ನವದೆಹಲಿ: ದೇಶದ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಗೆ ದಶಕಗಳಿಂದ ಕಂಟಕವಾಗಿದ್ದ ಪೇಪರ್ ಸೋರಿಕೆ ಮಾಫಿಯಾವನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಸಂಸತ್ತಿನಲ್ಲಿ 'ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ 2026' ಯಶಸ್ವಿಯಾಗಿ ಅಂಗೀಕಾರಗೊಂಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಸೆಲ್ಫಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಈ ಕಠಿಣ ಕಾನೂನು ಅತ್ಯಗತ್ಯವಾಗಿತ್ತು ಎಂದು ಹೇಳಿದ್ದಾರೆ.
ಮಸೂದೆಯು ಬುಧವಾರ ಲೋಕಸಭೆಯಲ್ಲಿ ಮತ್ತು ಗುರುವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದು, ದೇಶಾದ್ಯಂತ ಪಾರದರ್ಶಕ ಪರೀಕ್ಷಾ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಇದು ಪ್ರಮುಖ ಮೈಲಿಗಲ್ಲು ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ವಿಶ್ವಾಸಾರ್ಹ ಹಾಗೂ ಪರಿಣಾಮಕಾರಿ ಪರೀಕ್ಷಾ ವ್ಯವಸ್ಥೆ ನಿರ್ಮಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಹಲವು ವರ್ಷಗಳಿಂದ ದೇಶದಾದ್ಯಂತ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದ ಪ್ರಶ್ನೆಪತ್ರಿಕೆ ಸೋರಿಕೆ ಸಮಸ್ಯೆಗೆ ಕಾನೂನು ಮೂಲಕ ಕಠಿಣ ಕಡಿವಾಣ ಹಾಕುವ ಮಹತ್ವದ ಹೆಜ್ಜೆ ಇದಾಗಿದೆ ಎಂದು ತಿಳಿಸಿದ್ದಾರೆ.
ಸ್ನೇಹಿತರೇ, ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆ ನಿರ್ಮಿಸಲು ನಾವು ಒಂದೊಂದೇ ಹೆಜ್ಜೆ ಇಡುತ್ತಿದ್ದೇವೆ. ವಿಶೇಷ ಕಾರ್ಯಪಡೆ ರಚನೆ, ತ್ವರಿತ ನ್ಯಾಯಾಲಯಗಳ ಸ್ಥಾಪನೆ, ರಾಜ್ಯಗಳ ಸಲಹೆಗಳನ್ನು ಪಡೆದು ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇವೆ.
ಹಲವು ವರ್ಷಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ಸಮಸ್ಯೆ ಕೇವಲ ಕೇಂದ್ರ ಸರ್ಕಾರಕ್ಕಷ್ಟೇ ಅಲ್ಲ, ಅನೇಕ ರಾಜ್ಯಗಳಿಗೂ ದೊಡ್ಡ ಸವಾಲಾಗಿತ್ತು. ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ಅಗತ್ಯವಾಗಿತ್ತು. ಸಂಸತ್ತಿನಲ್ಲಿ ಬಲಿಷ್ಠ ಪೇಪರ್ ಲೀಕ್ ವಿರೋಧಿ ಮಸೂದೆಯನ್ನು ತರಲಾಗುವುದು ಎಂದು ನೀಡಿದ್ದ ಭರವಸೆಯನ್ನು ಸರ್ಕಾರ ಈಗ ಈಡೇರಿಸಿದೆ.
"ದೇಶದ ಮಕ್ಕಳ ಭವಿಷ್ಯದೊಂದಿಗೆ ಆಟವಾಡುವ ಪೇಪರ್ ಮಾಫಿಯಾ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಜಾಲಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.
