ಸಂಗ್ರಹ ಚಿತ್ರ 
ದೇಶ

90ಕ್ಕೂ ಹೆಚ್ಚು ಗುಣಮಟ್ಟದ ಪರೀಕ್ಷೆ ನಡೆಸುತ್ತೇವೆ; ‘Bromate ನಿಗದಿತ ಮಿತಿಯಲ್ಲಿದೆ, ನಮ್ಮ ಕುಡಿಯುವ ನೀರು ಸುರಕ್ಷಿತ’: FSSAI ಕ್ರಮದ ಬೆನ್ನಲ್ಲೇ Bisleri ಸ್ಪಷ್ಟನೆ..!

ಈ ಪ್ರಕರಣ ಸುಮಾರು 14 ತಿಂಗಳ ಹಿಂದಿನದು. 2025ರ ಸೆಪ್ಟೆಂಬರ್‌ನಲ್ಲಿ ಗೋವಾದಲ್ಲಿರುವ ಬಿಸ್ಲೆರಿಯ ಉತ್ಪಾದನಾ ಘಟಕದಲ್ಲಿ ತಯಾರಾದ ಒಂದು ಬ್ಯಾಚ್‌ಗೆ ಸಂಬಂಧಿಸಿದಂತೆ ಈ ವಿವಾದ ಉಂಟಾಗಿದೆ. ಕಂಪನಿಯ ಜಾಲದಲ್ಲಿ ಒಟ್ಟು 143 ಉತ್ಪಾದನಾ ಘಟಕಗಳಿವೆ.

ನವದೆಹಲಿ: ಬಿಸ್ಲೆರಿ ಇಂಟರ್‌ನ್ಯಾಷನಲ್ ವಿರುದ್ಧ ವಿಚಾರಣೆಗೆ ಅನುಮತಿ ನೀಡಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಕ್ರಮದ ಬೆನ್ನಲ್ಲೇ, ತನ್ನ ಪ್ಯಾಕೇಜ್ಡ್ ಕುಡಿಯುವ ನೀರು ಸೇವನೆಗೆ ಸುರಕ್ಷಿತವಾಗಿದೆ ಎಂದು ಕಂಪನಿ ಸೋಮವಾರ ಸ್ಪಷ್ಟಪಡಿಸಿದೆ. ಅಲ್ಲದೆ, ಈ ವಿಚಾರವನ್ನು ಬಗೆಹರಿಸಲು ಆಹಾರ ನಿಯಂತ್ರಣ ಪ್ರಾಧಿಕಾರದೊಂದಿಗೆ ಸಹಕರಿಸುವುದಾಗಿ ತಿಳಿಸಿದೆ.

ಬಿಸ್ಲೆರಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿ 'ಅಸುರಕ್ಷಿತ' ಎಂದು ಪತ್ತೆಯಾದ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ವಿಚಾರಣೆ ನಡೆಸಲು ಅನುಮತಿ ನೀಡಿರುವುದಾಗಿ ಎಫ್‌ಎಸ್‌ಎಸ್‌ಎಐ ಭಾನುವಾರ ತಿಳಿಸಿತ್ತು. ಇದರ ಬೆನ್ನಲ್ಲೇ ಬಿಸ್ಲೆರಿ ಈ ಸ್ಪಷ್ಟನೆ ನೀಡಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಿಸ್ಲೆರಿ ಇಂಟರ್‌ನ್ಯಾಷನಲ್, ಎಫ್‌ಎಸ್‌ಎಸ್‌ಎಐನಿಂದ ತನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಹೇಳಿದೆ. ಅಲ್ಲದೆ, ಉಲ್ಲೇಖಿತ ಮಾದರಿಯಲ್ಲಿ ಬ್ರೋಮೇಟ್ ಅಂಶ ನಿಗದಿತ ಮಿತಿಯೊಳಗೆ ಇದೆ ಎಂದು ಮರುಪರಿಶೀಲನಾ ಪ್ರಯೋಗಾಲಯ ವರದಿ ನೀಡಿದೆ ಎಂದು ತಿಳಿಸಿದೆ.

ಕಂಪನಿಯ ಪ್ರಕಾರ, ಈ ಪ್ರಕರಣ ಸುಮಾರು 14 ತಿಂಗಳ ಹಿಂದಿನದು. 2025ರ ಸೆಪ್ಟೆಂಬರ್‌ನಲ್ಲಿ ಗೋವಾದಲ್ಲಿರುವ ಬಿಸ್ಲೆರಿಯ ಉತ್ಪಾದನಾ ಘಟಕದಲ್ಲಿ ತಯಾರಾದ ಒಂದು ಬ್ಯಾಚ್‌ಗೆ ಸಂಬಂಧಿಸಿದಂತೆ ಈ ವಿವಾದ ಉಂಟಾಗಿದೆ. ಕಂಪನಿಯ ಜಾಲದಲ್ಲಿ ಒಟ್ಟು 143 ಉತ್ಪಾದನಾ ಘಟಕಗಳಿವೆ.

2025ರ ಸೆಪ್ಟೆಂಬರ್ 30ರಂದು ಎಫ್‌ಎಸ್‌ಎಸ್‌ಎಐ ಗೋವಾ ಘಟಕದಿಂದ ಆರು ಮಾದರಿಗಳನ್ನು ಸಂಗ್ರಹಿಸಿತ್ತು. ಆರಂಭಿಕ ಪರೀಕ್ಷೆಯಲ್ಲಿ ಐದು ಮಾದರಿಗಳು ಅನ್ವಯವಾಗುವ ಎಲ್ಲ ಮಾನದಂಡಗಳನ್ನು ಪೂರೈಸಿದ್ದವು. ಆದರೆ, ಆರನೇ ಮಾದರಿಯಲ್ಲಿ ಪ್ರತಿ ಲೀಟರ್‌ಗೆ 12 ಮೈಕ್ರೋಗ್ರಾಂ ಬ್ರೋಮೇಟ್ ಪತ್ತೆಯಾಗಿತ್ತು. ನಿಗದಿತ ಮಿತಿ ಪ್ರತಿ ಲೀಟರ್‌ಗೆ 10 ಮೈಕ್ರೋಗ್ರಾಂ ಆಗಿದೆ ಎಂದು ಕಂಪನಿ ವಿವರಿಸಿದೆ.

ಇದನ್ನು ಪ್ರಶ್ನಿಸಿ ಬಿಸ್ಲೆರಿ 2025ರ ನವೆಂಬರ್ 22ರಂದು ಮೇಲ್ಮನವಿ ಸಲ್ಲಿಸಿತ್ತು. ಬಳಿಕ ಎಫ್‌ಎಸ್‌ಎಸ್‌ಎಐ ಆ ಮಾದರಿಯನ್ನು ಮರುಪರಿಶೀಲನೆಗಾಗಿ ಉಲ್ಲೇಖಿತ ಪ್ರಯೋಗಾಲಯಕ್ಕೆ ಕಳುಹಿಸಿತ್ತು.

ಮರುಪರಿಶೀಲನಾ ಪ್ರಯೋಗಾಲಯದ ಪರೀಕ್ಷೆಯಲ್ಲಿ ಮಾದರಿಯಲ್ಲಿನ ಬ್ರೋಮೇಟ್ ಅಂಶ ನಿಗದಿತ ಮಿತಿಯೊಳಗೆ ಇರುವುದು ಪತ್ತೆಯಾಗಿದೆ. ಆದರೆ, ಅದೇ ಮಾದರಿಯಲ್ಲಿ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳ (ಪಿಎಎಚ್‌) ಅಂಶ ಇರುವುದನ್ನೂ ಪ್ರಯೋಗಾಲಯ ಪ್ರತ್ಯೇಕವಾಗಿ ಉಲ್ಲೇಖಿಸಿದೆ' ಎಂದು ಬಿಸ್ಲೆರಿ ತಿಳಿಸಿದೆ.

ಎರಡೂ ಪರೀಕ್ಷೆಗಳ ಫಲಿತಾಂಶಗಳಲ್ಲಿನ ವ್ಯತ್ಯಾಸದಿಂದಾಗಿ ಹಲವು ಪ್ರಶ್ನೆಗಳು ಉದ್ಭವಿಸಿದವು. ನಂತರ ಬಿಸ್ಲೆರಿ, ಎಫ್‌ಎಸ್‌ಎಸ್‌ಎಐನಿಂದ ಅನುಮೋದನೆ ಪಡೆದ ಪ್ರಯೋಗಾಲಯವೊಂದರಲ್ಲಿ ಸ್ವತಂತ್ರವಾಗಿ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿತು. ಈ ಪರೀಕ್ಷೆಯಲ್ಲೂ ಬ್ರೋಮೇಟ್ ಅಂಶ ನಿಗದಿತ ಮಿತಿಯೊಳಗೆ ಇರುವುದು ದೃಢಪಟ್ಟಿದೆ ಎಂದು ಕಂಪನಿ ತಿಳಿಸಿದೆ.

2026ರ ಫೆಬ್ರವರಿ 2ರಂದು ಅಧಿಕೃತ ಪತ್ರದೊಂದಿಗೆ ಸ್ವತಂತ್ರ ಪರೀಕ್ಷೆಯ ವರದಿಯನ್ನು ಎಫ್‌ಎಸ್‌ಎಸ್‌ಎಐನ ಪಶ್ಚಿಮ ವಲಯದ ಕಚೇರಿಗೆ ಸಲ್ಲಿಸಿದ್ದಾಗಿ ಬಿಸ್ಲೆರಿ ಹೇಳಿದೆ.

