ದೆಹಲಿ ವಿಶೇಷ ನ್ಯಾಯಾಲಯದಿಂದ ಸಂಸತ್ ಭದ್ರತಾ ಲೋಪ ಆರೋಪಿಗಳ ಜಾಮೀನು ಅರ್ಜಿ ವಜಾ Online Desk
ದೇಶ

2023ರ ಸಂಸತ್ ಭದ್ರತಾ ಲೋಪ ಪ್ರಕರಣ: ಪ್ರಮುಖ ಆರೋಪಿಗಳಾದ ಸಾಗರ್ ಶರ್ಮಾ, ಮನೋರಂಜನ್ ಡಿ ಜಾಮೀನು ಅರ್ಜಿ ವಜಾ

2023ರ ಸಂಸತ್ ಭದ್ರತಾ ಲೋಪ ಪ್ರಕರಣದ ಪ್ರಮುಖ ಆರೋಪಿಗಳಾದ ಸಾಗರ್ ಶರ್ಮಾ ಮತ್ತು ಮೈಸೂರಿನ ಮನೋರಂಜನ್ ಡಿ. ಸಲ್ಲಿಸಿದ್ದ ಎರಡನೇ ನಿಯಮಿತ ಜಾಮೀನು ಅರ್ಜಿಗಳನ್ನು ದೆಹಲಿಯ ವಿಶೇಷ ಎನ್‌ಐಎ ನ್ಯಾಯಾಲಯ ತಿರಸ್ಕರಿಸಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: 2023ರ ಸಂಸತ್ ಭದ್ರತಾ ಲೋಪ ಪ್ರಕರಣದ ಪ್ರಮುಖ ಆರೋಪಿಗಳಾದ ಸಾಗರ್ ಶರ್ಮಾ ಮತ್ತು ಮೈಸೂರಿನ ಮನೋರಂಜನ್ ಡಿ ಸಲ್ಲಿಸಿದ್ದ ನಿಯಮಿತ ಜಾಮೀನು ಅರ್ಜಿಗಳನ್ನು ದೆಹಲಿಯ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಆರೋಪಿಗಳ ಕೃತ್ಯವು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಬೆದರಿಕೆಯೊಡ್ಡಿದೆ ಎಂದು ದೆಹಲಿಯ ವಿಶೇಷ ಎನ್‌ಐಎ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆ ಕುರಿತ ವರದಿ ಇಲ್ಲಿದೆ:

ನ್ಯಾಯಾಲಯದ ಕಟು ಅವಲೋಕನ

ಎನ್‌ಐಎ ಮತ್ತು ಯುಎಪಿಎ ಪ್ರಕರಣಗಳ ವಿಶೇಷ ನ್ಯಾಯಾಧೀಶೆ ಕಿರಣ್ ಬನ್ಸಾಲ್ ಅವರು ಅರ್ಜಿಗಳನ್ನು ವಜಾಗೊಳಿಸುತ್ತಾ, ಆರೋಪಿಗಳ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸತ್ಯವೆಂದು ನಂಬಲು ಬಲವಾದ ಸಾಕ್ಷ್ಯಾಧಾರಗಳಿವೆ ಎಂದು ತಿಳಿಸಿದ್ದಾರೆ. 2001ರ ಸಂಸತ್ ಮೇಲಿನ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ದಿನದಂದೇ (ಡಿಸೆಂಬರ್ 13) ಲೋಕಸಭಾ ಕಲಾಪಕ್ಕೆ ಅಡ್ಡಿಪಡಿಸಿ, ಭಯೋತ್ಪಾದನೆಯಂತಹ ವಾತಾವರಣ ಸೃಷ್ಟಿಸಲು ಇವರು ಸಂಚು ರೂಪಿಸಿದ್ದರು ಎಂದು ನ್ಯಾಯಾಲಯ ಹೇಳಿದೆ. ಈ ಮೂಲಕ 2025ರ ಜುಲೈನಲ್ಲಿ ದೆಹಲಿ ಹೈಕೋರ್ಟ್‌ನಿಂದ ಜಾಮೀನು ಪಡೆದಿರುವ ಸಹ ಆರೋಪಿಗಳಾದ ನೀಲಂ ಆಜಾದ್ ಮತ್ತು ಮಹೇಶ್ ಕುಮಾವತ್ ಅವರಂತೆ ತಮಗೂ ಜಾಮೀನು ನೀಡಬೇಕೆಂಬ ಆರೋಪಿಗಳ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ಇದರೊಂದಿಗೆ, ನೀಲಂ ಸಂಸತ್ ಭವನದ ಹೊರಗಿದ್ದರು ಮತ್ತು ಮಹೇಶ್ ಘಟನೆಯ ದಿನ ದೆಹಲಿಯಲ್ಲಿ ಇರಲಿಲ್ಲ; ಆದರೆ ಸಾಗರ್ ಮತ್ತು ಮನೋರಂಜನ್ ಶೂಗಳಲ್ಲಿ ಹೊಗೆಯ ಕ್ಯಾನ್‌ಗಳನ್ನು ಬಚ್ಚಿಟ್ಟುಕೊಂಡು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯೊಳಗೆ ಜಿಗಿದು ನೇರವಾಗಿ ಕೃತ್ಯ ಎಸಗಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಯುಎಪಿಎ ಕಾಯ್ದೆಯಡಿ ನಿರ್ಬಂಧ

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (UAPA) ಸೆಕ್ಷನ್ 43D(5)ರ ಅಡಿಯಲ್ಲಿ, ಆರೋಪಗಳು ಮೇಲ್ನೋಟಕ್ಕೆ ಸತ್ಯವೆಂದು ಕಂಡುಬಂದಾಗ ಜಾಮೀನು ನೀಡಲು ಕಾನೂನುಬದ್ಧ ನಿರ್ಬಂಧವಿರುವುದರಿಂದ ಜಾಮೀನು ನಿರಾಕರಿಸಲಾಗಿದೆ. ವಿಚಾರಣಾ ನ್ಯಾಯಾಲಯದಲ್ಲಿ ಇವರ ಜಾಮೀನು ಅರ್ಜಿ ತಿರಸ್ಕೃತಗೊಳ್ಳುತ್ತಿರುವುದು ಇದು ಎರಡನೇ ಬಾರಿಯಾಗಿದೆ.

ಏನಿದು ಪ್ರಕರಣ?

2023ರ ಡಿಸೆಂಬರ್ 13ರಂದು, 2001ರ ಸಂಸತ್ ಭವನದ ಮೇಲಿನ ಭಯೋತ್ಪಾದಕ ದಾಳಿಯ 22ನೇ ವಾರ್ಷಿಕೋತ್ಸವದ ದಿನದಂದೇ ನವದೆಹಲಿಯ ನೂತನ ಸಂಸತ್ ಭವನದ ಲೋಕಸಭಾ ಕಲಾಪ ನಡೆಯುತ್ತಿದ್ದಾಗ ಮೈಸೂರಿನ ಮನೋರಂಜನ್ ಡಿ. ಮತ್ತು ಉತ್ತರ ಪ್ರದೇಶದ ಲಕ್ನೋ ಮೂಲದ ಸಾಗರ್ ಶರ್ಮಾ ಎಂಬ ಇಬ್ಬರು ಯುವಕರು, ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಲೋಕಸಭೆಯ ಶೂನ್ಯ ವೇಳೆ ನಡೆಯುತ್ತಿದ್ದಾಗ, ಸಂದರ್ಶಕರ ಗ್ಯಾಲರಿಯಲ್ಲಿದ್ದ ಸಾಗರ್ ಶರ್ಮಾ ಮತ್ತು ಮೈಸೂರು ಮೂಲದ ಎಂಜಿನಿಯರಿಂಗ್ ಪದವೀಧರ ಮನೋರಂಜನ್ ಡಿ. ಏಕಾಏಕಿ ಸಂಸದರ ಆಸನಗಳ ಮೇಜಿನ ಮೇಲೆ ಜಿಗಿದರು. ಈ ವೇಳೆ, ಬೂಟಿನಿಂದ ಡಬ್ಬಿಗಳನ್ನು ಹೊರತೆಗೆದು ಹಳದಿ ಬಣ್ಣದ ಹೊಗೆಯನ್ನು ಸಿಡಿಸಿ, "ತಾನಾಶಾಹಿ ನಹಿ ಚಲೇಗಿ" (ಸರ್ವಾಧಿಕಾರ ನಡೆಯುವುದಿಲ್ಲ), "ಇಂಕ್ವಿಲಾಬ್ ಜಿಂದಾಬಾದ್" (ಕ್ರಾಂತಿ ಚಿರಾಯುವಾಗಲಿ) ಎಂದು ಘೋಷಣೆಗಳನ್ನು ಕೂಗಿದರು. ತದನಂತರ ಸಂಸತ್ತಿನ ಭದ್ರತಾ ಸಿಬ್ಬಂದಿ ಬರುವ ಮೊದಲೇ ಕೆಲವು ಸಂಸದರು ಧೈರ್ಯ ತೋರಿ ಇಬ್ಬರೂ ಆರೋಪಿಗಳನ್ನು ಹಿಡಿದು ಭದ್ರತಾ ಪಡೆಗಳಿಗೆ ಒಪ್ಪಿಸಿದರು. ಇದೇ ವೇಳೆ ಸಂಸತ್ ಭವನದ ಹೊರಭಾಗದಲ್ಲಿ ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಎಂಬ ಇನ್ನಿಬ್ಬರು ಆರೋಪಿಗಳು ಕೆಂಪು ಮತ್ತು ಹಳದಿ ಬಣ್ಣದ ಹೊಗೆ ಸಿಡಿಸಿ ಘೋಷಣೆ ಕೂಗುತ್ತಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನಮಗೆ ಪಾಠ ಮಾಡುವ ಮೊದಲು ನಿಮ್ಮ ಪೂರ್ವಗ್ರಹ ಸರಿಪಡಿಸಿಕೊಳ್ಳಿ, ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ': ಅಮೆರಿಕಕ್ಕೆ ಭಾರತ ಖಡಕ್ ತಿರುಗೇಟು!

'ಶೀಘ್ರದಲ್ಲೇ, ಬಾಹ್ಯಾಕಾಶದಿಂದಲೇ ನೇರವಾಗಿ ನಿಮ್ಮ ಮನೆಗೆ ವಿದ್ಯುತ್': ಆಂಧ್ರ CM ಚಂದ್ರಬಾಬು ನಾಯ್ಡು ಭರವಸೆ

ತಂದೆಯ ಕಿಡ್ನಿ ಕಸಿಗಾಗಿ ಅಂಡಾಣು ಮಾರಾಟ; ಯುವತಿ ಸೇರಿ 43 ಮಹಿಳೆಯರ ರಕ್ಷಣೆ, ಬೃಹತ್ IVF ದಂಧೆ ಬಟಾ ಬಯಲು!

ಕಷ್ಟ-ಸುಖ ಮಾತಾಡಿ ಸಂಕಷ್ಟಕ್ಕೆ ಸಿಲುಕಿದ ದರ್ಶನ್-ಪವಿತ್ರಾ: 2 ನಿಮಿಷದ ಸಂಭಾಷಣೆಯೇ SPPಗೆ ಹೊಸ ಅಸ್ತ್ರ! ಆಡಿಯೋ ಕ್ಲಿಪ್ ಜಡ್ಜ್ ಕೈಗೆ?

'ಟಾಪ್ ಆರ್ಡರ್ ಅಲ್ಲ.. ಮಧ್ಯಮ ಕ್ರಮಾಂಕವೇ ದುರ್ಬಲ': ನ್ಯೂಜಿಲೆಂಡ್ ವಿರುದ್ಧ 244 ರನ್ ಸೋಲಿನ ಬಳಿಕ ದಿನೇಶ್ ಕಾರ್ತಿಕ್ ಅಚ್ಚರಿ ಹೇಳಿಕೆ!