ಪಂಚಕುಲ: ಹರಿಯಾಣದ ಪಂಚಕುಲದ ಸರ್ಕಾರಿ ಶಾಲೆಯ ತರಗತಿ ಕೊಠಡಿಯಲ್ಲಿ ಆರು ವರ್ಷದ ಬಾಲಕಿ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಎಂಟು ವರ್ಷದ ಬಾಲಕ ಹಿಂಸಾತ್ಮಕ ವಿಡಿಯೋ ಗೇಮ್ಗಳನ್ನು ಆಡುವ ಅಭ್ಯಾಸ ಹೊಂದಿದ್ದ ಎಂದು ಸಂತ್ರಸ್ತ ಬಾಲಕಿಯ ಮಾವ ಫಾಜಿಲ್ ಆರೋಪಿಸಿದ್ದಾರೆ.
ಬಾಲಕ PUBG ಸೇರಿದಂತೆ ಹಿಂಸಾತ್ಮಕ ಆಟಗಳನ್ನು ಆಡುತ್ತಿದ್ದ ಎಂದು ಬಾಲಕನ ತಂದೆಯೂ ಒಪ್ಪಿಕೊಂಡಿದ್ದಾರೆ ಎಂದು ಅವರು ಮಂಗಳವಾರ ಹೇಳಿದ್ದಾರೆ. "ಹಲ್ಲೆ ನಡೆಸಿದ ಬಾಲಕ ಕೆಲವು ರೀತಿಯ ಆಟಗಳನ್ನು ಆಡುತ್ತಿದ್ದ ಎಂಬುದು ತಿಳಿದುಬಂದಿದೆ.
ಅವು ಆಕ್ರಮಣಕಾರಿ ಸ್ವಭಾವದ ಆಟಗಳು. ಆತ PUBG ಆಡುತ್ತಿದ್ದ. ಈಗ ಆತನ ತಂದೆಯೂ ಮಗ PUBG ಹಾಗೂ ಇಂತಹ ಇತರ ಆಟಗಳನ್ನು ಆಡುತ್ತಿದ್ದ ಎಂದು ಖಚಿತಪಡಿಸಿದ್ದಾರೆ. ಇಂತಹ ಆಟಗಳೇ ಆತನ ಈ ಕೃತ್ಯಕ್ಕೆ ಕಾರಣವಾಗಿವೆ" ಎಂದು ಫಾಜಿಲ್ ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದರಲ್ಲಿ ಮೂರನೇ ತರಗತಿಯ ಬಾಲಕ ಖಾಲಿ ತರಗತಿ ಕೊಠಡಿಯಲ್ಲಿ ಆರು ವರ್ಷದ ಬಾಲಕಿಗೆ ಗುದ್ದುವುದು, ಒದೆಯುವುದು ಕಂಡುಬಂದಿತ್ತು. ಅಷ್ಟೇ ಅಲ್ಲದೆ, ಆಕೆಯ ತಲೆಯನ್ನು ಜಜ್ಜುವ ಉದ್ದೇಶದಿಂದ ಭಾರವಾದ ವಸ್ತುಗಳನ್ನು ಎಸೆಯುವುದೂ ವಿಡಿಯೋದಲ್ಲಿ ಸೆರೆಯಾಗಿತ್ತು. ಈ ದಾಳಿ ಕೊಲೆ ಮಾಡುವ ಉದ್ದೇಶದಿಂದ ನಡೆದಿರುವಂತೆ ಕಂಡುಬಂದಿತ್ತು.
ಗಂಭೀರವಾಗಿ ಗಾಯಗೊಂಡಿರುವ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಬಾಲಕಿಯನ್ನು ಚುಡಾಯಿಸುತ್ತಿದ್ದ ಬಾಲಕ, ಆಕ್ಷೇಪಿಸಿದಾಗ ಭೀಕರ ಕೃತ್ಯ
ಇನ್ನು ಬಾಲಕ ತನ್ನನ್ನು 'ಹುಚ್ಚಿ' ಎಂದು ಕರೆದು ಚುಡಾಯಿಸುತ್ತಿದ್ದ ಎಂದು ಸಂತ್ರಸ್ತೆಯ ಮಾವ ತಿಳಿಸಿದ್ದಾರೆ. ಇದಕ್ಕೆ ಬಾಲಕಿ ಆಕ್ಷೇಪ ವ್ಯಕ್ತಪಡಿಸಿದಾಗ, ನಿಮ್ಮ ತಂದೆ ಬಂದಿದ್ದಾರೆ ಎಂದು ಹೇಳಿ ಖಾಲಿ ತರಗತಿ ಕೊಠಡಿಗೆ ಬರುವಂತೆ ಆಕೆಯನ್ನು ನಂಬಿಸಿ ಕರೆದುಕೊಂಡು ಹೋಗಿ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಬಾಲಕಿ ಆರೋಗ್ಯ ಸುಧಾರಣೆ
ಬಾಲಕಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದೂ ಫಾಜಿಲ್ ತಿಳಿಸಿದ್ದಾರೆ. "ಹಿಂದಿಗಿಂತ ಈಗ ಆಕೆ ಉತ್ತಮವಾಗಿದ್ದಾಳೆ. ಕಳೆದ ಎರಡು-ಮೂರು ದಿನಗಳಿಂದ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಆಕೆಯ ಆರೋಗ್ಯದ ಮೇಲೆ ನಿಕಟ ನಿಗಾ ವಹಿಸಿದ್ದಾರೆ. ಎಲ್ಲವನ್ನೂ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.
ನಿರ್ಲಕ್ಷ್ಯ ಆರೋಪ: ಇಬ್ಬರು ಶಿಕ್ಷಕರ ಅಮಾನತು
ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಆರೋಪದಡಿ ಹರಿಯಾಣ ಶಿಕ್ಷಣ ಇಲಾಖೆ ಇಬ್ಬರು ಜೂನಿಯರ್ ಬೇಸಿಕ್ ಟ್ರೈನಿಂಗ್ (ಜೆಬಿಟಿ) ಶಿಕ್ಷಕರನ್ನು ಅಮಾನತುಗೊಳಿಸಿದೆ. ಹರಿಯಾಣ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (HSCPCR) ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.
ಘಟನೆ ಕುರಿತು ವಾಸ್ತವಾಂಶಗಳ ವರದಿ ಸಲ್ಲಿಸುವಂತೆ ಜಿಲ್ಲಾ ಶಿಕ್ಷಣಾಧಿಕಾರಿಗೆ ಆಯೋಗ ಸೂಚಿಸಿದೆ. ಹಲ್ಲೆಗೊಳಗಾದ ಬಾಲಕಿಯನ್ನು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸುಮಾರು 40 ಗಂಟೆಗಳ ಬಳಿಕ ಆಕೆ ಪ್ರಜ್ಞೆ ಮರಳಿ ಪಡೆದಿದ್ದಳು. ಸದ್ಯ ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ವರದಿಯಾಗಿದೆ.
ತನಿಖೆಗೆ ಸಮಿತಿ
ಪ್ರಕರಣದ ತನಿಖೆಗಾಗಿ ಹರಿಯಾಣ ಸರ್ಕಾರ ಐವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಅಲ್ಲದೆ, ರಾಜ್ಯದ ಎಲ್ಲ ಶಾಲೆಗಳಲ್ಲಿ ಸಮಗ್ರ ಸುರಕ್ಷತಾ ಪರಿಶೀಲನೆ ನಡೆಸುವುದಾಗಿ ಘೋಷಿಸಿದೆ. ನಿರ್ಲಕ್ಷ್ಯಕ್ಕೆ ಯಾರೇ ಹೊಣೆಗಾರರು ಎಂದು ಕಂಡುಬಂದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹರಿಯಾಣ ಶಿಕ್ಷಣ ಸಚಿವ ಮಹಿಪಾಲ್ ಧಾಂಡಾ ತಿಳಿಸಿದ್ದಾರೆ.