ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

Putin ಜೊತೆ Selfie: ರಾತ್ರೋರಾತ್ರಿ Viral ಆದ ಕೇರಳದ ಪೋರ; ಯಾರೀ 'AI Kid Of India'..?

ಇನ್ನೂ ಈ ಕ್ಷಣವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೋಜಿಗಾಗಿ ವೀಡಿಯೆ ಮಾಡುತ್ತಿದ್ದ ಪುಟ್ಟ ಬಾಲಕನಾಗಿದ್ದಾಗಿನಿಂದ 17ನೇ ವಯಸ್ಸಿನಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗುವವರೆಗೆ, ಜೀವನದಲ್ಲಿ ಇಷ್ಟೊಂದು ಅವಕಾಶಗಳು ಸಿಗುತ್ತವೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ.

ಪುಟಿನ ಜೊತೆ ಸೆಲ್ಫೀ ತೆಗೆದುಕೊಂಡ ಕೇರಳದ ಬಾಲಕ.
Manjula VN
Updated On : 27 Nov 2026, 1:09 pm

ನವದೆಹಲಿ: 'ಭಾರತದ ಎಐ ಕಿಡ್' (AI Kid of India) ಎಂದೇ ಖ್ಯಾತಿ ಪಡೆದಿರುವ ಕೇರಳದ ಹದಿಹರೆಯದ ತಂತ್ರಜ್ಞಾನ ಪ್ರತಿಭೆ ಮತ್ತು ಉದ್ಯಮಿ ರೌಲ್ ಜಾನ್ ಅಜು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು, ಈ ಫೋಟೋ ಮತ್ತು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ನವೆಂಬರ್ 26 ರಂದು ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಆರಂಭವಾದ ಅಂತಾರಾಷ್ಟ್ರೀಯ 'ಎಐ ಜರ್ನಿ 2026' (AI Journey 2026) ಸಮ್ಮೇಳನದಲ್ಲಿ ಈ ಅಪರೂಪದ ಕ್ಷಣಕ್ಕೆ ರೌಲ್ ಸಾಕ್ಷಿಯಾಗಿದ್ದಾರೆ. ಸಮ್ಮೇಳನಕ್ಕೆ ಆಹ್ವಾನಿಸಲಾಗಿದ್ದ ವಿಶ್ವದ ಆಯ್ದ ಯುವ ಎಐ (ಕೃತಕ ಬುದ್ಧಿಮತ್ತೆ) ಪ್ರತಿಭೆಗಳ ಪೈಕಿ ರೌಲ್ ಕೂಡ ಒಬ್ಬರಾಗಿದ್ದರು. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿರುವ ಅವರು, ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಕ್ಷಣವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೋಜಿಗಾಗಿ ವೀಡಿಯೆ ಮಾಡುತ್ತಿದ್ದ ಪುಟ್ಟ ಬಾಲಕನಾಗಿದ್ದಾಗಿನಿಂದ 17ನೇ ವಯಸ್ಸಿನಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗುವವರೆಗೆ, ಜೀವನದಲ್ಲಿ ಇಷ್ಟೊಂದು ಅವಕಾಶಗಳು ಸಿಗುತ್ತವೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ರೌಲ್ ಬರೆದುಕೊಂಡಿದ್ದಾರೆ. ಮೂರು ದಿನಗಳ 'ಎಐ ಜರ್ನಿ 2026' ಸಮ್ಮೇಳನ ನವೆಂಬರ್ 26ರ ಗುರುವಾರ ಆರಂಭವಾಗಿದೆ.

Advertisement

Advertisement

ರಷ್ಯಾ ರಾಯಭಾರ ಕಚೇರಿ ರೌಲ್ ಅವರನ್ನು 'ಥಿಂಕ್‌ಕ್ರಾಫ್ಟ್' ವೇದಿಕೆಯನ್ನು ಅಭಿವೃದ್ಧಿಪಡಿಸಿದ ಶಾಲಾ ವಿದ್ಯಾರ್ಥಿ ಎಂದು ಪರಿಚಯಿಸಿದೆ.

ಪುಟಿನ್ ಮತ್ತು ಕಜಕಿಸ್ತಾನದ ಅಧ್ಯಕ್ಷ ಕಾಸಿಮ್-ಜೊಮಾರ್ಟ್ ಟೊಕಾಯೆವ್ ಅವರನ್ನು ಭೇಟಿಯಾದ ಯುವ ಎಐ ಪ್ರತಿಭೆಗಳಲ್ಲಿ ರೌಲ್ ಕೂಡ ಒಬ್ಬರು ಎಂದು ತಿಳಿಸಿದೆ.

ಸಮ್ಮೇಳನದ ಪೂರ್ಣ ಅಧಿವೇಶನ ಮುಗಿದ ಬಳಿಕ ಪುಟಿನ್ ಅವರೊಂದಿಗೆ ರೌಲ್ ಸಂವಾದ ನಡೆಸಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

Also Read

'ಭಾರತದಲ್ಲಿ ಎಷ್ಟು ಭಾಷೆಗಳಿವೆ?'; ಪ್ರಧಾನಿ ಮೋದಿ ಉತ್ತರ ಕೇಳಿ ಅಚ್ಚರಿಗೊಂಡ ರಷ್ಯಾ ಅಧ್ಯಕ್ಷ ಪುಟಿನ್!

'ಭಾರತದ ಎಐ ಬಾಲಕ' ಎಂದೇ ಜನಪ್ರಿಯರಾಗಿರುವ ರೌಲ್, ಕೃತಕ ಬುದ್ಧಿಮತ್ತೆ ಆಧಾರಿತ ಸಾಧನಗಳನ್ನು ಅಭಿವೃದ್ಧಿಪಡಿಸುವುದು, ಜನರಿಗೆ ಈ ತಂತ್ರಜ್ಞಾನದ ತರಬೇತಿ ನೀಡುವುದು ಹಾಗೂ ತಮ್ಮ ಆಸಕ್ತಿಯನ್ನು ಉದ್ಯಮವಾಗಿ ರೂಪಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ಹದಿಹರೆಯದ ಮಕ್ಕಳು ತಂದೆಯ ಬಳಿ ಖರ್ಚಿಗೆ ಹಣ ಕೇಳುತ್ತಾರೆ. ಆದರೆ, ರೌಲ್ ವಿಚಾರದಲ್ಲಿ ತದ್ವಿರುದ್ಧವಾಗಿದ್ದಾರೆ. ಅವರ ತಂದೆಯೇ ಮಗನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ.

ರೌಲ್ ಅವರ ಸಾಧನೆಯ ಪಯಣ ಆರಂಭವಾಗಿದ್ದು ಕೇವಲ ಒಂಬತ್ತು ವರ್ಷದವರಾಗಿದ್ದಾಗ. ಸ್ವತಃ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಕಲಿತ ಅವರು, ಬಳಿಕ 'ಎಐ ರಿಯಲ್ಮ್ ಟೆಕ್ನಾಲಜೀಸ್' ಎಂಬ ನವೋದ್ಯಮವನ್ನು ಸ್ಥಾಪಿಸಿದರು. ಸದ್ಯ ಈ ಸಂಸ್ಥೆಯಲ್ಲಿ 15 ಮಂದಿ ಉದ್ಯೋಗಿಗಳಿದ್ದು, ವಿಶ್ವದಾದ್ಯಂತ ಸುಮಾರು ಐದು ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ.

ವೀಡಿಯೋ ಕಾನ್ಫರೆನ್ಸ್ ಮೂಲಕ ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ನನ್ನ ತಂದೆಗೆ ಅಡೋಬ್ ಸಂಸ್ಥೆಯಲ್ಲಿ ಕೆಲಸ ಸಿಕ್ಕಾಗ, ಅದರ ಎಲ್ಲಾ ಪ್ರೀಮಿಯಂ ಸಾಧನಗಳನ್ನು ಉಚಿತವಾಗಿ ಬಳಸುವ ಅವಕಾಶ ದೊರೆಯಿತು.

ಇದರಿಂದ ಎಐ ತಂತ್ರಜ್ಞಾನದ ಬಗ್ಗೆ ಕಲಿಯಲು ಸಾಧ್ಯವಾಯಿತು. ಬಳಿಕ ಶಾಲೆಯ ವಿಜ್ಞಾನ ಯೋಜನೆಗಾಗಿ 'ಮೀಬಾಟ್' ಎಂಬ ರೋಬೋಟ್ ತಯಾರಿಸಿದೆ" ಎಂದು ರೌಲ್ ಈ ವರ್ಷದ ಫೆಬ್ರವರಿಯಲ್ಲಿ ಯುಎನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

'ಎಐ ಜರ್ನಿ 2026' ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಮುಖ ಅಂತರರಾಷ್ಟ್ರೀಯ ಸಮ್ಮೇಳನವಾಗಿದೆ. ಭಾರತ, ಚೀನಾ, ರಷ್ಯಾ, ಸೆರ್ಬಿಯಾ, ಬ್ರೆಜಿಲ್, ಕೀನ್ಯಾ, ಕಜಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement