

ಬೆಂಗಳೂರು: ಬೆಂಗಳೂರಿನಲ್ಲಿ ಮರದ ರೆಂಬೆ ಬಿದ್ದು ಬೈಕ್ ಚಾಲನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನ ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ ಈ ದುರದೃಷ್ಟಕರ ಘಟನೆ ನಡೆದಿದ್ದು, ಗಾಯಾಳುವನ್ನು 50 ವರ್ಷದ ಸುರೇಶ್ ಎಂದು ಗುರುತಿಸಲಾಗಿದೆ.
ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸುರೇಶ್ ಅವರು ತಮ್ಮ ದಿನನಿತ್ಯದ ಕೆಲಸ ಕಾರ್ಯಕ್ಕೆಂದು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ರಸ್ತೆಯಲ್ಲಿ ಸುರೇಶ್ ಅವರು ತಮ್ಮ ಬೈಕ್ ನಲ್ಲಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಅವರ ತೆಲೆ ಮೇಲೆ ಮರದ ಕೊಂಬೆ ಬಿದ್ದಿದೆ. ಕೊಂಬೆ ಬಿದ್ದ ರಭಸಕ್ಕೆ ತಲೆಗೆ ಪೆಟ್ಟು ಬಿದ್ದು ರಸ್ತೆಗೆ ಬಿದ್ದ ಸುರೇಶ್ ಪ್ರಜ್ಞಾಹೀನರಾಗಿದ್ದಾರೆ.
ಕೂಡಲೇ ಅವರನ್ನು ದಾರಿಹೋಕರು ಆಸ್ಪತ್ರೆಗೆ ಸಾಗಿಸಿದ್ದು, ಪ್ರಸ್ತುತ ಯಶವಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುರೇಶ್ ಅವರ ಸ್ಥಿತಿ ಗಂಭೀರವಾಗಿದೆ. ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಪ್ರಸ್ತುತ ತಲೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವೈದ್ಯರು ಮುಂದಿನ 48 ಗಂಟೆಗಳ ಕಾಲ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಹಲವು ಒಣಗಿದ ಮರಗಳು ಮತ್ತು ಕೊಂಬೆಗಳಿದ್ದು, ಇವುಗಳನ್ನು ತೆರವುಗೊಳಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಘಟನೆ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒಂದಷ್ಟು ಕೊಂಬೆಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಈ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಲ್ಮೆಟ್ ಇದ್ದಿದ್ರೆ!
ಇನ್ನು ಈ ದುರ್ಘಟನೆ ಬಳಿಕ ಮತ್ತೆ ಹೆಲ್ಮೆಟ್ ಗಳ ಬಳಕೆ ಕುರಿತು ಭಾರಿ ಚರ್ಚೆಗಳು ನಡೆಯಲಾರಂಭಿಸಿವೆ. ಗಾಯಾಳು ಸುರೇಶ್ ಸುರಕ್ಷಿತ ಹೆಲ್ಮೆಟ್ ಧರಿಸಿದಿದ್ದರೆ ಗಾಯದ ಸ್ವರೂಪ ಇಷ್ಟು ಗಂಭೀರವಾಗುತ್ತಿರಲಿಲ್ಲ ಎಂದು ಮತ್ತೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ.