ನವದೆಹಲಿ: ದೇಶದ ಆರ್ಥಿಕ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕೆಲ ಸಲಹೆಗಳು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಹೌದು.. ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸಲು ನಾಗರಿಕರಿಗೆ ಮನವಿ ಮಾಡಿದ್ದರು. ಭಾನುವಾರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 'ಅನಗತ್ಯ ವಿದೇಶ ಪ್ರವಾಸ, ವಿದೇಶಗಳಲ್ಲಿ ನಡೆಯುವ ಮದುವೆಗಳು ಮತ್ತು ಪ್ರವಾಸಗಳನ್ನು ತಪ್ಪಿಸುವಂತೆ ಮನವಿ ಮಾಡಿದರು.
ಅಲ್ಲದೆ ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವಂತೆ ಅವರು ಕರೆ ನೀಡಿದರು. ಇದಲ್ಲದೆ, ವಿದೇಶಿ ವಿನಿಮಯ ಹೊರಹರಿವಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಒಂದು ವರ್ಷದವರೆಗೆ ಅನಗತ್ಯ ಚಿನ್ನದ ಖರೀದಿಯನ್ನು ತಪ್ಪಿಸುವಂತೆ ಜನರನ್ನು ಅವರು ವಿನಂತಿಸಿದರು.
ಅವರ ಈ ಹೇಳಿಕೆ ವಿಪಕ್ಷಗಳಿಗೆ ಆಹಾರವಾಗಿದ್ದು, ಕಾಂಗ್ರೆಸ್ ಸೇರಿದಂತೆ ಇತರೆ ವಿಪಕ್ಷ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ.
ಪ್ರಧಾನಿ ಮೋದಿ ಮೊದಲಿಗರೇನಲ್ಲ..
ದೇಶದ ಆರ್ಥಿಕ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ಹೇಳಿಕೆಗಳು ವೈರಲ್ ಆಗುತ್ತಿರುವಂತೆ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ, ವಿತ್ತ ಸಚಿವ ಪಿ ಚಿದಂಬರಂ ಮತ್ತು ಅಂದಿನ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮಾಡಿದ್ದ ಹೇಳಿಕೆಗಳೂ ಕೂಡ ಇದೀಗ ವೈರಲ್ ಆಗುತ್ತಿದೆ.
ಇಂದಿರಾಗಾಂಧಿ ಹೇಳಿಕೆ ಕುರಿತು ವರದಿ
ಮಾಜಿ ಪ್ರಧಾನಿ ಇಂದಿರಾಗಾಂಧಿ ಕೂಡ 1967ರ ಆರ್ಥಿಕ ಸಂಕಷ್ಟದ ಸಮಯದಲ್ಲಿ ಇದೇ ರೀತಿಯ ಮನವಿ ಮಾಡಿದ್ದರು ಎಂಬ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕರ್ನಾಟಕ ಬಿಜೆಪಿ ವಿಪಕ್ಷ ನಾಯಕ R. Ashoka ಅವರು ಈ ವಿಷಯವನ್ನು ಎಕ್ಸ್ ನಲ್ಲಿ ಪ್ರಸ್ತಾಪಿಸಿದ್ದು, ಪ್ರಧಾನಿ ಮೋದಿ ಅವರ ಇತ್ತೀಚಿನ ಹೇಳಿಕೆಯನ್ನು ಸಮರ್ಥಿಸುವ ಸಂದರ್ಭದಲ್ಲಿ ಇದು ಹೆಚ್ಚು ಚರ್ಚೆಗೆ ಬಂದಿದೆ.
1967ರ ಜೂನ್ 6ರಂದು ಪ್ರಕಟಿತ ಎನ್ನಲಾದ The Hindu ಪತ್ರಿಕೆಯ ಮುಖಪುಟದ ಚಿತ್ರ ಇದೀಗ ವೈರಲ್ ಆಗಿದ್ದು, ಅದರಲ್ಲಿ “ಚಿನ್ನ ಖರೀದಿಸಬೇಡಿ ಎಂದು ಜನರಿಗೆ ಇಂದಿರಾ ಮನವಿ; ‘ರಾಷ್ಟ್ರೀಯ ಶಿಸ್ತು’ ಪಾಲಿಸಿ ಎಂದು ಕರೆ” ಎಂಬ ಶೀರ್ಷಿಕೆ ಕಾಣಿಸಿಕೊಂಡಿದೆ. ಆದರೆ, ದಿ ಹಿಂದು ಪತ್ರಿಕೆ ಈ ಚಿತ್ರದ ನೈಜತೆಯನ್ನು ತಳ್ಳಿಹಾಕಿದೆ.
ತಮ್ಮ ಅಧಿಕೃತ ಸ್ಪಷ್ಟೀಕರಣದಲ್ಲಿ ಪತ್ರಿಕೆ, “1967ರ ಜೂನ್ 6ರಂದು ಪ್ರಕಟವಾದ ದಿ ಹಿಂದು ಮುಖಪುಟ ಎಂದು ಹೇಳಲಾಗುತ್ತಿರುವ ಡಿಜಿಟಲ್ ತಿದ್ದುಪಡಿ ಮಾಡಿದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಮ್ಮ ಆರ್ಕೈವ್‌ನ ನಿಜವಾದ ಪುಟವಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ. ಓದುಗರು ಪರಿಶೀಲಿಸದೆ ಹಂಚಿಕೊಳ್ಳಬಾರದು,” ಎಂದು ತಿಳಿಸಿದೆ.
ಈ ಸ್ಪಷ್ಟೀಕರಣದ ಬಳಿಕ, 1960ರ ದಶಕದ ಕೊನೆಯಲ್ಲಿ ಉಂಟಾದ ವಿದೇಶಿ ವಿನಿಮಯ ಸಂಕಷ್ಟದ ಸಮಯದಲ್ಲಿ ಇಂದಿರಾ ಗಾಂಧಿ ಭಾರತೀಯರಿಗೆ ಚಿನ್ನ ಖರೀದಿಸಬೇಡಿ ಎಂದು ಸಾರ್ವಜನಿಕವಾಗಿ ಮನವಿ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳು ಮತ್ತಷ್ಟು ಉದ್ಭವಿಸಿವೆ.
ಆ ಅವಧಿಯಲ್ಲಿ ಭಾರತವು ವಿದೇಶಿ ವಿನಿಮಯ ಕೊರತೆ, ಆಮದು ಒತ್ತಡ ಮತ್ತು ಕಠಿಣ ಗೋಲ್ಡ್ ಕಂಟ್ರೋಲ್ ನಿಯಮಗಳಂತಹ ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಮುಖಪುಟದ ವರದಿಗೆ ಬೆಂಬಲ ನೀಡುವ ದೃಢೀಕೃತ ಆರ್ಕೈವ್ ದಾಖಲೆಗಳು ಪ್ರಸ್ತುತ ಲಭ್ಯವಿಲ್ಲ ಎನ್ನಲಾಗಿದೆ.
ಆರ್ ಅಶೋಕ್ ಟ್ವೀಟ್
ಆರ್ ಅಶೋಕ್ ಅವರು ಎಕ್ಸ್‌ನಲ್ಲಿ, “ಕಾಂಗ್ರೆಸ್ ಪಕ್ಷದ ನೆನಪು ವಿಚಿತ್ರ ರೀತಿಯಲ್ಲಿ ಕೆಲಸ ಮಾಡುತ್ತದೆ! 1967ರಲ್ಲಿ ಇಂದಿರಾ ಗಾಂಧಿ ಭಾರತೀಯರಿಗೆ ಚಿನ್ನ ಖರೀದಿಸಬೇಡಿ ಎಂದಾಗ ಅದನ್ನು ‘ರಾಷ್ಟ್ರೀಯ ಶಿಸ್ತು’ ಎಂದರು. 2013ರಲ್ಲಿ P. Chidambaram ಜನರಿಗೆ ‘ಚಿನ್ನ ಖರೀದಿಸುವ ಆಕರ್ಷಣೆಗೆ ಒಳಗಾಗಬೇಡಿ’ ಎಂದಾಗ ಅದನ್ನು ‘ಆರ್ಥಿಕ ಜವಾಬ್ದಾರಿ’ ಎಂದರು. ಆದರೆ ಈಗ ಪ್ರಧಾನಿ ಮೋದಿ ಅದೇ ರೀತಿಯ ಮನವಿ ಮಾಡಿದಾಗ ಕಾಂಗ್ರೆಸ್ ನಾಯಕರು ಇದನ್ನು ಅಪೂರ್ವ ಘಟನೆ ಎಂದು ತೋರಿಸುತ್ತಿದ್ದಾರೆ,” ಎಂದು ಬರೆದಿದ್ದಾರೆ.
ಚಿನ್ನ ಖರೀದಿ ಕಡಿಮೆ ಮಾಡಿ ಎಂದಿದ್ದ ಚಿದಂಬರಂ
ಅಂತೆಯೇ ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ಪಿ ಚಿದಂಬರಂ ಚಿನ್ನ ಖರೀದಿಗೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದರು. "ಬ್ಯಾಂಕ್‌ಗಳು ತಮ್ಮ ಗ್ರಾಹಕರನ್ನು ಚಿನ್ನ ಖರೀದಿಸಲು ಪ್ರೋತ್ಸಾಹಿಸಬಾರದು ಎಂದು ನಾನು ಒತ್ತಾಯಿಸುತ್ತೇನೆ. ಚಿನ್ನವು ತಾಮ್ರ ಮತ್ತು ಹಿತ್ತಾಳೆಗಿಂತ ಸ್ವಲ್ಪ ಹೆಚ್ಚು ಹೊಳೆಯುತ್ತದೆ. ಆರ್ಥಿಕತೆಯು ಅದನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಭಾರತೀಯರು ಚಿನ್ನವನ್ನು ಖರೀದಿಸಬೇಡಿ ಎಂದು ಹಣಕಾಸು ಸಚಿವ ಪಿ ಚಿದಂಬರಂ ಹೇಳಿದ್ದ ವಿಡಿಯೋ ವೈರಲ್ ಆಗಿದೆ.
ಪೆಟ್ರೋಲ್ ಮಿತಿ ಬಳಕೆ ಬಗ್ಗೆ ವೀರಪ್ಪ ಮೊಯ್ಲಿ ಹೇಳಿಕೆ
ಅಷ್ಟು ಮಾತ್ರವಲ್ಲದೇ 2013ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಇಂಧನ ಸಚಿವರಾಗಿದ್ದ ವೀರಪ್ಪ ಮೊಯ್ಲಿ ಅವರೂ ಕೂಡ ಪೆಟ್ರೋಲ್ ಅನ್ನು ಮಿತವಾಗಿ ಬಳಕೆ ಮಾಡುವಂತೆ ಸಲಹೆ ನೀಡಿದ್ದರು. ಅಲ್ಲದೆ ದೇಶದ ಎಲ್ಲ ಪೆಟ್ರೋಲ್ ಬಂಕ್ ಗಳನ್ನು ರಾತ್ರಿ 8 ಗಂಟೆಗೇ ಮುಚ್ಚುವಂತೆ ಆದೇಶ ನೀಡುವ ಮಾತನ್ನಾಡಿದ್ದರು. 3 ಕಾರು ಇದ್ದವರು 1 ಕಾರನ್ನು ಮಾತ್ರ ಬಳಕೆ ಮಾಡಬೇಕು, ಸುಖಾ ಸುಮ್ಮನೆ ಓಡಾಟ ಬೇಡ. ಖರ್ಚು ಕಡಿಮೆ ಮಾಡಿ ಎಂದು ಸಲಹೆ ನೀಡಿದ್ದರು. ಈ ಕುರಿತ ಹಳೇ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಇನ್ನೊಂದೆಡೆ, ಕಾಂಗ್ರೆಸ್ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಜನರಿಗೆ ಖರ್ಚು ಕಡಿಮೆ ಮಾಡಲು ಮನವಿ ಮಾಡುವುದು ಆರ್ಥಿಕ ಬಲದ ಸೂಚನೆ ಅಲ್ಲ, ಬದಲಿಗೆ ಸಂಕಷ್ಟದ ಸಂಕೇತ ಎಂದು ಹೇಳಿದೆ. ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪ್ರಧಾನಿ ಮೋದಿ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.
“ನಿನ್ನೆ ಮೋದಿ ಜೀ ಜನರಿಗೆ ತ್ಯಾಗ ಮಾಡಲು ಹೇಳಿದರು.. ಚಿನ್ನ ಖರೀದಿಸಬೇಡಿ, ವಿದೇಶ ಪ್ರವಾಸ ಬೇಡ, ಕಡಿಮೆ ಪೆಟ್ರೋಲ್ ಬಳಸಿ, ರಸಗೊಬ್ಬರ ಮತ್ತು ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ, ಮೆಟ್ರೋ ಬಳಸಿ, ಮನೆಯಿಂದ ಕೆಲಸ ಮಾಡಿ. ಇವು ಉಪದೇಶಗಳಲ್ಲ ವೈಫಲ್ಯದ ಸಾಕ್ಷಿಗಳು,” ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದರು.