ಅಣ್ಣಾಮಲೈ  
ದೇಶ

DMK ರೀತಿ ವಿಜಯ್ ಸರ್ಕಾರವೂ 'ದೇವರ ವಿರೋಧಿ' ಹಾದಿಯಲ್ಲಿ ಸಾಗುತ್ತಿದೆಯೇ? 'ಕಾರ್ತಿಕ ದೀಪಂ' ವಿವಾದಕ್ಕೆ ಅಣ್ಣಾಮಲೈ ಆಕ್ರೋಶ!

ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿರುವ ಪ್ರಾಚೀನ ಕಲ್ಲಿನ ಸ್ತಂಭವಾದ ‘ದೀಪತ್ತೂಣ್’ ಬಳಿ ಕಾರ್ತಿಕ ದೀಪ ಬೆಳಗಿಸಲು ಭಕ್ತರಿಗೆ ಅವಕಾಶ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ್ದರೂ, ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಿಲ್ಲ.

ಚೆನ್ನೈ: ತಮಿಳುನಾಡಿನ ಮಧುರೈನಲ್ಲಿರುವ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗಿಸುವ ವಿಚಾರ ಮತ್ತೆ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ‘ವಿ ದಿ ಲೀಡರ್ಸ್’ ಸಂಘಟನೆಯ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹಿಂದಿನ ಡಿಎಂಕೆ ಸರ್ಕಾರದಂತೆಯೇ ವಿಜಯ್ ಸರ್ಕಾರವೂ ದೇವರ ವಿರೋಧಿ ನಿಲುವನ್ನು ತಾಳುತ್ತಿದೆ ಎಂದು ಆರೋಪಿಸಿದ್ದಾರೆ.

ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿರುವ ಪ್ರಾಚೀನ ಕಲ್ಲಿನ ಸ್ತಂಭವಾದ ‘ದೀಪತ್ತೂಣ್’ ಬಳಿ ಕಾರ್ತಿಕ ದೀಪ ಬೆಳಗಿಸಲು ಭಕ್ತರಿಗೆ ಅವಕಾಶ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ್ದರೂ, ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸದೆ ಕಾನೂನು ಹೋರಾಟದ ಮೂಲಕ ವಿಳಂಬ ಮಾಡುತ್ತಿದೆ ಎಂದು ಅಣ್ಣಾಮಲೈ ದೂರಿದ್ದಾರೆ.

ದೀಪ ಬೆಳಗಿಸುವುದು ಧಾರ್ಮಿಕ ನಂಬಿಕೆ ಮತ್ತು ಪರಂಪರೆಯ ಭಾಗವಾಗಿದ್ದು, ಮದ್ರಾಸ್ ಹೈಕೋರ್ಟ್ ಆದೇಶಗಳ ಹೊರತಾಗಿಯೂ ಸರ್ಕಾರ ವಿವಾದ ಮುಂದುವರಿಸುತ್ತಿದೆ ಎಂದು ಅಣ್ಣಾಮಲೈ ಟೀಕಿಸಿದ್ದಾರೆ. 'ವಿ ದಿ ಲೀಡರ್ಸ್' ರಾಜಕೀಯ ಚಳವಳಿಯ ಸಂಸ್ಥಾಪಕರೂ ಆಗಿರುವ ಅವರು, ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವರ್ಷಕ್ಕೊಮ್ಮೆ ಭಕ್ತರು ಶಾಂತಿಯುತವಾಗಿ ಬೆಟ್ಟಕ್ಕೆ ತೆರಳಿ ದೀಪ ಬೆಳಗುವುದರಿಂದ ಯಾರಿಗೆ ಏನು ತೊಂದರೆಯಾಗುತ್ತದೆ ಎಂದು ಪ್ರಶ್ನಿಸಿರುವ ಅವರು, ರಾಜಕೀಯ ಕಾರಣಗಳಿಗಾಗಿ ಧಾರ್ಮಿಕ ಸಂಪ್ರದಾಯವನ್ನು ತಡೆಯುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ನವೆಂಬರ್ 12ರಂದು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವ ತಮಿಳುನಾಡು ಸರ್ಕಾರ, ದೇವಾಲಯ ಮತ್ತು ಬೆಟ್ಟವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನಿಯಂತ್ರಣಕ್ಕೆ ನೀಡುವ ಹಾಗೂ ದೀಪತ್ತೂಣ್ನಲ್ಲಿ ನಿರಂತರವಾಗಿ ದೀಪ ಬೆಳಗಿಸುವ ಅರ್ಜಿಯನ್ನು ವಿರೋಧಿಸಿದೆ.

ಕಳೆದ 150 ವರ್ಷಗಳಿಂದ ಉಚ್ಚಿಪಿಳ್ಳೈಯಾರ್ ದೇವಾಲಯದ ಸಮೀಪದ ದೀಪ ಮಂಟಪದಲ್ಲೇ ದೀಪ ಬೆಳಗುವ ಸಂಪ್ರದಾಯವಿದೆ ಹಾಗೂ ಬೆಟ್ಟದ ಮೇಲೆ ದರ್ಗಾ ಕೂಡ ಇರುವುದರಿಂದ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಹೊಸ ಸ್ಥಳದಲ್ಲಿ ದೀಪ ಬೆಳಗಲು ಅನುಮತಿ ನೀಡುವುದು ಸೂಕ್ತವಲ್ಲ ಎಂದು ವಿಜಯ್ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ಈ ನಿಲುವು ಇದೀಗ ವಿಜಯ್ ಸರ್ಕಾರದ ವಿರುದ್ಧ ರಾಜಕೀಯ ಟೀಕೆಗೆ ಕಾರಣವಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ದೀಪತ್ತೂಣ್‌ನಲ್ಲಿ ದೀಪ ಬೆಳಗಿಸಲು ಅವಕಾಶ ನೀಡಬೇಕಿದ್ದರೂ ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ ಎಂಬುದು ಆರೋಪವಾಗಿದೆ.

ನವೆಂಬರ್ 24ರಂದು ಕಾರ್ತಿಕ ಮಹಾದೀಪ ನಡೆಯಲಿದ್ದು, ನವೆಂಬರ್ 17ರಂದು ಸುಪ್ರೀಂ ಕೋರ್ಟ್ನಲ್ಲಿ ಈ ಅರ್ಜಿಯ ವಿಚಾರಣೆ ನಡೆಯಲಿರುವುದು ತೀವ್ರ ಕುತೂಹಲ ಮೂಡಿಸಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟ್ರಂಪ್, ಮಸ್ಕ್ ಬೆಂಬಲವಿದ್ದರೂ Jensen Huangಗೆ ಶಾಕ್; 'ಕಮ್‌ಬ್ಯಾಕ್' ಕನಸಿಗೆ ಬ್ರೇಕ್, ಕಂಪನಿ ನಿಯಮಾವಳಿಗಳೇ ಮುಖ್ಯ ಎಂದ Nvidia..!

APP ಆಧಾರಿತ ಕ್ಯಾಬ್‌ ದರ ದಂಧೆಗೆ ಬ್ರೇಕ್: ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿದ ಸರ್ಕಾರ, ಇನ್ಮುಂದೆ ಮನಬಂದಂತೆ ದರ ವಸೂಲಿ ಮಾಡುವಂತಿಲ್ಲ..!

ದೇಶದ ಆರ್ಥಿಕತೆಗೆ ಬಲ: ನಿರುದ್ಯೋಗ ಪ್ರಮಾಣದಲ್ಲಿ ಇಳಿಕೆ; ಗ್ರಾಮೀಣ ಪ್ರದೇಶದಲ್ಲಿ ಶೇ.4.2, ನಗರದಲ್ಲಿ ಶೇ.6.7ಕ್ಕೆ ಕುಸಿತ..!

ಮೇಕೆದಾಟು ಯೋಜನೆ DPRಗೆ ಶೀಘ್ರ ಅನುಮೋದನೆ ನೀಡಿ: ಪ್ರಧಾನಿ ಮೋದಿಗೆ ದೇವೇಗೌಡ ಪತ್ರ

KPSC ನೇಮಕಾತಿ ಹಗರಣ: ಸಾಹುಕಾರ್ ₹4.17 ಕೋಟಿ, ಇತರರು ತಲಾ ₹1.5 ಕೋಟಿ ಅಕ್ರಮ ಗಳಿಕೆ; ED ತನಿಖೆಯಲ್ಲಿ ಸ್ಫೋಟಕ ಮಾಹಿತಿ..!