'ವರದಿ ಸಲ್ಲಿಸಿದ ಬಳಿಕ ಎಫ್‌ಎಸ್‌ಎಸ್‌ಎಐನಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಪ್ರಕರಣ ಇತ್ಯರ್ಥವಾಗಿದೆ ಎಂದು ಭಾವಿಸಿದ್ದೆವು' ಎಂದು ಕಂಪನಿ ತಿಳಿಸಿದೆ.

ಇದುವರೆಗೆ ಇ-ಮೇಲ್ ಅಥವಾ ಭೌತಿಕ ರೂಪದಲ್ಲಿ ಯಾವುದೇ ನೋಟಿಸ್ ಸ್ವೀಕರಿಸಿಲ್ಲ. ಅಲ್ಲದೆ, ಎಫ್‌ಎಸ್‌ಎಸ್‌ಎಐ ವೆಬ್‌ಸೈಟ್‌ನಲ್ಲಿಯೂ ವರದಿಯಾಗಿರುವ ನೋಟಿಸ್ ಪತ್ತೆಯಾಗಿಲ್ಲ ಎಂದು ಬಿಸ್ಲೆರಿ ಹೇಳಿದೆ.

'ಕುಡಿಯುವ ನೀರಿನ ಸುರಕ್ಷತೆ ಬಿಸ್ಲೆರಿಗೆ ಅತ್ಯಂತ ಆದ್ಯತೆಯ ವಿಷಯವಾಗಿದೆ. ನಮ್ಮ ಉತ್ಪಾದನಾ ಪ್ರಕ್ರಿಯೆಯ 10 ಹಂತಗಳಲ್ಲಿ 90ಕ್ಕೂ ಹೆಚ್ಚು ಕಠಿಣ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತದೆ' ಎಂದು ಕಂಪನಿ ಹೇಳಿದೆ. ಅಲ್ಲದೆ, ಸೂಕ್ತ ನಿಯಂತ್ರಣ ಪ್ರಕ್ರಿಯೆಯ ಮೂಲಕ ಈ ವಿಚಾರವನ್ನು ಬಗೆಹರಿಸಲು ಎಫ್‌ಎಸ್‌ಎಸ್‌ಎಐನೊಂದಿಗೆ ನಿರಂತರವಾಗಿ ಸಹಕರಿಸುವುದಾಗಿಯೂ ಕಂಪನಿ ಭರವಸೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬದಲಾಗುತ್ತಿರುವ ಭಾರತದ ಆರ್ಥಿಕ ಪಯಣಕ್ಕೆ ಹೊಸ ಕನ್ನಡಿ; ವಾಣಿಜ್ಯ ಪತ್ರಿಕೋದ್ಯಮಕ್ಕೆ The New Indian Express ಹೊಸ ಕೊಡುಗೆ, 'The Financial Standard' ಲೋಕಾರ್ಪಣೆ

'ಬರೀ ಮಾತು ಸಾಕು, ಒಪ್ಪಂದಕ್ಕೆ ಬನ್ನಿ; ಸವಾಲು ಹಾಕಿದರೆ ಸಮುದ್ರದ ತಳ ಸೇರುತ್ತೀರಿ': ಇರಾನ್ ಸಂಧಾನಕಾರರಿಗೆ ಟ್ರಂಪ್ ಎಚ್ಚರಿಕೆ, ಮಾತುಕತೆ ವಿಫಲವಾದರೆ ಮತ್ತೆ ದಾಳಿ..!

ಅಮೆರಿಕದಲ್ಲಿ ಬಂದೂಕು ಧಾರಿಗಳಿಂದ 2 ಪ್ರತ್ಯೇಕ ಗುಂಡಿನ ದಾಳಿ: ಓಹಿಯೋದಲ್ಲಿ ಮೂವರು ಬಲಿ, ಕ್ಯಾಲಿಫೋರ್ನಿಯಾದಲ್ಲಿ 9 ಜನರಿಗೆ ಗಾಯ..!

Asia Cup Rising Stars 2026: ಡಕೌಟ್ ಆದ ಹರ್ಷಿತ್ ರಾಣಾ ಕೆಣಕಿದ ಪಾಕ್ ಬೌಲರ್, ಮೈದಾನದಲ್ಲಿ ಮಾತಿನ ಚಕಮಕಿ, Video

ಶೂ, ಸಾಕ್ಸ್ ವಿತರಣೆ ವಿಳಂಬ: ಮನವಿ ಸಲ್ಲಿಸಲು ಬಂದವರ ಮೇಲೆ ಸಿಡಿಮಿಡಿ; ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ..!