ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದು, ನಾವು ಇಬ್ಬರೂ ತಮ್ಮ ಕೆಲಸಗಳನ್ನು ಮಾಡಿ ಮುಗಿಸುವ ವ್ಯಕ್ತಿಗಳು ಎಂದು ಬಣ್ಣಿಸಿದ್ದಾರೆ.
ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಡೊನಾಲ್ಡ್ ಟ್ರಂಪ್ ಅವರ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ "ಭಾರತದೊಂದಿಗಿನ ನಮ್ಮ ಅದ್ಭುತ ಸಂಬಂಧವು ಮುಂದೆ ಇನ್ನಷ್ಟು ಬಲಗೊಳ್ಳುತ್ತದೆ. ಪ್ರಧಾನಿ ಮೋದಿ ಮತ್ತು ನಾನು ಕೆಲಸಗಳನ್ನು ಮಾಡಿ ಮುಗಿಸುವ ವ್ಯಕ್ತಿಗಳು. ಹೆಚ್ಚಿನವರಿಗೆ ಇದನ್ನು ಹೇಳಲಾಗುವುದಿಲ್ಲ" ಎಂದು ಬರೆಯಲಾಗಿದೆ.
ಇರಾನ್ ಸಂಘರ್ಷದ ಕುರಿತು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಶುಕ್ರವಾರ ತಮ್ಮ ಗ್ರೂಪ್ ಆಫ್ ಸೆವೆನ್(ಜಿ 7) ಸಹವರ್ತಿಗಳನ್ನು ಭೇಟಿ ಮಾಡಲು ಫ್ರಾನ್ಸ್‌ಗೆ ಆಗಮಿಸಿದ ವೇಳೆ ಈ ಹೇಳಿಕೆ ಬಂದಿದೆ.
ಈ ವಾರದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಫೋನ್ ಮೂಲಕ ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ಹಾಗೂ ಹೊರ್ಮಜ್ ಜಲಸಂಧಿಯ ಸ್ಥಿತಿಗತಿಯ ಕುರಿತು ಚರ್ಚೆ ನಡೆಸಿದ್ದರು. ಈ ಕುರಿತು ಭಾರತಕ್ಕೆ ಅಮೆರಿಕಾ ರಾಯಭಾರಿಯಾಗಿರುವ ಸೆರ್ಗಿಯೊ ಗೋರ್ "ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವ ಪ್ರಾಮುಖ್ಯತೆ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಅವರು ಚರ್ಚಿಸಿದ್ದಾರೆ" ಎಂದು ತಿಳಿಸಿದ್ದರು.