ಕೋಲ್ಕತಾ: ಭಾರತಕ್ಕೆ ನಾಲ್ಕು ದಿನಗಳ ರಾಜತಾಂತ್ರಿಕ ಭೇಟಿಯ ಭಾಗವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶನಿವಾರ ಕೋಲ್ಕತ್ತಾಗೆ ಆಗಮಿಸಿದ್ದಾರೆ. ಇದು ರೂಬಿಯೋ ಅವರ ಮೊದಲ ಭಾರತ ಪ್ರವಾಸವಾಗಿದ್ದು, 2012ರ ನಂತರ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿಯೊಬ್ಬರು ಕೋಲ್ಕತ್ತಾಗೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದ ಕೆಲವೇ ವಾರಗಳ ಬಳಿಕ ಅಮೆರಿಕ ನಾಯಕರ ಭೇಟಿ ನಡೆಯುತ್ತಿರುವುದು ರಾಜತಾಂತ್ರಿಕವಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಭಾರತದಲ್ಲಿನ ಅಮೆರಿಕಾ ರಾಯಭಾರಿ ಸೆರ್ಗಿಯೊ ಗೋರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, “ಮಾರ್ಕೊ ರೂಬಿಯೋ ಕೋಲ್ಕತ್ತಾಗೆ ಆಗಮಿಸಿದ್ದಾರೆ. ಇದು ಅವರ ಮೊದಲ ಭಾರತ ಪ್ರವಾಸವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನವದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ. ವ್ಯಾಪಾರ, ತಂತ್ರಜ್ಞಾನ, ರಕ್ಷಣಾ ಸಹಕಾರ, ಕ್ವಾಡ್ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಮುಂದಿನ ಕೆಲವು ದಿನಗಳಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಅಮೆರಿಕಾ ಅಧ್ಯಕ್ಷರ ದೃಷ್ಟಿಕೋನಕ್ಕೆ ಅನುಗುಣವಾಗಿ ಅಮೆರಿಕ-ಭಾರತ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕ್ವಾಡ್ ವಿದೇಶಾಂಗ ಸಚಿವರ ಸಭೆ ಸೇರಿದಂತೆ ನಮ್ಮ ಮುಂದೆ ಒಂದು ಮಹತ್ವಾಕಾಂಕ್ಷೆಯ ಕಾರ್ಯಸೂಚಿ ಇದೆ ಎಂದು ಹೇಳಿದ್ದಾರೆ.
ರೂಬಿಯೋ ಅವರು ಕೋಲ್ಕತ್ತಾದ ಕೇಂದ್ರ ಭಾಗದಲ್ಲಿರುವ ಮದರ್ ಹೌಸ್‌ಗೆ ಭೇಟಿ ನೀಡಿ, ಸಂತ ಮದರ್ ತೆರೇಸಾ ಸ್ಥಾಪಿಸಿದ್ದ ಮಿಷನರೀಸ್ ಆಫ್ ಚಾರಿಟಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಅಲ್ಲದೆ ನಗರದ ಮಕ್ಕಳ ಆಶ್ರಯ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ.
ಮೇ 23ರಿಂದ 26ರವರೆಗೆ ನಡೆಯಲಿರುವ ರೂಬಿಯೋ ಅವರ ಭಾರತ ಪ್ರವಾಸದಲ್ಲಿ ಆಗ್ರಾ, ಜೈಪುರ ಹಾಗೂ ನವದೆಹಲಿ ನಗರಗಳಿಗೂ ಭೇಟಿ ಕಾರ್ಯಕ್ರಮ ನಿಗದಿಯಾಗಿದೆ.
ವಿಶೇಷವಾಗಿ ಭಾರತದೊಂದಿಗೆ ಇಂಧನ ಸಹಕಾರದ ಮಾತುಕತೆ ಮತ್ತು ಕ್ವಾಡ್ ರಾಷ್ಟ್ರಗಳ ಸಚಿವರ ಸಭೆ ಹಿನ್ನೆಲೆಯಲ್ಲಿ ಈ ಪ್ರವಾಸಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ.
ಭಾರತ ಪ್ರವಾಸ ಕುರಿತು ನಿನ್ನೆಯಷ್ಟೇ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಾರ್ಕೊ ರುಬಿಯೋ ಅವರು, ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇಂಧನ ರಫ್ತು ಮಾಡಲು ಅಮೆರಿಕ ಆಸಕ್ತಿ ಹೊಂದಿದೆ ಎಂದು ಹೇಳಿದ್ದರು.
ಭಾರತ ನಮ್ಮ ಪ್ರಮುಖ ಪಾಲುದಾರ ರಾಷ್ಟ್ರ, ಅಮೆರಿಕಾದ ಇಂಧನ ಉತ್ಪಾದನೆ ಮತ್ತು ರಫ್ತು ಐತಿಹಾಸಿಕ ಮಟ್ಟದಲ್ಲಿದೆ ಎಂದು ತಿಳಿಸಿದ್ದರು.
ಮೇ 26ರಂದು ನಡೆಯಲಿರುವ ಕ್ವಾಡ್ ರಾಷ್ಟ್ರಗಳ ಸಭೆಯಲ್ಲಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್, ಜಪಾನ್ ವಿದೇಶಾಂಗ ಸಚಿವ ಮೊಟೆಗಿ ತೋಶಿಮಿಟ್ಸು ಹಾಗೂ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಲಿದ್ದಾರೆ.