ರಾಹುಲ್ ಗಾಂಧಿ - ಮಲ್ಲಿಕಾರ್ಜುನ ಖರ್ಗೆ 
ದೇಶ

'Vote chori' ಆರೋಪ: ರಾಹುಲ್ ಗಾಂಧಿ ಜೊತೆ ಬಹಿರಂಗ ಚರ್ಚೆಗೆ ಬನ್ನಿ, ಪ್ರಶ್ನೆಗಳ ಎದುರಿಸಿ; ಪ್ರಧಾನಿ ಮೋದಿಗೆ ಖರ್ಗೆ ಸವಾಲು

ಪ್ರಧಾನಿ ಅವರ ವಿದೇಶಿ ಸಂಪರ್ಕಗಳ ಕುರಿತ ಆರೋಪಗಳೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ರಾಹುಲ್‌ ಗಾಂಧಿ ನೀಡಿರುವ ಸವಾಲನ್ನು ಮೋದಿ ಸ್ವೀಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ನವದೆಹಲಿ: ರಾಹುಲ್ ಗಾಂಧಿ ಅವರು ನೀಡಿರುವ ಬಹಿರಂಗ ಚರ್ಚೆಯ ಸವಾಲನ್ನು ಸ್ವೀಕರಿಸಿ, ಮತ ಕಳ್ಳತನ ಆರೋಪಗಳ ಕುರಿತ ಪ್ರಶ್ನೆಗಳನ್ನು ಎದುರಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಸವಾಲು ಹಾಕಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಚುನಾವಣಾ ಅಕ್ರಮಗಳ ಆರೋಪಗಳಿಗೆ ಪ್ರಧಾನಿ ಬಳಿ ಉತ್ತರವಿಲ್ಲ ಎಂದು ಟೀಕಿಸಿದ್ದಾರೆ.

ಪ್ರಧಾನಿ ಅವರ ವಿದೇಶಿ ಸಂಪರ್ಕಗಳ ಕುರಿತ ಆರೋಪಗಳೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ರಾಹುಲ್‌ ಗಾಂಧಿ ನೀಡಿರುವ ಸವಾಲನ್ನು ಮೋದಿ ಸ್ವೀಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ ವಿಫಲವಾದ 'ದಿಮಾಗಿ ನಕ್ಸಲ್‌' ಎಂಬ ಮಾತನ್ನೇ ಮತ್ತೆ ಮತ್ತೆ ಹೇಳುತ್ತಿದ್ದಾರೆ. 'ವೋಟ್ ಚೋರಿ' ಆರೋಪಗಳಿಗೆ ಮತ್ತು ಭಾರತದ ಹಿತಾಸಕ್ತಿಗಳನ್ನು ವಿದೇಶಿ ಶಕ್ತಿಗಳಿಗೆ ಒತ್ತೆ ಇಟ್ಟಿರುವ ಕುರಿತು ಚರ್ಚಿಸಲು ರಾಹುಲ್‌ ಗಾಂಧಿ ನೀಡಿರುವ ಬಹಿರಂಗ ಸವಾಲಿಗೆ ಅವರ ಬಳಿ ಯಾವುದೇ ಉತ್ತರವಿಲ್ಲ ಎಂದು ಟೀಕಿಸಿದ್ದಾರೆ.

ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮೂರು ಕೋಟಿ ಮತದಾರರು 'ನುಸುಳುಕೋರರು' ಎಂದು ಹೇಳಿರುವುದನ್ನೂ ಖರ್ಗೆ ಅವರು ಪ್ರಶ್ನಿಸಿದ್ದಾರೆ.

ಅಕ್ರಮ ವಲಸೆಯನ್ನು ತಡೆಯಲು ತಮ್ಮ ಅಧಿಕಾರಾವಧಿಯಲ್ಲಿ ಗೃಹ ಸಚಿವರು ಏನು ಕ್ರಮ ಕೈಗೊಂಡಿದ್ದಾರೆ. ಅಮಿತ್‌ ಶಾ ಅವರ ವೈಫಲ್ಯಕ್ಕೆ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ಬಗ್ಗೆಯೂ ಪ್ರಶ್ನೆ ಎತ್ತಿರುವ ಅವರು, ಈ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ಐದು ಬಾರಿ ತನ್ನ ನಿಲುವು ಬದಲಿಸಿದೆ. ಫಾರ್ಮ್‌ 6ರಲ್ಲಿಯೂ ಸಂಪೂರ್ಣ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಬದಲಾವಣೆಗಳನ್ನು ಏಕೆ ಮಾಡಲಾಯಿತು ಎಂದು ಪ್ರಶ್ನಿಸಿರುವ ಖರ್ಗೆ, ಸಹ ಚುನಾವಣಾ ಆಯುಕ್ತರೇ ಈ ಕ್ರಮ ಕಾನೂನುಬಾಹಿರ ಎಂದು ಹೇಳಿದ್ದರು ಎಂದು ಆರೋಪಿಸಿದ್ದಾರೆ.

ಸಂಸತ್ತಿನಿಂದಲೂ ಸರ್ಕಾರ ದೂರ ಉಳಿಯುತ್ತಿದೆ. ಹಿಂದಿನ ಅಧಿವೇಶನ ಮುಕ್ತಾಯಗೊಂಡು 83 ದಿನಗಳಾದರೂ ಅದನ್ನು ಅಧಿಕೃತವಾಗಿ ಅಂತ್ಯಗೊಳಿಸಿಲ್ಲ. ಆದರೆ, ಮುಂದಿನ ಅಧಿವೇಶನದ ಸಿದ್ಧತೆಗಳು ನಡೆಯುತ್ತಿವೆ ಮತ್ತು ವಿಶೇಷ ಅಧಿವೇಶನಕ್ಕೆ ಒತ್ತಾಯಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ಪದಚ್ಯುತಗೊಳಿಸುವಂತೆ ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳು ಸಾರ್ವಜನಿಕವಾಗಿ ಅಭಿಯಾನ ಆರಂಭಿಸಿರುವುದು ಹಾಗೂ ರಾಮಲೀಲಾ ಮೈದಾನದಲ್ಲಿ ನಡೆದ 'ವೋಟ್‌ ಬಚಾವೋ' ರ‍್ಯಾಲಿಯಿಂದ ಬಿಜೆಪಿ ನಾಯಕತ್ವ ವಿಚಲಿತವಾಗಿದೆ. ಪ್ರಧಾನಿ ಮೋದಿ ಬಹಿರಂಗ ಚರ್ಚೆಯಲ್ಲಿ ಭಾಗವಹಿಸಿ ಪ್ರಶ್ನೆಗಳನ್ನು ಎದುರಿಸಬೇಕು ಎಂದು ಒತ್ತಾಯಿಸಿದ್ದಾರೆ.

ನೀವು ಸಂಸತ್ತಿಗೆ ಬರುವುದಿಲ್ಲ. ಒಂದೇ ಒಂದು ಬಹಿರಂಗ ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ. ಈಗ ಚರ್ಚೆಗೆ ಬರುವ ಸಮಯ ಬಂದಿದೆ. ಮುಂದೆ ಬನ್ನಿ, ಪ್ರಶ್ನೆಗಳನ್ನು ಎದುರಿಸಿ. ನೀವು 'ವೋಟ್ ಚೋರಿ'ಯಲ್ಲಿ ಏಕೆ ತೊಡಗಿದ್ದೀರಿ ಎಂಬುದನ್ನು ದೇಶಕ್ಕೆ ತಿಳಿಸಿ ಎಂದು ಸವಾಲು ಹಾಕಿದ್ದಾರೆ.

ಮಂಗಳವಾರ ಮಾತನಾಡಿದ ರಾಹುಲ್‌ ಗಾಂಧಿ ಅವರು ವಿರೋಧ ಪಕ್ಷ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂಬ ಪ್ರಧಾನಿ ಮೋದಿ ಆರೋಪದ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದರು.

ಪ್ರಧಾನಿ ಅವರ ವಿದೇಶಿ ಸಂಪರ್ಕಗಳ ಕುರಿತು ತಾವು ಮಾಡಿರುವ ಆರೋಪಗಳ ವಿರುದ್ಧ ಮೋದಿ ಏಕೆ ಮಾನನಷ್ಟ ಮೊಕದ್ದಮೆ ದಾಖಲಿಸಿಲ್ಲ ಎಂದೂ ಪ್ರಶ್ನಿಸಿದ್ದರು.

ದೇಶವನ್ನು ಅಸ್ಥಿರಗೊಳಿಸಲು ವಿರೋಧ ಪಕ್ಷಗಳು ವಿದೇಶಿ ನೆರವು ಪಡೆಯುತ್ತಿವೆ ಎಂದು ಪ್ರಧಾನಿಯವರು ಆರೋಪಿಸಿದ ಬೆನ್ನಲ್ಲೇ, ಮೋದಿ ಅವರು ವಿದೇಶಿ ನೆರವಿನಿಂದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದರು. ಈ ವಿಚಾರವಾಗಿ ಬಹಿರಂಗ ಚರ್ಚೆ ನಡೆಸಬೇಕೆಂಬ ತಮ್ಮ ಒತ್ತಾಯವನ್ನು ಅವರು ಪುನರುಚ್ಚರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಾಮಾನ್ಯ ಜನತೆಗೆ ಬರೆ: ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ಬಸ್ ದರ ಹೆಚ್ಚಳ; ನೂತನ ದರ ಇಂದು ಮಧ್ಯರಾತ್ರಿ ಜಾರಿ

ಗ್ಯಾಸ್ ಸಿಲಿಂಡರ್ ಡೆಲಿವರಿ ವೇಳೆ ಭಾರಿ ಅಗ್ನಿ ಅವಘಡ, ದೇವರ ದೀಪದಿಂದ ಹೊತ್ತಿದ ಬೆಂಕಿ, Video Viral

India vs New Zealand, 1st ODI: ಮತ್ತೊಂದು ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ!

ಎಂಗೇಜ್‌ಮೆಂಟ್ ಬೆನ್ನಲ್ಲೇ ಮದುವೆಗೆ ಸಜ್ಜಾದ ಶಾಸಕ ದರ್ಶನ್ ಧ್ರುವನಾರಾಯಣ್‌; ಖುದ್ದು ಹಳ್ಳಿಹಳ್ಳಿಗೆ ಹೋಗಿ ಆಮಂತ್ರಣ ಪತ್ರಿಕೆ ವಿತರಣೆ! Video

ಯುಪಿ ಚುನಾವಣೆಗೂ ಮುನ್ನ, ಯೋಗಿ ಸರ್ಕಾರ ಬಂಪರ್ ಗಿಫ್ಟ್; ದೀಪಾವಳಿ, ಹೋಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್ ಘೋಷಣೆ!