ಯುವ ಜೋಡಿ ಮೇಲೆ ಹಲ್ಲೆ ಪ್ರಕರಣ: 'ಪಾರ್ಕ್ಗೆ ಬರುವವರು ಸಭ್ಯವಾಗಿ ವರ್ತಿಸಬೇಕು'; ಪ್ರೇಮಿಗಳಿಗೆ ಎಚ್ಚರಿಕೆ ಕೊಟ್ಟ ಮುಂಬೈ ಮೇಯರ್!
ಸಾರ್ವಜನಿಕ ಉದ್ಯಾನವನಗಳಿಗೆ ಬರುವ ಪ್ರೇಮಿಗಳು ಮತ್ತು ಜೋಡಿಗಳು ಸಭ್ಯವಾಗಿ ವರ್ತಿಸಬೇಕು. ಪಾರ್ಕ್ಗಳು ವೃದ್ಧರು, ಮಕ್ಕಳು ಹಾಗೂ ತಾಯಂದಿರೂ ಬರುವ ಸಾರ್ವಜನಿಕ ಸ್ಥಳಗಳಾಗಿವೆ ಎಂದು ಮುಂಬೈ ಮೇಯರ್ ರಿತು ತಾವ್ಡೆ..
ಮುಂಬೈ: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಯುವಜೋಡಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೇಯರ್ ರಿತು ತಾವ್ಡೆ ಎಚ್ಚರಿಕೆ ಕೊಟ್ಟಿದ್ದಾರೆ.
ಸಾರ್ವಜನಿಕ ಉದ್ಯಾನವನಗಳಿಗೆ ಬರುವ ಪ್ರೇಮಿಗಳು ಮತ್ತು ಜೋಡಿಗಳು ಸಭ್ಯವಾಗಿ ವರ್ತಿಸಬೇಕು. ಪಾರ್ಕ್ಗಳು ವೃದ್ಧರು, ಮಕ್ಕಳು ಹಾಗೂ ತಾಯಂದಿರೂ ಬರುವ ಸಾರ್ವಜನಿಕ ಸ್ಥಳಗಳಾಗಿವೆ ಎಂದು ಮುಂಬೈ ಮೇಯರ್ ರಿತು ತಾವ್ಡೆ ಹೇಳಿದ್ದಾರೆ.
ಕುರ್ಲಾದ ಉದ್ಯಾನವನದಲ್ಲಿ ಯುವಕ ಮತ್ತು ಯುವತಿಯನ್ನು ಅಪ್ರಾಪ್ತರ ಗುಂಪೊಂದು ಹಲ್ಲೆ ಮಾಡಿದ ಘಟನೆ ನಡೆದ ಬೆನ್ನಲ್ಲೇ ಮೇಯರ್ ನೀಡಿರುವ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಿತು ತಾವ್ಡೆ, 'ಉದ್ಯಾನವನಗಳಿಗೆ ಜೋಡಿಗಳು ಬಂದು ಕುಳಿತುಕೊಳ್ಳುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸುವುದು ಸರಿಯಲ್ಲ' ಎಂದು ಹೇಳಿದ್ದಾರೆ.
ಅನುಚಿತ ವರ್ತನೆ ತಪ್ಪು
"ಜೋಡಿಗಳು ಸಾರ್ವಜನಿಕ ಉದ್ಯಾನವನಗಳಲ್ಲಿ ಕುಳಿತುಕೊಳ್ಳಬಹುದು. ಆದರೆ, ಅಲ್ಲಿ ಅನುಚಿತವಾಗಿ ವರ್ತಿಸುವುದು ತಪ್ಪು. ಏಕೆಂದರೆ ಉದ್ಯಾನವನಗಳಿಗೆ ವೃದ್ಧರು, ತಾಯಂದಿರು ಹಾಗೂ ಮಕ್ಕಳು ಕೂಡ ಬರುತ್ತಾರೆ" ಎಂದು ಅವರು ಹೇಳಿದ್ದಾರೆ.
"ಇದು ಸಾರ್ವಜನಿಕ ಉದ್ಯಾನವನ. ಎಲ್ಲರಿಗೂ ಇಲ್ಲಿಗೆ ಬರುವ ಹಕ್ಕಿದೆ. ಅನೇಕ ವೃದ್ಧರು ಬೆಳಗಿನ ವಾಯುವಿಹಾರಕ್ಕೆ ಬರುತ್ತಾರೆ. ತಾಯಂದಿರು ತಮ್ಮ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಇಂತಹ ವಾತಾವರಣವನ್ನು ಎಲ್ಲರೂ ಗೌರವಿಸಬೇಕು" ಎಂದು ಮೇಯರ್ ತಿಳಿಸಿದ್ದಾರೆ.
ಅದೇ ವೇಳೆ, ಯುವಕ ಮತ್ತು ಯುವತಿಯ ಮೇಲೆ ನಡೆದ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ಪೊಲೀಸರು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಆದರೆ, ಹಲ್ಲೆಗೊಳಗಾದ ಜೋಡಿಯ ವರ್ತನೆಯ ಬಗ್ಗೆಯೂ ಮೇಯರ್ ಪ್ರಸ್ತಾಪಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಹಲ್ಲೆ ನಡೆದ ಸಂದರ್ಭದಲ್ಲಿ ಸಂತ್ರಸ್ತರ ನಡವಳಿಕೆ ಬಗ್ಗೆ ಮಾತನಾಡುವ ಅಗತ್ಯವೇನಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ.
ಪಾರ್ಕ್ ನಲ್ಲಿ ಅಪ್ರಾಪ್ತ ಬಾಲಕಿಯರಿಗೆ ಮರ್ಮಾಂಗ ಪ್ರದರ್ಶನ: POCSO ಕೇಸ್ ನಲ್ಲಿ ನಟ ಶ್ರೀಜಿತ್ ರವಿಗೆ 1 ವರ್ಷ ಜೈಲು!
ಪಾರ್ಕ್ನಲ್ಲಿ ಜೋಡಿ ಮೇಲೆ ಅಪ್ರಾಪ್ತರಿಂದ ಹಲ್ಲೆ
ಮುಂಬೈನ ಕುರ್ಲಾದ ಪಶ್ಚಿಮದಲ್ಲಿರುವ ಮಾಲ್ ಹಿಂಭಾಗದ ಪ್ರಮೋದ್ ಮಹಾಜನ್ ಉದ್ಯಾನವನದಲ್ಲಿ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಉದ್ಯಾನವನದಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿಯನ್ನು ಅಪ್ರಾಪ್ತ ಬಾಲಕರ ಗುಂಪೊಂದು ಸುತ್ತುವರಿದು ಹಲ್ಲೆ ನಡೆಸಿತ್ತು. ಈ ಘಟನೆಯ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ವಿಡಿಯೋದಲ್ಲಿ ಸುಮಾರು 10 ವರ್ಷದ ಬಾಲಕರೂ ಸೇರಿದ್ದ ಗುಂಪು, ಜೋಡಿಯ ಮೇಲೆ ಕೋಲಿನಿಂದ ಹಲ್ಲೆ ನಡೆಸುವುದು, ಹೊಡೆಯುವುದು ಹಾಗೂ ಒದೆಯುವುದು ಕಂಡುಬಂದಿದೆ. ಅವರಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದಾಗಲೂ ಬಾಲಕರು ಬೆನ್ನಟ್ಟಿದ್ದಾರೆ ಎನ್ನಲಾಗಿದೆ.
ವಿಡಿಯೋ ವೈರಲ್ ಆದ ಬಳಿಕ ಮುಂಬೈ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದರು. ಹಲ್ಲೆಯಲ್ಲಿ ಭಾಗಿಯಾದ ಅಪ್ರಾಪ್ತರನ್ನು ಗುರುತಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಎಂಟು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ಬಾಲ ನ್ಯಾಯ ಮಂಡಳಿ (ಜೆಜೆಬಿ) ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.