ನವದೆಹಲಿ: ಭಾರತೀಯ ಹವಾಮಾನ ಇಲಾಖೆ (IMD) ದಕ್ಷಿಣ-ಪಶ್ಚಿಮ ಮುಂಗಾರು ಮಳೆಯ ಮುನ್ಸೂಚನೆಯನ್ನು ಪರಿಷ್ಕರಿಸಿದ್ದು, ಈ ವರ್ಷದ ಹಂಗಾಮಿ ಮಳೆಯ ಪ್ರಮಾಣವನ್ನು ದೀರ್ಘಾವಧಿ ಸರಾಸರಿ (LPA)ಯ ಶೇ. 92 ರಿಂದ ಶೇ. 90ಕ್ಕೆ ಇಳಿಸಿದೆ.
ಇದರ ಪರಿಣಾಮವಾಗಿ ಜೂನ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯ ಜೊತೆಗೆ ಹೆಚ್ಚುವರಿ ಉಷ್ಣ ಅಲೆ (ಹೀಟ್‌ವೇವ್) ದಿನಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.
2026ರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇರುವ ದಕ್ಷಿಣ-ಪಶ್ಚಿಮ ಮುಂಗಾರು ಮಳೆಯ ಎರಡನೇ ಹಂತದ ದೀರ್ಘಾವಧಿ ಮುನ್ಸೂಚನೆಯಲ್ಲಿ, ದೇಶದ ಪ್ರಮುಖ ಮುಂಗಾರು ವಲಯಕ್ಕೆ ಸೇರಿರುವ ಬಹುತೇಕ ಭೂಭಾಗಗಳಲ್ಲಿ ದೀರ್ಘಾವಧಿಯ ಸರಾಸರಿ (LPA) 90 ಶೇಕಡಾ ಮಳೆಯಾಗಲಿದೆ ಎಂದು IMD ತಿಳಿಸಿದೆ.
ಮುಂಗಾರು ಆಗಮನ ತಡ
ಭೌಗೋಳಿಕವಾಗಿ ನೋಡಿದರೆ, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಾತ್ರ ಸಾಮಾನ್ಯ ಪ್ರಮಾಣದ ಮಳೆಯ ನಿರೀಕ್ಷೆಯಿದ್ದು, ಅದು LPAಯ 94ರಿಂದ 106 ಶೇಕಡಾ ವ್ಯಾಪ್ತಿಯಲ್ಲಿರಲಿದೆ.
ಉಳಿದ ದೇಶದ ಭಾಗಗಳಲ್ಲಿ, ವಿಶೇಷವಾಗಿ ದಕ್ಷಿಣ ದ್ವೀಪಕಲ್ಪ ಹಾಗೂ ಮಧ್ಯ ಭಾರತದಲ್ಲಿ LPAಯ 94 ಶೇಕಡಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ವಾಯುವ್ಯ ಭಾರತದಲ್ಲಿ ಇದು 92 ಶೇಕಡಕ್ಕಿಂತಲೂ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಇದಲ್ಲದೆ, ಮುಂಗಾರು ಆಗಮನವೂ ಒಂದು ವಾರ ತಡವಾಗಿದೆ. ಕೇರಳ ಕರಾವಳಿಗೆ ಮೇ 26ರಂದು ಮುಂಗಾರು ಪ್ರವೇಶಿಸಲಿದೆ ಎಂದು IMD ಮೊದಲು ಅಂದಾಜಿಸಿತ್ತು. ಆದರೆ ಸಾಮಾನ್ಯವಾಗಿ ಮುಂಗಾರು ಜೂನ್ 1ರಂದು ಕೇರಳ ಪ್ರವೇಶಿಸುತ್ತದೆ ಎನ್ನಲಾಗಿದೆ.
ಮಳೆ ಪ್ರಮಾಣ ಕಡಿಮೆ
ವಿಜ್ಞಾನಿಗಳು ದೇಶದಲ್ಲಿ “ಕಡಿಮೆ ಮಳೆ” (Deficient Rainfall) ಸಂಭವಿಸುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಿದ್ದಾರೆ. LPAಯ 89 ಶೇಕಡಕ್ಕಿಂತ ಕಡಿಮೆ ಮಳೆಯಾದರೆ ಅದನ್ನು “ಕಡಿಮೆ ಮಳೆ” ಎಂದು ಪರಿಗಣಿಸಲಾಗುತ್ತದೆ. 90ರಿಂದ 95 ಶೇಕಡಾ ನಡುವಿನ ಮಳೆಯನ್ನು “ಸಾಮಾನ್ಯಕ್ಕಿಂತ ಕಡಿಮೆ” ಮಳೆಯೆಂದು ವರ್ಗೀಕರಿಸಲಾಗುತ್ತದೆ.
ಎಲ್ ನಿನೋ ಪರಿಣಾಮ ಜೂನ್ ಮಳೆ ಪ್ರಮಾಣ ಕಡಿಮೆ
IMD ಪ್ರಕಾರ, ಮುಂಗಾರು ಅವಧಿಯಲ್ಲಿ ದುರ್ಬಲದಿಂದ ಮಧ್ಯಮ ಮಟ್ಟದ ಎಲ್ ನಿನೋ (El Niño) ಪರಿಣಾಮ ಮುಂದುವರಿಯಲಿದೆ. ಮುಂಗಾರು ನಂತರ ಬಲಿಷ್ಠ ಎಲ್ ನಿನೋ ರೂಪುಗೊಳ್ಳುವ ಸಾಧ್ಯತೆಯೂ ಇದೆ.
ಜೂನ್ 2026ರಲ್ಲಿ ದೇಶದಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ಆದರೆ ತೆಲಂಗಾಣ, ಆಂಧ್ರಪ್ರದೇಶ, ಈಶಾನ್ಯ ಭಾರತ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳಲ್ಲಿ ಮಾತ್ರ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಜೂನ್ ತಿಂಗಳ ಸಾಮಾನ್ಯ ಸರಾಸರಿ ಮಳೆಯ ಪ್ರಮಾಣ 166.9 ಮಿ.ಮೀ ಆಗಿದೆ.
ಹೀಟ್ ವೇವ್
ಇದರ ಜೊತೆಗೆ, ಜೂನ್ ತಿಂಗಳಲ್ಲಿ ಉಷ್ಣ ಅಲೆ ದಿನಗಳ ಸಂಖ್ಯೆಯೂ ಹೆಚ್ಚಾಗಬಹುದು ಎಂದು IMD ತಿಳಿಸಿದೆ. ದೇಶದ ಹಲವೆಡೆ 2ರಿಂದ 3 ದಿನಗಳವರೆಗೆ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗುವ ಸಾಧ್ಯತೆಯಿದ್ದು, ಇದರಿಂದ ಹೀಟ್‌ವೇವ್ ಪರಿಸ್ಥಿತಿ ನಿರ್ಮಾಣವಾಗಬಹುದು.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಗುಜರಾತ್ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಹೆಚ್ಚುವರಿ ಉಷ್ಣ ಅಲೆ ದಿನಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.