ವಿಶಾಖಪಟ್ಟಣಂ: ನಾಲ್ಕು ರಾಜ್ಯಗಳ ತಿಕ್ಕಾಟಕ್ಕೆ ಕಾರಣವಾಗಿರುವ ನದಿ ನೀರು ಹಂಚಿಕೆ ವಿಚಾರವಾಗಿ ಇನ್ನು ಮುಂದೆ ಯಾವುದೇ ರೀತಿಯ ಗಲಾಟೆಗಳು ಇರುವುದಿಲ್ಲ ಎಂದು ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬುನಾಯ್ಡು ಹೇಳಿದ್ದಾರೆ.
ವಿಶಾಖಪಟ್ಟಣಂನಲ್ಲಿ ಎರಡು ದಿನಗಳ ಕಾಲ ನಡೆದ ಸಿಐಐ ಪಾಲುದಾರಿಕೆ ಸಮಾವೇಶದಲ್ಲಿ ದೇಶ-ವಿದೇಶಗಳ ಉದ್ಯಮಿಗಳು, ಹೂಡಿಕೆದಾರರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ಗೋದಾವರಿ ಮತ್ತು ಕಾವೇರಿ ನದಿಗಳನ್ನು ಜೋಡಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಮತ್ತೆ ವೇಗ ನೀಡುವುದಾಗಿ ಘೋಷಿಸಿದ್ದಾರೆ.
ಈ ಯೋಜನೆ ಜಾರಿಯಾದರೆ ನೀರಿನ ಲಭ್ಯತೆ ಹೆಚ್ಚಾಗಲಿದೆ, ಕೃಷಿ ಉತ್ಪಾದನೆ ದ್ವಿಗುಣಗೊಳ್ಳಲಿದೆ ಮತ್ತು ರಾಜ್ಯಗಳ ನಡುವಿನ ನೀರಿನ ಹಂಚಿಕೆ ವಿವಾದಗಳು ಕೊನೆಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ. ಅಕ್ಟೋಬರ್ 2026ರ ಮಧ್ಯಭಾಗದಲ್ಲಿ ಚಂದ್ರಬಾಬು ನಾಯ್ಡು ಅವರು ತಮಿಳುನಾಡು ಸಿಎಂ ದಳಪತಿ ವಿಜಯ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಪ್ರವಾಹ ನಿಯಂತ್ರಣ, ಬರಗಾಲ ತಡೆಗಟ್ಟುವುದು ಮತ್ತು ಚೆನ್ನೈಗೆ ಕುಡಿಯುವ ನೀರು ಒದಗಿಸುವ ಬಗ್ಗೆ ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ. 2027ರ ಮಾರ್ಚ್ ಒಳಗೆ ಪೋಲಾವರಂ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿರುವುದಾಗಿ ನಾಯ್ಡು ತಿಳಿಸಿದ್ದಾರೆ.
4 ರಾಜ್ಯ, ಐದು ನದಿಗಳು
ಕಾವೇರಿ ನದಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು, ಅಂತೆಯೇ ಗೋದಾವರಿ-ಕೃಷ್ಣ ನದಿ ನೀರಿಗಾಗಿ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ತಿಕ್ಕಾಟ ನಡೆಸಿಕೊಂಡು ಬರುತ್ತಿವೆ. ನದಿ ನೀರು ವಿಚಾರ ಬಂತೆಂದರೆ ಎಲ್ಲ ಸಿನಿ ನಟ-ನಟಿಯರು ಬೀದಿಗಿಳಿದು ಹೋರಾಡುವುದನ್ನು ನಾವು ನೋಡಿದ್ದೇವೆ. ಆದರೆ ನಾವೆಲ್ಲರೂ ಭಾರತೀಯರು. ನಮ್ಮ ನಮ್ಮಲ್ಲೇ ಜಗಳ ಇರಬಾರದು.
ಶಾಂತಿಯುತವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಂಧ್ರ ಪ್ರದೇಶ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ. ಈ ಬಗ್ಗೆ ಪ್ರಧಾನಿ ಮೋದಿ ಕೂಡ ಸಕಾರಾತ್ಮಕರಾಗಿದ್ದಾರೆ. ಶೀಘ್ರದಲ್ಲೇ ಗೋದಾವರಿ-ಕಾವೇರಿ ನದಿ ಜೋಡಣೆ ಕುರಿತು ಒಳ್ಳೇ ಸುದ್ದಿ ನೀಡಲಿದ್ದಾರೆ ಎಂದರು.
ತೆಲಂಗಾಣ ತಗಾದೆ
ಇನ್ನು ಪೋಲವರಂ ಯೋಜನೆಯಲ್ಲಿ ನೀರನ್ನು ಎಲ್ಲಿಂದ ತಿರುಗಿಸಬೇಕು ಎಂಬ ಬಗ್ಗೆ ವಿವಾದ ಶುರುವಾಗಿದೆ. ಪೋಲಾವರಂ ಮೂಲಕ ನೀರು ಹರಿಸುವ ಪ್ರಸ್ತಾವನೆಗೆ ತೆಲಂಗಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಇದರಿಂದ ತಮ್ಮ ರಾಜ್ಯದ ನೀರಾವರಿ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂದು ಬಿಆರ್‌ಎಸ್ ನಾಯಕ ಹರೀಶ್ ರಾವ್ ಆರೋಪಿಸಿದ್ದಾರೆ.
ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು (NWDA) ಇಂಚಂಪಲ್ಲಿಯಿಂದ (ಗೋದಾವರಿ) ಕೃಷ್ಣಾ ಮತ್ತು ಪೆನ್ನಾರ್ ನದಿಗಳ ಮೂಲಕ ಕಾವೇರಿ ಕಣಿವೆಗೆ ನೀರು ಹರಿಸುವ ಯೋಜನೆಯನ್ನು ಮುಂದುವರಿಸಿದೆ. ಆದರೂ, ಎಲ್ಲಾ ರಾಜ್ಯಗಳ ಒಮ್ಮತ, ನೀರಿನ ಹಂಚಿಕೆ ನಿಯಮಗಳು ಮತ್ತು ವೆಚ್ಚದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ.
303 ಒಪ್ಪಂದಗಳಿಗೆ ಸಹಿ
ಆಂಧ್ರಪ್ರದೇಶದಲ್ಲಿ ಬೃಹತ್ ಪ್ರಮಾಣದ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ನಡೆದ ಸಿಐಐ ಪಾಲುದಾರಿಕೆ ಸಮಾವೇಶದಲ್ಲಿ ಒಟ್ಟು 303 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಒಪ್ಪಂದಗಳ ಮೂಲಕ ಸುಮಾರು ₹9.89 ಲಕ್ಷ ಕೋಟಿ ಹೂಡಿಕೆ ಹರಿದುಬರುವ ನಿರೀಕ್ಷೆಯಿದ್ದು, 3,48,309 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆಯಿದೆ.
ಸಮಾವೇಶದ ಎರಡು ದಿನಗಳಲ್ಲಿ ಒಟ್ಟು 109 ತಿಳಿವಳಿಕೆ ಒಪ್ಪಂದಗಳಿಗೆ (ಎಂಒಯು) ಸಹಿ ಹಾಕಲಾಗಿದ್ದು, ₹9,02,434 ಕೋಟಿ ಹೂಡಿಕೆ ಪ್ರಸ್ತಾವನೆಗಳು ಬಂದಿವೆ. ಇದರಿಂದ 2,00,358 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಇದರ ಜೊತೆಗೆ ಪ್ರಾದೇಶಿಕ ಸಮ್ಮೇಳನಗಳಲ್ಲಿನ ಒಪ್ಪಂದಗಳನ್ನೂ ಸೇರಿಸಿದರೆ ಒಟ್ಟು 303 ಎಂಒಯುಗಳಿಗೆ ಸಹಿ ಹಾಕಲಾಗಿದೆ. ಇವುಗಳ ಒಟ್ಟು ಹೂಡಿಕೆ ಮೌಲ್ಯ ಸುಮಾರು ₹9.89 ಲಕ್ಷ ಕೋಟಿ ಆಗಿದ್ದು, 3,48,309 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿವೆ.
ಸಮಾವೇಶದಲ್ಲಿ ಭಾಗವಹಿಸಿದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಕೇಂದ್ರ ಸಚಿವರಿಗೆ ಆಂಧ್ರಪ್ರದೇಶದ ಪರವಾಗಿ ಧನ್ಯವಾದ ಸಲ್ಲಿಸಲಾಗಿದೆ. ಸಮಾವೇಶ ಯಶಸ್ವಿಯಾಗಲು ಸಹಕರಿಸಿದ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ), ಉದ್ಯಮ ಪ್ರತಿನಿಧಿಗಳು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ವಿಶಾಖಪಟ್ಟಣಂ ಜನರಿಗೂ ಕೃತಜ್ಞತೆ ಸಲ್ಲಿಸಲಾಗಿದೆ. ಈಗ ಒಪ್ಪಂದಗಳನ್ನು ಕಾರ್ಯರೂಪಕ್ಕೆ ತಂದು, ಆಂಧ್ರಪ್ರದೇಶದ ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದೇ ಸರ್ಕಾರದ ಮುಂದಿನ ಆದ್ಯತೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.