ಚೆನ್ನೈ: ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಹೆಚ್ಚಿನ ಮತದಾರರ ಬೆಂಬಲವಿಲ್ಲ ಎಂದು ಹೇಳಿರುವ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ಆಡಳಿತ ಪಕ್ಷವು ಈ ಹಿಂದೆ ಎಐಎಡಿಎಂಕೆ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದರೂ, ಎಐಎಡಿಎಂಕೆಯ ಕೆಲವು ಶಾಸಕರ ಸಹಾಯದಿಂದ ಸರ್ಕಾರ ಅಧಿಕಾರಕ್ಕೆ ಬಂದಿರುವುದನ್ನು ಬುಧವಾರ ಟೀಕಿಸಿದ್ದಾರೆ.
ಟಿವಿಕೆ ಸರ್ಕಾರದ ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ, ಹಿಂದಿನ ಡಿಎಂಕೆ ಸರ್ಕಾರ ಪ್ರಾರಂಭಿಸಿದ ಕಲ್ಯಾಣ ಯೋಜನೆಗಳನ್ನು ಮುಂದುವರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ವಿಶ್ವಾಸ ಮತದಲ್ಲಿ ಭಾಗವಹಿಸದ ಡಿಎಂಕೆ ವಿಧಾನಸಭೆಯಿಂದ ಹೊರನಡೆಯಿತು. ಇದರ ಹೊರತಾಗಿಯೂ, ಸಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು 144 ಮತಗಳೊಂದಿಗೆ ಸುಲಭವಾಗಿ ವಿಶ್ವಾಸ ಮತ ಗೆದ್ದಿತು.
ಟಿವಿಕೆ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಉದಯನಿಧಿ, 'ಮೊದಲನೆಯದಾಗಿ, ಬಹುಪಾಲು ಜನರು ಟಿವಿಕೆಗೆ ಮತ ಹಾಕಿಲ್ಲ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 4.93 ಕೋಟಿ ಜನರು ಮತ ಚಲಾಯಿಸಿದ್ದಾರೆ. ಆಡಳಿತ ಪಕ್ಷಕ್ಕೆ ಎಷ್ಟು ಮಂದಿ ಮತ ಚಲಾಯಿಸಿದ್ದಾರೆಂದು ನಿಮಗೆ ತಿಳಿದಿದೆಯೇ. ಕೇವಲ 1.72 ಕೋಟಿ. ಉಳಿದ ಸುಮಾರು 3.21 ಕೋಟಿ ಜನರು ನಿಮ್ಮ ಪಕ್ಷದ ವಿರುದ್ಧ ಮತ ಚಲಾಯಿಸಿದ್ದಾರೆ ಮತ್ತು ನೀವು ಇದನ್ನು ಅರ್ಥಮಾಡಿಕೊಳ್ಳಬೇಕು' ಎಂದರು.
ವಿಜಯ್ ನೇತೃತ್ವದ ಟಿವಿಕೆಯನ್ನು ಸುಮಾರು ಶೇ 65ರಷ್ಟು ಮತದಾರರು 'ತಿರಸ್ಕರಿಸಿದ್ದಾರೆ'. ಇದಲ್ಲದೆ, ಏಪ್ರಿಲ್ 23ರಂದು ನಡೆದ ಚುನಾವಣೆಯಲ್ಲಿ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ವಿರುದ್ಧ ನಮ್ಮ ಪಕ್ಷ ಸ್ಪರ್ಧಿಸಿತ್ತು. ಆದರೆ, ಟಿವಿಕೆ ಎಎಂಎಂಕೆ ಶಾಸಕರ ಬೆಂಬಲ ಪಡೆದಿದೆ ಎಂದು ಟೀಕಿಸಿದರು. ಅವರು ನಿಮ್ಮ ಸೈದ್ಧಾಂತಿಕ ಶತ್ರು ಎಂದು ಹೇಳಿದ ನಂತರವೂ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಸ್ಪರ್ಧಿಸಿದ್ದ ಶಾಸಕರಿಂದ ನೀವು ಈ ಬೆಂಬಲ ಪಡೆದುಕೊಂಡಿದ್ದೀರಿ ಎಂದು ಹೇಳಿದರು.
ಟಿವಿಕೆ 'ಅಧಿಕಾರಕ್ಕೆ ಬರುವ ಮೊದಲೇ ಕುದುರೆ ವ್ಯಾಪಾರದಲ್ಲಿ' ತೊಡಗಿತ್ತು ಎಂಬ ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್ ಅವರ ಹೇಳಿಕೆಗಳನ್ನು ನೆನಪಿಸಿಕೊಂಡರು.
ಟಿವಿಕೆ ಸರ್ಕಾರಕ್ಕೆ ಎಎಂಎಂಕೆ ಶಾಸಕ ಎಸ್ ಕಾಮರಾಜ್ ಬೆಂಬಲ ನೀಡಿದ ನಂತರ ದಿನಕರನ್ ಅವರನ್ನು ವಜಾಗೊಳಿಸಿದ್ದಾರೆ.
'ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷ ಎಐಎಡಿಎಂಕೆ ಬಹುತೇಕ ಎರಡು ಗುಂಪುಗಳಾಗಿ ವಿಭಜನೆಯಾಗಿದೆ. ಆ ಒಡೆದ ಗುಂಪಿನ ನಾಯಕರೊಬ್ಬರ ಮನೆಗೆ ಹೊಸ ಸೋಫಾವನ್ನು ತಲುಪಿಸಲಾಯಿತು, ನಂತರ ಮುಖ್ಯಮಂತ್ರಿಗಳು ಅಲ್ಲಿಗೆ ಭೇಟಿ ನೀಡಿದರು. ಚುನಾವಣೆಯ ಸಮಯದಲ್ಲಿ, ನೀವು ಅವರನ್ನು (ಎಐಎಡಿಎಂಕೆ) ಭ್ರಷ್ಟ ಶಕ್ತಿ ಎಂದು ಕರೆದಿದ್ದೀರಿ' ಎಂದು ಅವರು ಹೇಳಿದರು.
'ಆಡಳಿತ ಪಕ್ಷವು ಈಗ ಆ ಭ್ರಷ್ಟ ಶಕ್ತಿಯೊಂದಿಗೆ ಏಕೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಜನರು ಕೇಳುತ್ತಿದ್ದಾರೆ. ನೀವು ಸ್ವಚ್ಛ ಸರ್ಕಾರದ ಭರವಸೆ ನೀಡಿದ್ದೀರಿ. ಇದು ನಿಮ್ಮ ಸ್ವಚ್ಛ ಆಡಳಿತದ ವಿಶಿಷ್ಟ ಲಕ್ಷಣವೇ? ಜನರು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ' ಎಂದು ಅವರು ಆರೋಪಿಸಿದರು.
ನಿಮಗೆ ಮತ ಹಾಕಿದವರು ಸಹ, ಈ ಘಟನೆಗಳನ್ನು ನೋಡಿದ ನಂತರ, ಇಂದು ತಮ್ಮ ದೊಡ್ಡ ತಪ್ಪಿಗೆ ವಿಷಾದಿಸಲು ಪ್ರಾರಂಭಿಸಿದ್ದಾರೆ. ಜನರ ಭಾವನೆಯನ್ನು ವ್ಯಕ್ತಪಡಿಸಲು, ಡಿಎಂಕೆ ಸದಸ್ಯರು ಭಾಗವಹಿಸದೆ ಹೊರನಡೆಯುತ್ತಾರೆ ಎಂದು ಅವರು ಮತದಾನದ ಸಮಯದಲ್ಲಿ ಹೇಳಿದರು.