1 ರೂಪಾಯಿ ಉಳಿಸಲು ಹೋಗಿ 3,09,900% ದಂಡ ಕಟ್ಟಿದ IRCTC AI Image
ದೇಶ

1 ರೂಪಾಯಿ ಉಳಿಸಲು ಹೋಗಿ 3,09,900% ದಂಡ ಕಟ್ಟಿದ IRCTC: ಪ್ರತಿಯೊಂದು ರೂಪಾಯಿಯೂ ಮುಖ್ಯ ಎಂದು ಪಾಠ ಮಾಡಿದ ನ್ಯಾಯಾಲಯ

ರೈಲು ಟಿಕೆಟ್ ರದ್ದುಗೊಳಿಸಿದಾಗ ಕೇವಲ 1 ರೂಪಾಯಿ ಕಡಿಮೆ ಮರುಪಾವತಿ ಮಾಡಿದ್ದಕ್ಕಾಗಿ ಐಆರ್‌ಸಿಟಿಸಿ ಸಂಸ್ಥೆಗೆ ಗ್ರಾಹಕ ನ್ಯಾಯಾಲಯವು ₹3,100 ದಂಡ ಹಾಗೂ ಪರಿಹಾರ ಪಾವತಿಸುವಂತೆ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಕಾಸರಗೋಡು (ಕೇರಳಂ): ಒಂದು ರೂಪಾಯಿಗೆ ಏನಾಗುತ್ತೆ ಅಂತ ನೀವು ಕೇಳಬಹುದು. ಬಹುತೇಕರು ಬಿಡಪ್ಪ ಅಂತ ಬಿಟ್ಟುಬಿಡ್ತಾರೆ. ಆದ್ರೆ ಅದನ್ನು ದುಡಿಯಲು ಎಷ್ಟು ಬೆವರು ಸುರಿಸಬೇಕು ಎಂದು ದುಡಿಯುವವರಿಗೆ ಗೊತ್ತು. ಅದರಂತೆ, ಇದೇ 1 ರೂಪಾಯಿಯನ್ನು ಮರುಪಾವತಿಸಲು ಮರೆತ IRCTC ಗೆ ಈಗ ದೊಡ್ಡ ಪಾಠವೇ ಸಿಕ್ಕಿದ್ದು, ಜಿಲ್ಲಾ ಗ್ರಾಹಕ ಆಯೋಗ, 1 ರೂಪಾಯಿ ಉಳಿಸಿಕೊಳ್ಳಲು ಹೋಗಿ ಮೂಲ ಮೊತ್ತಕ್ಕಿಂತ 3,09,900% ಹೆಚ್ಚು ದಂಡ ತೆರುವಂತೆ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಕೇರಳಂ ಕಾಸರಗೋಡು ನಿವಾಸಿ ರಂಜಿತ್ ಕುಮಾರ್ ಕೆ.ವಿ. ಎಂಬುವರು ಭಾರತೀಯ ರೈಲ್ವೆಯ ಇ-ಟಿಕೆಟಿಂಗ್ ವೆಬ್‌ಸೈಟ್ ಮೂಲಕ ಕಾಸರಗೋಡಿನಿಂದ ತಿರುವನಂತಪುರಕ್ಕೆ AC 3-Tier ಟಿಕೆಟ್ ಬುಕ್ ಮಾಡಿದ್ದರು. ಟಿಕೆಟ್‌ನ ಒಟ್ಟು ಮೊತ್ತ ₹553 ಆಗಿತ್ತು. ವೈಯಕ್ತಿಕ ಕಾರಣಗಳಿಂದ ಅವರು ಪ್ರಯಾಣದ 48 ಗಂಟೆಗಳಿಗೂ ಮುಂಚಿತವಾಗಿಯೇ ನಿಯಮಬದ್ಧವಾಗಿ ಟಿಕೆಟ್ ರದ್ದು ಮಾಡಿದರು. ಅದರಂತೆ,

  • ನಿಯಮದ ಪ್ರಕಾರ ಸಿಗಬೇಕಿದ್ದ ಹಣ: ₹341

  • ಐಆರ್‌ಸಿಟಿಸಿ ಖಾತೆಗೆ ಜಮಾ ಮಾಡಿದ ಹಣ: ₹340

  • ಖಾತೆಗೆ ಬಾರದೆ ಉಳಿದ ಮೊತ್ತ: ₹1

ಮುಂದುವರೆದು, ರಂಜಿತ್ ಕುಮಾರ್ ಅವರು ಈ ಒಂದು ರೂಪಾಯಿಗಾಗಿ ಐಆರ್‌ಸಿಟಿಸಿ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸಿದಾಗ ಅವರಿಗೆ ಯಾವುದೇ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ. "ಇದು ಕೇವಲ 1 ರೂಪಾಯಿ ವಿಷಯವಲ್ಲ. ದಿನಕ್ಕೆ ಲಕ್ಷಾಂತರ ಟಿಕೆಟ್‌ಗಳು ರದ್ದಾಗುತ್ತವೆ. ಪ್ರತಿ ಟಿಕೆಟ್‌ನಲ್ಲೂ 1 ರೂಪಾಯಿ ಕಡಿತಗೊಳಿಸಿದರೆ ಅದು ಕೋಟ್ಯಂತರ ರೂಪಾಯಿಗಳ ಹಗರಣವಾಗುತ್ತದೆ. ಇದು ಗ್ರಾಹಕರ ಹಕ್ಕುಗಳ ಉಲ್ಲಂಘನೆ" ಎಂದು ರಂಜಿತ್ ಕುಮಾರ್ ಕಾಸರಗೋಡು ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗದ ಮೊರೆ ಹೋದರು.

ಆದರೆ, ನ್ಯಾಯಾಲಯದಲ್ಲಿ ಐಆರ್‌ಸಿಟಿಸಿ ಸಂಸ್ಥೆಯು ತನ್ನ ತಪ್ಪು ಒಪ್ಪಿಕೊಳ್ಳುವ ಬದಲಿಗೆ ಈ ಕಡಿತವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿತು. ಅದರಂತೆ, ವಾಣಿಜ್ಯ ಮತ್ತು ಬ್ಯಾಂಕಿಂಗ್ ನಿಯಮಗಳ ಪ್ರಕಾರ ಬಿಲ್ ಮೊತ್ತವನ್ನು ಸಮೀಪದ ರೂಪಾಯಿಗೆ ರೌಂಡ್ ಆಫ್ ಮಾಡಲಾಗುತ್ತದೆ. ₹340.50 ಪೈಸೆಗಿಂತ ಹೆಚ್ಚಿದ್ದರೆ ₹341 ಕೊಡಬೇಕಿತ್ತು, ಆದರೆ ಲೆಕ್ಕಾಚಾರದಲ್ಲಿ ಪೈಸೆ ವ್ಯತ್ಯಾಸ ಬಂದಿದ್ದರಿಂದ ₹340 ನೀಡಲಾಗಿದೆ ಎಂದು ವಾದಿಸಿತು. ಆದರೆ ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಕೃಷ್ಣನ್ ಕೆ. ಮತ್ತು ಸದಸ್ಯೆ ಬೀನಾ ಕೆ.ಜಿ. ಅವರಿದ್ದ ಪೀಠವು, ಐಆರ್‌ಸಿಟಿಸಿಯ ಈ ತಾಂತ್ರಿಕ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿತು. ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಪೈಸೆ-ಪೈಸೆಯನ್ನೂ ನಿಖರವಾಗಿ ವರ್ಗಾವಣೆ ಮಾಡುವ ಸಾಮರ್ಥ್ಯ ಹೊಂದಿದೆ. ಹಾಗಿರುವಾಗ ಸಾಫ್ಟ್‌ವೇರ್‌ನಲ್ಲಿ 1 ರೂಪಾಯಿ ಕಡಿಮೆ ಬರುವಂತೆ ಮಾಡಿರುವುದು ಅನುಚಿತ ವ್ಯಾಪಾರ ಪದ್ಧತಿ ಎಂದು ತರಾಟೆಗೆ ತೆಗೆದುಕೊಂಡಿತು. ಹಾಗಾಗಿ,

  • ಮೂಲ ಮೊತ್ತದ ವಾಪಸಾತಿ: ಕಡಿತಗೊಳಿಸಿದ ₹1 ಅನ್ನು ಶೇಕಡಾ 9 ರಷ್ಟು ವಡ್ಡಿಕಟ್ಟಿ ಪ್ರಯಾಣಿಕನಿಗೆ ನೀಡಬೇಕು.

  • ಮಾನಸಿಕ ಕಿರಿಕಿರಿಗೆ ಪರಿಹಾರ: ಗ್ರಾಹಕನಿಗೆ ಅನಗತ್ಯವಾಗಿ ತೊಂದರೆ ಕೊಟ್ಟಿದ್ದಕ್ಕೆ ಮತ್ತು ಮಾನಸಿಕ ಅಶಾಂತಿ ಉಂಟುಮಾಡಿದ್ದಕ್ಕೆ ₹100 ಪರಿಹಾರ ನೀಡಬೇಕು.

  • ಕೋರ್ಟ್ ವೆಚ್ಚ (Litigation Cost): ಒಬ್ಬ ಸಾಮಾನ್ಯ ನಾಗರಿಕ ಕೇವಲ ₹1 ಹಕ್ಕಿಗಾಗಿ ಕೋರ್ಟ್‌ಗೆ ಅಲೆಯುವಂತೆ ಮಾಡಿದ್ದಕ್ಕಾಗಿ, ಆತನ ಕಾನೂನು ಹೋರಾಟದ ವೆಚ್ಚವಾಗಿ ₹3,000 ಅನ್ನು ಐಆರ್‌ಸಿಟಿಸಿಯೇ ಭರಿಸಬೇಕು.

  • ಸಮಯದ ಮಿತಿ: ಈ ಒಟ್ಟು ₹3,101 ಮೊತ್ತವನ್ನು ಆದೇಶ ಹೊರಬಿದ್ದ 30 ದಿನಗಳ ಒಳಗಾಗಿ ಪ್ರಯಾಣಿಕನಿಗೆ ಪಾವತಿಸಬೇಕು. ಒಂದು ವೇಳೆ ತಪ್ಪಿದರೆ, ಒಟ್ಟು ಮೊತ್ತಕ್ಕೆ ಮತ್ತಷ್ಟು ಬಡ್ಡಿ ಅನ್ವಯವಾಗುತ್ತದೆ ಎಂದು ಎಚ್ಚರಿಸಿದೆ.

ಅಂದರೆ, ಕೇವಲ 1 ರೂಪಾಯಿ ಬಾಕಿ ಉಳಿಸಿಕೊಂಡಿದ್ದಕ್ಕೆ IRCTC ಸಂಸ್ಥೆಯು ಈಗ ಒಟ್ಟು ₹3,101 ರೂಪಾಯಿಗಳನ್ನು ದಂಡದ ರೂಪದಲ್ಲಿ 30 ದಿನಗಳ ಒಳಗಾಗಿ ಪಾವತಿಸಬೇಕಾಗಿ ಬಂದಿದೆ. ಈ ಮೂಲಕ ಗ್ರಾಹಕರ ಹಕ್ಕುಗಳ ರಕ್ಷಣೆಯ ವಿಷಯದಲ್ಲಿ "ಪ್ರತಿಯೊಂದು ರೂಪಾಯಿಯೂ ಮುಖ್ಯ" ಎಂಬ ಸಂದೇಶವನ್ನು ನ್ಯಾಯಾಲಯ ಸಾರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹೆಚ್‌ಡಿಕೆ ನಿವಾಸದಲ್ಲಿ ಮೊಬೈಲ್ ಎಕ್ಸ್‌ಚೇಂಜ್? ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸೀಮಂತ್ ಕುಮಾರ್ ಸಿಂಗ್

Biggboss Malayalam: ಹಿಂದೂ ಯುವಕನಿಗೆ ಪ್ರಪೋಸ್? ದಯವಿಟ್ಟು ಶೋ ಬಿಟ್ಟು ಬಾ; ವೇದಿಕೆಯಲ್ಲಿ ಪೋಷಕರ ಕಣ್ಣೀರು, Video

'ನಂದಿನಿ ಹಾಲು ದರ 8 ಅಲ್ಲ ಗರಿಷ್ಠ 12 ರೂ ಏರಿಕೆ'; ರೊಚ್ಚಿಗೆದ್ದ ಗ್ರಾಹಕರು, Video Viral

Raptadu School Attack: ಅಪ್ರಾಪ್ತೆಯ ಹಿಂಬಾಲಿಸುತ್ತಿದ್ದ ಭಗ್ನಪ್ರೇಮಿ, ಪ್ರೀತಿ ತಿರಸ್ಕರಿಸಿದ್ದಕ್ಕೆ ಕತ್ತು ಸೀಳಿ ಭೀಕರ ಹಲ್ಲೆ!

'ಯಾಕೋ ಇಷ್ಟೋಂದ್ ಖಾರಾ ಹಾಕಿದ್ದೀಯಾ': ಫಾಸ್ಟ್‌ಫುಡ್ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ, ಮೂವರ ವಿರುದ್ಧ FIR