ಮಸೂದೆ ಸೋಲಿಸಿದ ಮೇಲೆ ಮುಂದೇನು? ವಿಪಕ್ಷ ನಾಯಕರಿಗೆ ಸ್ಟಾಲಿನ್ ನೇರ ಪ್ರಶ್ನೆ; ತಮಿಳುನಾಡು ಹಿತಾಸಕ್ತಿಗೆ ಬದ್ಧ ಎಂದ DMK; ಸೋನಿಯಾ, ರಾಹುಲ್ ಸಂಧಾನ ವಿಫಲ
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವಂತೆ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರ ಮನವೊಲಿಸಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನಡೆಸಿದ ಸಂಧಾನ ವಿಫಲವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಚೆನ್ನೈ (ತಮಿಳುನಾಡು): ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಹೈಡ್ರಾಮಾ ನಡೆದಿದೆ. ಕೇಂದ್ರ ಸರ್ಕಾರ ಮಂಡಿಸಲಿರುವ ಪರಿಷ್ಕೃತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವಂತೆ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರ ಮನವೊಲಿಸಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚೆನ್ನೈಗೆ ಭೇಟಿ ನೀಡಿದ್ದರು. ಆದರೆ, ಸ್ಟಾಲಿನ್ ಅವರು ಕಾಂಗ್ರೆಸ್ ನಾಯಕರ ಸಂಧಾನವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದು, ತಮಿಳುನಾಡಿನ ಹಿತಾಸಕ್ತಿಯೇ ತಮಗೆ ಮುಖ್ಯ ಎಂದು ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಚೆನ್ನೈ ಸಂಧಾನ ವಿಫಲ
ಚೆನ್ನೈನ ಅಳ್ವಾರ್‌ಪೇಟೆಯಲ್ಲಿರುವ ಎಂ.ಕೆ. ಸ್ಟಾಲಿನ್ ನಿವಾಸಕ್ಕೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಸೇರಿದಂತೆ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಒಂದೇ ಬಸ್ಸಿನಲ್ಲಿ ಸ್ಟಾಲಿನ್ ಅವರ ನಿವಾಸಕ್ಕೆ ತೆರಳಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಮಸೂದೆಯನ್ನು ಒಟ್ಟಾಗಿ ಸೋಲಿಸಬೇಕೆಂದು ನಾಯಕರು ಮನವಿ ಮಾಡಿದರೂ, ಸ್ಟಾಲಿನ್ ತಮ್ಮ ನಿರ್ಧಾರ ಬದಲಿಸದ ಕಾರಣ ಕಾಂಗ್ರೆಸ್ ನಾಯಕರು ಬರಿಗೈಲಿ ವಾಪಸಾಗಿದ್ದಾರೆ.
ಮುಂದುವರೆದು ಸಭೆಯ ವೇಳೆ, ಮಸೂದೆಯನ್ನು ಸೋಲಿಸಿದ ನಂತರ ಮುಂದಿನ ಪರ್ಯಾಯ ಮಾರ್ಗ ಏನು ಮತ್ತು ಮುಂದಿನ ಕಾರ್ಯತಂತ್ರವೇನು ಎಂದು ಡಿಎಂಕೆ ನಾಯಕರು ಇಂಡಿಯಾ ಮೈತ್ರಿಕೂಟದ ನಾಯಕರನ್ನು ಪದೇ ಪದೇ ಪ್ರಶ್ನಿಸಿದರು. ಆದರೆ, ಮಸೂದೆಯನ್ನು ಸೋಲಿಸಬೇಕು ಎಂಬುದನ್ನು ಹೊರತುಪಡಿಸಿ, ಆ ನಂತರ ಏನು ಮಾಡಬೇಕು ಎಂಬ ಬಗ್ಗೆ ತಮ್ಮ ಬಳಿ ಯಾವುದೇ ಸ್ಪಷ್ಟ ಕಾರ್ಯತಂತ್ರವಿಲ್ಲ ಎಂದು ವಿಪಕ್ಷದ ಹಿರಿಯ ನಾಯಕರು ಒಪ್ಪಿಕೊಂಡಿದ್ದಾರೆ. ಜೊತೆಗೆ ಸಭೆಯಲ್ಲಿ ಹಿರಿಯ ಸಂಸದರೊಬ್ಬರು ಮೈತ್ರಿ ಸಂಬಂಧಗಳು ಹಳಸಿದ ರೀತಿಯ ಬಗ್ಗೆ ನಾಯಕರನ್ನು ನೇರವಾಗಿ ಪ್ರಶ್ನಿಸಿದರು, ಆದರೆ ಇದಕ್ಕೆ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸಂಸತ್ ವಿಶೇಷ ಅಧಿವೇಶನದಲ್ಲಿ ಮ್ಯಾಜಿಕ್ ನಂಬರ್ ಆಟ: 6 ಮತಗಳ ಕೊರತೆ ನೀಗಿಸಲು ಮೋದಿ ಸರ್ಕಾರದ ಮಾಸ್ಟರ್ ಪ್ಲ್ಯಾನ್ ಏನು?
ಇನ್ನು, ಸಭೆಯ ಬಳಿಕ ಮಾತನಾಡಿದ ಸ್ಟಾಲಿನ್, "ನಮ್ಮ ನಿಲುವು ಮತ್ತು ಬೇಡಿಕೆಗಳನ್ನು ವಿಪಕ್ಷ ನಾಯಕರಿಗೆ ವಿವರಿಸಿದ್ದೇನೆ. ಒಂದು ವೇಳೆ ನಾವು ಈ ಅವಕಾಶವನ್ನು ಕಳೆದುಕೊಂಡರೆ, ಸ್ವಯಂಚಾಲಿತವಾಗಿ ಕ್ಷೇತ್ರ ಪುನರ್ವಿಂಗಡಣೆ ಜಾರಿಯಾಗಿ ತಮಿಳುನಾಡಿನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಕನಿಷ್ಠ ಖಾತರಿಯೂ ಇಲ್ಲದಂತಾಗುತ್ತದೆ ಎಂಬುದು ನಮ್ಮ ಆತಂಕವಾಗಿದೆ" ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಸಭೆಯ ನಂತರ ಡಿಎಂಕೆ ಐಟಿ ವಿಭಾಗವು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, "ನ್ಯಾಯಯುತ ಕ್ಷೇತ್ರ ಪುನರ್ವಿಂಗಡಣೆ (#FairDelimitation) ವಿಷಯದಲ್ಲಿ ಡಿಎಂಕೆ ತನ್ನ ನಿಲುವಿಗೆ ಅಷ್ಟೇ ದೃಢವಾಗಿ ಬದ್ಧವಾಗಿದೆ" ಎಂದು ತಿಳಿಸಿದೆ.
ಹಾಗಾದ್ರೆ, ಸ್ಟಾಲಿನ್ ಖಡಕ್ ನಿರ್ಧಾರಕ್ಕೆ ಕಾರಣವೇನು?
ಪರಿಷ್ಕೃತ ಮಸೂದೆಯಲ್ಲಿ ಲೋಕಸಭೆಯಲ್ಲಿ ತಮಿಳುನಾಡಿನ ಪ್ರಸ್ತುತ ಶೇ. 7.18 ರಷ್ಟು ಸ್ಥಾನಗಳ ಪಾಲನ್ನು ರಕ್ಷಿಸಲಾಗಿದೆ ಮತ್ತು 1971ರ ಜನಗಣತಿಯ ಅನುಪಾತವನ್ನು ಮುಂದಿನ 25 ವರ್ಷಗಳವರೆಗೆ (2051ರವರೆಗೆ) ಮುಂದುವರಿಸಲಾಗಿದೆ. ಡಿಎಂಕೆ ಮುಂದಿಟ್ಟಿದ್ದ ಈ ಎರಡೂ ಪ್ರಮುಖ ಷರತ್ತುಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ, ತಮಿಳುನಾಡು ಮತ್ತು ತಮಿಳರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸ್ಟಾಲಿನ್ ಪ್ರತಿಪಾದಿಸಿದ್ದಾರೆ. "ತಮಿಳುನಾಡಿನ ಹಿತಾಸಕ್ತಿಯ ವಿಚಾರದಲ್ಲಿ ರಾಜಿ ಇಲ್ಲ; ಇತಿಹಾಸ ನಮ್ಮನ್ನು ಕಟ್ಟಬೊಮ್ಮನ್‌ಗಳೆಂದು ಗುರುತಿಸುತ್ತದೆಯೇ ಹೊರತು ಎಟ್ಟಪ್ಪನ್‌ಗಳೆಂದಲ್ಲ" (ಇತಿಹಾಸವು ನಮ್ಮನ್ನು ಗೌರವದಿಂದ ಸ್ಮರಿಸುತ್ತದೆಯೇ ಹೊರತು, ಸ್ವಾರ್ಥಕ್ಕಾಗಿ ಸ್ವಂತ ಜನರಿಗೇ ದ್ರೋಹ ಬಗೆದವರಂತೆ ಅಲ್ಲ) ಎಂದು ಸ್ಟಾಲಿನ್ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.