'We Love you yogiji: ನಿಮ್ಮ ಹಿಂದುತ್ವದ ರಾಜಕೀಯ ನಮಗೆ ಇಷ್ಟ; cm ಯೋಗಿ ಆದಿತ್ಯನಾಥ್ ಗುಣಗಾನ; BJPಯಲ್ಲಿ ಬಿರುಕು ಮೂಡಿಸುವ ಯತ್ನ'
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಯಾರು ಮುನ್ನಡೆಸುತ್ತಾರೆ ಮತ್ತು ಅಂತಿಮವಾಗಿ ಮುಖ್ಯಮಂತ್ರಿ ಕುರ್ಚಿಯನ್ನು ಯಾರು ಅಲಂಕರಿಸುತ್ತಾರೆ ಎಂಬ ವಿಷಯದಲ್ಲಿ ಯೋಗಿ ಆದಿತ್ಯನಾಥ್ ಮತ್ತು ಕೇಶವ್ ಪ್ರಸಾದ್ ಮೌರ್ಯ ಅವರ ನಡುವೆ ಭಿನ್ನಾಭಿಪ್ರಾಯವಿರುವಂತೆ ತೋರುವ ಹೊತ್ತಲ್ಲೇ ಈ ಹೇಳಿಕೆ ಬಂದಿದೆ.
ನವದೆಹಲಿ: 2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಪಕ್ಷದೊಳಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿದ್ದಾರೆ. ಅವರನ್ನು 'ಸಮರ್ಥ ನಾಯಕ' ಮತ್ತು 'ಹಿಂದುತ್ವದ ಪ್ರಮುಖ ಮುಖಗಳಲ್ಲಿ ಒಬ್ಬರು' ಎಂದು ಬಣ್ಣಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್ ಯೋಗಿ ಆದಿತ್ಯನಾಥ್ ಅವರು ತಮ್ಮನ್ನು ತಾವೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿಕೊಂಡಿದ್ದರೆ, ಅದು ಶ್ಲಾಘನೀಯ. ಅವರು ಸಮರ್ಥ ವ್ಯಕ್ತಿಯಾಗಿದ್ದು, ನಮಗೂ ಯೋಗಿಜೀ ಎಂದರೆ ಬಹಳ ಇಷ್ಟ. ಯೋಗಿ ಆದಿತ್ಯನಾಥ್ ಅವರು ಈ ದೇಶದಲ್ಲಿ ಹಿಂದುತ್ವದ ಅತ್ಯುನ್ನತ ಮುಖವಾಗಿದ್ದಾರೆ" 'ಯೋಗಿ ಇದ್ದರೆ ಯುಪಿ (ಉತ್ತರ ಪ್ರದೇಶ); ಯೋಗಿ ಇಲ್ಲದಿದ್ದರೆ ಯುಪಿಯೇ ಇಲ್ಲ' ಎಂಬ ಸ್ಥಿತಿ ಇದೆ, ಎಂದು ರಾವತ್ ಹಾಡಿ ಹೊಗಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುತ್ತದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ರಾಜ್ಯದ ರಾಜಕೀಯ ಪರಿಸ್ಥಿತಿಯ ಸಂಪೂರ್ಣ ವಿಶ್ಲೇಷಣೆ ಬಳಿಕವೇ ಅವರು ಇಂತಹ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ನಾವು ಉತ್ತರ ಪ್ರದೇಶ ಮುಖ್ಯಮಂತ್ರಿಗಳಿಗೆ ಬೆಂಬಲ ನೀಡುತ್ತೇವೆ. ಅವರ ಹಿಂದುತ್ವದ ರಾಜಕೀಯ ನಮಗೆ ಇಷ್ಟ" ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಯಾರು ಮುನ್ನಡೆಸುತ್ತಾರೆ ಮತ್ತು ಅಂತಿಮವಾಗಿ ಮುಖ್ಯಮಂತ್ರಿ ಕುರ್ಚಿಯನ್ನು ಯಾರು ಅಲಂಕರಿಸುತ್ತಾರೆ ಎಂಬ ವಿಷಯದಲ್ಲಿ ಯೋಗಿ ಆದಿತ್ಯನಾಥ್ ಮತ್ತು ಅವರ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ನಡುವೆ ಭಿನ್ನಾಭಿಪ್ರಾಯವಿರುವಂತೆ ತೋರುತ್ತಿರುವ ಹೊತ್ತಲ್ಲೇ ರಾವತ್ ಅವರ ಈ ಹೇಳಿಕೆ ಹೊರಬಿದ್ದಿದೆ.
