ಮಾನವೀಯ ನೆರವು. 
ದೇಶ

Venezuelaಗೆ ಭಾರತದ ಮಾನವೀಯ ನೆರವು: 'Operation Amistad' ಅಡಿಯಲ್ಲಿ ಫೀಲ್ಡ್ ಆಸ್ಪತ್ರೆ, ವೈದ್ಯಕೀಯ ತಂಡ ರವಾನೆ

ಉತ್ತರ ವೆನೆಜುವೆಲಾದಲ್ಲಿ ಈ ವಾರ ಸಂಭವಿಸಿದ ಭೀಕರ ಭೂಕಂಪದ ಬಳಿಕ ಭಾರತ ಆರಂಭಿಸಿರುವ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಕಾರ್ಯಾಚರಣೆಗೆ 'ಆಪರೇಷನ್ ಅಮಿಸ್ತಾದ್' ಎಂದು ಹೆಸರಿಡಲಾಗಿದೆ.

ನವದೆಹಲಿ: ಭಾರೀ ಭೂಕಂಪದಿಂದ ತತ್ತರಿಸಿರುವ ದಕ್ಷಿಣ ಅಮೆರಿಕದ ವೆನೆಜುವೆಲಾಗೆ ಭಾರತ ಮಾನವೀಯ ನೆರವನ್ನು ರವಾನಿಸಿದೆ.

'ಆಪರೇಷನ್ ಅಮಿಸ್ತಾದ್' ಅಡಿಯಲ್ಲಿ ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆ, ವೈದ್ಯಕೀಯ ತಂಡ, ರಕ್ಷಣಾ ಸಿಬ್ಬಂದಿ ಹಾಗೂ ಪರಿಹಾರ ಸಾಮಗ್ರಿಗಳು ವೆನೆಜುವೆಲಾಗೆ ತಲುಪಿದ್ದು, ಪರಿಹಾರ ಕಾರ್ಯಾಚರಣೆ ಆರಂಭಿಸಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

ಈ ಕುರಿತು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಜೈಶಂಕರ್, "ಭಾರತದ ನೆರವು ವೆನೆಜುವೆಲಾಗೆ ತಲುಪಿದೆ. ಫೀಲ್ಡ್ ಆಸ್ಪತ್ರೆ, ಪರಿಹಾರ ಸಾಮಗ್ರಿಗಳು, ಔಷಧಗಳು ಹಾಗೂ ವೈದ್ಯಕೀಯ ಉಪಕರಣಗಳು ಭೂಕಂಪದ ನಂತರ ನಡೆಯುತ್ತಿರುವ ಪರಿಹಾರ ಕಾರ್ಯಕ್ಕೆ ಮತ್ತಷ್ಟು ಬಲ ನೀಡಲಿವೆ" ಎಂದು ಹೇಳಿದ್ದಾರೆ.

ಉತ್ತರ ವೆನೆಜುವೆಲಾದಲ್ಲಿ ಈ ವಾರ ಸಂಭವಿಸಿದ ಭೀಕರ ಭೂಕಂಪದ ಬಳಿಕ ಭಾರತ ಆರಂಭಿಸಿರುವ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಕಾರ್ಯಾಚರಣೆಗೆ 'ಆಪರೇಷನ್ ಅಮಿಸ್ತಾದ್' ಎಂದು ಹೆಸರಿಡಲಾಗಿದೆ.

ಸ್ಪ್ಯಾನಿಷ್ ಭಾಷೆಯಲ್ಲಿ 'ಅಮಿಸ್ತಾದ್' ಎಂದರೆ 'ಸ್ನೇಹ' ಎಂಬ ಅರ್ಥವಾಗಿದ್ದು, ವೆನೆಜುವೆಲಾದ ಜನರೊಂದಿಗೆ ಭಾರತ ನಿಂತಿರುವುದನ್ನು ಇದು ಪ್ರತಿಬಿಂಬಿಸುತ್ತದೆ.

ಭಾರತೀಯ ವಾಯುಪಡೆಯ ಎರಡು C-17 ಗ್ಲೋಬ್‌ಮಾಸ್ಟರ್ ವಿಮಾನಗಳ ಮೂಲಕ 35 ಟನ್‌ಗೂ ಹೆಚ್ಚು ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ. ಇದರಲ್ಲಿ ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆ ಘಟಕ, ಎರಡು ಪೋರ್ಟಬಲ್ ಭೀಷ್ಮ ಕ್ಯೂಬ್ (BHISHM Cube) ಆಸ್ಪತ್ರೆಗಳು, ಔಷಧಗಳು, ವೈದ್ಯಕೀಯ ಉಪಕರಣಗಳು ಹಾಗೂ ಅಗತ್ಯ ಪರಿಹಾರ ಸಾಮಗ್ರಿಗಳು ಸೇರಿವೆ.

ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ 60 ಪ್ಯಾರಾ ಫೀಲ್ಡ್ ಆಸ್ಪತ್ರೆ ಘಟಕದ 41 ಸದಸ್ಯರ ತಂಡವೂ ಭಾಗವಹಿಸಿದೆ. ಒಂಬತ್ತು ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿ ವೆನೆಜುವೆಲಾ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಗಾಯಾಳುಗಳಿಗೆ ತುರ್ತು ವೈದ್ಯಕೀಯ ಸೇವೆ ನೀಡಲಿದ್ದಾರೆ.

ಇದರ ಜೊತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಯ ವಿಶೇಷ ತಂಡ ಮತ್ತು ಉಪಕರಣಗಳನ್ನು ಕೂಡ ವೆನೆಜುವೆಲಾಗೆ ಕಳುಹಿಸಲಾಗಿದ್ದು, ಅವುಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ವಿದೇಶಾಂಗ ಸಚಿವಾಲಯ ಶುಕ್ರವಾರವೇ 'ಆಪರೇಷನ್ ಅಮಿಸ್ತಾದ್' ಆರಂಭಿಸಿರುವುದಾಗಿ ಘೋಷಿಸಿತ್ತು. ಸಂಕಷ್ಟದ ಈ ಸಂದರ್ಭದಲ್ಲಿ ವೆನೆಜುವೆಲಾ ಸರ್ಕಾರ ಹಾಗೂ ಅಲ್ಲಿನ ಜನರೊಂದಿಗೆ ಭಾರತ ದೃಢವಾಗಿ ನಿಂತಿದ್ದು, ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿತ್ತು.

ಉತ್ತರ ವೆನೆಜುವೆಲಾದಲ್ಲಿ ಒಂದೇ ನಿಮಿಷದ ಅಂತರದಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿ ಭಾರೀ ಅನಾಹುತ ಉಂಟಾಗಿದೆ.

ವೆನೆಜುವೆಲಾ ಸರ್ಕಾರದ ಪ್ರಕಾರ, ಕನಿಷ್ಠ 1,500 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಮನೆಗಳು, ಆಸ್ಪತ್ರೆಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯಗಳು ವ್ಯಾಪಕವಾಗಿ ಹಾನಿಗೊಳಗಾಗಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

ಸ್ವಿಟ್ಜರ್ಲೆಂಡ್, ಮೆಕ್ಸಿಕೊ, ಎಲ್ ಸಾಲ್ವಡಾರ್ ಹಾಗೂ ನೆದರ್‌ಲೆಂಡ್ಸ್ ಸೇರಿದಂತೆ ಹಲವು ದೇಶಗಳ ರಕ್ಷಣಾ ತಂಡಗಳು ಕೂಡ ಸ್ಥಳೀಯ ಅಧಿಕಾರಿಗಳೊಂದಿಗೆ ಸೇರಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.

ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳ ವೇಳೆ ಭಾರತ ಕೈಗೊಂಡಿರುವ ವಿದೇಶಿ ಪರಿಹಾರ ಕಾರ್ಯಾಚರಣೆಗಳ ಸರಣಿಯಲ್ಲಿ 'ಆಪರೇಷನ್ ಅಮಿಸ್ತಾದ್' ಮತ್ತೊಂದು ಮಹತ್ವದ ಅಧ್ಯಾಯವಾಗಿದ್ದು, ಜಾಗತಿಕ ಮಾನವೀಯ ನೆರವಿನಲ್ಲಿ ಭಾರತದ ಪಾತ್ರ ಮತ್ತಷ್ಟು ಬಲಗೊಳ್ಳುತ್ತಿರುವುದನ್ನು ಇದು ತೋರಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!