ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಹಾಗೂ ಬೆಂಗಳೂರು, ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಮಹಾರಾಷ್ಟ್ರದ ಪುಣೆ, ಮುಂಬೈ ನಗರಗಳ ನಡುವೆ ಸಂಪರ್ಕವನ್ನು ಸುಧಾರಿಸಲು ರೈಲ್ವೆ ಸಚಿವಾಲಯ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ಹೊಸ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಅನುಮೋದನೆ ನೀಡಿದೆ.
ಉದ್ಘಾಟನಾ ವಿಶೇಷ ರೈಲು: ಈ ನೂತನ ಸೇವೆಯ ಆರಂಭದ ಅಂಗವಾಗಿ, ರೈಲು ಸಂಖ್ಯೆ 06557 ಎಂಬ ಉದ್ಘಾಟನಾ ವಿಶೇಷ ರೈಲು ಮೇ 17ರಂದು (ಭಾನುವಾರ) ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದಿಂದ ಹೊರಡಲಿದೆ. ಅಂದು ಬೆಳಿಗ್ಗೆ 10:00 ಗಂಟೆಗೆ ಹೊರಡುವ ಈ ರೈಲು, ಮರುದಿನ ಬೆಳಿಗ್ಗೆ 10:30ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್ ತಲುಪಲಿದೆ.
ಪ್ರಯಾಣದ ಹಾದಿಯಲ್ಲಿ ಈ ರೈಲು ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಲೋನಾಂಡ್, ಪುಣೆ, ಲೋನಾವಾಲಾ, ಕರ್ಜತ್, ಕಲ್ಯಾಣ ಮತ್ತು ಥಾಣೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ನಿಯಮಿತ ರೈಲು ಸೇವೆಗಳ ವಿವರ: ರೈಲು ಸಂಖ್ಯೆ 16553/16554 ಎಸ್ಎಂವಿಟಿ ಬೆಂಗಳೂರು – ಲೋಕಮಾನ್ಯ ತಿಲಕ್ ಟರ್ಮಿನಸ್ – ಎಸ್ಎಂವಿಟಿ ಬೆಂಗಳೂರು ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳ ನಿಯಮಿತ ಸೇವೆಗಳು ಎಸ್‌ಎಂವಿಟಿ ಬೆಂಗಳೂರಿನಿಂದ 23.05.2026 ರಿಂದ ಮತ್ತು ಎಲ್’ಟಿಟಿ ಮುಂಬೈನಿಂದ 24.05.2026 ರಿಂದ ಪ್ರಾರಂಭವಾಗಲಿವೆ.
ರೈಲು ಸಂಖ್ಯೆ 16553/16554 ಎಸ್ಎಂವಿಟಿ ಬೆಂಗಳೂರು – ಲೋಕಮಾನ್ಯ ತಿಲಕ್ ಟರ್ಮಿನಸ್ – ಎಸ್ಎಂವಿಟಿ ಬೆಂಗಳೂರು ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳ ನಿಯಮಿತ ಸೇವೆಗಳು ಬೆಂಗಳೂರಿನಿಂದ 23.05.2026 ರಿಂದ ಮತ್ತು ಎಲ್.ಟಿ.ಟಿ ಮುಂಬೈನಿಂದ 24.05.2026 ರಿಂದ ಪ್ರಾರಂಭವಾಗಲಿವೆ.
ರೈಲು ಸಂಖ್ಯೆ 16553 ಎಸ್ಎಂವಿಟಿ ಬೆಂಗಳೂರು - ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ಪ್ರತಿ ಶನಿವಾರ ಮತ್ತು ಮಂಗಳವಾರ ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 20:35 ಗಂಟೆಗೆ ಹೊರಟು, ಮರುದಿನ (ಕ್ರಮವಾಗಿ ಭಾನುವಾರ ಮತ್ತು ಬುಧವಾರ) ರಾತ್ರಿ 20:40 ಗಂಟೆಗೆ ಲೋಕಮಾನ್ಯ ತಿಲಕ್ ಟರ್ಮಿನಸ್ ತಲುಪಲಿದೆ.
ಮರು ಪ್ರಯಾಣ, ರೈಲು ಸಂಖ್ಯೆ 16554 ಲೋಕಮಾನ್ಯ ತಿಲಕ್ ಟರ್ಮಿನಸ್ - ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಪ್ರತಿ ಭಾನುವಾರ ಮತ್ತು ಬುಧವಾರ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ 23:15 ಗಂಟೆಗೆ ಹೊರಟು, ಮರುದಿನ (ಸೋಮವಾರ ಮತ್ತು ಗುರುವಾರ ಕ್ರಮವಾಗಿ) 22:30 ಗಂಟೆಗೆ ಎಸ್ಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ.
ಎಲ್ಲೆಲ್ಲಿ ನಿಲುಗಡೆ ಇರಲಿದೆ: ಈ ರೈಲುಗಳು ಎರಡೂ ಮಾರ್ಗಗಳಲ್ಲಿ ದಾವಣಗೆರೆ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್ ಜಂಕ್ಷನ್, ಸಾಂಗ್ಲಿ, ಕರಾಡ್, ಸತಾರಾ, ಲೋನಾಂಡ್, ಪುಣೆ, ಲೋನಾವಾಲಾ, ಕರ್ಜತ್, ಕಲ್ಯಾಣ್ ಮತ್ತು ಥಾಣೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ರೈಲು ಒಟ್ಟು 17 ಎಲ್.ಹೆಚ್.ಬಿ ಬೋಗಿಗಳನ್ನು ಹೊಂದಿದ್ದು, ಇದರಲ್ಲಿ ಒಂದು ಎಸಿ 2-ಟೈರ್, ನಾಲ್ಕು ಎಸಿ 3-ಟೈರ್, ಆರು ಸ್ಲೀಪರ್ ಬೋಗಿಗಳು, ನಾಲ್ಕು ಸಾಮಾನ್ಯ ದರ್ಜೆಯ ಬೋಗಿಗಳು, ಒಂದು ದಿವ್ಯಾಂಗ ಸ್ನೇಹಿ ಬೋಗಿ ಒಳಗೊಂಡ ಲಗೇಜ್-ಕಮ್-ಬ್ರೇಕ್ ವ್ಯಾನ್ ಹಾಗೂ ಒಂದು ಲಗೇಜ್-ಕಮ್-ಜನರೇಟರ್ ಕಾರ್-ಕಮ್-ಬ್ರೇಕ್ ವ್ಯಾನ್ ಬೋಗಿಗಳು ಒಳಗೊಂಡಿರುತ್ತದೆ.
ಈ ನೂತನ ರೈಲು ಸೇವೆಯು ಬೆಂಗಳೂರು, ಉತ್ತರ ಕರ್ನಾಟಕ ಮತ್ತು ಮುಂಬೈ ನಡುವೆ ವ್ಯಾಪಾರ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಉದ್ಯೋಗದ ನಿಮಿತ್ತ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಇದು ಮಾರ್ಗದ ಪ್ರಮುಖ ವಾಣಿಜ್ಯ ಮತ್ತು ಸಾಂಸ್ಕೃತಿಕ ಕೇಂದ್ರಗಳ ನಡುವಿನ ರೈಲು ಸಂಪರ್ಕವನ್ನು ಬಲಪಡಿಸಲಿದೆ.
ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್, ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (ಎನ್‌ಟಿಇಎಸ್) ಗೆ ಭೇಟಿ ನೀಡಬಹುದು ಅಥವಾ ವಿವರವಾದ ಸಮಯ, ನಿಲ್ದಾಣಗಳು ಮತ್ತು ಬುಕ್ಕಿಂಗ್ ಸಂಬಂಧಿತ ಮಾಹಿತಿಗಾಗಿ ಹತ್ತಿರದ ರೈಲು ನಿಲ್ದಾಣಗಳನ್ನು ಸಂಪರ್ಕಿಸಬಹುದು.