ಬೆಂಗಳೂರು: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಭಾರತದ ಸಾಂವಿಧಾನಿಕ ಚೌಕಟ್ಟಿನಲ್ಲಿ ಸಹಕಾರಿ ಫೆಡರಲಿಸಂ(ಒಕ್ಕೂಟ ವ್ಯವಸ್ಥೆ) ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ರಾಷ್ಟ್ರಮಟ್ಟದ ಚರ್ಚೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಸಿದ್ದರಾಮಯ್ಯ, ಕೇಂದ್ರ- ರಾಜ್ಯಗಳ ಸಂಬಂಧಗಳ ಬಗ್ಗೆ ರಾಷ್ಟ್ರಮಟ್ಟದ ಹೊಸ ಚರ್ಚೆಗೆ ಕರ್ನಾಟಕ ಬೆಂಬಲಿಸಲಿದೆ ಎಂದು ಸ್ಟಾಲಿನ್ ಗೆ ಬರೆದಿರುವ ಪತ್ರದಲ್ಲಿ ಹೇಳಿರುವುದಾಗಿ ತಿಳಿಸಿದ್ದಾರೆ.
ಒಕ್ಕೂಟ ವ್ಯವಸ್ಥೆ ರಾಜಕೀಯ ಬೇಡಿಕೆಯಲ್ಲ. ಇದು ಸಂವಿಧಾನದ ಮೂಲಕ ರಚನೆಯ ಭಾಗವಾಗಿದೆ. ಕೇಂದ್ರದಿಂದ ಅನುದಾನ ಕೊರತೆ ಮತ್ತು ಶಾಸನಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಸಂವಿಧಾನ ರಚನಕಾರರು ರೂಪಿಸಿದ ಹೊಂದಾಣಿಕೆ ನೀತಿಗೆ ಅಡ್ಡಿಯಾಗಿದೆ. ರಾಜ್ಯಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಪೂರೈಸಲು ಅಧಿಕಾರ ಮತ್ತು ಹಣಕಾಸಿನ ಅಗತ್ಯವಿರುತ್ತದೆ ಎಂದಿದ್ದಾರೆ.
ಸಹಕಾರ, ಸಮನ್ವಯದ ಫೆಡರಲಿಸಂ, ಸಾಂವಿಧಾನಿಕ ನಂಬಿಕೆ ಮತ್ತು ವೈವಿಧ್ಯತೆಯ ಗೌರವ ದಲ್ಲಿ ಭಾರತದ ಶಕ್ತಿ ಅಡಗಿದೆ. ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳೊಂದಿಗೆ ಮಾತುಕತೆ ಮತ್ತು ಹೊಂದಾಣಿಕೆಯನ್ನು ಪುನರ್ ಸ್ಥಾಪಿಸಲು ಅಂತರ-ರಾಜ್ಯ ಮಂಡಳಿಯಂತಹ ಸಾಂಸ್ಥಿಕ ವೇದಿಕೆಯನ್ನು ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
2026ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿರುವ ಸಂದರ್ಭದಲ್ಲಿ ಈ ಬೆಳವಣಿಗೆಯಾಗಿದೆ. ಆಡಳಿತಾರೂಢ ಡಿಎಂಕೆ ಹಾಗೂ ಕಾಂಗ್ರೆಸ್ ಜೊತೆಗಿನ ಸೀಟು ಹೊಂದಾಣಿಕೆಯನ್ನು ಬಗೆಹರಿಸಲು ಹಿರಿಯ ನಾಯಕರಾದ ಪಿ. ಚಿದಂಬರಂ ಹಾಗೂ ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ ಸೆಲ್ವಪೆರುಂತಗೈ ಇಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಭೇಟಿಯಾಗಲಿದ್ದಾರೆ.
ಈ ಮಧ್ಯೆ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ ಪಳನಿಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸೋಮವಾರ ಭೇಟಿಯಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಚರ್ಚೆ ನಡೆಸಿದ್ದಾರೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಈ ವರ್ಷ ಚುನಾವಣೆ ನಡೆಯಲಿದೆ.
ಎಂ.ಕೆ. ಸ್ಟಾಲಿನ್ ಧನ್ಯವಾದ
ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ನವೀಕರಿಸಿದ ರಾಷ್ಟ್ರೀಯ ಸಂವಾದವನ್ನು ಬೆಂಬಲಿಸುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿಕ್ರಿಯಿಸಿ, ಸಾಂವಿಧಾನಿಕ ಸಮತೋಲನವನ್ನು ಕಾಪಾಡಲು ಫೆಡರಲ್ ನವೀಕರಣವನ್ನು ಸಾಮೂಹಿಕವಾಗಿ ಅನುಸರಿಸಬೇಕು ಎಂದು ಹೇಳಿದರು.
ಸನ್ಮಾನ್ಯ ಶ್ರೀ @Siddaramaiah ಅವರೇ, ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ಎಂದು x ನಲ್ಲಿ ಪೋಸ್ಟ್ ಮಾಡಿದ್ದಾರೆ.