ನವದೆಹಲಿ: ಇತರ ಹಿಂದುಳಿದ ವರ್ಗಗಳ (OBC) ಮೀಸಲಾತಿಗೆ ಸಂಬಂಧಿಸಿದಂತೆ ಒಬಿಸಿ ಕ್ರೀಮಿ ಲೇಯರ್ (ಕೆನೆಪದರ) ವ್ಯಾಪ್ತಿಯನ್ನು ನಿರ್ಧರಿಸಲು ಅಭ್ಯರ್ಥಿಯ ಪೋಷಕರ ಕೇವಲ ವೇತನ ಅಥವಾ ಆದಾಯವನ್ನು ಮಾತ್ರ ಮಾನದಂಡವಾಗಿ ಬಳಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು ಈ ಕುರಿತು ಮಹತ್ವದ ತೀರ್ಪು ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಪ್ರಕರಣ?
1993ರ ಕಚೇರಿ ಜ್ಞಾಪನ ಪತ್ರದ ಪ್ರಕಾರ ಕ್ರೀಮಿ ಲೇಯರ್ ನಿರ್ಧಾರಕ್ಕೆ ವೇತನ ಮತ್ತು ಕೃಷಿ ಆದಾಯವನ್ನು ಹೊರತುಪಡಿಸಲಾಗಿತ್ತು. ಆದರೆ 2004ರಲ್ಲಿ ಕೇಂದ್ರ ಸರ್ಕಾರ ತಂದಿದ್ದ ಸ್ಪಷ್ಟೀಕರಣವು ಪಿಎಸ್ಯು ಮತ್ತು ಖಾಸಗಿ ವಲಯದ ನೌಕರರ ಸಂಬಳವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವಂತೆ ಮಾಡಿತ್ತು. ಇದನ್ನು ಪ್ರಶ್ನಿಸಿ ಹಲವು ಯುಪಿಎಸ್ಸಿ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಇದರ ವಿರುದ್ದ ಕೇಂದ್ರ ಸರ್ಕಾರವು ತನ್ನ ಆದೇಶವನ್ನು ಮರುಪರಿಶೀಲಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು, "ಕ್ರೀಮಿ ಲೇಯರ್ ನಿರ್ಧರಿಸುವಾಗ ಕೇವಲ ಪೋಷಕರ ಆದಾಯ ಅಥವಾ ವೇತನವನ್ನು ಮಾತ್ರ ನೋಡಬಾರದು. ಅದರೊಂದಿಗೆ ಪೋಷಕರು ಹೊಂದಿರುವ ಹುದ್ದೆಯ ವರ್ಗ, ಅವರ ಸೇವಾ ಸ್ಥಿತಿ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಪರಿಗಣಿಸುವುದು ಅತ್ಯಗತ್ಯ ಎಂದು ಸ್ಪಷ್ಟಪಡಿಸಿದೆ.
ಮುಂದುವರೆದು, ಸರ್ಕಾರಿ ನೌಕರರ ಮಕ್ಕಳ ಕ್ರೀಮಿ ಲೇಯರ್ ನಿರ್ಧರಿಸುವಾಗ ಅವರ ಹುದ್ದೆಯನ್ನು ಪರಿಗಣಿಸಿ, ಸಾರ್ವಜನಿಕ ವಲಯದ ಉದ್ಯಮಗಳು, ಬ್ಯಾಂಕ್ಗಳು ಅಥವಾ ಖಾಸಗಿ ವಲಯದ ನೌಕರರ ಮಕ್ಕಳನ್ನು ಕೇವಲ 'ವೇತನ'ದ ಆಧಾರದ ಮೇಲೆ ಕ್ರೀಮಿ ಲೇಯರ್ ವ್ಯಾಪ್ತಿಗೆ ತರುವುದು ಸಂವಿಧಾನದ ವಿಧಿ 14 ಮತ್ತು 16ರ ಉಲ್ಲಂಘನೆಯಾಗುತ್ತದೆ ಮತ್ತು ಇದು ತಾರತಮ್ಯದಿಂದ ಕೂಡಿದೆ ಎಂದು ಕೋರ್ಟ್ ಹೇಳಿದೆ. ಜೊತೆಗೆ, ಈ ತೀರ್ಪು ಈಗಾಗಲೇ ಮುಕ್ತಾಯಗೊಂಡಿರುವ ಹಳೆಯ ನೇಮಕಾತಿಗಳು, ಹಿರಿತನ ಅಥವಾ ಪ್ರಮೋಷನ್ಗಳಿಗೆ ಅನ್ವಯಿಸುವುದಿಲ್ಲ. ಹಳೆಯ ಪ್ರಕರಣಗಳನ್ನು ಮರುಪರಿಶೀಲಿಸಲು ಈ ತೀರ್ಪನ್ನು ಬಳಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಯುಪಿಎಸ್ಸಿ 2025ಕ್ಕೆ ಅನ್ವಯ
ಯುಪಿಎಸ್ಸಿ ಸಿವಿಲ್ ಸರ್ವಿಸಸ್ ಪರೀಕ್ಷೆ 2025ರ ಫಲಿತಾಂಶ ಪ್ರಕಟವಾಗಿದ್ದರೂ, ಸೇವಾ ಹಂಚಿಕೆ ಪ್ರಕ್ರಿಯೆ ಇನ್ನೂ ಬಾಕಿ ಇರುವುದರಿಂದ, ಈ ಬ್ಯಾಚ್ನ ಅಭ್ಯರ್ಥಿಗಳಿಗೆ ನ್ಯಾಯಾಲಯದ ಪ್ರಸ್ತುತ ತೀರ್ಪಿನ ಅಡಿಯಲ್ಲೇ ಒಬಿಸಿ ಕ್ರೀಮಿ ಲೇಯರ್ ನಿರ್ಧಾರ ಮಾಡಿ ಸೇವೆಗಳನ್ನು ಹಂಚಿಕೆ ಮಾಡಬೇಕು ಎಂದು ಆದೇಶಿಸಿದೆ.
ಏನಿದು ಕ್ರೀಮಿ ಲೇಯರ್?
ಕ್ರೀಮಿ ಲೇಯರ್ (Creamy Layer) ಎಂದರೆ ಒಬಿಸಿ (ಇತರ ಹಿಂದುಳಿದ ವರ್ಗಗಳು) ಸಮುದಾಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದಿರುವ ಶ್ರೀಮಂತ ಅಥವಾ ಪ್ರಭಾವಿ ವ್ಯಕ್ತಿಗಳ ಗುಂಪು. ಈ ವರ್ಗಕ್ಕೆ ಸೇರಿದ ಜನರನ್ನು ಒಬಿಸಿಗೆ ಸಿಗುವ ಶೇ. 27 ರಷ್ಟು ಮೀಸಲಾತಿ ಸೌಲಭ್ಯದಿಂದ ಹೊರಗಿಡಲಾಗುತ್ತದೆ. ಈ ಮೂಲಕ ಹಿಂದುಳಿದ ವರ್ಗಗಳಲ್ಲಿರುವ ಅತ್ಯಂತ ಬಡ ಮತ್ತು ಅರ್ಹ ಜನರಿಗೆ ಮೀಸಲಾತಿಯ ನಿಜವಾದ ಪ್ರಯೋಜನ ಸಿಗಬೇಕು ಎಂಬ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ.