ಸುಪ್ರೀಂ ಕೋರ್ಟ್ 
ದೇಶ

ಮೂಲಭೂತ ಸೌಕರ್ಯಗಳ ನಿರಾಕರಣೆ: ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಕುರಿತು ರಾಜ್ಯ ಸರ್ಕಾರದ ವರದಿ ಕೇಳಿದ 'ಸುಪ್ರೀಂ'

ನಟನನ್ನು ಸದ್ಯ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಅಲ್ಲಿ ಸರಿಯಾದ ಬೆಳಕು ಮತ್ತು ಆಹಾರದಂತಹ ಮೂಲಭೂತ ಸೌಲಭ್ಯಗಳು ಇಲ್ಲ ಎಂದು ಮುಕುಲ್ ರೋಹಟಗಿ ನ್ಯಾಯಾಲಯಕ್ಕೆ ತಿಳಿಸಿದರು.

ನವದೆಹಲಿ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರು ಜೈಲಿನಲ್ಲಿ ಆಹಾರದಂತಹ ಮೂಲಭೂತ ಸೌಕರ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಕರ್ನಾಟಕ ಸರ್ಕಾರದಿಂದ ವರದಿ ಕೇಳಿದೆ.

ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠವು ನಟನ ಅರ್ಜಿಯ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಜೈಲಿನಲ್ಲಿ ದರ್ಶನ್ ಅವರಿಗೆ ಫೈವ್ ಸ್ಟಾರ್ ಟ್ರೀಟ್ಮೆಂಟ್ ನೀಡಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿರುವುದರಿಂದ ಅವರಿಗೆ ಮೂಲಭೂತ ಸೌಲಭ್ಯಗಳನ್ನೂ ಸಹ ನಿರಾಕರಿಸಲಾಗುತ್ತಿದೆ ಎಂದರು.

'ನ್ಯಾಯಾಲಯವು ಈ ಹಿಂದೆ ಅವರ ಜಾಮೀನನ್ನು ರದ್ದುಗೊಳಿಸಿ, ಅವರು ನಟರಾಗಿರುವುದರಿಂದ ಅವರಿಗೆ ಜೈಲಿನಲ್ಲಿ 'ವಿಶೇಷ' ಅಥವಾ ಐಷಾರಾಮಿ ಸೌಲಭ್ಯ ನೀಡಬಾರದು ಎಂದು ಹೇಳಿತ್ತು. ಆದರೆ, ಆ ನಿರ್ದೇಶನದಿಂದಾಗಿ ಜೈಲು ಅಧಿಕಾರಿಗಳು ಈಗ ಮೂಲಭೂತ ಸೌಲಭ್ಯಗಳನ್ನು ಸಹ ನಿರಾಕರಿಸುತ್ತಿದ್ದಾರೆ' ಎಂದು ಅವರು ಹೇಳಿದರು.

ಕಳೆದ ವರ್ಷ ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ನಟ ದರ್ಶನ್ ಮತ್ತು ಪ್ರಕರಣದ ಇತರ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸಿತ್ತು.

ನಟನನ್ನು ಸದ್ಯ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಅಲ್ಲಿ ಸರಿಯಾದ ಬೆಳಕು ಮತ್ತು ಆಹಾರದಂತಹ ಮೂಲಭೂತ ಸೌಲಭ್ಯಗಳು ಇಲ್ಲ ಎಂದು ರೋಹಟಗಿ ನ್ಯಾಯಾಲಯಕ್ಕೆ ತಿಳಿಸಿದರು.

ಈ ಕಳವಳವನ್ನು ಗಮನಿಸಿದ ಸುಪ್ರೀಂ ಕೋರ್ಟ್, ಪ್ರಕರಣ ಮತ್ತು ಅದರ ಸದ್ಯದ ಸ್ಥಿತಿಯ ಕುರಿತು ವರದಿಯನ್ನು ಸಲ್ಲಿಸಲು ವಿಚಾರಣಾ ನ್ಯಾಯಾಧೀಶರನ್ನು ಕೇಳಿತು.

'ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಷ್ಟು ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದೆ ಮತ್ತು ಎಷ್ಟು ಸಾಕ್ಷಿಗಳನ್ನು ವಿಚಾರಣೆ ಮಾಡಲು ಪ್ರಸ್ತಾಪಿಸಿದೆ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ವಿಚಾರಣಾ ನ್ಯಾಯಾಲಯವು ಪ್ರಕರಣವನ್ನು ಮುಕ್ತಾಯಗೊಳಿಸಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆಯೂ ನಮಗೆ ಸ್ಪಷ್ಟ ಕಲ್ಪನೆ ಬೇಕು' ಎಂದಿದ್ದಾರೆ.

'ವಿಚಾರಣಾಧೀನ ಕೈದಿಗೆ ಅರ್ಹವಾಗಿರುವ ಮೂಲಭೂತ ಸೌಕರ್ಯಗಳನ್ನು ಅರ್ಜಿದಾರರಿಗೆ ಒದಗಿಸಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ರಾಜ್ಯ ಸರ್ಕಾರದಿಂದ ತಿಳಿದುಕೊಳ್ಳಲು ಬಯಸುತ್ತೇವೆ. ಒಂದು ವಾರದೊಳಗೆ ಸೂಕ್ತ ವರದಿಗಳು ಬರುವಂತೆ ರಿಜಿಸ್ಟ್ರಿ ನೋಡಿಕೊಳ್ಳಬೇಕು' ಎಂದು ಪೀಠ ಹೇಳಿದೆ.

ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ 33 ವರ್ಷದ ರೇಣುಕಸ್ವಾಮಿ ಎಂಬ ಅಭಿಮಾನಿಯನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪ ನಟ ದರ್ಶನ್ ಮತ್ತು ಇತರರ ಮೇಲೆ ಕೇಳಿಬಂದಿದೆ.

ಪೊಲೀಸರ ಪ್ರಕಾರ, 2024ರ ಜೂನ್‌ನಲ್ಲಿ ಸಂತ್ರಸ್ತನನ್ನು ಬೆಂಗಳೂರಿನ ಶೆಡ್‌ನಲ್ಲಿ ಮೂರು ದಿನಗಳ ಕಾಲ ಬಂಧಿಸಿ, ಚಿತ್ರಹಿಂಸೆ ನೀಡಲಾಯಿತು. ಬಳಿಕ ಅವರ ಶವ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka By-poll & Assembly elections 2026 LIVE updates (KL, TN, AS, WB): ತಮಿಳುನಾಡಿನಲ್ಲಿ ನಟ ವಿಜಯ್ ಮ್ಯಾಜಿಕ್; ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಗೆಲುವು; ಕೇರಳದಲ್ಲಿ ಯುಡಿಎಫ್ ಅಲೆ

Tamil Nadu: ಸೋಲಿನತ್ತ DMK, ಷೇರುಮಾರುಕಟ್ಟೆಯಲ್ಲಿ Sun TV ಷೇರುಗಳ ಗಣನೀಯ ಕುಸಿತ

5 States Election results 2026: ತ.ನಾಡಿನಲ್ಲಿ TVK Vijay ಐತಿಹಾಸಿಕ ಸಾಧನೆ, ದೀದಿ 'ಕೈ' ತಪ್ಪಿದ ಬಂಗಾಳ, ಅಸ್ಸಾಂನಲ್ಲಿ BJP ಕ್ಲೀನ್ ಸ್ವೀಪ್, ಕೇರಳದಲ್ಲಿ UDF ಅಲೆ

Bagalkot By Election Result 2026​​: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಗೆ ಗೆಲುವು; ಮೊದಲ ಚುನಾವಣೆಯಲ್ಲೇ ದಾಖಲೆ; ಬಿಜೆಪಿಗೆ ಅಘಾತ!

ಪಂಚರಾಜ್ಯ ಚುನಾವಣೆ ಫಲಿತಾಂಶ 2026: ಬಂಗಾಳದಲ್ಲಿ BJP ಮುನ್ನಡೆ, ಕೇಸರಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಆಲೂ ಪೂರಿ, ರಸಗುಲ್ಲ ಸಿದ್ಧತೆ

SCROLL FOR NEXT