ನವದೆಹಲಿ: ವಿವಾದಾತ್ಮಕ ಧರ್ಮಪ್ರಚಾರಕ ಝಾಕಿರ್ ನಾಯಕ್ ಅವರ 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್'(IRF) ಮೇಲಿನ ನಿಷೇಧವನ್ನು ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ಮತ್ತೆ ಐದು ವರ್ಷಗಳ ಕಾಲ ವಿಸ್ತರಿಸಿದೆ.
ಈ ಇಸ್ಲಾಮಿಕ್ ಸಂಸ್ಥೆಯು ದೇಶದ ಭದ್ರತೆಗೆ ಹಾನಿಕಾರಕವಾದ ಹಾಗೂ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ಉಲ್ಲೇಖಿಸಿದೆ.
'ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ, 1967'ರ (1967ರ 37ನೇ ಕಾಯಿದೆ) ಸೆಕ್ಷನ್ 3ರ ಉಪ-ವಿಭಾಗ (1)ರ ಅಡಿಯಲ್ಲಿ ದೊರೆತ ಅಧಿಕಾರವನ್ನು ಬಳಸಿಕೊಂಡು, IRF ಅನ್ನು 'ಕಾನೂನುಬಾಹಿರ ಸಂಘಟನೆ' ಎಂದು ಘೋಷಿಸಲಾಗಿದೆ. ಈ ನಿರ್ಧಾರವನ್ನು 'ಕಾನೂನುಬಾಹಿರ ಚಟುವಟಿಕೆಗಳ ತಡೆ ನ್ಯಾಯಮಂಡಳಿ' (Unlawful Activities (Prevention) Tribunal) ಕೂಡ ಎತ್ತಿಹಿಡಿದಿದೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಹಿಂದಿನ ನಿಷೇಧವು ನವೆಂಬರ್ 14ರಂದು ಕೊನೆಗೊಳ್ಳುತ್ತಿದ್ದು, ಇದೀಗ ಅದನ್ನು ಮತ್ತೆ ಐದು ವರ್ಷ ವಿಸ್ತರಿಸಲಾಗಿದೆ.
"IRF ಮತ್ತು ಅದರ ಸದಸ್ಯರು, ವಿಶೇಷವಾಗಿ ಅದರ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಝಾಕಿರ್ ಅಬ್ದುಲ್ ಕರೀಮ್ ನಾಯಕ್(ಅಲಿಯಾಸ್ ಡಾ. ಝಾಕಿರ್ ನಾಯಕ್), ತಮ್ಮ ಅನುಯಾಯಿಗಳನ್ನು ಪ್ರಚೋದಿಸುತ್ತಿದ್ದಾರೆ ಮತ್ತು ಅವರಿಗೆ ನೆರವು ನೀಡುತ್ತಿದ್ದಾರೆ. ಧರ್ಮದ ಆಧಾರದ ಮೇಲೆ ವಿವಿಧ ಧಾರ್ಮಿಕ ಸಮುದಾಯಗಳು ಮತ್ತು ಗುಂಪುಗಳ ನಡುವೆ ದ್ವೇಷ, ವೈರತ್ವ ಅಥವಾ ಅಸಮಾಧಾನವನ್ನು ಉಂಟುಮಾಡಲು ಅಥವಾ ಅದಕ್ಕೆ ಪ್ರಯತ್ನಿಸಲು ಅವರು ಪ್ರೇರೇಪಿಸುತ್ತಿದ್ದಾರೆ. ಇಂತಹ ಕೃತ್ಯಗಳು ದೇಶದ ಸಮಗ್ರತೆ ಮತ್ತು ಭದ್ರತೆಗೆ ಹಾನಿಕಾರಕವಾಗಿವೆ" ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ನಾಯಕ್ ಅವರು ನೀಡಿರುವ ಹೇಳಿಕೆಗಳು ಮತ್ತು ಭಾಷಣಗಳು ಆಕ್ಷೇಪಾರ್ಹ ಹಾಗೂ ದೇಶವಿರೋಧಿ ಸ್ವರೂಪದ್ದಾಗಿವೆ. ಅವರು ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಮತ್ತು ವೈರತ್ವವನ್ನು ಬಿತ್ತುತ್ತಿದ್ದಾರೆ. ಅಲ್ಲದೆ, ಭಾರತದಲ್ಲಿ ಹಾಗೂ ವಿದೇಶಗಳಲ್ಲಿರುವ ನಿರ್ದಿಷ್ಟ ಧರ್ಮದ ಯುವಕರನ್ನು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.