ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೊಡ್ಡ ಹೈಡ್ರಾಮಾ ನಡೆದಿದ್ದು, ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರು ಯಲಹಂಕದಲ್ಲಿರುವ ಕುಟುಂಬದ ಅರಮನೆಗೆ ಭೇಟಿ ನೀಡಲು ಬಂದಿದ್ದ ವೇಳೆ ಪೊಲೀಸರು ತಡೆದಿದ್ದಾರೆ.
ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಅರಮನೆಗೆ ತೆರಳದಂತೆ ಪೊಲೀಸರು ಸೂಚಿಸಿದ್ದಾರೆ. ಭಾನುವಾರ ಸಂಜೆ ಬೆಂಗಳೂರು ವಿಮಾನ ನಿಲ್ದಾಣದ ಬಳಿ ನಡೆದ ಈ ಘಟನೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದ್ದು, ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶರ್ಮಿಳಾ ಅವರು ತಮ್ಮ ತಾಯಿ ವೈಎಸ್ ವಿಜಯಮ್ಮ, ಮಗ ರಾಜಾ ರೆಡ್ಡಿ ಹಾಗೂ ಸೊಸೆ ಪ್ರಿಯಾ ಅಟ್ಲೂರಿ ಅವರೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ಯಲಹಂಕದ ಅರಮನೆಗೆ ತೆರಳಲು ಸಿದ್ಧರಾಗುತ್ತಿದ್ದಂತೆ ಪೊಲೀಸರು ಅವರ ವಾಹನಗಳನ್ನು ತಡೆದಿದ್ದಾರೆ.
ಏರ್ ಫೋರ್ಸ್ ಕ್ರಾಸ್ ಬಳಿ ಶರ್ಮಿಳಾ ಅವರ ವಾಹನಗಳನ್ನು ತಡೆದ ಪೊಲೀಸರು, ಯಲಹಂಕದ ಕಡೆಗೆ ಹೋಗುವ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಲಿಲ್ಲ. ಬದಲಾಗಿ ಅವರ ವಾಹನಗಳನ್ನು ಬೆಂಗಳೂರು ನಗರದತ್ತ ತಿರುಗಿಸಿದರು.
ಈ ವೇಳೆ ಪೊಲೀಸರೊಂದಿಗೆ ಶರ್ಮಿಳಾ ವಾಗ್ವಾದ ನಡೆಸಿದ್ದಾರೆ. 'ನನ್ನ ಸ್ವಂತ ಮನೆಗೆ ಹೋಗುವುದರಲ್ಲಿ ತಪ್ಪೇನಿದೆ? ನನ್ನನ್ನು ಏಕೆ ತಡೆಯುತ್ತಿದ್ದೀರಿ?' ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಆದರೆ, ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಕೊನೆಗೆ ಶರ್ಮಿಳಾ ನಗರದ ಖಾಸಗಿ ಹೋಟೆಲ್‌ಗೆ ತೆರಳಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
ಮಗಳ ಮದುವೆ ವಿಚಾರವಾಗಿ ಜಗನ್-ಶರ್ಮಿಳಾ ನಡುವೆ ಪ್ಯಾಲೆಸ್ ವಿವಾದ
ಯಲಹಂಕದ ಕುಟುಂಬದ ಅರಮನೆ ಇದೀಗ ವೈಎಸ್ ಶರ್ಮಿಳಾ ಮತ್ತು ಅವರ ಸಹೋದರ, ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ನಡುವಿನ ಕೌಟುಂಬಿಕ ವಿವಾದದ ಕೇಂದ್ರವಾಗಿದೆ.
ಶರ್ಮಿಳಾ ಅವರ ಪುತ್ರಿ ವೈಎಸ್ ಅಂಜಲಿ ರೆಡ್ಡಿ ಹಾಗೂ ಎನ್‌ಆರ್‌ಐ ವೈದ್ಯ ಸೋಮಲ ರಘುರಾಮಿ ರೆಡ್ಡಿ ಅವರ ವಿವಾಹವನ್ನು ನವೆಂಬರ್ 25ರಂದು ಇದೇ ಅರಮನೆಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಈ ಬಗ್ಗೆ ಜಗನ್ ಆಕ್ಷೇಪ ವ್ಯಕ್ತಪಡಿಸಿದ್ದರು.
ಅಕ್ಟೋಬರ್ 9ರಂದು ಶರ್ಮಿಳಾ ಅವರಿಗೆ ಪತ್ರ ಬರೆದಿದ್ದ ಜಗನ್, ಅರಮನೆಯಲ್ಲಿ ಅದ್ಧೂರಿ ಮದುವೆ ಆಯೋಜಿಸಿದರೆ ಅತಿಥಿಗಳು, ಅಡುಗೆ ಸಿಬ್ಬಂದಿ, ಅಲಂಕಾರಕಾರರು, ಛಾಯಾಗ್ರಾಹಕರು ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್ ತಂಡಗಳ ಸಂಚಾರ ಹೆಚ್ಚಾಗಲಿದೆ. ಇದರಿಂದ ವಸತಿ ಪ್ರದೇಶಕ್ಕೆ ತೊಂದರೆಯಾಗಬಹುದು ಎಂದು ತಿಳಿಸಿದ್ದರು.
ಸಹೋದರನೊಂದಿಗೆ ಅನಗತ್ಯ ಸಂಘರ್ಷ ಬೇಡ ಎಂಬ ಕಾರಣಕ್ಕೆ ಮದುವೆಯ ಸ್ಥಳವನ್ನು ಬೇರೆಡೆಗೆ ಬದಲಾಯಿಸುವುದಾಗಿ ಶರ್ಮಿಳಾ ಘೋಷಿಸಿದ್ದರು.
ಅರಮನೆ ಪ್ರವೇಶಕ್ಕೆ ಕೋರ್ಟ್ ನಿರ್ಬಂಧ
ಆದರೆ, ಮದುವೆಗೆ ಸಂಬಂಧಿಸಿದ ಸಿದ್ಧತೆಗಳಿಗಾಗಿ ಭಾನುವಾರ ಕುಟುಂಬ ಸಮೇತ ಅರಮನೆಗೆ ಭೇಟಿ ನೀಡಲು ಶರ್ಮಿಳಾ ನಿರ್ಧರಿಸಿದ್ದರು. ಇದನ್ನು ತಡೆಯಲು ಜಗನ್ ಅವರ ಪತ್ನಿ ನಿರ್ದೇಶಕರಾಗಿರುವ ಸಿಲಿಕಾನ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ದೇವನಹಳ್ಳಿ ನ್ಯಾಯಾಲಯದ ಮೊರೆ ಹೋಗಿತ್ತು.
2007ರ ಮಾರ್ಚ್ 1ರಂದು ಜಗನ್ ಅವರ ಅತ್ತೆ ಇ.ಸಿ. ಸುಗುಣಮ್ಮ ಅವರಿಂದ ಈ ಅರಮನೆಯನ್ನು ಗುತ್ತಿಗೆಗೆ ಪಡೆದುಕೊಂಡಿರುವುದಾಗಿ ಕಂಪನಿ ನ್ಯಾಯಾಲಯಕ್ಕೆ ತಿಳಿಸಿದೆ. ಬಳಿಕ 2026ರ ಆಗಸ್ಟ್ 27ರಂದು ಸುಗುಣಮ್ಮ ಅವರ ಪುತ್ರಿ ವೈಎಸ್ ಭಾರತಿ ರೆಡ್ಡಿ ಹಾಗೂ ಮೊಮ್ಮಕ್ಕಳ ಹೆಸರಿಗೆ ಆಸ್ತಿ ಉಡುಗೊರೆ ಪತ್ರಗಳನ್ನು ನೋಂದಾಯಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಅರಮನೆ ಆವರಣದ ಅತಿಥಿಗೃಹದಲ್ಲಿ ತಾತ್ಕಾಲಿಕವಾಗಿ ಉಳಿಯಲು ಶರ್ಮಿಳಾ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ, ಅಲಂಕಾರದ ಕೆಲಸದ ನೆಪದಲ್ಲಿ ಇತರರನ್ನು ಕಳುಹಿಸಿ ಆಸ್ತಿಯ ಸ್ವಾಧೀನಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಂಪನಿ ಆರೋಪಿಸಿತ್ತು.
ಅರಮನೆಯ ಗೋಡೆಗಳು, ಗಡಿ ಬೇಲಿ, ಮರಗಳು, ಕಟ್ಟಡಗಳು ಸೇರಿದಂತೆ ಆಸ್ತಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿ ನ್ಯಾಯಾಲಯದ ರಕ್ಷಣೆ ಕೋರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ದೇವನಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಶನಿವಾರ ಶರ್ಮಿಳಾ ಮತ್ತು ಅವರ ಪ್ರತಿನಿಧಿಗಳು ಯಲಹಂಕ ಅರಮನೆಗೆ ಪ್ರವೇಶಿಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಅಲ್ಲದೆ, ಆಸ್ತಿಯ ಸ್ವಾಧೀನಕ್ಕೆ ಅಡ್ಡಿಪಡಿಸಬಾರದು ಅಥವಾ ಯಾವುದೇ ರೀತಿಯಲ್ಲಿ ಮಧ್ಯಪ್ರವೇಶಿಸಬಾರದು ಎಂದು ಸೂಚಿಸಿದೆ. ಈ ತಡೆಯಾಜ್ಞೆ ಡಿಸೆಂಬರ್ 19, 2026ರವರೆಗೆ ಜಾರಿಯಲ್ಲಿರಲಿದೆ. ಅಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.