ಗಾಂಧಿನಗರ: ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಶಂಕರ್‌ಸಿಂಗ್ ವಘೇಲಾ ಅವರು ಶೀಘ್ರದಲ್ಲೇ ಕಾಂಗ್ರೆಸ್‌ಗೆ ಮರುಸೇರ್ಪಡೆಯಾಗುವ ಸಾಧ್ಯತೆಯಿದೆ.
86 ವರ್ಷದ ವಘೇಲಾ ಅವರು ಪಕ್ಷಕ್ಕೆ ಮರಳಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಗುಜರಾತ್ ಕಾಂಗ್ರೆಸ್ ಘಟಕವು ವಘೇಲಾ ಅವರ ಮರುಸೇರ್ಪಡೆಗೆ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಆದರೆ ಪಕ್ಷದ ಹೈಕಮಾಂಡ್‌ನಿಂದ ಅಂತಿಮ ಅನುಮೋದನೆ ಬಾಕಿ ಇದೆ.
ವಘೇಲಾ ಅವರು ಆದಷ್ಟು ಬೇಗ ಪಕ್ಷ ಸೇರಬೇಕೆಂದು ಗುಜರಾತ್ ಕಾಂಗ್ರೆಸ್ ಘಟಕ ಬಯಸಿದೆ. ಮುಂಬರುವ ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅವರನ್ನು ಪ್ರಮುಖ ಪ್ರಚಾರಕರನ್ನಾಗಿ(ಸ್ಟಾರ್ ಪ್ರಚಾರಕ) ಬಳಸಿಕೊಳ್ಳಲು ಸ್ಥಳೀಯ ನಾಯಕರು ಯೋಜನೆ ರೂಪಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಶಕ್ತಿ ಸಿಂಗ್ ಗೋಹಿಲ್ ಅವರು, "ಕಾದು ನೋಡಿ, ಸೂಕ್ತ ಸಮಯದಲ್ಲಿ ಎಲ್ಲರಿಗೂ ಸರಿಯಾದ ಉತ್ತರ ಸಿಗಲಿದೆ" ಎಂದು ಹೇಳಿದ್ದಾರೆ.
ಗುಜರಾತ್ ರಾಜಕೀಯದಲ್ಲಿ ವಘೇಲಾ ಅವರಿಗೆ ದೀರ್ಘಕಾಲದ ಅನುಭವ ಇದೆ. ಅವರು ಜನಸಂಘದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ನಂತರ ಕೇಶುಭಾಯ್ ಪಟೇಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರೊಂದಿಗೆ ಸೇರಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) ಕಟ್ಟಿದ ಪ್ರಮುಖರಲ್ಲಿ ಒಬ್ಬರಾದರು. ಆಂತರಿಕ ಭಿನ್ನಾಭಿಪ್ರಾಯಗಳ ನಂತರ, ಅವರು 1996ರಲ್ಲಿ ಬಿಜೆಪಿಯಿಂದ ಹೊರಬಂದು 'ರಾಷ್ಟ್ರೀಯ ಜನತಾ ಪಕ್ಷ' ಎಂಬ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದರು.
ರಾಷ್ಟ್ರೀಯ ಜನತಾ ಪಾರ್ಟಿಗೆ ಕಾಂಗ್ರೆಸ್ ನೀಡಿದ ಬೆಂಬಲದ ಪರಿಣಾಮ 1996ರಿಂದ 1997ರ ಅವಧಿಯಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ವಘೇಲಾ ಸೇವೆ ಸಲ್ಲಿಸಿದ್ದಾರೆ. 1998ರಲ್ಲಿ ತಮ್ಮ ರಾಷ್ಟ್ರೀಯ ಜನತಾ ಪಾರ್ಟಿಯನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ್ದರು. ಬಳಿಕ ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದರು. ಯುಪಿಎ ಸರ್ಕಾರದಲ್ಲಿ ಕೇಂದ್ರದ ಸಚಿವರಾಗಿ ಸೇವೆ ಸಲ್ಲಿಸಿದ ವಘೇಲಾ 2017ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದಿದ್ದರು.