ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಡಾಬಾದಲ್ಲಿ ಶೂಟೌಟ್: ಊಟ ಮಾಡುತ್ತಿದ್ದ ನಾಲ್ವರು ಯುವಕರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

ಖರವಾರ್ ಪೊಲೀಸ್ ಠಾಣೆಯಿಂದ ಕೇವಲ 50 ಅಡಿ ದೂರದಲ್ಲಿ ಈ ಶೂಟೌಟ್ ನಡೆದಿದ್ದು, ಈ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನಾಲ್ವರು ಯುವಕರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು
Lingaraj Badiger
Updated On : 26 Nov 2026, 3:40 pm

ನವದೆಹಲಿ: ಹರಿಯಾಣದ ರೋಹ್ಟಕ್ ಜಿಲ್ಲೆಯ ಮಿಲನ್ ಡಾಬಾದಲ್ಲಿ ಊಟ ಮಾಡುತ್ತಿದ್ದ ನಾಲ್ವರು ಯುವಕರ ಮೇಲೆ ಬುಧವಾರ ತಡರಾತ್ರಿ ಐವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಖರವಾರ್ ಪೊಲೀಸ್ ಠಾಣೆಯಿಂದ ಕೇವಲ 50 ಅಡಿ ದೂರದಲ್ಲಿ ಈ ಶೂಟೌಟ್ ನಡೆದಿದ್ದು, ಈ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ನಿನ್ನೆ ತಡ ರಾತ್ರಿ 12.30 ರ ಸುಮಾರಿಗೆ ಸ್ವಿಫ್ಟ್ ಕಾರಿನಲ್ಲಿ ಡಾಬಾಗೆ ಬಂದ ಐದು ಶಸ್ತ್ರಸಜ್ಜಿತ ವ್ಯಕ್ತಿಗಳು, ಊಟ ಮಾಡುತ್ತಿದ್ದ ಯುವಕರ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

Advertisement

Advertisement

Also Read

'ಜೋ ಬಚಾಯ್...' ವಿವಾದ: ಪಾಕಿಸ್ತಾನಿ ವೆಬ್ ಸಿರೀಸ್ ನಿರ್ಬಂಧಿಸಿ; ನೆಟ್‌ಫ್ಲಿಕ್ಸ್‌ಗೆ ಕೇಂದ್ರ ಸರ್ಕಾರ ಸೂಚನೆ

ಹಠಾತ್ ಗುಂಡಿನ ದಾಳಿಯಿಂದ ಗ್ರಾಹಕರು ಮತ್ತು ಸಿಬ್ಬಂದಿಗಳು ಭಯಭೀತರಾಗಿದ್ದು, ಜನ ರಕ್ಷಣೆಗಾಗಿ ಹರಸಾಹಸ ಪಡುತ್ತಾ ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಮೇಜುಗಳು ಮತ್ತು ಕುರ್ಚಿಗಳ ಹಿಂದೆ ಅಡಗಿಕೊಂಡರು.

ಗುಂಡಿನ ದಾಳಿಯಲ್ಲಿ ಮೂವರು ಯುವಕರು ಊಟದ ಮೇಜಿನ ಬಳಿ ಕುಳಿತಿದ್ದಾಗಲೇ ಮೃತಪಟ್ಟಿದ್ದು, ನಾಲ್ಕನೇ ಯುವಕ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಹೊರಗೆ ಓಡಿ ಹೋಗಿದ್ದಾನೆ. ಓಡಿಹೋದರು ಬಿಡದ ದುಷ್ಕರ್ಮಿಗಳು ಆತನನ್ನು ಬೆನ್ನಟ್ಟಿ ಗುಂಡು ಹಾರಿಸಿ, ಹತ್ಯೆ ಮಾಡಿದ್ದಾರೆ.

ಗುಂಡಿನ ದಾಳಿಯ ಬಳಿಕ ದುಷ್ಕರ್ಮಿಗಳು, ಕೆಲಕಾಲ ಸ್ಥಳದಲ್ಲೇ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುತ್ತಾ ಓಡಾಡಿದ್ದಾರೆ. ಬಳಿಕ ಬಂದಿದ್ದ ಕಾರಿನಲ್ಲೇ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಆಧರಿಸಿ ವರದಿಯಾಗಿದೆ.

ಬಲಿಯಾದವರು ಝಜ್ಜರ್ ಜಿಲ್ಲೆಯವರು ಎಂದು ವರದಿಯಾಗಿದೆ, ಅದರಲ್ಲಿ ಮೂವರು ದೀಘಲ್ ಗ್ರಾಮಕ್ಕೆ ಸೇರಿದವರು ಮತ್ತು ನಾಲ್ಕನೆಯವರು ಬೆರಿ ಪ್ರದೇಶಕ್ಕೆ ಸೇರಿದವರು.

ಘಟನಾ ಸ್ಥಳಕ್ಕೆ ರೋಹ್ಟಕ್ ವಲಯದ ಐಜಿ ಹಮೀದ್ ಅಖ್ತರ್, ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರಾಜ್‌ಪುರೋಹಿತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಐಎ, ವಿಶೇಷ ಘಟಕ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡಗಳು ಸ್ಥಳಕ್ಕೆ ಧಾವಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ.

ಈ ಹತ್ಯೆಯ ಹೊಣೆ ಹೊತ್ತುಕೊಂಡಿರುವುದಾಗಿ rohitbajrang07 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಪ್ರಕಟವಾಗಿದೆ ಎನ್ನಲಾಗಿದೆ. ಭೌ ರಿಟೋಲಿಯಾ ಗ್ಯಾಂಗ್ ಹೆಸರಿನಲ್ಲಿ ಪ್ರಕಟವಾದ ಪೋಸ್ಟ್‌ನಲ್ಲಿ ಇದೊಂದು ಪ್ರತೀಕಾರದ ಕೃತ್ಯ ಎಂದು ಹೇಳಿಕೊಂಡಿದ್ದು, ಮುಂದಿನ ದಾಳಿಗಳ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement