ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯ ಶಕ್ತಿ?: CM ವಿಜಯ್ ಕೋಟೆಗೆ ಧನುಷ್ ಲಗ್ಗೆ? 234 ಕ್ಷೇತ್ರಗಳಲ್ಲೂ ಸ್ಥಳೀಯ ಸಂಸ್ಥೆ ಚುನಾವಣೆ ಮೂಲಕ 'ರಂಗಪ್ರವೇಶ'!

ತಮ್ಮ ಅಭಿಮಾನಿ ಬಳಗವನ್ನು ರಾಜ್ಯವ್ಯಾಪಿ ಅಸ್ತಿತ್ವವಿರುವ ಒಂದು ಸುಸಂಘಟಿತ ಸಂಸ್ಥೆಯನ್ನಾಗಿ ಪರಿವರ್ತಿಸುವ ಪ್ರಯತ್ನದ ಭಾಗವಾಗಿ ಈ ವಿಸ್ತರಣೆಯನ್ನು ಕೈಗೊಳ್ಳಲಾಗುತ್ತಿದೆ.

ಧನುಷ್
Shilpa D
Updated On : 24 Nov 2026, 10:07 am

ಚೆನ್ನೈ: ನಟ ಧನುಷ್ ಅವರು ತಮ್ಮ 'ನರ್ಪಣಿ ಇಯಕ್ಕಂ' (ಕಲ್ಯಾಣ ಸಂಘಟನೆ) ಅನ್ನು ರಾಜ್ಯದ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಿಸುತ್ತಿದ್ದಾರೆ. ಪ್ರಸ್ತುತ 58 ಸಾಂಸ್ಥಿಕ ಜಿಲ್ಲೆಗಳಲ್ಲಿ ಘಟಕಗಳನ್ನು ಹೊಂದಿರುವ ಈ ಸಂಘಟನೆಯು, ಮುಂದಿನ ಹಂತದಲ್ಲಿ ರಾಜ್ಯದ ಎಲ್ಲಾ 38 ಕಂದಾಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ತನ್ನ ಘಟಕಗಳ ಸಂಖ್ಯೆಯನ್ನು 100ಕ್ಕೂ ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ.

ಧನುಷ್ ಅವರ 'ನರ್ಪಣಿ ಇಯಕ್ಕಂ'ನ ಪದಾಧಿಕಾರಿಗಳು 'ಟಿಎನ್‌ಐಇ' (TNIE) ಗೆ ತಿಳಿಸಿರುವಂತೆ, ಸಂಘಟನೆಯ ತಳಮಟ್ಟದಲ್ಲಿ ಸಾಂಸ್ಥಿಕವಾಗಿ ಬಲಪಡಿಸುವಂತೆ ನಟ ಧನುಷ್ ಸೂಚನೆ ನೀಡಿದ್ದಾರೆ. ತಮ್ಮ ಅಭಿಮಾನಿ ಬಳಗವನ್ನು ರಾಜ್ಯವ್ಯಾಪಿ ಅಸ್ತಿತ್ವವಿರುವ ಒಂದು ಸುಸಂಘಟಿತ ಸಂಸ್ಥೆಯನ್ನಾಗಿ ಪರಿವರ್ತಿಸುವ ಪ್ರಯತ್ನದ ಭಾಗವಾಗಿ ಈ ವಿಸ್ತರಣೆಯನ್ನು ಕೈಗೊಳ್ಳಲಾಗುತ್ತಿದೆ.

25 ವರ್ಷಗಳ ಹಿಂದೆ ಚಿತ್ರರಂಗ ಪ್ರವೇಶಿಸಿದ 43 ವರ್ಷದ ಧನುಷ್, ತಾವು ರಾಜಕೀಯಕ್ಕೆ ಬರುವ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಈ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಅವರ ರಾಜಕೀಯ ಪ್ರವೇಶದ ಕುರಿತಾದ ವದಂತಿಗಳಿಗೆ ಪ್ರತಿಕ್ರಿಯಿಸುವುದರಿಂದ ಟಿವಿಕೆ ಸಚಿವರು, ಎಐಎಡಿಎಂಕೆ ಮಾಜಿ ಸಚಿವರು ಮತ್ತು ಡಿಎಂಕೆ ಯ ಪ್ರಮುಖ ನಾಯಕರು ಕೂಡ ಹಿಂದೆ ಸರಿದಿಲ್ಲ.

Advertisement

Advertisement

ಧನುಷ್ ಅವರು ಅಕ್ಟೋಬರ್ 25 ರಂದು ಚೆನ್ನೈನ ಒಎಂಆರ್ ನಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಸಂಘಟನೆಯ ಮಹಿಳಾ ವಿಭಾಗದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಗೂ ಮುನ್ನ, ಮಹಿಳಾ ಬೆಂಬಲಿಗರನ್ನು ಗುರುತಿಸಿ ಅವರನ್ನು ಸಂಘಟನೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆದಿತ್ತು. ಅಕ್ಟೋಬರ್ 14 ರಂದು ಅವರು ಕೊಯಮತ್ತೂರಿನಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯನ್ನು ನಡೆಸಿದ್ದರು. ಅಲ್ಲಿ ಅವರ ಅಭಿಮಾನಿ ಸಂಘವನ್ನು ಅಧಿಕೃತವಾಗಿ ಒಂದು ಕಲ್ಯಾಣ ಸಂಘಟನೆಯಾಗಿ (ನರ್ಪಣಿ ಇಯಕ್ಕಂ) ಪರಿವರ್ತಿಸಲಾಯಿತು.

Also Read

ಹೊಸ ವಿವಾದಕ್ಕೆ ಕಾರಣರಾದ ಅನಿರುದ್ಧ್ ರವಿಚಂದರ್; ಧನುಷ್ ಬಗ್ಗೆ ಐಶ್ವರ್ಯಾ ರಜನಿಕಾಂತ್ ಹಳೆಯ ಹೇಳಿಕೆ ಮತ್ತೆ ವೈರಲ್!

ನಟನ ಆಪ್ತ ಮೂಲವೊಂದು ತಿಳಿಸಿರುವಂತೆ, "ಕಳೆದ ತಿಂಗಳು ನಮ್ಮ ನಾಯಕರು (ಧನುಷ್), ಸಂಘಟನೆಯನ್ನು ವಿಧಾನಸಭಾ ಕ್ಷೇತ್ರವಾರು ವಿಸ್ತರಿಸಲು, ಘಟಕಗಳಿಲ್ಲದ ಕಡೆ ಹೊಸ ಘಟಕಗಳನ್ನು ಸ್ಥಾಪಿಸಲು ಮತ್ತು ಈಗಾಗಲೇ ಇರುವ ರಚನೆಯನ್ನು ಬಲಪಡಿಸಲು ನಮಗೆ ಸೂಚಿಸಿದರು. ನಾವು ಆಯಾ ಕ್ಷೇತ್ರಗಳಲ್ಲಿ ನಮ್ಮ ಅಸ್ತಿತ್ವವನ್ನು ಹೆಚ್ಚಿಸಲು ಕೆಲಸ ಮಾಡುತ್ತಿದ್ದೇವೆ."

ಧನುಷ್ ತಮ್ಮ ರಾಜಕೀಯ ಆಕಾಂಕ್ಷೆಗಳ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡದಿದ್ದರೂ, ಸಂಘಟನೆಯ ಈ ವಿಸ್ತರಣೆಯು ಅವರು 2027ರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೂಲಕ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಬಹುದು ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದೆ. ಸಂಘಟನೆಯ ಆಪ್ತ ಮೂಲಗಳ ಪ್ರಕಾರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಪದಾಧಿಕಾರಿಗಳು ಮತ್ತು ಬೆಂಬಲಿಗರಿಂದ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸುವ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ.

ನಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ನಾವು 2031ರ (ವಿಧಾನಸಭಾ ಚುನಾವಣೆ) ವರೆಗೆ ಕಾಯಲು ಬಯಸುವುದಿಲ್ಲ. ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸಕ್ರಿಯರಾಗಲು ಬಯಸುತ್ತೇವೆ. ಇದಕ್ಕಾಗಿ ಈಗಲೇ ಪೂರ್ವಸಿದ್ಧತೆಗಳನ್ನು ಆರಂಭಿಸಬೇಕಿದೆ. ನಾವು ಚುನಾವಣಾ ರಂಗಕ್ಕೆ ಮುಂಚಿತವಾಗಿಯೇ ಪ್ರವೇಶಿಸಿದರೆ, ಅದು ಸಂಘಟನೆಯನ್ನು ಕಟ್ಟಲು ಮತ್ತು ರಾಜಕೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಎಂದು ನಟನ ಆಪ್ತ ಮೂಲವೊಂದು ತಿಳಿಸಿದೆ.

ಸಂಘಟನಾ ಜಾಲವನ್ನು ಆರಂಭಿಕ ಹಂತದಲ್ಲೇ ರೂಪಿಸುವುದರಿಂದ, ಕೇವಲ ಅಭಿಮಾನಿ ಸಂಘದ ಚಟುವಟಿಕೆಗಳನ್ನು ಮೀರಿ, ರಾಜಕೀಯ ಶಕ್ತಿಯಾಗಿ ಗುರುತಿಸಿಕೊಳ್ಳಲು ಈ ಚಳುವಳಿಗೆ ಸಾಧ್ಯವಾಗುತ್ತದೆ ಎಂದು ಪದಾಧಿಕಾರಿಗಳು ನಂಬಿದ್ದಾರೆ. ಸಂಘಟನೆಯ ವಿಸ್ತರಣೆಯ ಭಾಗವಾಗಿ, ಮಹಿಳಾ ವಿಭಾಗವನ್ನು ಬಲಪಡಿಸುವಂತೆಯೂ ಧನುಷ್ ಅವರು ಪದಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಧನುಷ್ ಅವರ 'ನರ್ಪಣಿ ಇಯಕ್ಕಂ' (ಸೇವಾ ಸಂಘ) ಮೂಲಕ ಮತ್ತೊಂದು ರಾಜಕೀಯ ಶಕ್ತಿ ಉದಯಿಸುವ ಸಾಧ್ಯತೆಯನ್ನೂ ಅವರು ಕಾಣುತ್ತಿದ್ದಾರೆ. "ಟಿವಿಕೆ (TVK) ತನ್ನನ್ನು ಡಿಎಂಕೆಗೆ (DMK) ಪ್ರಮುಖ ಪ್ರತಿಸ್ಪರ್ಧಿಯಾಗಿ ಬಿಂಬಿಸಿಕೊಂಡಿದೆ. ಒಂದು ವೇಳೆ ಗಣನೀಯ ಬೆಂಬಲ ಹೊಂದಿರುವ ಮತ್ತೊಂದು ರಾಜಕೀಯ ಶಕ್ತಿ ಉದಯಿಸಿದರೆ, ಆಗ ಸ್ಪರ್ಧೆಯು ಕೇವಲ ಟಿವಿಕೆ ಮತ್ತು ಡಿಎಂಕೆಗೆ ಮಾತ್ರ ಸೀಮಿತವಾಗುವುದಿಲ್ಲ. ಇದರಿಂದ ರಾಜಕೀಯ ಚರ್ಚೆಯ ದಿಕ್ಕೇ ಬದಲಾಗಬಹುದು ಎಂದು ನಾವು ನಂಬುತ್ತೇವೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement