ಮಧುರೈ ತನಿಷ್ಕ್ ಚಿನ್ನಾಭರಣ ಅಂಗಡಿಯಲ್ಲಿ ದರೋಡೆ 
ದೇಶ

Tanishq ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆರೋಪಿ ಸುಳಿವು ಕೊಟ್ಟ tattoo, ಯೂಟ್ಯೂಬರ್ ಕೊನೆಗೂ ಅಂದರ್, ಪ್ರೇಯಸಿಯೂ ವಶಕ್ಕೆ!

ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ರೀಲ್ಸ್, ಟ್ರಾವೆಲ್ ವಿಡಿಯೋ ಹಾಗೂ ಸ್ಟಂಟ್‌ಗಳ ಮೂಲಕ ಗುರುತಿಸಿಕೊಂಡಿದ್ದ ಯುವಕನೊಬ್ಬ 21 ಕೋಟಿ ರೂ ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿ ಪೊಲೀಸರ..

ಮದುರೈ: ತನಿಷ್ಕ್ ಚಿನ್ನದ ಶೋರೂಂನಿಂದ ಸುಮಾರು ಬರೊಬ್ಬರಿ 21 ಕೋಟಿ ರೂ ಮೌಲ್ಯದ 11 ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕಳವು ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ದೊರೆತಿದ್ದು, ಆರೋಪಿ ಯೂಟ್ಯೂಬರ್ ಅನ್ನು ಪೊಲೀಸರು ಕೊನೆಗೂ ಜೈಲಿಗಟ್ಟಿದ್ದಾರೆ.

ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ರೀಲ್ಸ್, ಟ್ರಾವೆಲ್ ವಿಡಿಯೋ ಹಾಗೂ ಸ್ಟಂಟ್‌ಗಳ ಮೂಲಕ ಗುರುತಿಸಿಕೊಂಡಿದ್ದ ಯುವಕನೊಬ್ಬ 21 ಕೋಟಿ ರೂ ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ನವೆಂಬರ್ 12ರಂದು ಮದುರೈ ಬೈಪಾಸ್ ರಸ್ತೆಯಲ್ಲಿರುವ ತನಿಷ್ಕ್ ಚಿನ್ನದ ಶೋ ರೂಮಿನಲ್ಲಿ ಭಾರಿ ದರೋಡೆ ನಡೆದಿತ್ತು.

ಈ ಪ್ರಕರಣದ ಪ್ರಮುಖ ಆರೋಪಿ, ಯೂಟ್ಯೂಬರ್ ಎಸ್. ನಿಶಾಂತ್ (25)ನನ್ನು ನಾಲ್ಕು ದಿನಗಳ ಹುಡುಕಾಟದ ಬಳಿಕ ಧರ್ಮಪುರಿ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಮದುರೈನಲ್ಲಿ ನಡೆದ ತನಿಷ್ಕ್ ಜ್ಯುವೆಲ್ಲರಿ ಶೋರೂಂ ದರೋಡೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಆರೋಪಿಯ ಕೈ ಮೇಲಿದ್ದ ವಿಶಿಷ್ಟ ಟ್ಯಾಟೂ ಪ್ರಮುಖ ಸುಳಿವಾಗಿತ್ತು ಎನ್ನಲಾಗಿದೆ.

ಆರೋಪಿಯ ಸುಳಿವು ನೀಡಿದ ಕೈ ಮೇಲಿನ ಟ್ಯಾಟೂ

ಅಕ್ಟೋಬರ್ 15ರಂದು ಉದ್ಘಾಟನೆಯಾಗಿದ್ದ ತಾನಿಷ್ಕ್ ಶೋರೂಂನಲ್ಲಿ ಕೇವಲ 27 ದಿನಗಳಲ್ಲೇ ಕಳ್ಳತನ ನಡೆದಿತ್ತು. ನವೆಂಬರ್ 12ರಂದು ಬೆಳಗ್ಗೆ ಸುಮಾರು 9 ಗಂಟೆಗೆ ಸಿಬ್ಬಂದಿ ಕೆಲಸಕ್ಕೆ ಬಂದಾಗ ಮೊದಲ ಮಹಡಿಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಗೊತ್ತಾಗಿತ್ತು.

ಶೋರೂಂನಲ್ಲಿ ಬಲವಂತವಾಗಿ ಒಳನುಗ್ಗಿದ ಯಾವುದೇ ಗುರುತುಗಳು ಇರಲಿಲ್ಲ. ಹೀಗಾಗಿ ಆರಂಭದಲ್ಲಿ ಪೊಲೀಸರಿಗೆ ಕಳ್ಳತನದ ಸುಳಿವು ಪತ್ತೆಹಚ್ಚುವುದು ಸವಾಲಾಗಿತ್ತು.

ತನಿಖೆ ವೇಳೆ ಕಟ್ಟಡದ ಹಿಂಭಾಗದಲ್ಲಿದ್ದ ನಿರ್ಮಾಣ ಕಾಮಗಾರಿಯ ಸ್ಕ್ಯಾಫೋಲ್ಡಿಂಗ್ ಮೂಲಕ ಆರೋಪಿ ಒಳನುಗ್ಗಿರುವುದು ಗೊತ್ತಾಗಿದೆ. ಲಿಫ್ಟ್ ಕಾಮಗಾರಿಗೆ ಬಳಸುತ್ತಿದ್ದ ಹಗ್ಗದ ಸಹಾಯದಿಂದ ಕಟ್ಟಡ ಪ್ರವೇಶಿಸಿ, ಮಾಸ್ಕ್ ಮತ್ತು ಕೈಗವಸು ಧರಿಸಿ ಸುಮಾರು ಒಂದು ಗಂಟೆ ಕಾಲ ಆಭರಣಗಳನ್ನು ಕಲೆಹಾಕಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ದರೋಡೆಗೂ ಮುನ್ನ ನಿಶಾಂತ್ ಹಲವು ಬಾರಿ ಶೋರೂಂಗೆ ಭೇಟಿ ನೀಡಿದ್ದ. ನವೆಂಬರ್ 5ರಂದು ಕಟ್ಟಡದೊಳಗೆ ಪ್ರವೇಶಿಸಲು ಯತ್ನಿಸಿದ್ದ ಎನ್ನಲಾಗಿದೆ. ಶೋರೂಂ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು, ಎಐ ತಂತ್ರಜ್ಞಾನದ ಮೂಲಕ ದೃಶ್ಯಗಳನ್ನು ಹೋಲಿಕೆ ಮಾಡಿ ಆರೋಪಿಯ ಚಲನವಲನ ಪತ್ತೆಹಚ್ಚಿದ್ದಾರೆ.

ದರೋಡೆಗೆ ಬಳಸಿದ್ದ ದ್ವಿಚಕ್ರ ವಾಹನಕ್ಕೆ ನಂಬರ್ ಪ್ಲೇಟ್ ಇರಲಿಲ್ಲ. ಆದರೂ ರಸ್ತೆಗಳಲ್ಲಿ ಅಳವಡಿಸಿದ್ದ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ ಅದರ ಮಾರ್ಗವನ್ನು ಪತ್ತೆಹಚ್ಚಿದ್ದಾರೆ. ಆರೋಪಿಯ ಕೈ ಮೇಲಿದ್ದ ವಿಶಿಷ್ಟ ಟ್ಯಾಟೂ ಸೇರಿದಂತೆ ಇತರ ಸುಳಿವುಗಳು ನಿಶಾಂತ್‌ನ ಗುರುತು ಪತ್ತೆಹಚ್ಚಲು ನೆರವಾಗಿವೆ.

ತಂದೆ, ಪ್ರೇಯಸಿಯೂ ಬಂಧನ

ನಿಶಾಂತ್‌ನ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಆತನ ತಂದೆ, ಆಟೋ ಚಾಲಕ ಸುರೇಶ್‌ನನ್ನು ವಶಕ್ಕೆ ಪಡೆದಿದ್ದರು. ಸುಮಾರು 19 ಗಂಟೆಗಳ ವಿಚಾರಣೆ ವೇಳೆ, ಕಳ್ಳತನದ ಬಳಿಕ ಮಗನಿಗೆ ಸಹಾಯ ಮಾಡಿದ್ದಾಗಿ ಸುರೇಶ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ನಿಶಾಂತ್ ಬಳಸಿದ್ದ ಬಟ್ಟೆ ಹಾಗೂ ದರೋಡೆಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ಮದುರೈ ಸಮೀಪದ ಮದಕುಲಂನಲ್ಲಿರುವ ಕುಟುಂಬದ ಜಮೀನಿಗೆ ಕೊಂಡೊಯ್ದು ಸುಟ್ಟು ಹಾಕಲಾಗಿತ್ತು. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಹೀಗೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸ್ಥಳದಲ್ಲಿ ಶೋಧ ನಡೆಸಿದಾಗ ಸುಮಾರು ಆರು ಕೆಜಿ ಆಭರಣಗಳು ಪತ್ತೆಯಾಗಿದ್ದವು.

ಇದೇ ವೇಳೆ, ದರೋಡೆಗಾಗಿ ನಿಶಾಂತ್ ಹೊಸ ಮೊಬೈಲ್ ಸಂಖ್ಯೆಯನ್ನು ಬಳಸಿದ್ದ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಆ ಸಂಖ್ಯೆಯನ್ನು ಪತ್ತೆಹಚ್ಚಿದಾಗ ಆತನ ಪ್ರೇಯಸಿ, ಮದುರೈ ಮೂಲದ ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಇನ್‌ಫ್ಲುಯೆನ್ಸರ್ ಮೀನಾಕ್ಷಿ ನಾಚಿಯಾರ್ ಹೆಸರು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಣಕಾಸಿನ ಸಂಕಷ್ಟವೇ ದರೋಡೆಗೆ ಕಾರಣ?

ಕಾಲೇಜು ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟಿದ್ದ ನಿಶಾಂತ್, ಯೂಟ್ಯೂಬ್ ಚಾನೆಲ್‌ಗಳಿಗೆ ವಿಡಿಯೋ ಎಡಿಟಿಂಗ್ ಕೆಲಸ ಮಾಡುತ್ತಿದ್ದ. ದುಬಾರಿ ಬೈಕ್‌ನಲ್ಲಿ ಸ್ನೇಹಿತರೊಂದಿಗೆ ಕೇರಳ, ಕೊಡೈಕೆನಾಲ್ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ತೆರಳಿ ಸ್ಟಂಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ. ಕಾಲೇಜು ದಿನಗಳಲ್ಲೇ ಮೀನಾಕ್ಷಿ ಪರಿಚಯವಾಗಿದ್ದು, ಬಳಿಕ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಅಡುಗೆ, ಪ್ರವಾಸ ಮತ್ತು ಜೀವನಶೈಲಿಗೆ ಸಂಬಂಧಿಸಿದ ರೀಲ್ಸ್‌ಗಳನ್ನು ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿದ್ದರು.

ಮೀನಾಕ್ಷಿ ಹೊಸ ಮನೆಯ ನಿರ್ಮಾಣ ಮಾಡುತ್ತಿದ್ದು, ಸಾಲದ ಹೊರೆ ಹೆಚ್ಚಾಗಿತ್ತು. ಹಣಕಾಸಿನ ನೆರವಿಗಾಗಿ ಆಕೆ ನಿಶಾಂತ್‌ನನ್ನು ಸಂಪರ್ಕಿಸಿದ್ದಳು. ಈ ಹಣದ ಅಗತ್ಯವೇ ದರೋಡೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದರೋಡೆ ಯೋಜನೆ ಮತ್ತು ಕಳವಾದ ಆಭರಣಗಳನ್ನು ಅಡಗಿಸಿಡುವಲ್ಲಿ ಮೀನಾಕ್ಷಿ ಸಹಕರಿಸಿದ್ದಾಳೆ ಎಂಬ ಆರೋಪವೂ ಇದೆ. ನಿಶಾಂತ್ ಜನಪ್ರಿಯ ವೆಬ್ ಸರಣಿ 'ಮನಿ ಹೈಸ್ಟ್' ಶೈಲಿಯಲ್ಲಿ ದರೋಡೆ ನಡೆಸಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಗುಡ್ಡದಲ್ಲಿ ಹೂತಿಟ್ಟಿದ್ದ 6.2 ಕೆಜಿ ಚಿನ್ನಾಭರಣ ಪತ್ತೆ

ವಿಚಾರಣೆ ವೇಳೆ ಕಳವಾದ ಆಭರಣಗಳನ್ನು ಎಲ್ಲಿ ಅಡಗಿಸಿಟ್ಟಿದ್ದಾನೆ ಎಂಬ ಮಾಹಿತಿ ನಿಶಾಂತ್ ತನಗೆ ನೀಡಿದ್ದಾಗಿ ಮೀನಾಕ್ಷಿ ಪೊಲೀಸರಿಗೆ ತಿಳಿಸಿದ್ದಾಳೆ ಎನ್ನಲಾಗಿದೆ. ಆಕೆಯ ಮಾಹಿತಿ ಆಧರಿಸಿ ಮದುರೈ ಸಮೀಪದ ಮದಕುಲಂ ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಶೋಧ ನಡೆಸಿದ್ದರು. ಅಲ್ಲಿ ಗೋಣಿ ಚೀಲದಲ್ಲಿ ತುಂಬಿ ನೆಲದಡಿ ಹೂತಿಟ್ಟಿದ್ದ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದರು.

ಇದೀಗ ನಿಶಾಂತ್‌ನ ವಿಚಾರಣೆ ವೇಳೆ ದೊರೆತ ಮಾಹಿತಿಯ ಆಧಾರದ ಮೇಲೆ ಮದುರೈಯ ಮುನಿಯಾಂಡಿಪುರಂನ ಗೋಪಾಲಿಪುರಂ ಪ್ರದೇಶದ ಗುಡ್ಡವೊಂದರಲ್ಲಿ ಅಡಗಿಸಿಟ್ಟಿದ್ದ 6.2 ಕೆಜಿ ತೂಕದ ಚಿನ್ನಾಭರಣಗಳ ಮತ್ತೊಂದು ಕಂತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ಮೀನಾಕ್ಷಿಯಿಂದ 5.5 ಕೆಜಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು ಎಂದು ವರದಿಯಾಗಿದೆ.

ಬೆಂಗಳೂರು-ಸೇಲಂ ಬಸ್‌ನಲ್ಲಿ ಸಿಕ್ಕಿಬಿದ್ದ ಆರೋಪಿ

ಪ್ರಕರಣದ ಪ್ರಮುಖ ಆರೋಪಿಗಾಗಿ ವಿಶೇಷ ಪೊಲೀಸ್ ತಂಡಗಳು ಹುಡುಕಾಟ ನಡೆಸುತ್ತಿದ್ದವು. ಈ ನಡುವೆ ನಿಶಾಂತ್ ಬೆಂಗಳೂರು-ಸೇಲಂ ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ. ಸುದ್ದಿ ವರದಿಗಳಲ್ಲಿ ಪ್ರಕಟವಾಗಿದ್ದ ಆತನ ಫೋಟೋವನ್ನು ಗುರುತಿಸಿದ ಬಸ್ ಚಾಲಕ, ಪೊಲೀಸರಿಗೆ ರಹಸ್ಯವಾಗಿ ಮಾಹಿತಿ ನೀಡಿ ಬಸ್‌ನ ಲೈವ್ ಲೊಕೇಶನ್ ಹಂಚಿಕೊಂಡಿದ್ದ.

ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಧರ್ಮಪುರಿ ಜಿಲ್ಲೆಯ ಶೇಷಂಪಟ್ಟಿ ಬಳಿ ಬಸ್ ತಡೆದರು. ಪೊಲೀಸರನ್ನು ಕಂಡ ನಿಶಾಂತ್ ಕಿಟಕಿಯಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಆತನನ್ನು ಹಿಡಿದು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಇದುವರೆಗೆ ಸುಮಾರು 11 ಕೆಜಿ ಆಭರಣಗಳ ಪೈಕಿ 6 ಕೆಜಿಗೂ ಹೆಚ್ಚು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಸುಮಾರು ಐದು ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳು ಇನ್ನೂ ಪತ್ತೆಯಾಗಬೇಕಿವೆ. ದರೋಡೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ನ್ಯಾಯಾಂಗ ಬಂಧನ

ಮಂಗಳವಾರ ಮದುರೈ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಿಶಾಂತ್‌ನನ್ನು ಡಿಸೆಂಬರ್ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IPL ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ MS ಧೋನಿ: ಅವರ ಮುಂದಿನ ನಡೆ ಏನು?

ಮನಿಲಾದಲ್ಲಿ ಕ್ವಾಡ್ ಶೃಂಗಸಭೆ 2026: ಪ್ರಧಾನಿ ಮೋದಿ ಗ್ರೇಟ್ ಲೀಡರ್, 'ವೆರಿ ಟಫ್ ಮ್ಯಾನ್' ಎಂದ ಡೊನಾಲ್ಡ್ ಟ್ರಂಪ್!

ಮಂಗಳೂರು: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ; ನಳೀನ್ ಕುಮಾರ್ ಕಟೀಲು ಸೇರಿ 236 ಮಂದಿ ಸುರಕ್ಷಿತ!

ವಿಶ್ವಕ್ಕೆ ಶಾಂತಿ-ಸ್ಥಿರತೆ ಅಗತ್ಯ, ಪೈಪೋಟಿ ಬದಿಗಿಟ್ಟು ಸಹಕಾರದ ಹಾದಿಯಲ್ಲಿ ಸಾಗೋಣ: India-ASEAN ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

“ಹೌದು ನಾನು ದತ್ತುಪುತ್ರ, ಏನಿವಾಗ?”: ಸೋನಿಯಾ ಪುಸ್ತಕ ಓದ್ಕೊಂಡಿದ್ರೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾಹಿತಿ ಸಿಗಲ್ಲ; ಕಾಂಗ್ರೆಸ್ ನಾಯಕರಿಗೆ ಯದುವೀರ್ ತಿರುಗೇಟು!