದ್ಧ ಎನ್‌ಡಿಎ ಸಂಸದೆ ಕಿಡಿ

ಒಂದು ಶತಮಾನದ ನಂತರವೂ, ಗಾಂಧಿ ಮಾರ್ಗ ಪ್ರಸ್ತುತ: ರಾಜ್‌ಘಾಟ್‌ನಲ್ಲಿ ವಾಂಗ್‌ಚುಕ್ ಪ್ರತಿಪಾದನೆ!

E20 ಡೀಪ್‌ಫೇಕ್: Meta, Google ವಿರುದ್ಧ ಮೊಕದ್ದಮೆ ಹೂಡಲು ಬಾಂಬೆ ಹೈಕೋರ್ಟ್ ಅನುಮತಿ!