ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಾವು ದ್ವೇಷಿಸುವ ದೇಶಗಳಿಗೂ ನೆರವು ನೀಡ್ತೇವೆ: RSS ಮುಖ್ಯಸ್ಥ ಮೋಹನ್ ಭಾಗವತ್

ಜಗತ್ತಿನ ಯಾವುದೇ ಪ್ರಬಲ ಶಕ್ತಿಯೂ ಭಾರತ ಅಭಿವೃದ್ಧಿ ಹೊಂದುವುದನ್ನು ಬಯಸುವುದಿಲ್ಲ. ಜಾಗತಿಕ ಶಕ್ತಿಗಳು 'ಬಲಿಷ್ಠರು ಮಾತ್ರ ಬದುಕುಳಿಯುತ್ತಾರೆ' (Survival of the Fittest) ಎಂಬ ತತ್ವದಲ್ಲಿ ನಂಬಿಕೆ ಇಟ್ಟಿವೆ.

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್
Srinivasa Murthy VN
Updated On : 25 Nov 2026, 5:07 pm

ನಾಗ್ಪುರ: ಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದರೆ ಭಾರತ ಮಾತ್ರ ತನ್ನನ್ನು ದ್ವೇಷಿಸುವ ದೇಶಗಳಿಗೂ ನೆರವು ನೀಡುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಐದನೇ ಪದ್ಮಾ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮಾಜಿ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಮೋಹನ್ ಭಾಗವತ್, 'ಜಗತ್ತಿನ ಯಾವುದೇ ಪ್ರಬಲ ಶಕ್ತಿಯೂ ಭಾರತ ಅಭಿವೃದ್ಧಿ ಹೊಂದುವುದನ್ನು ಬಯಸುವುದಿಲ್ಲ. ಜಾಗತಿಕ ಶಕ್ತಿಗಳು 'ಬಲಿಷ್ಠರು ಮಾತ್ರ ಬದುಕುಳಿಯುತ್ತಾರೆ' (Survival of the Fittest) ಎಂಬ ತತ್ವದಲ್ಲಿ ನಂಬಿಕೆ ಇಟ್ಟಿವೆ. ಆದರೆ ಭಾರತ ತನ್ನನ್ನು ದ್ವೇಷಿಸುವ ದೇಶಗಳಿಗೂ ನೆರವು ನೀಡಲು ಬಯಸುತ್ತದೆ' ಎಂದರು.

Advertisement

Advertisement

Also Read

'ಕಾಗ್ನಿಟಿವ್ ಡೊಮೇನ್'; ಭಾರತಕ್ಕೆ ಬಾಹ್ಯ ಶತ್ರುಗಳಿಗಿಂತ ಆಂತರಿಕ ಬೆದರಿಕೆಗಳೇ ಹೆಚ್ಚು ಅಪಾಯಕಾರಿ: RSS ಮುಖ್ಯಸ್ಥರ ಸಮ್ಮುಖದಲ್ಲೇ ಮಾಜಿ CDS ಅನಿಲ್ ಚೌಹಾಣ್

ಜಾಗತಿಕ ಶಕ್ತಿಗಳು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಬಯಸುತ್ತವೆ. ಇತರ ರಾಷ್ಟ್ರಗಳ ಅಭಿವೃದ್ಧಿಗಿಂತ ತಮ್ಮ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಮಾತ್ರ ತನ್ನನ್ನು ವಿರೋಧಿಸುವ ಅಥವಾ ದ್ವೇಷಿಸುವ ದೇಶಗಳಿಗೂ ಸಹಾಯ ಮಾಡುವ ಮನೋಭಾವ ಹೊಂದಿದೆ ಎಂದು ಭಾಗವತ್ ಅಭಿಪ್ರಾಯಪಟ್ಟರು.

ಭಾರತದ ದೃಷ್ಟಿಕೋನ ಜಗತ್ತಿನ ಇತರ ಶಕ್ತಿಗಳಿಗಿಂತ ಭಿನ್ನವಾಗಿದೆ ಎಂಬ ಸಂದೇಶವನ್ನು ಅವರು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದರು. ಭಾರತ ತನ್ನ ನೆರೆಯ ರಾಷ್ಟ್ರಗಳ ಸಂಕಷ್ಟದ ಸಂದರ್ಭದಲ್ಲೂ ನೆರವಿಗೆ ಧಾವಿಸಿದೆ ಎಂದು ಉದಾಹರಿಸಿದ ಅವರು, ಇತರ ದೇಶಗಳು ಭಾರತದ ಬಗ್ಗೆ ಯಾವ ರೀತಿಯ ಭಾವನೆ ಹೊಂದಿವೆ ಎಂಬುದನ್ನು ಲೆಕ್ಕಿಸದೆ ಸಹಾಯ ಮಾಡುವುದು ನಮ್ಮ ನಿಲುವು ಎಂದರು.

ಮಾಲ್ಡೀವ್ಸ್ ಭಾರತವನ್ನು ವಿರೋಧಿಸಿದರೂ ನೆರವು ನೀಡಿದ್ದೇವೆ

ಮಾಲ್ಡೀವ್ಸ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಭಾರತ ನೀರು ಪೂರೈಸಿದೆ. ಆರ್ಥಿಕ ಸಂಕಷ್ಟದಲ್ಲಿದ್ದ ಶ್ರೀಲಂಕಾಕ್ಕೆ ಹಣಕಾಸಿನ ನೆರವು ನೀಡಿದೆ. ನೇಪಾಳದಲ್ಲಿ ಪರಿಸರ ಸಂಬಂಧಿ ಸಮಸ್ಯೆಗಳು ಎದುರಾದಾಗಲೂ ನೆರವು ನೀಡಿದೆ. ಬಾಂಗ್ಲಾದೇಶಕ್ಕೂ ಸಹಾಯ ಮಾಡಿದೆ. ಪಾಕಿಸ್ತಾನದಲ್ಲಿ ಪ್ರವಾಹ ಮತ್ತು ಭೂಕಂಪ ಸಂಭವಿಸಿದ ಸಂದರ್ಭದಲ್ಲೂ ಭಾರತ ನೆರವಿನ ಹಸ್ತ ಚಾಚಿದೆ ಎಂದು ಭಾಗವತ್ ವಿವರಿಸಿದರು.

"ಶಕ್ತಿಯನ್ನು ದುರ್ಬಲರನ್ನು ರಕ್ಷಿಸಲು ಮತ್ತು ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಬಳಸಬೇಕು ಎಂಬುದು ಭಾರತದ ನಂಬಿಕೆ. ಇದೇ ಭಾರತದ ಚಿಂತನೆ" ಎಂದು ಮೋಹನ್ ಭಾಗವತ್ ಹೇಳಿದರು.

ಇದೇ ವೇಳೆ ದೇಶದ ಯುವಜನತೆಯ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿದ ಭಾಗವತ್, ಇಂದಿನ ಯುವಕರು ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬಂದಿದ್ದಾರೆ. ಪ್ರಾಮಾಣಿಕವಾಗಿ ಮಾತನಾಡುವವರ ಬೆಂಬಲಕ್ಕೆ ನಿಲ್ಲಲು ಅವರು ಸಿದ್ಧರಿದ್ದಾರೆ. ಸುಳ್ಳನ್ನು ದ್ವೇಷಿಸುವ ಯುವಕರು ದೇಶವನ್ನು ಶ್ರೇಷ್ಠವಾಗಿಸಲು ಬಯಸುತ್ತಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement