ಅಜಂ ಖಾನ್ ಮತ್ತೆ ಜೈಲುಪಾಲು 
ದೇಶ

ಬಿಡುಗಡೆ ಬೆನ್ನಲ್ಲೇ ಮತ್ತೆ Azam Khan ಜೈಲುಪಾಲು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಘಾತ!

ದ್ವಿ ಪ್ಯಾನ್ ಕಾರ್ಡ್ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದ್ದರಿಂದ ಅಜಂ ಖಾನ್ ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದರು.

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಸಚಿವ ಮೊಹಮ್ಮದ್ ಅಜಂ ಖಾನ್‌ಗೆ ಜೈಲಿನಿಂದ ಬಿಡುಗಡೆಯಾದ ಮರುದಿನವೇ ಮತ್ತೆ ಜೈಲು ಸೇರುವಂತಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ಬಂಧಿಸಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅವರನ್ನು ಗಾಜಿಯಾಬಾದ್‌ನ ದಾಸ್ನಾ ಜೈಲಿನಲ್ಲಿ ಇರಿಸಲಾಗುತ್ತದೆ.

ದ್ವಿ ಪ್ಯಾನ್ ಕಾರ್ಡ್ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದ್ದರಿಂದ ಅಜಂ ಖಾನ್ ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದರು.

ಆದರೆ, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ರಾಮ್‌ಪುರದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅವರನ್ನು ಮತ್ತೆ ಬಂಧಿಸಿತು.

ಗುರುವಾರ ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅಲ್ಲದೆ, ಜೈಲು ಅಧಿಕಾರಿಗಳು ಅಜಂ ಖಾನ್ ಅವರಿಗೆ ಅಗತ್ಯವಾದ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಬೇಕು ಎಂದು ಸೂಚಿಸಿದೆ.

ಸಾಕ್ಷ್ಯಗಳನ್ನು ಮುಚ್ಚಿಡುತ್ತಿದ್ದಾರೆ ಎಂದ ಇಡಿ

ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳು ಹಾಗೂ ಮಾಹಿತಿಗಳು ಅಜಂ ಖಾನ್ ಅವರ ಬಳಿ ಇವೆ. ಆದರೆ, ಅವರು ಉದ್ದೇಶಪೂರ್ವಕವಾಗಿ ಅವುಗಳನ್ನು ತನಿಖಾ ಸಂಸ್ಥೆಯಿಂದ ಮುಚ್ಚಿಡುತ್ತಿದ್ದಾರೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.

ಅಪರಾಧದಿಂದ ಗಳಿಸಲಾಗಿದೆ ಎನ್ನಲಾದ ಹಣದ ಮೂಲ ಪತ್ತೆಹಚ್ಚುವುದು, ಆ ಹಣವನ್ನು ಅಂತಿಮವಾಗಿ ಯಾವುದಕ್ಕೆ ಬಳಸಲಾಗಿದೆ ಎಂಬುದನ್ನು ತಿಳಿಯುವುದು, ಹಣದ ವಹಿವಾಟಿನ ಜಾಡು ಪತ್ತೆಹಚ್ಚುವುದು ಹಾಗೂ ದಾಖಲೆಗಳು ಮತ್ತು ಸಾಕ್ಷಿಗಳ ಎದುರು ಆರೋಪಿಯನ್ನು ವಿಚಾರಣೆಗೊಳಪಡಿಸುವುದು ಅಗತ್ಯವಾಗಿದೆ ಎಂದು ಇಡಿ ವಾದಿಸಿದೆ.

ಸಾವಿರ ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು

ರಾಮ್‌ಪುರದಲ್ಲಿರುವ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ನಿರ್ಮಾಣ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಕುರಿತು ಇಡಿ ತನಿಖೆ ನಡೆಸುತ್ತಿದೆ. ಈ ವಿಶ್ವವಿದ್ಯಾಲಯವು ಅಜಂ ಖಾನ್ ಸ್ಥಾಪಿಸಿ ನಿಯಂತ್ರಿಸುತ್ತಿರುವ ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್‌ಗೆ ಸೇರಿದೆ.

ಅಕ್ಟೋಬರ್ 28ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ವಿಶ್ವವಿದ್ಯಾಲಯಕ್ಕೆ ಸೇರಿದ ಜಮೀನು ಮತ್ತು ಕಟ್ಟಡಗಳನ್ನು ಇಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿತ್ತು. ಈ ಪೈಕಿ ಒಟ್ಟು ಆಸ್ತಿಗಳ ಮೂಲ ಮೌಲ್ಯ 426.46 ಕೋಟಿ ರೂ. ಗಳಾಗಿದ್ದು, ಇದರ ಪ್ರಸ್ತುತ ಅಂದಾಜು ಮಾರುಕಟ್ಟೆ ಮೌಲ್ಯ 1,170 ಕೋಟಿ ರೂ. ಎಂದು ಹೇಳಲಾಗಿದೆ.

ರಾಜಕೀಯ ಪಿತೂರಿ ಎಂದ ಅಜಂ ಖಾನ್ ಪರ ವಕೀಲರು

ಇನ್ನು ಅಜಂ ಖಾನ್ ಅವರನ್ನು ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೆ ಬಂಧಿಸಲಾಗಿದೆ ಎಂದು ಅವರ ವಕೀಲರ ತಂಡ ಆರೋಪಿಸಿದೆ. ಸಮಾಜವಾದಿ ಪಕ್ಷದ ನಾಯಕ ರಾಜಕೀಯ ಪಿತೂರಿಗೆ ಬಲಿಯಾಗಿದ್ದಾರೆ ಎಂದೂ ವಾದಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.

ರೈತರ ಜಮೀನು ಕಬಳಿಸಿದ ಆರೋಪ

ರಾಮ್‌ಪುರದ ಅಜೀಂ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 26 ಎಫ್‌ಐಆರ್‌ಗಳ ಆಧಾರದಲ್ಲಿ ಇಡಿ ತನಿಖೆ ಆರಂಭಿಸಿತ್ತು. ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ರೈತರಿಗೆ ಸೇರಿದ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳಿವೆ. ಇದಲ್ಲದೆ, ಸಿಂಘನ್‌ಖೇಡಾ ಗ್ರಾಮದ ಸುಮಾರು 34 ಎಕರೆ ವಿಸ್ತೀರ್ಣದ ಶತ್ರು ಆಸ್ತಿಗೆ ಸೇರಿದ 45 ನಿವೇಶನಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ ಎಂಬ ಆರೋಪವೂ ತನಿಖೆಯ ವ್ಯಾಪ್ತಿಯಲ್ಲಿದೆ.

ಸಾರ್ವಜನಿಕ ಕಾಮಗಾರಿಗಳಿಗೆ ಮೀಸಲಿಟ್ಟಿದ್ದ ಸರ್ಕಾರಿ ಹಣವನ್ನು ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಇಡಿ ಆರೋಪಿಸಿದೆ. ಸರ್ಕಾರಿ ಅನುದಾನದಲ್ಲಿ ಖಾಸಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಮಗಾರಿಗಳನ್ನು ನಡೆಸಲಾಗಿದೆ. ಸರ್ಕಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಆ ಹಣದ ಒಂದು ಭಾಗವನ್ನು ದೇಣಿಗೆ ರೂಪದಲ್ಲಿ ಟ್ರಸ್ಟ್‌ಗೆ ಮರಳಿಸಿದ್ದಾರೆ ಎಂಬ ಆರೋಪವೂ ಇದೆ.

186 ಕೋಟಿ ರೂ. ಗುತ್ತಿಗೆ ಹಣದಲ್ಲಿ ಅಕ್ರಮ?

ಇಡಿ ತನಿಖೆಯ ಪ್ರಕಾರ, ಲೋಕೋಪಯೋಗಿ ಇಲಾಖೆಯಿಂದ ಸುಮಾರು 186 ಕೋಟಿ ರೂ. ಮೌಲ್ಯದ ಕಾಮಗಾರಿ ಗುತ್ತಿಗೆ ಪಡೆದಿದ್ದ ಕಂಪನಿಯೊಂದು ಗುತ್ತಿಗೆ ಮೊತ್ತದ ಶೇ.30ರಿಂದ 40ರಷ್ಟು ಹಣವನ್ನು ವಿಶ್ವವಿದ್ಯಾಲಯದ ನಿರ್ಮಾಣ ಸಾಮಗ್ರಿಗಳ ಖರೀದಿಗೆ ಬಳಸಿದೆ ಎನ್ನಲಾಗಿದೆ.

ಅಲ್ಲದೆ, ಶಾಸಕರ ಹಾಗೂ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 6.60 ಕೋಟಿ ರೂ. ವೆಚ್ಚದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಮಗಾರಿಗಳನ್ನು ನಡೆಸಿರುವುದನ್ನೂ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ ಎಂದು ಇಡಿ ತಿಳಿಸಿದೆ.

ಉತ್ತರ ಪ್ರದೇಶ ಸರ್ಕಾರವು ವಿಶ್ವವಿದ್ಯಾಲಯದ ಆವರಣದಲ್ಲಿ ಪೆಂಡಾಲ್, ಒಬಿಸಿ ಬಾಲಕರ ಹಾಸ್ಟೆಲ್ ಹಾಗೂ ಆಸ್ಪತ್ರೆ ಕಟ್ಟಡ ಸೇರಿದಂತೆ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ 23.41 ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು ಎಂಬುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

499 ಕೋಟಿ ರೂ. ಮೌಲ್ಯದ ಕ್ಯಾಂಪಸ್, ತೆರಿಗೆ ರಿಟರ್ನ್ಸ್‌ನಲ್ಲಿ ಕೇವಲ 78 ಕೋಟಿ!

ಜಿಲ್ಲಾ ಮೌಲ್ಯಮಾಪನ ಅಧಿಕಾರಿಯ ಪರಿಶೀಲನೆಯ ಪ್ರಕಾರ, ವಿಶ್ವವಿದ್ಯಾಲಯದ ಆವರಣದಲ್ಲಿರುವ 59 ಕಟ್ಟಡಗಳ ನಿರ್ಮಾಣ ವೆಚ್ಚವನ್ನು 494.46 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 114 ಮಾರಾಟ ಪತ್ರಗಳ ಮೂಲಕ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನ ಮೌಲ್ಯ 4.63 ಕೋಟಿ ರೂ. ಆಗಿದ್ದು, ಕಟ್ಟಡ ಮತ್ತು ಜಮೀನು ಸೇರಿದಂತೆ ಒಟ್ಟು ಕ್ಯಾಂಪಸ್‌ನ ಮೌಲ್ಯ 499.09 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಆದರೆ, ಟ್ರಸ್ಟ್ ತನ್ನ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಕೇವಲ 78.32 ಕೋಟಿ ರೂ. ಬಂಡವಾಳ ವೆಚ್ಚವನ್ನು ಘೋಷಿಸಿತ್ತು ಎಂದು ಇಡಿ ಹೇಳಿದೆ. ಈ ವ್ಯತ್ಯಾಸ ಹಾಗೂ ಇತರ ಹಣಕಾಸು ಅಕ್ರಮಗಳ ಆಧಾರದಲ್ಲಿ 426.46 ಕೋಟಿ ರೂ. ಅನ್ನು ಅಪರಾಧದಿಂದ ಗಳಿಸಿದ ಹಣ ಎಂದು ಗುರುತಿಸಿರುವ ಇಡಿ, ಅಷ್ಟೇ ಮೌಲ್ಯದ ವಿಶ್ವವಿದ್ಯಾಲಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹೆಚ್‌ಡಿಕೆ ನಿವಾಸದಲ್ಲಿ ಮೊಬೈಲ್ ಎಕ್ಸ್‌ಚೇಂಜ್? ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸೀಮಂತ್ ಕುಮಾರ್ ಸಿಂಗ್

Biggboss Malayalam: ಹಿಂದೂ ಯುವಕನಿಗೆ ಪ್ರಪೋಸ್? ದಯವಿಟ್ಟು ಶೋ ಬಿಟ್ಟು ಬಾ; ವೇದಿಕೆಯಲ್ಲಿ ಪೋಷಕರ ಕಣ್ಣೀರು, Video

'ನಂದಿನಿ ಹಾಲು ದರ 8 ಅಲ್ಲ ಗರಿಷ್ಠ 12 ರೂ ಏರಿಕೆ'; ರೊಚ್ಚಿಗೆದ್ದ ಗ್ರಾಹಕರು, Video Viral

Raptadu School Attack: ಅಪ್ರಾಪ್ತೆಯ ಹಿಂಬಾಲಿಸುತ್ತಿದ್ದ ಭಗ್ನಪ್ರೇಮಿ, ಪ್ರೀತಿ ತಿರಸ್ಕರಿಸಿದ್ದಕ್ಕೆ ಕತ್ತು ಸೀಳಿ ಭೀಕರ ಹಲ್ಲೆ!

'ಯಾಕೋ ಇಷ್ಟೋಂದ್ ಖಾರಾ ಹಾಕಿದ್ದೀಯಾ': ಫಾಸ್ಟ್‌ಫುಡ್ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ, ಮೂವರ ವಿರುದ್ಧ FIR