ಸಂಗ್ರಹ ಚಿತ್ರ 
ದೇಶ

32 ಸೆಕೆಂಡಿನಲ್ಲಿ 260 ಜೀವಗಳ ಕಸಿದ ದುರಂತ; ಒಂದು ವರ್ಷವಾದರೂ ಬಯಲಾಗದ 'Air India Dreamliner' ರಹಸ್ಯ..!

ದೇಶದ ನಾಗರಿಕ ವಿಮಾನಯಾನ ಇತಿಹಾಸದಲ್ಲೇ ಅತಿ ಭೀಕರ ದುರಂತಗಳಲ್ಲಿ ಒಂದಾದ ಈ ಘಟನೆಗೆ ವರ್ಷ ತುಂಬಿದರೂ, ವಿಮಾನ ಏಕೆ ಕುಸಿಯಿತು ಎಂಬ ಮೂಲ ಪ್ರಶ್ನೆಗೆ ತನಿಖಾಧಿಕಾರಿಗಳಿಂದ ಇನ್ನೂ ಅಂತಿಮ ಉತ್ತರ ದೊರೆತಿಲ್ಲ.

ಜೂನ್ 12, 2025. ಭಾರತದ ನಾಗರಿಕ ವಿಮಾನಯಾನ ಇತಿಹಾಸದ ಕರಾಳ ದಿನ. ಒಂದು ವರ್ಷದ ಹಿಂದೆ ಇದೇ ದಿನ, ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ AI171 ವಿಮಾನ ಆಕಾಶಕ್ಕೇರಿದ ಕೇವಲ 32 ಸೆಕೆಂಡುಗಳಲ್ಲೇ ದುರಂತಕ್ಕೀಡಾಗಿ 260 ಜೀವಗಳನ್ನು ಬಲಿ ಪಡೆದಿತ್ತು.

ದೇಶದ ನಾಗರಿಕ ವಿಮಾನಯಾನ ಇತಿಹಾಸದಲ್ಲೇ ಅತಿ ಭೀಕರ ದುರಂತಗಳಲ್ಲಿ ಒಂದಾದ ಈ ಘಟನೆಗೆ ವರ್ಷ ತುಂಬಿದರೂ, ವಿಮಾನ ಏಕೆ ಕುಸಿಯಿತು ಎಂಬ ಮೂಲ ಪ್ರಶ್ನೆಗೆ ತನಿಖಾಧಿಕಾರಿಗಳಿಂದ ಇನ್ನೂ ಅಂತಿಮ ಉತ್ತರ ದೊರೆತಿಲ್ಲ.

ಆ ದುರಂತದ ವೇಳೆ ವಿಮಾನದಲ್ಲಿದ್ದ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 260 ಮಂದಿ ಮೃತುಟ್ಟಿದ್ದರು, 260 ಜೀವಗಳನ್ನು ಬಲಿ ಪಡೆದ ಈ ದುರಂತದಲ್ಲಿ ಬದುಕುಳಿದಿದ್ದು ಕೇವಲ ಒಬ್ಬ ಪ್ರಯಾಣಿಕ ಮಾತ್ರ.

ಇಂದು ಆ ದುರಂತಕ್ಕೆ ಒಂದು ವರ್ಷ ತುಂಬಿದೆ. ಆದರೆ, ವಿಮಾನ ಕುಸಿದು ಬಿದ್ದಿದ್ದು ಏಕೆ? ತಪ್ಪು ಮಾಡಿದ್ದು ಯಾರು? ತಾಂತ್ರಿಕ ದೋಷ ಕಾರಣವೇ? ಅಥವಾ ಕಾಕ್‌ಪಿಟ್‌ನಲ್ಲಿ ನಡೆದ ಮಾನವೀಯ ತಪ್ಪೇ? ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಒಂದು ವರ್ಷವಾದರೂ ಸಿಗದ ಅಂತಿಮ ವರದಿ

ಅಂತರರಾಷ್ಟ್ರೀಯ ವಿಮಾನಯಾನ ನಿಯಮಗಳ ಪ್ರಕಾರ, ದೊಡ್ಡ ವಿಮಾನ ಅಪಘಾತದ ತನಿಖಾ ವರದಿಯನ್ನು ಒಂದು ವರ್ಷದೊಳಗೆ ಪ್ರಕಟಿಸಬೇಕು. ಆದರೆ, ಭಾರತೀಯ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಇನ್ನೂ ಅಂತಿಮ ವರದಿ ಬಿಡುಗಡೆ ಮಾಡಿಲ್ಲ.

ಬದಲಾಗಿ, ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂಬ ಮಧ್ಯಂತರ ಮಾಹಿತಿ ನೀಡುವ ಸಾಧ್ಯತೆ ಇದೆ. ಪ್ರಮುಖ ಕಾರಣವೆಂದರೆ ವಿಮಾನದ GE Aerospace ಎಂಜಿನ್‌ಗಳ ತಾಂತ್ರಿಕ ಪರಿಶೀಲನೆ ಇನ್ನೂ ಅಮೆರಿಕದಲ್ಲಿ ನಡೆಯುತ್ತಿದೆ. ಈ ವಿಶ್ಲೇಷಣೆ ಪೂರ್ಣಗೊಂಡ ಬಳಿಕವೇ ಅಂತಿಮ ವರದಿ ಪ್ರಕಟವಾಗುವ ನಿರೀಕ್ಷೆಯಿದೆ.

32 ಸೆಕೆಂಡಿನಲ್ಲಿ ಏನಾಯಿತು?

AI171 ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಎರಡೂ ಎಂಜಿನ್‌ಗಳು ಶಕ್ತಿಯನ್ನು ಕಳೆದುಕೊಂಡವು. ಪರಿಣಾಮ ವಿಮಾನ, ವಿಮಾನ ನಿಲ್ದಾಣದ ಹೊರವಲಯದಲ್ಲಿರುವ ಜನನಿಬಿಡ ಪ್ರದೇಶಕ್ಕೆ ಅಪ್ಪಳಿಸಿತ್ತು.

ಆರಂಭದಲ್ಲಿ ಎಂಜಿನ್ ವೈಫಲ್ಯ, ತಾಂತ್ರಿಕ ದೋಷ ಅಥವಾ ವಿಧ್ವಂಸಕ ಕೃತ್ಯದ ಶಂಕೆಗಳು ವ್ಯಕ್ತವಾಗಿದ್ದವು. ಆದರೆ ಕಳೆದ ಒಂದು ವರ್ಷದ ತನಿಖೆಯಲ್ಲಿ ಯಾಂತ್ರಿಕ ವೈಫಲ್ಯ ಅಥವಾ ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ವರದಿಗಳು ಸೂಚಿಸಿವೆ.

ತನಿಖೆಯ ಕೇಂದ್ರಬಿಂದುವಾದ ‘ಫ್ಯುಯೆಲ್ ಸ್ವಿಚ್’

2025ರ ಜುಲೈನಲ್ಲಿ ಪ್ರಕಟವಾದ ಪ್ರಾಥಮಿಕ ವರದಿಯು ಹೊಸ ಸಂಚಲನ ಸೃಷ್ಟಿಸಿತು. ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಕಾಕ್‌ಪಿಟ್‌ನಲ್ಲಿದ್ದ ಎರಡು Fuel Control Switches‌ಗಳು "RUN" ಸ್ಥಿತಿಯಿಂದ "CUT-OFF" ಸ್ಥಿತಿಗೆ ಬದಲಾಗಿದ್ದವು ಎಂದು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದರು.

ಈ ಸ್ವಿಚ್‌ಗಳು ಎಂಜಿನ್‌ಗೆ ಇಂಧನ ಪೂರೈಕೆಯನ್ನು ನಿಯಂತ್ರಿಸುತ್ತವೆ. ಅವು "CUT-OFF" ಸ್ಥಿತಿಗೆ ಹೋದರೆ ಎಂಜಿನ್‌ಗೆ ಇಂಧನ ಪೂರೈಕೆ ನಿಲ್ಲುತ್ತದೆ. ಪರಿಣಾಮ ಎರಡೂ ಎಂಜಿನ್‌ಗಳು ತಕ್ಷಣವೇ ಸ್ಥಗಿತಗೊಳ್ಳಬಹುದು. ಆದರೆ, ಆ ಸ್ವಿಚ್‌ಗಳನ್ನು ಯಾರು ಬದಲಾಯಿಸಿದರು? ಏಕೆ? ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಕಾಕ್‌ಪಿಟ್‌ನಲ್ಲಿ ನಡೆದ ಸಂಭಾಷಣೆ ಏನು ಹೇಳುತ್ತದೆ?

ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ನ ಮಾಹಿತಿಯ ಪ್ರಕಾರ, ಒಬ್ಬ ಪೈಲಟ್ ಮತ್ತೊಬ್ಬರನ್ನು, "ಸ್ವಿಚ್‌ಗಳೇಕೆ ಬದಲಾಗಿವೆ?" ಎಂದು ಪ್ರಶ್ನಿಸಿದರೆ, ಇನ್ನೊಬ್ಬ ಪೈಲಟ್ "ನಾನು ಹಾಗೆ ಮಾಡಿಲ್ಲ" ಎಂದು ಉತ್ತರಿಸಿದ್ದಾನೆ ಎನ್ನಲಾಗಿದೆ. ಆದರೆ, ಈ ಮಾತುಗಳನ್ನು ಯಾವ ಪೈಲಟ್ ಹೇಳಿದ್ದಾರೆ ಎಂಬುದನ್ನು ತನಿಖಾ ವರದಿ ಬಹಿರಂಗಪಡಿಸಿಲ್ಲ.

ಇದರಿಂದ ಮಾನವೀಯ ತಪ್ಪು, ಉದ್ದೇಶಪೂರ್ವಕ ಕ್ರಮ ಅಥವಾ ತಾಂತ್ರಿಕ ವೈಫಲ್ಯದ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.

ಈ ನಡುವೆ ಭಾರತೀಯ ಪೈಲಟ್‌ಗಳ ಒಕ್ಕೂಟ (Federation of Indian Pilots) ತನಿಖೆಯ ದಿಕ್ಕಿನ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.

ತನಿಖಾಧಿಕಾರಿಗಳು ಪೈಲಟ್‌ಗಳ ಮೇಲೆ ಮಾತ್ರ ಹೆಚ್ಚು ಗಮನ ಹರಿಸುತ್ತಿದ್ದು, ತಾಂತ್ರಿಕ ಕಾರಣಗಳನ್ನು ಸಮರ್ಪಕವಾಗಿ ಪರಿಶೀಲಿಸುತ್ತಿಲ್ಲ ಎಂದು ಸಂಘಟನೆ ಆರೋಪಿಸಿದೆ.

"ಮಧ್ಯಂತರ ವರದಿ ಪ್ರಕಟಿಸಿದರೆ ಗೊಂದಲ ಮತ್ತಷ್ಟು ಹೆಚ್ಚಾಗುತ್ತದೆ" ಎಂದು ಸಂಘಟನೆಯ ಅಧ್ಯಕ್ಷ ಸಿ.ಎಸ್. ರಂಧಾವಾ ಹೇಳಿದ್ದಾರೆ.

ಪೈಲಟ್ ಆತ್ಮಹತ್ಯೆ ಸಿದ್ಧಾಂತವನ್ನು ತಳ್ಳಿ ಹಾಕಲು ಬೋಯಿಂಗ್ ಹಾಗೂ ಏರ್ ಇಂಡಿಯಾದಿಂದ ಇನ್ನಷ್ಟು ತಾಂತ್ರಿಕ ಮಾಹಿತಿ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮುಂದವರೆದ ಕುಟುಂಬಸ್ಥರ ಹೋರಾಟ

ಈ ನಡುವೆ ಕ್ಯಾಪ್ಟನ್ ಕುಟುಂಬ ಕೂಡ ಉದ್ದೇಶಪೂರ್ವಕ ಕೃತ್ಯದ ಆರೋಪಗಳನ್ನು ತಳ್ಳಿಹಾಕಿದೆ. ಕ್ಯಾಪ್ಟನ್ ತಂದೆ ಸುಪ್ರೀಂ ಕೋರ್ಟ್‌ನಲ್ಲಿ ಸ್ವತಂತ್ರ ತನಿಖೆಗೆ ಮನವಿ ಸಲ್ಲಿಸಿದ್ದು, ಪೈಲಟ್‌ಗಳ ನಡೆ ಮಾತ್ರವಲ್ಲದೆ ಇತರ ತಾಂತ್ರಿಕ ಕಾರಣಗಳನ್ನೂ ಸಮಗ್ರವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಏರ್ ಇಂಡಿಯಾ ನಿರ್ವಹಣೆಯ ಕುರಿತು ಪ್ರಶ್ನೆ

ಈ ನಡುವೆ ವಿಮಾನ ನಿರ್ವಹಣೆಯಲ್ಲಿ ಏನಾದರೂ ಲೋಪಗಳಾಗಿದ್ದವೆಯೇ ಎಂಬ ಪ್ರಶ್ನೆಯೂ ತನಿಖೆಯಲ್ಲಿ ಪ್ರಮುಖವಾಗಿದೆ.

ಭಾರತೀಯ ವಿಮಾನಯಾನ ನಿಯಂತ್ರಕ ಸಂಸ್ಥೆ ಈ ಹಿಂದೆ ಏರ್ ಇಂಡಿಯಾ ವಿಮಾನಗಳಲ್ಲಿ ಪುನರಾವರ್ತಿತ ತಾಂತ್ರಿಕ ದೋಷಗಳ ಬಗ್ಗೆ ಸೂಚನೆ ನೀಡಿತ್ತು. ಆದ್ದರಿಂದ ನಿರ್ವಹಣಾ ದಾಖಲೆಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಪೈಲಟ್ ಸಂಘಟನೆ ಒತ್ತಾಯಿಸಿದೆ.

ಆದರೆ, ಏರ್ ಇಂಡಿಯಾ, ನಿರ್ವಹಣಾ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.

ಬೋಯಿಂಗ್‌ಗೆ ಇದು ಪ್ರತಿಷ್ಠೆಯ ಪ್ರಶ್ನೆ

ಈ ದುರಂತದ ಪರಿಣಾಮ ಏರ್ ಇಂಡಿಯಾಗೆ ಮಾತ್ರ ಸೀಮಿತವಾಗಿಲ್ಲ. ವಿಶ್ವದ ಅತಿದೊಡ್ಡ ವಿಮಾನ ತಯಾರಕ ಸಂಸ್ಥೆ Boeing ಗೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.

2011ರಲ್ಲಿ ಸೇವೆಗೆ ಬಂದ Boeing 787 Dreamliner ವಿಮಾನ ಇದುವರೆಗೆ ಯಾವುದೇ ಮಾರಣಾಂತಿಕ ಅಪಘಾತಕ್ಕೆ ಒಳಗಾಗಿರಲಿಲ್ಲ. ಇಂಧನ ಉಳಿತಾಯ, ಸುಧಾರಿತ ತಂತ್ರಜ್ಞಾನ ಮತ್ತು ಪ್ರಯಾಣಿಕ ಸ್ನೇಹಿ ಸೌಲಭ್ಯಗಳಿಂದ ಈ ವಿಮಾನ ಜನಪ್ರಿಯವಾಗಿತ್ತು.

ಆದರೆ, ಬ್ಯಾಟರಿ ದೋಷ, ಉತ್ಪಾದನಾ ಗುಣಮಟ್ಟದ ಸಮಸ್ಯೆಗಳು ಮತ್ತು ಸುರಕ್ಷತಾ ಆರೋಪಗಳಿಂದ ಬೋಯಿಂಗ್ ಈಗಾಗಲೇ ಹಲವು ವಿವಾದಗಳನ್ನು ಎದುರಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ನಿಮ್ಮ ಶಸ್ತ್ರಾಸ್ತ್ರಗಳು ಭಾರತದ ವಿರುದ್ಧ ಬಳಕೆಯಾಗಿವೆ": ರಷ್ಯಾ ತೈಲ ಖರೀದಿ ಸಮರ್ಥಿಸಿ, ಯುರೋಪ್ ದೇಶಗಳ ದ್ವಿಮುಖ ನೀತಿ ಬೆತ್ತಲು ಮಾಡಿದ ಜೈಶಂಕರ್..!

ಇರಾನ್‌ ಜೊತೆ ಯುದ್ಧ ಅಂತ್ಯಗೊಂಡಿದೆ, ವಾರಾಂತ್ಯದಲ್ಲಿ ಯುರೋಪಿನಲ್ಲಿ ಶಾಂತಿ ಒಪ್ಪಂದ: ಡೊನಾಲ್ಡ್ ಟ್ರಂಪ್ ಘೋಷಣೆ

ಭಾರತೀಯ 'ಶೂಟಿಂಗ್' ದಂತಕತೆ, ಮನುಬಾಕರ್ ಕೋಚ್ ಜಸ್ಪಾಲ್ ರಾಣಾ ನಿಧನ!

ಇಂಧನ ಸಂಗ್ರಹಣೆ-ಕಾಳಸಂತೆ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ: ಪೆಟ್ರೋಲ್ ಬಂಕ್‌ಗಳಲ್ಲಿ Bulk ಇಂಧನ ಖರೀದಿಗೆ ನಿಷೇಧ..!

FIFA World Cup 2026: ಉದ್ಘಾಟನಾ ಪಂದ್ಯದಲ್ಲಿ ಮೂರು ರೆಡ್ ಕಾರ್ಡ್ ಗಳು; 2-0 ಅಂತರದಿಂದ ದಕ್ಷಿಣ ಆಫ್ರಿಕಾ ಮಣಿಸಿದ ಮೆಕ್ಸಿಕೊ

SCROLL FOR NEXT