ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

'ನಿನ್ನ ಚಿಕ್ಕಪ್ಪ ಒಬ್ಬ ಕಳ್ಳ': ಶಾಲೆಯಲ್ಲಿ ತನ್ನನ್ನು ರೇಗಿಸಿದ ಹುಡುಗನಿಗೆ ಕಪಾಳಮೋಕ್ಷ ಮಾಡಿದ್ದ ಪ್ರಿಯಾಂಕಾ ಗಾಂಧಿ!

ತುರ್ತು ಪರಿಸ್ಥಿತಿಯ ನಂತರ ತಾವು ಶಾಲೆಗೆ ಬಂದಾಗ, ತಮ್ಮ ಪಕ್ಕದಲ್ಲಿ ಯಾರೂ ಕುಳಿತುಕೊಳ್ಳಲಿಲ್ಲ. ಅಲ್ಲದೆ, ತಮ್ಮ ಏಳನೇ ಹುಟ್ಟುಹಬ್ಬದಂದು, ಒಬ್ಬರನ್ನು ಹೊರತುಪಡಿಸಿ, ತಮ್ಮ ಸ್ನೇಹಿತರಲ್ಲಿ ಯಾರೊಬ್ಬರೂ ಜೊತೆಗೆ ಬರಲಿಲ್ಲ ಎಂದು ರಾಹುಲ್ ಹೇಳಿದರು.

ಸೋನಿಯಾ ಗಾಂಧಿ ಜೊತೆ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ
Ramyashree GN
Updated On : 24 Nov 2026, 3:42 pm

ನವದೆಹಲಿ: ತುರ್ತು ಪರಿಸ್ಥಿತಿಯ ನಂತರ ಶಾಲೆಯಲ್ಲಿದ್ದಾಗ, ಹುಡುಗನೊಬ್ಬ ತನ್ನನ್ನು ರೇಗಿಸುತ್ತಾ 'ನಿನ್ನ ಚಿಕ್ಕಪ್ಪ ಕಳ್ಳ' (Chor hai tera chacha) ಎಂದು ಹೇಳಿದಾಗ, ತಾನು ಅವನಿಗೆ ಕಪಾಳಮೋಕ್ಷ ಮಾಡಿದ್ದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

ತಮ್ಮ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ ರಾಹುಲ್ ಗಾಂಧಿ ಅವರೊಂದಿಗೆ ನಡೆಸಿದ ಸಂಭಾಷಣೆ ವೇಳೆ ಅವರು ಈ ಘಟನೆಯನ್ನು ವಿವರಿಸಿದ್ದಾರೆ. ಈ ಸಂಭಾಷಣೆಯ ವಿಡಿಯೋವನ್ನು ಅವರು ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

'ತುರ್ತು ಪರಿಸ್ಥಿತಿಯ ನಂತರ, ದಾದಿ (ಇಂದಿರಾ ಗಾಂಧಿ) ಚುನಾವಣೆಯಲ್ಲಿ ಸೋತಾಗ, ನಾವು ಬೇರೆ ಮನೆಗೆ ಸ್ಥಳಾಂತರಗೊಂಡೆವು. ಆಗ ತುಂಬಾ ಉದ್ವಿಗ್ನ ವಾತಾವರಣವಿತ್ತು ಎಂಬುದು ನನಗೆ ನೆನಪಿದೆ' ಎಂದು ಪ್ರಿಯಾಂಕಾ ಗಾಂಧಿ ಆ ವಿಡಿಯೋದಲ್ಲಿ ಹೇಳುತ್ತಾರೆ.

Advertisement

Advertisement

1977ರಲ್ಲಿ ಇಂದಿರಾ ಗಾಂಧಿ ಚುನಾವಣೆಯಲ್ಲಿ ಸೋತ ನಂತರ, ತಾವು ಶಾಲೆಗೆ ಹೋದ ಮೊದಲ ದಿನದ ಬಗ್ಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತಮ್ಮ ನೆನಪುಗಳನ್ನು ಹಂಚಿಕೊಂಡರು.

'ಒಂದು ಚಿಕ್ಕ ಹುಡುಗ ಬಂದು ನನಗೆ, 'ನಿನ್ನ ಚಿಕ್ಕಪ್ಪ (ಸಂಜಯ್ ಗಾಂಧಿ) ಜೈಲಿನಲ್ಲಿದ್ದಾರೆ, ನಿನ್ನ ಚಿಕ್ಕಪ್ಪ ಒಬ್ಬ ಕಳ್ಳ' ಎಂದು ಹೇಳಿದ್ದು ನೆನಪಿದೆ. ಆಗ ನಾನು ಅವನಿಗೆ ಕಪಾಳಮೋಕ್ಷ ಮಾಡಿದೆ; ಅವನು ಅಳುತ್ತಾ ಶಿಕ್ಷಕರ ಬಳಿ ಹೋದ, ಪರಿಣಾಮವಾಗಿ ನಾನು ಅವರಿಂದ ಬೈಗುಳ ಕೇಳಬೇಕಾಯಿತು' ಎಂದು ಪ್ರಿಯಾಂಕಾ ಗಾಂಧಿ ಅವರು ತಮ್ಮ ತಾಯಿ ಮತ್ತು ಸಹೋದರನೊಂದಿಗಿನ ಸಂಭಾಷಣೆಯಲ್ಲಿ ನೆನಪಿಸಿಕೊಳ್ಳುತ್ತಾರೆ.

ಶಾಲೆಯಲ್ಲಿದ್ದಾಗ ತಾನು ಮತ್ತು ತನ್ನ ಸಹೋದರಿ ಭಿನ್ನವಾಗಿದ್ದೆವು ಎಂದು ರಾಹುಲ್ ಗಾಂಧಿ ಹೇಳಿದರು.

Also Read

‘ಹತ್ಯೆ ಮಾಡಲೆಂದೇ ಭದ್ರತೆ ಹಿಂಪಡೆಯಲಾಗಿತ್ತು, ರಾಜೀವ್ ಭದ್ರತೆ ಬಗ್ಗೆ ಆತಂಕವಿತ್ತು, ರಾಹುಲ್ ಎಚ್ಚರಿಕೆ ಕೊಟ್ಟಿದ್ದ': ಸೋನಿಯಾ ಗಾಂಧಿ; Video

'ಅವಳು (ಪ್ರಿಯಾಂಕಾ) ಬಂಡಾಯಗಾರಳಾಗಿರಲಿಲ್ಲವಾದ್ದರಿಂದ ಇಬ್ಬರಿಗೂ ಸಾಕಷ್ಟು ವ್ಯತ್ಯಾಸವಿತ್ತು. ಆಕೆ ನಿಯಮಗಳನ್ನು ಪಾಲಿಸುತ್ತಿದ್ದಳು; ಅವಳು ಸಿಹಿಯಾಗಿ ಮತ್ತು ಒಳ್ಳೆಯವಳಾಗಿರುತ್ತಿದ್ದಳು ಮತ್ತು ನಾನು ಬಂಡಾಯಗಾರನಾಗಿದ್ದೆ ಮತ್ತು ಪ್ರಶ್ನೆಗಳನ್ನು ಕೇಳುತ್ತಿದ್ದೆ ಮತ್ತು ತೊಂದರೆ ಕೊಡುತ್ತಿದ್ದೆ' ಎಂದು ರಾಹುಲ್ ಗಾಂಧಿ ನೆನಪಿಸಿಕೊಂಡರು.

ರಾಹುಲ್‌ಗೆ ಭಿನ್ನವಾಗಿ, ತಾನು ಈ ವ್ಯವಸ್ಥೆಗೆ ಹೊಂದಿಕೊಳ್ಳುವಂತಿದ್ದೆ ಎಂದು ಪ್ರಿಯಾಂಕಾ ಗಾಂಧಿ ಹೇಳುತ್ತಾರೆ.

'ಸಂಸತ್ತಿನಲ್ಲಿ ಈಗಲೂ ಕಾಣುವ ವ್ಯತ್ಯಾಸ, ನಾವು ಶಾಲಾ ತರಗತಿಯಲ್ಲಿದ್ದಾಗ ಇದ್ದ ವ್ಯತ್ಯಾಸದಂತೆಯೇ ಇದೆ. ನಾನು 'ಗುಡ್ ಮಾರ್ನಿಂಗ್, ನಮಸ್ತೆ' ಎಂದು ಹೇಳುತ್ತಿದ್ದೆ. ಆದರೆ ನೀನು ನಿನ್ನದೇ ಆದ ಲೋಕದಲ್ಲಿರುತ್ತಿದ್ದೆ' ಎಂದು ಪ್ರಿಯಾಂಕಾ ಗಾಂಧಿ ತಮ್ಮ ಸಹೋದರನಿಗೆ ಹೇಳಿದರು.

ತುರ್ತು ಪರಿಸ್ಥಿತಿಯ ನಂತರ ತಾವು ಶಾಲೆಗೆ ಬಂದಾಗ, ತಮ್ಮ ಪಕ್ಕದಲ್ಲಿ ಯಾರೂ ಕುಳಿತುಕೊಳ್ಳಲಿಲ್ಲ. ಅಲ್ಲದೆ, ತಮ್ಮ ಏಳನೇ ಹುಟ್ಟುಹಬ್ಬದಂದು, ಒಬ್ಬರನ್ನು ಹೊರತುಪಡಿಸಿ (ಆ ವ್ಯಕ್ತಿ ಈಗಲೂ ನನ್ನ ಸ್ನೇಹಿತ), ತಮ್ಮ ಸ್ನೇಹಿತರಲ್ಲಿ ಯಾರೊಬ್ಬರೂ ಜೊತೆಗೆ ಬರಲಿಲ್ಲ ಎಂದು ರಾಹುಲ್ ಹೇಳಿದರು.

ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey Of Love) ಬಿಡುಗಡೆಯಾದ ಕೆಲವೇ ದಿನಗಳ ನಂತರ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಅವರು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಅನುಭವಿಸಿದ ಸಂತೋಷ, ನಗು ಮತ್ತು ನೋವಿನ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿರುವುದನ್ನು ಕಾಣಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement