ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಗುಣಮಟ್ಟದಲ್ಲಿ ತುಸು ಸುಧಾರಣೆ ಕಂಡುಬಂದಿದ್ದರೂ, ಗಾಳಿಯ ಗುಣಮಟ್ಟವು ಇನ್ನೂ 'ಅತ್ಯಂತ ಕಳಪೆ' ವಿಭಾಗದಲ್ಲಿಯೇ ಮುಂದುವರಿದಿದೆ.
ಮಂಗಳವಾರ ಬೆಳಗ್ಗೆ 7 ಗಂಟೆಗೆ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 307ಕ್ಕೆ ದಾಖಲಾಗಿದ್ದು, ಇದು 'ಅತ್ಯಂತ ಕಳಪೆ' (Very Poor) ವಿಭಾಗದಲ್ಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ತಿಳಿಸಿದೆ.
ಭಾನುವಾರ ದೀಪಾವಳಿ ಆಚರಣೆಯ ಬಳಿಕ ದೆಹಲಿಯ ವಾಯು ಗುಣಮಟ್ಟ ಮತ್ತಷ್ಟು ಹದಗೆಟ್ಟಿತ್ತು. ತಾಪಮಾನದಲ್ಲಿನ ಇಳಿಕೆ ಹಾಗೂ ಸಾಧಾರಣ ಮಂಜಿನ ವಾತಾವರಣದಿಂದಾಗಿ ಮಾಲಿನ್ಯದ ಸಮಸ್ಯೆ ಮುಂದುವರಿದಿದೆ.
ವಾಯುಮಾಲಿನ್ಯದ ಪರಿಣಾಮವನ್ನು ತಗ್ಗಿಸಲು ದೆಹಲಿ ಸರ್ಕಾರ ವಿವಿಧ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ನಗರದಾದ್ಯಂತ ರಸ್ತೆಗಳಲ್ಲಿ ನೀರು ಸಿಂಪಡಿಸುವ ಯಂತ್ರಗಳನ್ನು ನಿಯೋಜಿಸಲಾಗಿದ್ದು, ಧೂಳಿನ ಕಣಗಳ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ಚಾಂದಿನಿ ಚೌಕ್‌ನಲ್ಲಿ ರಾಜಧಾನಿಯಲ್ಲೇ ಅತ್ಯಧಿಕ 395 AQI ದಾಖಲಾಗಿದ್ದು, ಇದು 'ಅತ್ಯಂತ ಕಳಪೆ' ವಿಭಾಗದಲ್ಲಿದೆ. ಪಂಜಾಬಿ ಬಾಗ್‌ನಲ್ಲಿ 355 ಹಾಗೂ ಅಯಾ ನಗರದಲ್ಲಿ 354 AQI ದಾಖಲಾಗಿದೆ. ಆರ್.ಕೆ. ಪುರಂನಲ್ಲಿ 328 ಹಾಗೂ ಸಫ್ದರ್‌ಜಂಗ್ ಪ್ರದೇಶದಲ್ಲಿ 371 AQI ದಾಖಲಾಗಿದ್ದು, ಈ ಪ್ರದೇಶಗಳಲ್ಲಿಯೂ ವಾಯು ಗುಣಮಟ್ಟ ಅತ್ಯಂತ ಕಳಪೆಯಾಗಿದೆ.
ಆನಂದ್ ವಿಹಾರ್‌ನಲ್ಲಿ 290 ಹಾಗೂ ಅಶೋಕ್ ವಿಹಾರ್‌ನಲ್ಲಿ 278 AQI ದಾಖಲಾಗಿದ್ದು, ಇವು 'ಕಳಪೆ' ವಿಭಾಗದಲ್ಲಿವೆ. ನರೇಲಾದಲ್ಲಿ 272, ಇಂಡಿಯಾ ಗೇಟ್ ಮತ್ತು ಕರ್ತವ್ಯ ಪಥ್ ಪ್ರದೇಶಗಳಲ್ಲಿ ತಲಾ 258 AQI ದಾಖಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸಾಧಾರಣ ಮಂಜು ಆವರಿಸಿತ್ತು.
ಮುಂದಿನ ಐದು ದಿನಗಳ ಕಾಲ ಇದೇ ರೀತಿಯ ಮಂಜಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನೊಂದೆಡೆ, ಹರಿಯಾಣದ ಅಂಬಾಲಾದಲ್ಲಿ ಒಟ್ಟಾರೆ AQI 250 ದಾಖಲಾಗಿದ್ದು, 'ಕಳಪೆ' ವಿಭಾಗದಲ್ಲಿದೆ. ಮಹಾರಾಷ್ಟ್ರದಲ್ಲಿ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 146 ದಾಖಲಾಗಿದ್ದು, 'ಮಧ್ಯಮ' ವಿಭಾಗದಲ್ಲಿದೆ.
ಸೋಮವಾರ ದೀಪಾವಳಿಯ ಮರುದಿನ ದೆಹಲಿಯ ಹಲವು ವಾಯು ಗುಣಮಟ್ಟ ಮಾಪನ ಕೇಂದ್ರಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಅನೇಕ ಪ್ರದೇಶಗಳಲ್ಲಿ AQI 400ರ ಗಡಿ ದಾಟಿ 'ತೀವ್ರ ಕಳಪೆ' ವಿಭಾಗಕ್ಕೆ ತಲುಪಿತ್ತು. ಮುಂಜಾನೆಯ ವೇಳೆಯಲ್ಲಿಯೂ ದಟ್ಟ ಮಾಲಿನ್ಯದಿಂದಾಗಿ ಗೋಚರತೆ ಕಡಿಮೆಯಾಗಿತ್ತು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರ್ಗೀಕರಣದ ಪ್ರಕಾರ, 0-50 AQI ಉತ್ತಮ, 51-100 ತೃಪ್ತಿಕರ, 101-200 ಮಧ್ಯಮ, 201-300 ಕಳಪೆ, 301-400 ಅತ್ಯಂತ ಕಳಪೆ ಹಾಗೂ 401-500 ತೀವ್ರ ಕಳಪೆ ಎಂದು ಪರಿಗಣಿಸಲಾಗುತ್ತದೆ.