2027ರ ಚುನಾವಣೆಯ ನಂತರ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಪಕ್ಷದ ನೂತನ ಶಾಸಕರು ನಿರ್ಧರಿಸುತ್ತಾರೆ ಎಂದು ಕೇಶವ್ ಪ್ರಸಾದ್ ಮೌರ್ಯ ಹೇಳಿದ ನಂತರ, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಚರ್ಚೆ ತೀವ್ರಗೊಂಡಿತು. ನಾಯಕತ್ವದ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದು ಎಲ್ಲರಿಗೂ ತಿಳಿದೇ ಇದೆ ಎಂದು ಹೇಳಿದ್ದರು. ಸಂಜಯ್ ರಾವತ್ ಹೇಳಿಕೆ ಕೇಂದ್ರ ಬಿಜೆಪಿ ನಾಯಕರು ಮತ್ತು ಉತ್ತರ ಪ್ರದೇಶ ನಾಯಕರ ನಡುವೆ ಬಿರುಕು ಮೂಡಿಸಲು ಮಾಡುತ್ತಿರುವ ಪ್ರಯತ್ನ ಎಂದು ಹೇಳಲಾಗಿದೆ.
ಇದೇ ವೇಳೆ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ 'ಕಮಲ'ವೇ (ಬಿಜೆಪಿ ಚಿಹ್ನೆ) ಪಕ್ಷದ ಮುಖವಾಗಿರುತ್ತದೆ ಎಂದು ಮೌರ್ಯ ಒತ್ತಿ ಹೇಳಿದರು. ಫಲಿತಾಂಶದ ನಂತರ, ಆಯ್ಕೆಯಾದ ಶಾಸಕರು ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ಸಭೆ ಸೇರಿ ತಮ್ಮ ನಾಯಕನನ್ನು ಸರ್ವಾನುಮತದಿಂದ ಆಯ್ಕೆ ಮಾಡುತ್ತಾರೆ ಎಂದು ಅವರು ತಿಳಿಸಿದರು.
ಯೋಗಿ ಆದಿತ್ಯನಾಥ್ ಪ್ರಸ್ತುತ ಮುಖ್ಯಮಂತ್ರಿಯಾಗಿದ್ದಾರೆ ಎಂಬುದನ್ನು ಒಪ್ಪಿಕೊಂಡರೂ, 2027ರ ಚುನಾವಣೆಯ ನಂತರ ಅವರು ಈ ಹುದ್ದೆಯಲ್ಲಿ ಮುಂದುವರಿಯುತ್ತಾರೆಯೇ ಅಥವಾ ಬೇರೆಯವರು ಅಧಿಕಾರ ವಹಿಸಿಕೊಳ್ಳುತ್ತಾರೆಯೇ ಎಂಬುದನ್ನು ಶಾಸಕರೇ ನಿರ್ಧರಿಸಬೇಕಾಗುತ್ತದೆ ಎಂದು ಮೌರ್ಯ ಹೇಳಿದರು. ಜೊತೆಗೆ, ಆದಿತ್ಯನಾಥ್ ಅವರಿಗೆ ತಮ್ಮ ಬೆಂಬಲವಿರುವುದನ್ನೂ ಅವರು ಪುನರುಚ್ಚರಿಸಿದರು.
2017 ಅಥವಾ 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಿಗೂ ಮುನ್ನ, ಬಿಜೆಪಿ ಯೋಗಿ ಆದಿತ್ಯನಾಥ್ ಅವರನ್ನು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿರಲಿಲ್ಲ. 2017ರಲ್ಲಿ, ಪಕ್ಷವು ರಾಜ್ಯದಲ್ಲಿ ಮೊದಲ ಬಾರಿಗೆ ಸ್ಪಷ್ಟ ಬಹುಮತವನ್ನು ಪಡೆಯಿತು. ಫಲಿತಾಂಶ ಪ್ರಕಟವಾದ ಸುಮಾರು ಒಂದು ವಾರದ ನಂತರ, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.
2022ರಲ್ಲೂ ಬಿಜೆಪಿ ಇದೇ ರೀತಿಯ ವಿಧಾನವನ್ನೇ ಅನುಸರಿಸಿತು. ಒಟ್ಟು 403 ವಿಧಾನಸಭಾ ಸ್ಥಾನಗಳ ಪೈಕಿ 255 ಸ್ಥಾನಗಳನ್ನು ಗೆದ್ದ ನಂತರ, ಪಕ್ಷದ ನೂತನವಾಗಿ ಆಯ್ಕೆಯಾದ ಶಾಸಕರು 2022ರ ಮಾರ್ಚ್ 24ರಂದು ಆದಿತ್ಯನಾಥ್ ಅವರನ್ನು ತಮ್ಮ ನಾಯಕರನ್ನಾಗಿ ಅಧಿಕೃತವಾಗಿ ಆಯ್ಕೆ ಮಾಡಿದರು. ಮರುದಿನ ಅವರು ಮುಖ್ಯಮಂತ್ರಿಯಾಗಿ ಸತತ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು.