ದ್ವೇಷಕ್ಕೆ ಹಸುಬಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿ 
ದೇಶ

ಅಮಾನವೀಯ ಕೃತ್ಯ: ನೆರೆಮನೆಯವರ ಜೊತೆ ಜಗಳ, ಹಸು ಬಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ ಕಿಡಿಗೇಡಿ!

ಬುಧವಾರ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಆತನ ಕೃತ್ಯ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಮುಂಬೈ: ನೆರೆಮನೆಯವರೊಂದಿಗಿನ ವೈಯಕ್ತಿಕ ದ್ವೇಷಕ್ಕೆ ಮೂಕ ಪ್ರಾಣಿಯೊಂದನ್ನು ಬಲಿಪಶು ಮಾಡಿರುವ ಆಘಾತಕಾರಿ ಘಟನೆ ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ ಹಸುವಿನ ಬಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಲ್ಲದೆ, 15 ಬೈಕ್‌ಗಳು ಹಾಗೂ ಅಂಗಡಿಗಳಿಗೂ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಾಶ್ ಯಾದವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಆತನ ಕೃತ್ಯ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಮುಂಜಾನೆ ವೇಳೆ ಆರೋಪಿ ಕೈಯಲ್ಲಿ ಪೆಟ್ರೋಲ್ ತುಂಬಿದ ಬಾಟಲಿ ಹಿಡಿದುಕೊಂಡು ಪ್ರದೇಶದಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ನೆರೆಮನೆಯವನೊಂದಿಗಿನ ಜಗಳವೇ ಕೃತ್ಯಕ್ಕೆ ಕಾರಣ?

ಆಕಾಶ್ ಯಾದವ್ ಮತ್ತು ಸ್ಥಳೀಯ ನಿವಾಸಿ ವಿಜಯ್ ಯಾದವ್ ನಡುವೆ ಎರಡು ದಿನಗಳ ಹಿಂದೆ ಜಗಳ ನಡೆದಿತ್ತು. ನೆರೆಹೊರೆಯಲ್ಲಿ ನಿಲ್ಲಿಸಿದ್ದ ಹಲವು ಬೈಕ್‌ಗಳನ್ನು ಆಕಾಶ್ ಕೆಳಗೆ ಬೀಳಿಸಿದ್ದಾನೆ ಎಂಬ ಕಾರಣಕ್ಕೆ ವಿಜಯ್ ಆತನನ್ನು ಪ್ರಶ್ನಿಸಿದ್ದರು.

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆಕಾಶ್ ವಿಜಯ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ. ಇದೇ ದ್ವೇಷದಿಂದ ಆರೋಪಿ ಬೆಂಕಿ ಹಚ್ಚುವ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹಸುವಿನ ಬಾಯಿಗೆ ಬೆಂಕಿ ಹಚ್ಚಿದ ಪಾಪಿ!

ಮೂಲಗಳ ಪ್ರಕಾರ ಶನಿವಾರ ಮುಂಜಾನೆ ಸುಮಾರು 5.30ರ ವೇಳೆಗೆ ವಿಜಯ್ ಮತ್ತು ಅವರ ಕಿರಿಯ ಸಹೋದರ ದನದ ಕೊಟ್ಟಿಗೆಯ ಸಮೀಪ ಮಲಗಿದ್ದರು. ಈ ವೇಳೆ ಹಸುಗಳ ಕಿರುಚಾಟ ಕೇಳಿ ಇಬ್ಬರೂ ಎಚ್ಚರಗೊಂಡಿದ್ದಾರೆ. ಹೊರಗೆ ಬಂದು ನೋಡಿದಾಗ ಒಂದು ಹಸುವಿನ ಬಾಯಿಯಿಂದ ಬೆಂಕಿ ಜ್ವಾಲೆಗಳು ಹೊರಬರುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ತಕ್ಷಣ ವಿಜಯ್ ಅವರ ಸಹೋದರ ಬೆಂಕಿಯನ್ನು ನಂದಿಸಿ ಹಸುವನ್ನು ರಕ್ಷಿಸಿದ್ದಾರೆ. ಆದರೆ, ಬೆಂಕಿಯಿಂದ ಹಸುವಿಗೆ ಸುಟ್ಟ ಗಾಯಗಳಾಗಿವೆ. ವಿಜಯ್ ಅವರ ಕೊಟ್ಟಿಗೆಯಲ್ಲಿ ಒಟ್ಟು ಎಂಟು ಹಸುಗಳಿದ್ದು, ಅವುಗಳ ಪೈಕಿ ಒಂದು ಹಸುವಿನ ಮೇಲೆ ಈ ಕೃತ್ಯ ನಡೆದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಹಸುವಿನ ಬಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.

15 ಬೈಕ್‌, ಅಂಗಡಿಗಳಿಗೂ ಬೆಂಕಿ

ಹಸುವನ್ನು ರಕ್ಷಿಸಿದ ಬಳಿಕ ಸಹೋದರರು ಸಮೀಪದ ಖೈರಾನಿ ರಸ್ತೆಯಲ್ಲಿರುವ ಚೌಧರಿ ಎಸ್ಟೇಟ್ ಕಾಂಪೌಂಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ್ದಾರೆ. ಅಲ್ಲಿ ನಿಲ್ಲಿಸಿದ್ದ ಹಲವು ಬೈಕ್‌ಗಳು ಬೆಂಕಿಗೆ ಆಹುತಿಯಾಗಿದ್ದವು. ಬೆಂಕಿ ಸಮೀಪದ ವಿದ್ಯುತ್ ಮೀಟರ್‌ಗಳು ಹಾಗೂ ವಾಣಿಜ್ಯ ಮಳಿಗೆಗಳಿಗೂ ವ್ಯಾಪಿಸಿತ್ತು. ಈ ಘಟನೆಯಲ್ಲಿ ಸುಮಾರು 15 ಬೈಕ್‌ಗಳು ಮತ್ತು ಸ್ಕೂಟರ್‌ಗಳು ಹಾನಿಗೀಡಾಗಿವೆ.

ಅಲ್ಲದೆ, ವಿದ್ಯುತ್ ಮೀಟರ್‌ಗಳು ಹಾಗೂ ಮೂರರಿಂದ ನಾಲ್ಕು ಅಂಗಡಿಗಳ ಭಾಗಶಃ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ನಿವಾಸಿಗಳು ಆರಂಭದಲ್ಲಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಬಳಿಕ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.

ಸಿಸಿಟಿವಿಯಲ್ಲಿ ಆರೋಪಿ ಕೃತ್ಯ ಸೆರೆ

ಘಟನೆ ಸಂಬಂಧ ಸಾಕಿನಾಕಾ ಪೊಲೀಸರು ತನಿಖೆ ಆರಂಭಿಸಿ, ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಬೆಳಗಿನ ಜಾವ 5ರಿಂದ 6 ಗಂಟೆಯ ನಡುವೆ ಆಕಾಶ್ ಯಾದವ್ ಕೈಯಲ್ಲಿ ಪೆಟ್ರೋಲ್ ಬಾಟಲಿ ಹಿಡಿದುಕೊಂಡು ಓಡಾಡುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ ಎನ್ನಲಾಗಿದೆ.

ಈ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಯನ್ನು ಗುರುತಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಕೃತ್ಯ ಎಸಗುವ ಸಂದರ್ಭದಲ್ಲಿ ಆರೋಪಿ ಮದ್ಯದ ಅಮಲಿನಲ್ಲಿದ್ದಿರಬಹುದು ಎಂಬ ಶಂಕೆಯೂ ಪೊಲೀಸರಿಗಿದೆ. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಆರೋಪಿ ನಿರುದ್ಯೋಗಿಯಾಗಿದ್ದು, ಈ ಹಿಂದೆಯೂ ಸ್ಥಳೀಯ ಪ್ರದೇಶದಲ್ಲಿ ಗಲಾಟೆ ಸೃಷ್ಟಿಸಿದ ಆರೋಪಗಳಿವೆ.

ಈ ಸಂಬಂಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ (Prevention of Cruelty to Animals Act) ಸೇರಿದಂತೆ ಬೆಂಕಿ ಹಚ್ಚಿ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪಕ್ಕೆ ಸಂಬಂಧಿಸಿದ ವಿವಿಧ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಾಕಿನಾಕಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಅವಿನಾಶ್ ಮಂಡ್ಲೆ ಆರೋಪಿಯನ್ನು ಬಂಧಿಸಿರುವುದನ್ನು ಖಚಿತಪಡಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಬೆಂಕಿ ಹಚ್ಚಲು ನಿಖರ ಕಾರಣವೇನು, ಕೃತ್ಯದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಹಾಗೂ ಒಟ್ಟಾರೆ ನಷ್ಟ ಎಷ್ಟು ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Google Lens ಬಳಸಿ ರಾಜ್ಯಕ್ಕೆ ಟಾಪರ್! VAO ಪರೀಕ್ಷೆಯಲ್ಲಿ 151 ಮಾರ್ಕ್ಸ್ ಪಡೆದಿದ್ದ ಶಂಕರ ಬನ್ನೂರ ಕಳ್ಳಾಟ ಬಯಲು, ಪೊಲೀಸ್ ವಶಕ್ಕೆ

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿಸಿದ್ದು ಕುಮಾರಸ್ವಾಮಿಯೇ! ಡಿಕೆಶಿ ಸಿಎಂ ಆಗಿರೋದನ್ನ ಸಹಿಸಲಾಗದೆ ಹೆಚ್‌ಡಿಕೆ ಪಿತೂರಿ ಎಂದು ಸಚಿವ ಪುಟ್ಟರಂಗಶೆಟ್ಟಿ ಗಂಭೀರ ಆರೋಪ

ಕನ್ನಡ ಬಾವುಟದ ವಿನ್ಯಾಸ ಬದಲು: ಹಳದಿ-ಕೆಂಪು ಕನ್ನಡ ಧ್ವಜಕ್ಕೆ ಮತ್ತೊಂದು ಬಣ್ಣ, ಮಧ್ಯದಲ್ಲಿ ರಾಜ್ಯ ಲಾಂಛನ; ಡಿಕೆಶಿ ಮಹತ್ವದ ಘೋಷಣೆ

71ನೇ ಕನ್ನಡ ರಾಜ್ಯೋತ್ಸವ: ನಾಡದೇವತೆ ಭುವನೇಶ್ವರಿಗೆ ಪುಷ್ಪಾರ್ಚನೆ; ಧ್ವಜಾರೋಹಣ ನೆರವೇರಿಸಿದ ಸಿಎಂ ಡಿಕೆ.ಶಿವಕುಮಾರ್

INDIA ಕೂಟದ ಬೃಹತ್ ರ‍್ಯಾಲಿಗೆ ರಾಮಲೀಲಾ ಮೈದಾನ ಸಜ್ಜು: ದೆಹಲಿಗೆ ರಾಜಕೀಯ ನಾಯಕರ, ಬೆಂಬಲಿಗರ ಆಗಮನ