ಇಂತಹ ಅಪರಾಧಗಳನ್ನು ತಡೆಯಲು ಕಠಿಣ ಕಾನೂನು ಅಗತ್ಯವಾಗಿತ್ತು. ಕಳೆದ ಎರಡು ದಿನಗಳ ಕಾಲ ಸಂಸತ್ತಿನ ಉಭಯ ಸದನಗಳಲ್ಲಿ ವ್ಯಾಪಕ ಚರ್ಚೆಯ ಬಳಿಕ ಬಹುಪಾಲು ಸಂಸದರು ಬೆಂಬಲ ನೀಡಿ ಮಸೂದೆಯನ್ನು ಅಂಗೀಕರಿಸಿದ್ದಾರೆ. ಈ ಮೂಲಕ ದೇಶದಲ್ಲಿ ವಿಶ್ವಾಸಾರ್ಹ ಹಾಗೂ ವಿಶ್ವಮಟ್ಟದ ಪರೀಕ್ಷಾ ವ್ಯವಸ್ಥೆ ನಿರ್ಮಾಣದತ್ತ ಮಹತ್ವದ ಹೆಜ್ಜೆ ಇಡಲಾಗಿದೆ. ಮುಂದೆಯೂ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ಬಲಿಷ್ಠಗೊಳಿಸುವ ಕೆಲಸ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ತಮ್ಮ ಸಂದೇಶದ ಕೊನೆಯಲ್ಲಿ, "ಇಂತಹ ಪರಿಸ್ಥಿತಿಗಳು ಮತ್ತೆ ಮರುಕಳಿಸದಂತೆ ಎಲ್ಲರೂ ಕೈಜೋಡಿಸೋಣ. ವಿಕಸಿತ ಭಾರತ ನಿರ್ಮಾಣದ ಕನಸನ್ನು ನನಸಾಗಿಸಲು ಹೆಗಲಿಗೆ ಹೆಗಲು ನೀಡಿ ಕೆಲಸ ಮಾಡೋಣ" ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.
ವಿದ್ಯಾರ್ಥಿಗಳ ಕಲ್ಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ಅವರು ಕಳೆದ ಒಂದು ವಾರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡ ನಾಲ್ಕನೇ ವಿಡಿಯೋ ಸಂದೇಶ ಇದಾಗಿದೆ.
ರಾಜ್ಯಸಭೆಯಲ್ಲೂ ಮಸೂದೆಗೆ ಅನುಮೋದನೆ
ಈ ನಡುವೆ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ವಿಧಾನಗಳ ತಡೆ) ತಿದ್ದುಪಡಿ ಮಸೂದೆ–2026ಗೆ ಗುರುವಾರ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅನುಮೋದನೆ ದೊರೆಯಿತು. ಮತದಾನಕ್ಕೂ ಮುನ್ನ ಪ್ರತಿಪಕ್ಷ ಸದಸ್ಯರು ಸದನದಿಂದ ಹೊರನಡೆದರು. ಈ ಮಸೂದೆಯನ್ನು ಲೋಕಸಭೆ ಬುಧವಾರವೇ ಅಂಗೀಕರಿಸಿತ್ತು.
ಹೊಸ ಕಾನೂನಿನಲ್ಲಿ ಏನಿದೆ?
ತಿದ್ದುಪಡಿ ಕಾನೂನಿನ ಪ್ರಕಾರ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಹಾಗೂ ಇತರ ಅನ್ಯಾಯ ವಿಧಾನಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದವರಿಗೆ 5 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ರೂ.50 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.
ಸಂಘಟಿತ ರೀತಿಯಲ್ಲಿ ಪೇಪರ್ ಲೀಕ್ ನಡೆಸುವ ಜಾಲಗಳಿಗೆ ಇನ್ನಷ್ಟು ಕಠಿಣ ಶಿಕ್ಷೆ ನಿಗದಿಪಡಿಸಲಾಗಿದ್ದು, ಅಂತಹ ಅಪರಾಧಗಳಿಗೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.10 ಕೋಟಿವರೆಗೆ ದಂಡ ವಿಧಿಸುವ ಅವಕಾಶವನ್ನು ಹೊಸ ತಿದ್ದುಪಡಿ ಕಾನೂನು ಒದಗಿಸಿದೆ.