ಪ್ರದೀಪ್ ಮಹಿಚ್ 
ದೇಶ

NEET ರದ್ದು: 650 ಅಂಕ ನಿರೀಕ್ಷಿಸಿದ್ದ ವಿದ್ಯಾರ್ಥಿ ನೇಣಿಗೆ ಶರಣು; ‘ಭ್ರಷ್ಟ ವ್ಯವಸ್ಥೆಯೇ ಕಾರಣ’- ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ

ಪರೀಕ್ಷೆಯಲ್ಲಿ ಆತ ಉತ್ತಮವಾಗಿ ಬರೆದಿದ್ದು, ಈ ಬಾರಿ ಸುಮಾರು 650 ಅಂಕಗಳನ್ನು ನಿರೀಕ್ಷಿಸಿದ್ದ. ಆದರೆ ಪರೀಕ್ಷೆ ರದ್ದಾದ ನಂತರ ತೀವ್ರವಾಗಿ ನೊಂದಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ.

ನವದೆಹಲಿ: ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ ಕೇಂದ್ರ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿದ ಕಾರಣ ರಾಜಸ್ಥಾನದಲ್ಲಿ ವೈದ್ಯಕೀಯ ಆಕಾಂಕ್ಷಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತನನ್ನು ಪ್ರದೀಪ್ ಮಹಿಚ್ ಎಂದು ಗುರ್ತಿಸಲಾಗಿದ್ದು, ಇವರು ಜುನ್ಜುನುವಿನ ಗುಧಾ ಗೌಡ್ಜಿ ಪ್ರದೇಶದ ಕನಿಕಾ ಕಿ ಧನಿ ಗ್ರಾಮದ ನಿವಾಸಿಯಾಗಿದ್ದಾರೆ.

ಪರೀಕ್ಷೆಯಲ್ಲಿ ಆತ ಉತ್ತಮವಾಗಿ ಬರೆದಿದ್ದು, ಈ ಬಾರಿ ಸುಮಾರು 650 ಅಂಕಗಳನ್ನು ನಿರೀಕ್ಷಿಸಿದ್ದ. ಆದರೆ ಪರೀಕ್ಷೆ ರದ್ದಾದ ನಂತರ ತೀವ್ರವಾಗಿ ನೊಂದಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಉದ್ಯೋಗ ನಗರ ಠಾಣೆ ಅಧಿಕಾರಿ (SHO) ರಾಜೇಶ್ ಕುಮಾರ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ತನ್ನ ಇಬ್ಬರು ಸಹೋದರಿಯರೊಂದಿಗೆ ಸಿಕಾರ್‌ನಲ್ಲಿ ವಾಸವಿದ್ದ ವಿದ್ಯಾರ್ಥಿ, ಖಾಸಗಿ ಕೋಚಿಂಗ್ ಸಂಸ್ಥೆಯಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ನಿನ್ನೆ ತನ್ನ ಸಹೋದರಿಯ ಸ್ಕಾರ್ಫ್ ಬಳಸಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಹೇಳಿದ್ದಾರೆ.

ಶುಕ್ರವಾರ ಮಧ್ಯಾಹ್ನ ಓರ್ವ ಸಹೋದರಿ ಕೋಚಿಂಗ್ ತರಗತಿಯಲ್ಲಿ, ಮತ್ತೊಬ್ಬ ಸಹೋದರಿ ಸ್ನಾನಗೃಹದಲ್ಲಿದ್ದಾಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ನಾನ ಮುಗಿಸಿ ಹೊರಬಂದ ಸಹೋದರಿ ಪ್ರದೀಪ್ ಸ್ಥಿತಿ ಕಂಡು, ಆಘಾತದಲ್ಲಿ ಕೂಗಾಡಿದ್ದಾರೆ, ಬಳಿಕ ಮನೆ ಮಾಲೀಕರ ಸಹಾಯದಿಂದ ಕತ್ತರಿಯಿಂದ ಸ್ಕಾರ್ಫ್ ಕತ್ತರಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಶಿಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಪ್ರದೀಪ್ ತಂದೆ ರಾಜೇಶ್ ಕುಮಾರ್ ಅವರು ಮಾತನಾಡಿ, ನನ್ನ ಮಗ ನೀಟ್ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ. ಸುಮಾರು 650 ಅಂಕಗಳನ್ನು ಗಳಿಸುತ್ತಾನೆ ಎಂದು ನಿರೀಕ್ಷಿಸಿತ್ತು ಎಂದು ಕಣ್ಣೀರಿಟ್ಟಿದ್ದಾರೆ.

ಈ ವರ್ಷ ಸರ್ಕಾರಿ ವೈದ್ಯಕೀಯ ಸೀಟು ಪಡೆಯುವ ವಿಶ್ವಾಸ ಹೊಂದಿದ್ದ. ಆದರೆ ಪರೀಕ್ಷೆ ರದ್ದಾದ ನಂತರ ತೀವ್ರವಾಗಿ ದುಃಖಿತನಾಗಿದ್ದ. ನಂತರ ಖಿನ್ನತೆಗೊಳಗಾಗಿದ್ದ.

ನೀಟ್-ಯುಜಿಯನ್ನು ಒಟ್ಟು 720 ಅಂಕಗಳಿಗೆ ನಡೆಸಲಾಗುತ್ತದೆ, ಇದರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ಪ್ರಶ್ನೆಗಳಿವೆ.

ಈ ವಾರದ ಆರಂಭದಲ್ಲಿ NEET-UG 2026 ಪರೀಕ್ಷೆಯಲ್ಲಿ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಇದು 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರಿದೆ.

ಜೂನ್ 21 ರಂದು ಮರು ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ ಘೋಷಿಸಿದ್ದಾರೆ.

ಮುಂದಿನ ವರ್ಷದಿಂದ ವೈದ್ಯಕೀಯ ಪ್ರವೇಶ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಸ್ವರೂಪಕ್ಕೆ ಬದಲಾಗಲಿದೆ ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ವಿದ್ಯಾರ್ಥಿಯ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನಂತರದ ಪರೀಕ್ಷೆ ರದ್ದತಿ ಆಕಾಂಕ್ಷಿಗಳಲ್ಲಿ ಆತಂಕವನ್ನುಂಟುಮಾಡಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಅವರು, "ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ಪ್ರದೀಪ್ ಆತ್ಮಹತ್ಯೆ ಅತ್ಯಂತ ಹೃದಯವಿದ್ರಾವಕವಾಗಿದೆ. ಅದೇ ರೀತಿ, ಗೋವಾ ಮತ್ತು ಉತ್ತರ ಪ್ರದೇಶದಿಂದ NEET 2026 ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಘಟನೆಗಳ ನಂತರ ವಿದ್ಯಾರ್ಥಿಗಳ ಆತ್ಮಹತ್ಯೆಯ ವರದಿಗಳು ಮನಸ್ಸನ್ನು ತೀವ್ರವಾಗಿ ಕಲಕುತ್ತಿವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖಿತ ಕುಟುಂಬಗಳಿಗೆ ನಾನು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆಂದು ತಿಳಿಸಿದ್ದಾರೆ.

ಇದೇ ವೇಳೆ ದೆಹಲಿ, ಉತ್ತರ ಪ್ರದೇಶ ಮತ್ತು ಗೋವಾದಲ್ಲಿಯೂ ನೀಟ್ ಪರೀಕ್ಷೆ ಸಂಬಂಧ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.

ದೆಹಲಿಯ ಆಜಾದ್‌ಪುರದಲ್ಲಿ 20 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಉತ್ತರ ಪ್ರದೇಶದ ಲಖಿಂಪುರ ಖೇರಿಯ 21 ವರ್ಷದ ವಿದ್ಯಾರ್ಥಿಯೊಬ್ಬರೂ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಗೋವಾದ ದಕ್ಷಿಣ ಭಾಗದಲ್ಲಿಯೂ 17 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡ ಹಾಗೂ ಓದು-ಕ್ರೀಡೆ ನಡುವಿನ ಸಮತೋಲನ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಆತ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ಉಲ್ಲೇಖವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನೀಟ್ ಪರೀಕ್ಷೆ ರದ್ದತಿ ಹಾಗೂ ಮರುಪರೀಕ್ಷೆ ಘೋಷಣೆಯ ನಂತರ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ದೇಶದಾದ್ಯಂತ ಗಂಭೀರ ಚರ್ಚೆ ಆರಂಭವಾಗಿದೆ.

ಇದು ಆತ್ಮಹತ್ಯೆಯಲ್ಲ, ವ್ಯವಸ್ಥೆಯೇ ಮಾಡಿದ ಕೊಲೆ: ರಾಹುಲ್ ಗಾಂಧಿ

ಈ ನಡುವೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಅವರು, “ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳೇ ಬೇಡ” ಎಂಬುದೇ ರಿತಿಕ್ ಮಿಶ್ರಾ ಕೊನೆಯ ಮಾತಾಗಿತ್ತು. ಮೂರನೇ ಬಾರಿ ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಪರೀಕ್ಷೆ ರದ್ದಾದ ಸುದ್ದಿಯಿಂದ ಮಾನಸಿಕವಾಗಿ ಕುಗ್ಗಿದ್ದ ಎಂದು ಹೇಳಿದ್ದಾರೆ.

ಗೋವಾದಲ್ಲೂ ನೀಟ್ ಅಭ್ಯರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, “ಈ ಮಕ್ಕಳು ಪರೀಕ್ಷೆಯಲ್ಲಿ ಸೋತಿಲ್ಲ. ಭ್ರಷ್ಟ ವ್ಯವಸ್ಥೆಯೇ ಅವರನ್ನು ಬಲಿ ತೆಗೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳ ಕುರಿತು ಅಂಕಿಅಂಶಗಳನ್ನು ಉಲ್ಲೇಖಿಸಿರುವ ಅವರು, 2015ರಿಂದ 2026ರವರೆಗೆ ಒಟ್ಟು 148 ಪರೀಕ್ಷಾ ಹಗರಣಗಳು ನಡೆದಿವೆ ಎಂದು ಹೇಳಿದ್ದಾರೆ.

ಈ ಪೈಕಿ 87 ಪರೀಕ್ಷೆಗಳು ರದ್ದಾಗಿದ್ದು, ಸುಮಾರು 9 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಮೇಲೆ ಪರಿಣಾಮ ಬಿದ್ದಿದೆ ಎಂದು ಹೇಳಿದ್ದಾರೆ.

“148 ಹಗರಣಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಶಿಕ್ಷೆಯಾಗಿದೆ. ಸಿಬಿಐ 17 ಪ್ರಕರಣಗಳನ್ನು ಹಾಗೂ ಇಡಿ 11 ಪ್ರಕರಣಗಳನ್ನು ಕೈಗೆತ್ತಿಕೊಂಡರೂ ಯಾರಿಗೂ ಶಿಕ್ಷೆಯಾಗಿಲ್ಲ.

ನೀಟ್, ಎಐಪಿಎಂಟಿ ಸೇರಿದಂತೆ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲೇ 15 ಹಗರಣಗಳು ನಡೆದಿವೆ. “ಅತ್ಯಂತ ನಾಚಿಕೆಗೇಡಿತನದ ಸಂಗತಿ ಎಂದರೆ ಈ ಅಕ್ರಮಗಳಿಗೆ ಹೊಣೆಗಾರರಾಗಿರುವ ಯಾವ ಅಧಿಕಾರಿಯೂ ಅಥವಾ ಸಚಿವರೂ ರಾಜೀನಾಮೆ ನೀಡಿಲ್ಲ. ಅವರನ್ನು ತೆಗೆದು ಹಾಕಿದರೂ ಬಳಿಕ ಮತ್ತೆ ಉನ್ನತ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.

“ವಿದ್ಯಾರ್ಥಿಗಳ ಭವಿಷ್ಯ ಕದಿಯುವವರಿಗೆ ಬಹುಮಾನ ಸಿಗುತ್ತಿದೆ. ಆದರೆ, ಪರೀಕ್ಷೆ ಬರೆಯುವ ಮಕ್ಕಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನೇರವಾಗಿ ಪ್ರಶ್ನಿಸಿದ ರಾಹುಲ್ ಗಾಂಧಿ, “ಮೋದಿ ಜೀ, ನಿಮ್ಮ ಜವಾಬ್ದಾರಿ ಎಚ್ಚರಗೊಳ್ಳಲು ಇನ್ನೆಷ್ಟು ರಿತಿಕ್‌ಗಳ ಜೀವ ಹೋಗಬೇಕು? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿರುವ ಅವರು, “ನಿಮ್ಮ ನೋವು ನನ್ನ ನೋವು. ನಿಮ್ಮ ಪರಿಶ್ರಮ ನನ್ನ ಪರಿಶ್ರಮ. ನಿಮ್ಮ ಭವಿಷ್ಯ ಕದಿಯುವವರು ಉತ್ತರ ಕೊಡಲೇಬೇಕು. ಎಷ್ಟು ಸಮಯ ಬೇಕಾದರೂ ನಾವು ಈ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ ಮಾನಸಿಕ ಒತ್ತಡ ಅಥವಾ ಆತ್ಮಹತ್ಯೆ ಚಿಂತನೆಗಳಿಂದ ಬಳಲುತ್ತಿದ್ದರೆ, ತಕ್ಷಣ ನೆರವು ಪಡೆಯಿರಿ. ಸಹಾಯಕ್ಕಾಗಿ 24x7 ಟೆಲಿ-ಮನಸ್ ಸಹಾಯವಾಣಿ 14416 ಗೆ ಕರೆ ಮಾಡಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಧ್ಯಪ್ರಾಚ್ಯ ಸಂಘರ್ಷ: ಅಮೆರಿಕಾ ನಂಬಿಕೆಗೆ ಅರ್ಹವಲ್ಲ, ಭಾರತ ಬಂದರೆ ಶಾಂತಿ ಸಾಧ್ಯ; ಇರಾನ್

ಇರಾನ್ ಅಣ್ವಸ್ತ್ರ ಹೊಂದಬಾರದು, ಹಾರ್ಮುಜ್ ಜಲಸಂಧಿ ಮುಕ್ತವಾಗಿರಬೇಕು: ಅಮೆರಿಕಾ ನಿಲುವಿಗೆ ಚೀನಾ ಸಹಮತ

ದಳಪತಿ ವಿಜಯ್ ಪ್ರಧಾನ ಮಂತ್ರಿಯಾಗುತ್ತಾರಾ? ತಮಿಳು ನಾಡು ಸಿಎಂ ರಾಜಕೀಯ ಭವಿಷ್ಯ ನುಡಿದ ಜ್ಯೋತಿಷಿ ರಾಧನ್ ಪಂಡಿತ್-Video

ರೈತರು ಎರಡೇಟು ಹೊಡೆದರೂ, ನನ್ನ ಬಟ್ಟೆ ಹರಿದರೂ ಬಿಡದಿ ಟೌನ್‌ಶಿಪ್‌ ಮಾಡಿಯೇ ಸಿದ್ದ: ಡಿ ಕೆ ಶಿವಕುಮಾರ್

ದಾವಣಗೆರೆಯಲ್ಲಿ ಭಾರೀ ಮಳೆ: ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ

SCROLL FOR NEXT