ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ(CRPF) ಸಿಬ್ಬಂದಿ ಮೇಲೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಪಸ್ದಾರನ್-ಎ-ಹುರಿಯತ್ ಕಾಶ್ಮೀರ್ ಎಂಬ ಹೊಸ ಉಗ್ರ ಸಂಘಟನೆ ಹೊತ್ತುಕೊಂಡಿದೆ.
ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪಸ್ದಾರನ್-ಎ-ಹುರಿಯತ್ ಕಾಶ್ಮೀರ್ ಎಂಬ ಹೆಸರು ಕೇಳಿ ಬಂದಿದೆ.
ನಿನ್ನೆ ಮಧ್ಯಾಹ್ನ 2.15 ರ ಸುಮಾರಿಗೆ ಮಿರ್ ಬಜಾರ್ ಬಳಿ ಮೋಟಾರ್ ಸೈಕಲ್‌ನಲ್ಲಿ ಬಂದ ಭಯೋತ್ಪಾದಕರು, ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಕೇಂದ್ರ ಮೀಸಲು ಪೊಲೀಸ್ ಪಡೆ ಚೆಕ್‌ಪಾಯಿಂಟ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಮೂವರು CRPF ಸಿಬ್ಬಂದಿ ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಇದೀಗ ಈ ದಾಳಿಯ ಹೊಣೆಯನ್ನು ಪಾಸ್ದರನ್-ಎ-ಹುರಿಯತ್ ಕಾಶ್ಮೀರ್ ಹೊತ್ತುಕೊಂಡಿದೆ.
ನವೆಂಬರ್ 11 ರಂದು ಸಂಘಟನೆಯ ವಕ್ತಾರ ಮೊಹಮ್ಮದ್ ಒಮರ್ ಅಜ್ಜಮ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಉಗ್ರ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, CRPF ಸಿಬ್ಬಂದಿಯನ್ನು "ಭಾರತೀಯ ಆಕ್ರಮಣಕಾರಿ ಪಡೆಗಳು" ಎಂದು ಟೀಕಿಸಿದೆ.
"ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಆಕ್ರಮಣಕಾರಿ ಸಿಆರ್‌ಪಿಎಫ್ ಸಿಬ್ಬಂದಿಯ ಮೇಲೆ ನಡೆದ ದಾಳಿಯ ಹೊಣೆಯನ್ನು ಪಸ್ದಾರನ್-ಎ-ಹುರಿಯತ್ ಕಾಶ್ಮೀರ್ ಹೊತ್ತುಕೊಂಡಿದೆ. ಆಕ್ರಮಿತ ಹಿಂದುತ್ವ ಆಡಳಿತ ಮತ್ತು ಅದರ "ಕೃತಕ ಶಾಂತಿ"ಯ ಮುಸುಕನ್ನು ಮತ್ತೊಮ್ಮೆ ಮುಜಾಹಿದ್ದೀನ್‌ಗಳ ಕಾರ್ಯಾಚರಣೆಗಳು ಹರಿದು ಹಾಕಲಿವೆ ಎಂದು ಹೇಳಿದೆ.
ನಾವು, ಪಸ್ದಾರನ್-ಎ-ಹುರಿಯತ್, ಮುಂದಿನ ದಿನಗಳಲ್ಲಿ ಹಿಂದುತ್ವ ಆಡಳಿತ ಮತ್ತು ಆರ್‌ಎಸ್‌ಎಸ್ ಮೇಲೆ ವಿನಾಶಕಾರಿ ದಾಳಿಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾನೆ.
ಕಣಿವೆಯಲ್ಲಿ ಹೇರಲಾಗಿರುವ ಕೃತಕ ಶಾಂತಿಯ ಪರದೆಯನ್ನು ಮುಜಾಹಿದ್ದೀನ್‌ಗಳ ಕಾರ್ಯಾಚರಣೆಗಳು ಮತ್ತೊಮ್ಮೆ ಹರಿದು ಹಾಕಲಿವೆ ಮತ್ತು ಅವರ ಪ್ರಾಬಲ್ಯ ಕೊನೆಗೊಳ್ಳುವವರೆಗೂ ಈ ಜಿಹಾದ್ ಮುಂದುವರಿಯಲಿದೆ ಎಂದು ಹೇಳಿದ್ದಾನೆ. ಈ ಬೆದರಿಕೆಯ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಮತ್ತು ಭದ್ರತಾ ಸಂಸ್ಥೆಗಳು ಈ ಹೊಸ ಸಂಘಟನೆಯ ಮೂಲ ಮತ್ತು ಜಾಲದ ಕುರಿತು ತೀವ್ರ ತನಿಖೆ ಆರಂಭಿಸಿವೆ.