ಕ್ಷೇತ್ರ ಪುನರ್ವಿಂಗಡಣೆ ಬೇಡಿಕೆಯಲ್ಲಿ ರಾಜಿ ಇಲ್ಲ; ಲೋಕಸಭೆಯಲ್ಲಿ ತಮಿಳುನಾಡಿನ ಶೇ. 7.18ರಷ್ಟು ಸ್ಥಾನಗಳ ಪಾಲು ಉಳಿಯಬೇಕು: M K ಸ್ಟಾಲಿನ್
ಇಂದು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಕ್ಷೇತ್ರ ಪುನರ್ವಿಂಗಡಣೆಯಿಂದ ಉಂಟಾಗಬಹುದಾದ ಅಪಾಯಗಳ ಕುರಿತು ದೇಶದಲ್ಲಿ ಮೊದಲಿಗೆ ಕಳವಳ ವ್ಯಕ್ತಪಡಿಸಿದ ರಾಜಕೀಯ ಪಕ್ಷ ಡಿಎಂಕೆ ಎಂದು ಹೇಳಿದ್ದಾರೆ.
ಚೆನ್ನೈ: ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ತಮ್ಮ ಪಕ್ಷದ ಬೇಡಿಕೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಡಿಎಂಕೆ ಅಧ್ಯಕ್ಷ ಹಾಗೂ ತಮಿಳು ನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಶುಕ್ರವಾರ ಪುನರುಚ್ಚರಿಸಿದ್ದಾರೆ. ತಮಿಳುನಾಡಿನ ಪ್ರಸ್ತುತ ಸಂಸದೀಯ ಪ್ರಾತಿನಿಧ್ಯದ ಪಾಲನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ.
ಇಂದು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಕ್ಷೇತ್ರ ಪುನರ್ವಿಂಗಡಣೆಯಿಂದ ಉಂಟಾಗಬಹುದಾದ ಅಪಾಯಗಳ ಕುರಿತು ದೇಶದಲ್ಲಿ ಮೊದಲಿಗೆ ಕಳವಳ ವ್ಯಕ್ತಪಡಿಸಿದ ರಾಜಕೀಯ ಪಕ್ಷ ಡಿಎಂಕೆ ಎಂದು ಹೇಳಿದ್ದಾರೆ. ನ್ಯಾಯಯುತ ಕ್ಷೇತ್ರ ಪುನರ್ವಿಂಗಡಣೆಗಾಗಿ ದೇಶದ ವಿವಿಧ ಭಾಗಗಳ ರಾಜಕೀಯ ನಾಯಕರು ಒಗ್ಗೂಡಿ ಆಗ್ರಹಿಸಿದ ಮೊದಲ ಸಭೆ ನಡೆದ ಸ್ಥಳ ಚೆನ್ನೈ ಎಂದು ಅವರು ಉಲ್ಲೇಖಿಸಿದ್ದಾರೆ.
ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ನಿರ್ಣಯ ಹಾಗೂ ನ್ಯಾಯಯುತ ಕ್ಷೇತ್ರ ಪುನರ್ವಿಂಗಡಣೆಗಾಗಿ ನಡೆದ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಉಲ್ಲೇಖಿಸಿದ ಸ್ಟಾಲಿನ್, ಡಿಎಂಕೆ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ.
ಮೊದಲನೆಯದಾಗಿ, ಲೋಕಸಭೆಯ ಒಟ್ಟು ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿದರೂ, ತಮಿಳುನಾಡಿನ ಪ್ರಸ್ತುತ ಶೇ. 7.18ರಷ್ಟು ಸಂಸದೀಯ ಸ್ಥಾನಗಳ ಪಾಲನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು. ಎರಡನೆಯದಾಗಿ, 1971ರ ಜನಗಣತಿ ಆಧಾರದ ಮೇಲೆ ನಿಗದಿಪಡಿಸಿ, ಬಳಿಕ ಸ್ಥಗಿತಗೊಳಿಸಿರುವ ರಾಜ್ಯಗಳ ನಡುವಿನ ಸಂಸದೀಯ ಪ್ರಾತಿನಿಧ್ಯದ ಅನುಪಾತವನ್ನು ಇನ್ನೂ 25 ವರ್ಷಗಳ ಕಾಲ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಎರಡು ಬೇಡಿಕೆಗಳ ಕುರಿತು ಡಿಎಂಕೆ ತನ್ನ ನಿಲುವಿನಲ್ಲಿ ದೃಢವಾಗಿದ್ದು, ಯಾವುದೇ ಬದಲಾವಣೆ ಇಲ್ಲ ಹಾಗೂ ರಾಜಿಗೆ ಅವಕಾಶವಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ. ಪಕ್ಷದ ನಿಲುವಿನಲ್ಲಿ ಬದಲಾವಣೆಯಾಗಬಹುದು ಎಂಬ ಮಾಧ್ಯಮಗಳ ಊಹಾಪೋಹಗಳನ್ನು ತಳ್ಳಿಹಾಕಿದ ಅವರು, ಇಂತಹ ವರದಿಗಳು ಅಥವಾ ರಾಜಕೀಯ ವಿರೋಧಿಗಳ ಟೀಕೆಗಳು ಪಕ್ಷದ ದೃಢ ಸಂಕಲ್ಪವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಅಧಿಕಾರ ಮತ್ತು ಸ್ಥಾನಮಾನಕ್ಕಾಗಿ ತಮ್ಮ ತತ್ವಗಳನ್ನು ಕೆಲವು ಪಕ್ಷಗಳು ರಾಜಿಮಾಡಿಕೊಳ್ಳುತ್ತಿವೆ ಎಂದು ಹೇಳಿರುವ ಸ್ಟಾಲಿನ್, ಡಿಎಂಕೆ ಎಂದಿಗೂ ತಮಿಳುನಾಡಿನ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಅಥವಾ ತನ್ನ ತತ್ವಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.