ನವದೆಹಲಿ: ಪಾಸ್‌ಪೋರ್ಟ್ ಭಾರತೀಯ ಪೌರತ್ವಕ್ಕೆ ನಿರ್ಣಾಯಕ ಪುರಾವೆಯಲ್ಲ ಎಂಬ ಕೇಂದ್ರ ಸರ್ಕಾರದ ಸ್ಪಷ್ಟೀಕರಣವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಶುಕ್ರವಾರ ಟೀಕಿಸಿದ್ದಾರೆ. ಸರ್ಕಾರದ ನಿಲುವನ್ನು "ಅಸಂಬದ್ಧ ಕಾನೂನು ವಿರೋಧಾಭಾಸ" ಎಂದು ಅವರು ಬಣ್ಣಿಸಿದ್ದು, ವಿವಾದವನ್ನು ಕೊನೆಗೊಳಿಸಲು ಕಾನೂನಿಗೆ ಬದಲಾವಣೆಯನ್ನು ಒತ್ತಾಯಿಸಿದ್ದಾರೆ.
ಭಾರತೀಯ ಪಾಸ್‌ಪೋರ್ಟ್ ಅನ್ನು ಎಂದಿಗೂ ಪೌರತ್ವದ ದಾಖಲೆಯಾಗಿ ಪರಿಗಣಿಸಿಲ್ಲ ಮತ್ತ ಇತ್ತೀಚಿನ ವರ್ಷಗಳಲ್ಲಿ ಯಾವುದೇ ನೀತಿ ಬದಲಾವಣೆ ಮಾಡಿಲ್ಲ ಎಂಬ ಸರ್ಕಾರದ ಹೇಳಿಕೆ ನಂತರ ಶಶಿ ತರೂರ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಪಾಸ್‌ಪೋರ್ಟ್ ಸೇವಾ ದಿವಸ್ ಕುರಿತು ವಿದೇಶಾಂಗ ಸಚಿವಾಲಯ ನೀಡಿದ ಹೇಳಿಕೆಗಳಿಂದ ವ್ಯಾಪಕ ಚರ್ಚೆಯಾಗುತ್ತಿದಂತೆಯೇ ಕೇಂದ್ರ ಸರ್ಕಾರ ಸ್ಪಷ್ಪನೆ ನೀಡಿತ್ತು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್, ಸರ್ಕಾರದ ಸ್ಪಷ್ಟೀಕರಣವು "ಸಾರ್ವಜನಿಕ ಗೊಂದಲ ಮತ್ತು ರಾಜಕೀಯ ಗಲಭೆಗೆ" ಕಾರಣವಾಗಿದೆ ಎಂದು ತರೂರ್ ಹೇಳಿದ್ದಾರೆ. ಕೇಂದ್ರದ ನಿಲುವು ಪಾಸ್‌ಪೋರ್ಟ್ ಕಾಯ್ದೆ, 1967 ರ ನಿಬಂಧನೆಗಳನ್ನು ಆಧರಿಸಿದೆ ಎಂದು ಒಪ್ಪಿಕೊಂಡರೂ, ವ್ಯತ್ಯಾಸವನ್ನು ಸಮರ್ಥಿಸುವುದು ಕಷ್ಟ ಎಂದು ಅವರು ವಾದಿಸಿದ್ದಾರೆ.
ವ್ಯಾಪಕ ಪರಿಶೀಲನೆ ಮತ್ತು ದಾಖಲೆಗಳ ಪರಿಶೀಲನೆಯ ನಂತರವೇ ಭಾರತೀಯ ಪಾಸ್‌ಪೋರ್ಟ್‌ಗಳನ್ನು ನೀಡಲಾಗುತ್ತದೆ. ಈ ಕಠಿಣ ಪರಿಶೀಲನೆಯಿಂದ ನೀಡಲಾಗುವ ದಾಖಲೆಯೇ ಪೌರತ್ವವನ್ನು ಸಾಬೀತುಪಡಿಸುವುದಿಲ್ಲ ಎಂದು ಘೋಷಿಸುವುದು ಅಸಂಬದ್ಧ ಕಾನೂನು ವಿರೋಧಾಭಾಸವನ್ನು ಸೃಷ್ಟಿಸುತ್ತದೆ. ಪಾಸ್‌ಪೋರ್ಟ್ ದೇಶೀಯ ಪೌರತ್ವದ ದಾಖಲೆ ಅನ್ನುವುದಾದರೆ ಹಾಗಾದ್ರೆ ಏನು ಎಂದು ಪ್ರಶ್ನಿಸಿದ್ದಾರೆ.
ಆಧಾರ್‌ನ ಕಾನೂನು ಮಾನ್ಯತೆಯನ್ನು ಅವರು ಉಲ್ಲೇಖಿಸಿದ್ದು, ಗುರುತು ಮತ್ತು ನಿವಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಪೌರತ್ವವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದು ಲಕ್ಷಾಂತರ ಭಾರತೀಯರನ್ನು ಒಂದು ರೀತಿಯ ವಿಲಕ್ಷಣ ಆಡಳಿತಾತ್ಮಕ ಸಂಕಷ್ಟದಲ್ಲಿ ಸಿಲುಕಿಸಿ ಬಿಡುತ್ತದೆ. ವಿಶ್ವ ದರ್ಜೆಯ ಬಯೋಮೆಟ್ರಿಕ್ ಮತ್ತು ರಾಜ್ಯ ನೀಡುವ ದಾಖಲೆಗಳನ್ನು ಹೊಂದಿರುತ್ತಾರೆ. ಆದರೆ ಯಾವುದನ್ನೂ ಕಾನೂನುಬದ್ಧವಾಗಿ ತಮ್ಮ ರಾಷ್ಟ್ರೀಯತೆಯ 'ನಿರ್ಣಾಯಕ' ಪುರಾವೆ ಎಂದು ಪರಿಗಣಿಸಲಾಗುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಪಾಸ್‌ಪೋರ್ಟ್ ಮತ್ತು ಆಧಾರ್ ಕಾರ್ಡ್‌ಗಳು ಎರಡೂ ಪೌರತ್ವದ ನಿರ್ಣಾಯಕ ಪುರಾವೆಯಾಗಿ ಕಾರ್ಯನಿರ್ವಹಿಸುವಂತೆ ಕಾನೂನು ಚೌಕಟ್ಟಿನಲ್ಲಿ ತಿದ್ದುಪಡಿಗಳನ್ನು ತರೂರ್ ಪ್ರಸ್ತಾಪಿಸಿದ್ದಾರೆ.
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ನಾಗರಿಕರಲ್ಲದ ನಿವಾಸಿಗಳಿಗೆ ವಿಭಿನ್ನವಾದ ಆಧಾರ್ ಕಾರ್ಡ್ ಅನ್ನು ನೀಡಬೇಕೆಂದು ಅವರು ಸೂಚಿಸಿದ್ದಾರೆ. ಹೀಗೆ ಮಾಡುವುದರಿಂದ ಸ್ಟಾಂಡರ್ಡ್ ಆಧಾರ್ ಕಾರ್ಡ್ ಅಥವಾ ಭಾರತೀಯ ಪಾಸ್ ಪೋರ್ಟ್ ಒಂದು ಇದ್ದರೆ ಸಾಕು ಭಾರತೀಯ ಪೌರತ್ವಕ್ಕೆ ಸೂಕ್ತ ದಾಖಲೆ ಎಂದು ಸರ್ಕಾರ ಅವಕಾಶ ಅವಕಾಶ ಮಾಡಿಕೊಡಬಹುದು. ಇದಕ್ಕಾಗಿ ಭಾರತೀಯ ನಾಗರಿಕರು ಪ್ರಮಾಣಿತ ಆಧಾರ್ ಅಥವಾ ಮಾನ್ಯತೆಯ ಪಾಸ್‌ಪೋರ್ಟ್ ಅನ್ನು ಹೊಂದಿರುವುದು ಕಡ್ಡಾಯ ಮತ್ತು ಎಲ್ಲಾ ಕಾಲಕ್ಕೂ ಪೌರತ್ವದ ಸೂಕ್ತ ದಾಖಲೆ ಎಂದು ರಾಜ್ಯವು ಆದೇಶಿಸಬಹುದು ಎಂದು ತಿರುವನಂತಪುರಂ ಸಂಸದ ಬರೆದುಕೊಂಡಿದ್ದಾರೆ.
"ಈ ದ್ವಿ-ದಾಖಲೆ ನೀತಿಯು ದೇಶೀಯ ಪರಿಶೀಲನೆಯನ್ನು ತಕ್ಷಣವೇ ಸುಗಮಗೊಳಿಸುತ್ತದೆ, ಚುನಾವಣಾ ಪರಿಷ್ಕರಣೆಗಳ ಸಮಯದಲ್ಲಿ ಅಧಿಕಾರಿಗಳ ಸವಾಲುಗಳನ್ನು ನಿವಾರಿಸುತ್ತದೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಅವರ ಗುರುತಿನ ಬಗ್ಗೆ ಸಂಪೂರ್ಣ, ಪ್ರಶ್ನಾತೀತ ಕಾನೂನು ಖಚಿತತೆಯನ್ನು ಒದಗಿಸುತ್ತದೆ. ಕಥೆ ಅಂತ್ಯ!" ಎಂದು ಅವರು ಹೇಳಿದ್ದಾರೆ.