ಮೊನ್ನೆ ಸೋಮವಾರ ಸಾಯಂಕಾಲ ಫಲಿತಾಂಶ ಪ್ರಕಟವಾದಾಗಿನಿಂದ ಪಶ್ಚಿಮ ಬಂಗಾಳ ರಾಜ್ಯದ ವಿವಿಧ ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿದ್ದು, ಬಿಜೆಪಿ ಮತ್ತು ಟಿಎಂಸಿ ಪಕ್ಷಗಳು ಪರಸ್ಪರ ಆರೋಪಗಳನ್ನು ಮಾಡುತ್ತಿವೆ.
ಕಳೆದ 24 ಗಂಟೆಗಳಲ್ಲಿ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಘರ್ಷಣೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪಕ್ಷಗಳ ಪ್ರತಿನಿಧಿಗಳು ನಿನ್ನೆ ಹೇಳಿದ್ದಾರೆ. ಕಠಿಣ ಸ್ಪರ್ಧೆಯ ಚುನಾವಣೆಯಲ್ಲಿ 15 ವರ್ಷಗಳ ತೃಣಮೂಲ ಕಾಂಗ್ರೆಸ್ (TMC) ಸರ್ಕಾರವನ್ನು ಹೊರಹಾಕಿ ಭಾರತೀಯ ಜನತಾ ಪಕ್ಷ (BJP) ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳ ಬಳಿಕ ಈ ಘಟನೆಗಳು ನಡೆದಿವೆ.
ಉತ್ತರ 24 ಪರಗಣದ ನ್ಯೂ ಟೌನ್ ಹಾಗೂ ಹಾವಡದ ಉದಯನಾರಾಯಣಪುರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ ಎಂದು ಪಕ್ಷದ ವಕ್ತಾರರು ಆರೋಪಿಸಿದರೆ, ಕೋಲ್ಕತ್ತಾದ ಬೆಲಿಘಾಟಾ ಮತ್ತು ಬಿರ್ಭೂಮ್‌ನ ನಾನೂರ್‌ನಲ್ಲಿ ಇಬ್ಬರು ಟಿಎಂಸಿ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಟಿಎಂಸಿ ಹೇಳಿದೆ.
ಈ ಸಾವುಗಳು ರಾಜಕೀಯ ಕಾರಣಗಳಿಂದಾಗಿದೆಯೇ ಎಂಬುದನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ. ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕನಿಷ್ಠ ಎರಡು ಪ್ರಕರಣಗಳು ರಾಜಕೀಯ ಸಂಬಂಧಿತವಲ್ಲವೆಂದು ಹೇಳಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಹಾವಡದ ಹತ್ಯೆ ವೈಯಕ್ತಿಕ ವೈಮನಸ್ಯದಿಂದ ನಡೆದಿದೆ. ಬೆಲಿಘಾಟಾದಲ್ಲಿ ಕೆಲವರು ಮನೆಗೆ ಬಂದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವ್ಯಕ್ತಿ ಮೇಲ್ಛಾವಣಿಯಿಂದ ಹಾರಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮತಗಟ್ಟೆ ನಂತರದ ಹಿಂಸಾಚಾರಕ್ಕೆ ಶೂನ್ಯ ಸಹಿಷ್ಣುತೆ ಪಾಲಿಸಲು ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ ಮತ್ತು ನಿಯೋಜಿತ CAPF ಪಡೆಗಳಿಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ ಎಂದು ಹಿರಿಯ ಚುನಾವಣಾಧಿಕಾರಿಯೊಬ್ಬರು ಹೇಳಿದ್ದಾರೆ.
ಸೋಮವಾರ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ 294 ಸ್ಥಾನಗಳಲ್ಲಿ 206 ಗೆದ್ದರೆ, ಟಿಎಂಸಿ 81 ಸ್ಥಾನಗಳನ್ನು ಪಡೆದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾವನಿಪುರ ಕ್ಷೇತ್ರದಲ್ಲಿ ಬಿಜೆಪಿಯ ಸುಬೇಂದು ಅಧಿಕಾರಿ ವಿರುದ್ಧ ಸೋತಿದ್ದಾರೆ. ಸ್ಪರ್ಧಿಸಿದ 35 ಸಚಿವರಲ್ಲಿ 22 ಮಂದಿ ಸೋಲು ಕಂಡಿದ್ದಾರೆ.
ಸೋಮವಾರ ಸಂಜೆದಿಂದಲೇ ರಾಜ್ಯದಾದ್ಯಂತ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿದ್ದು, ಎರಡೂ ಪಕ್ಷಗಳು ಪರಸ್ಪರ ಆರೋಪಗಳನ್ನು ಮಾಡುತ್ತಿವೆ.
ಇಲ್ಲಿಯವರೆಗೆ ನಮ್ಮ ಇಬ್ಬರು ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಬಿಜೆಪಿ ವಕ್ತಾರ ದೇವಜಿತ್ ಸರ್ಕಾರ್ ಹೇಳಿದ್ದಾರೆ. ನ್ಯೂ ಟೌನ್‌ನಲ್ಲಿ ವಿಜಯೋತ್ಸವ ರ್ಯಾಲಿಯಿಂದ ಮನೆಗೆ ಮರಳುತ್ತಿದ್ದ ಬಿಜೆಪಿ ಕಾರ್ಯಕರ್ತ ಮಧು ಮೊಂಡಲ್ ಹತ್ಯೆಯಾಗಿದ್ದಾರೆ. ನಂತರ ಬಿಜೆಪಿ ಕಾರ್ಯಕರ್ತರು ಟಿಎಂಸಿ ಕಾರ್ಯಕರ್ತ ಕಮಲ್ ಮೊಂಡಲ್ ಮನೆ ಮೇಲೆ ದಾಳಿ ನಡೆಸಿ ಹಾನಿಗೊಳಿಸಿದರು.
ಹಾವಡದ ಉದಯನಾರಾಯಣಪುರದಲ್ಲಿ ಬಿಜೆಪಿ ಕಾರ್ಯಕರ್ತ ಯಾದವ್ ಬಾರ್ ಹತ್ಯೆಯಾಗಿದ್ದಾರೆ. “ಬಿಜೆಪಿ ಗೆದ್ದ ನಂತರ ‘ಜೈ ಶ್ರೀರಾಮ್’ ಎಂದು ಕೂಗಿ ಕೇಸರಿ ಬಣ್ಣ ಹಚ್ಚಿಕೊಂಡಿದ್ದ ಕಾರಣ ನನ್ನ ಗಂಡನ ಮೇಲೆ ದಾಳಿ ಮಾಡಲಾಯಿತು ಎಂದು ಮೃತನ ಪತ್ನಿ ಕೃಷ್ಣಾ ಬಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಟಿಎಂಸಿಯೂ ತನ್ನ ಕಾರ್ಯಕರ್ತರ ಮೇಲೆ ದಾಳಿ ನಡೆದ ಘಟನೆಗಳನ್ನು ಪಟ್ಟಿ ಮಾಡಿದೆ. ಇಲ್ಲಿಯವರೆಗೆ ನಮ್ಮ ಇಬ್ಬರು ಕಾರ್ಯಕರ್ತರು ಮೃತಪಟ್ಟಿದ್ದಾರೆ– ಒಬ್ಬರು ಬಿರ್ಭೂಮ್‌ನಲ್ಲಿ, ಮತ್ತೊಬ್ಬರು ಕೋಲ್ಕತ್ತಾದಲ್ಲಿ ಎಂದು ಟಿಎಂಸಿ ವಕ್ತಾರ ಜಯ ಪ್ರಕಾಶ್ ಮಜುಂದಾರ್ ತಿಳಿಸಿದ್ದಾರೆ.
