ತಿರುವನಂತಪುರಂ: ಕೇರಳ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿರುವಂತೆಯೇ ಈ ಕುರಿತು ವಿಜಯನ್ ಕಾಂಗ್ರೆಸ್ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ಬುಧವಾರ ಜಾರಿ ನಿರ್ದೇಶನಾಲಯ (ED) ಕೇರಳ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸದಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ವಿಜಯನ್ ಅವರ ಬೆಂಬಲಿಗರು ಇಡಿ ಅಧಿಕಾರಿಗಳ ವಾಹನಗಳ ಮೇಲೆ ದಾಳಿ ಮಾಡಿದ್ದರು.
ಈ ನಡುವೆ ಇಡಿ ದಾಳಿ ವಿಚಾರವಾಗಿ ವಿಜಯನ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದು ದೇಶದಾದ್ಯಂತ ವಿರೋಧ ಪಕ್ಷದ ನಾಯಕರ ವಿರುದ್ಧ ನಡೆಯುತ್ತಿರುವ “ಉದ್ದೇಶಿತ ದಮನ ಕ್ರಮ”ದ ಭಾಗ ಎಂದು ವಿಜಯನ್ ಟೀಕಿಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಈ ದಾಳಿಯಿಂದ “ಮಾನಸಿಕ ತೃಪ್ತಿ” ಸಿಕ್ಕಿರಬಹುದು ಎಂದೂ ಟೀಕಿಸಿದರು.
CMRL ಮಾಸಿಕ ಪಾವತಿ ಪ್ರಕರಣಕ್ಕೆ ಸಂಬಂಧಿಸಿ, ಬೇಕರಿ ಜಂಕ್ಷನ್‌ನಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಹಲವು ಗಂಟೆಗಳ ಕಾಲ ನಡೆದ ED ಶೋಧ ಮುಗಿದ ಬಳಿಕ ವಿಜಯನ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. 'ತಮ್ಮ ನಿವಾಸದ ಮೇಲೆ ಶೋಧ ಏಕೆ ನಡೆದಿಲ್ಲ ಮತ್ತು ತಮ್ಮನ್ನು ಏಕೆ ಬಂಧಿಸಲಾಗಿಲ್ಲ ಎಂದು ರಾಹುಲ್ ಗಾಂಧಿ ಪದೇ ಪದೇ ಪ್ರಶ್ನಿಸುತ್ತಿದ್ದರು, ಅವರಿಗೆ ಈಗ ಬೃಹಶಃ ತೃಪ್ತಿ ಸಿಕ್ಕಿರಬಹುದು ಎಂದು ವಿಜಯನ್ ಹೇಳಿದರು.
ಅಂತೆಯೇ “ಇದು ಕೇವಲ ಆರಂಭ ಮಾತ್ರ. ಇಂತಹ ಕ್ರಮಗಳು ನಮ್ಮನ್ನು ಬೆದರಿಸಬಹುದು ಅಥವಾ ದುರ್ಬಲಗೊಳಿಸಬಹುದು ಎಂಬ ಭ್ರಮೆಯನ್ನು ಯಾರೂ ಇಟ್ಟುಕೊಳ್ಳಬಾರದು,” ಎಂದು ಹೇಳಿದರು.
ಬಿಜೆಪಿ ವಿರುದ್ಧವೂ ವಿಜಯನ್ ಗರಂ
ಇದೇ ವೇಳೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧವೂ ಕಿಡಿಕಾರಿದ ವಿಜಯನ್, 'ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ. ತಮ್ಮ ವಿರುದ್ಧದ ಕ್ರಮವೂ ಅದೇ ತಂತ್ರದ ಭಾಗ.
ದೇಶದಾದ್ಯಂತ ವಿರೋಧ ಪಕ್ಷದ ನಾಯಕರು ಕೇಂದ್ರ ತನಿಖಾ ಸಂಸ್ಥೆಗಳ ಇಂತಹ ಕ್ರಮಗಳನ್ನು ಎದುರಿಸುತ್ತಿದ್ದಾರೆ. ಇತರೆ ಪಕ್ಷಗಳ ನಾಯಕರ ವಿರುದ್ಧ ED ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಕಾಂಗ್ರೆಸ್ ಮೌನ ವಹಿಸಿದೆ ಎಂದು ಆರೋಪಿಸಿದರು.
ಇಡಿ ದಾಳಿ ಏಕೆ?
ಈ ED ಕ್ರಮವು, Cochin Minerals and Rutile Ltd (CMRL) 2018 ಮತ್ತು 2019ರ ನಡುವೆ ವಿಜಯನ್ ಅವರ ಪುತ್ರಿ ಟಿ. ವೀಣಾ ಅವರಿಗೆ ಸೇರಿದ Exalogic Solutions ಸಂಸ್ಥೆಗೆ ಯಾವುದೇ ಸೇವೆ ಪಡೆಯದೇ 1.72 ಕೋಟಿ ರೂ. ಪಾವತಿಸಿದೆ ಎಂಬ ಆರೋಪಗಳಿಗೆ ಸಂಬಂಧಿಸಿದೆ. ಅಧಿಕಾರಿಗಳ ಪ್ರಕಾರ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಕೇರಳದ ಸುಮಾರು 10 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಶೋಧ ಕಾರ್ಯಾಚರಣೆ, ಪ್ರಕರಣದಲ್ಲಿ ED ಕ್ರಮವನ್ನು ರದ್ದುಪಡಿಸುವಂತೆ CMRL ಸಲ್ಲಿಸಿದ್ದ ಅರ್ಜಿಯನ್ನು Kerala High Court ತಿರಸ್ಕರಿಸಿದ ಒಂದು ದಿನದ ಬಳಿಕ ನಡೆದಿದೆ.