ರಾಜ್ಯದ ಹಲವೆಡೆ ಟಿಎಂಸಿ ಕಚೇರಿಗಳ ಮೇಲೆ ದಾಳಿ ನಡೆದ ವರದಿಯಾಗಿವೆ. ಪೂರ್ವ ಕೋಲ್ಕತ್ತಾದಲ್ಲಿ ಟಿಎಂಸಿ ವಾರ್ಡ್ ಕೌನ್ಸಿಲರ್ ಸುಶಾಂತ್ ಕುಮಾರ್ ಘೋಷ್ ಅವರ ಕಚೇರಿ ಸೋಮವಾರ ರಾತ್ರಿ ದಾಳಿಗೊಳಗಾಯಿತು. ಬಿಜೆಪಿ ಕಾರ್ಯಕರ್ತರು ದಾಳಿಗೆ ಕಾರಣ ಎಂದು ಟಿಎಂಸಿ ಬೆಂಬಲಿಗರು ಆರೋಪಿಸಿದ್ದಾರೆ. “ಲಾಠಿ ಮತ್ತು ಕಬ್ಬಿಣದ ರಾಡ್‌ಗಳನ್ನು ಹಿಡಿದ ಗುಂಪೊಂದು ಕಚೇರಿಯನ್ನು ಧ್ವಂಸ ಮಾಡಿ, ಪೀಠೋಪಕರಣ ಹಾಗೂ ಬ್ಯಾನರ್‌ಗಳಿಗೆ ಬೆಂಕಿ ಹಚ್ಚಿತು,” ಎಂದು ಅವರು ಹೇಳಿದ್ದಾರೆ. ಟಾಲಿಗಂಜ್‌ನಲ್ಲಿ ಮಾಜಿ ಸಚಿವ ಅರೂಪ್ ಬಿಸ್ವಾಸ್ ಅವರ ಕಚೇರಿಗೂ ದಾಳಿ ನಡೆದಿದೆ. ಪಾನಿಹಾಟಿ, ಘಟಾಲ್, ಆಸನ್ಸೋಲ್, ಡೈಮಂಡ್ ಹಾರ್ಬರ್ ಮತ್ತು ಫಾಲ್ತಾದಲ್ಲಿಯೂ ಟಿಎಂಸಿ ಕಚೇರಿಗಳು ಹಾನಿಗೊಳಗಾಗಿವೆ.
ನೈಹಾಟಿಯ ಮಾಮುಡ್ಪುರದಲ್ಲಿ ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ದಾಳಿ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ. ಬಳಿಕ ಸ್ಥಳೀಯ ಕ್ಲಬ್‌ಗೂ ಹಾನಿ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ರಾಜಸಭಾ ಸದಸ್ಯ ಸಮಿಕ್ ಭಟ್ಟಾಚಾರ್ಯ ಹಿಂಸಾಚಾರವನ್ನು ಖಂಡಿಸಿದ್ದಾರೆ.
ಏಪ್ರಿಲ್‌ನಲ್ಲಿ ನಡೆದ ಎರಡು ಹಂತದ ಚುನಾವಣೆಯು ಬಹುತೇಕ ಶಾಂತಿಯುತವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಸರಾಸರಿ 92.93 ಶೇಕಡಾ ಮತದಾನ ದಾಖಲಾಗಿದೆ. ಇದು ಸ್ವಾತಂತ್ರ್ಯದ ನಂತರದ ಗರಿಷ್ಠ ಪ್ರಮಾಣವಾಗಿದೆ. ಚುನಾವಣೆ ಸಂದರ್ಭದಲ್ಲಿ 2,400ಕ್ಕೂ ಹೆಚ್ಚು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಮತಗಟ್ಟೆ ನಂತರದ ಹಿಂಸಾಚಾರ ತಡೆಗಟ್ಟಲು ಇನ್ನೂ ಸುಮಾರು 500 ಪಡೆಗಳನ್ನು ರಾಜ್ಯದಲ್ಲಿ ಮುಂದುವರಿಸಲು ಚುನಾವಣಾ ಆಯೋಗ ನಿರ್ಧರಿಸಿದೆ.