ದಾಹೋದ್: ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಅಗ್ನಿಶಾಮಕ ದಳದ ವಾಹನವೊಂದು ಬಿಜೆಪಿ ಶಾಸಕರೊಬ್ಬರ ಬಂಗಲೆ ತೊಳೆಯಲು ನೀರು ಸಿಂಪಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ದೇವಗಢ್ ಬಾರಿಯಾ ಪುರಸಭೆಯ ಈ ಅಗ್ನಿ ಶಾಮಕ ವಾಹನವು ಧನ್‌ಪುರ್ ತಾಲೂಕಿನಲ್ಲಿರುವ ಬಿಜೆಪಿ ಶಾಸಕ ಬಚುಭಾಯ್ ಖಬಾದ್ ಅವರ ನಿವಾಸದ ಬಳಿ ಕಂಡುಬಂದಿದ್ದು, ಬಂಗಲೆಯ ಸುತ್ತಲೂ ನೀರು ಸಿಂಪಡಿಸಲಾಗುತ್ತಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ತುರ್ತು ಸೇವೆಯ ಅಗ್ನಿಶಾಮಕ ವಾಹನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಖಬಾದ್ ಅವರಿಗೆ 2,700 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಈ ಬಗ್ಗೆ 'ಎಎನ್‌ಐ' ANI) ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದೇವಗಢ್ ಬಾರಿಯಾ ಪುರಸಭೆಯ ಅಧ್ಯಕ್ಷ ಘಮೇಶ್ ಕಲಾಲ್, ಅಗ್ನಿಶಾಮಕ ವಾಹನವನ್ನು ಕಳುಹಿಸುವಂತೆ ಕೋರಿ ಶಾಸಕರಿಂದ ನನಗೆ ಕರೆ ಬಂದಿತ್ತು. ಏನಾದರೂ ಗಂಭೀರ ಘಟನೆ ಸಂಭವಿಸಿರಬಹುದು ಎಂದು ಭಾವಿಸಿ, ನಾನು ತಕ್ಷಣವೇ ಅಗ್ನಿಶಾಮಕ ದಳವನ್ನು ಸಂಪರ್ಕಿಸಿ ವಾಹನವನ್ನು ಕಳುಹಿಸಿದೆ" ಎಂದು ಹೇಳಿದ್ದಾರೆ.
ಬಂಗಲೆ ಸ್ವಚ್ಛತೆಗಾಗಿ ನಮ್ಮನ್ನು ಕರೆಸಿಕೊಳ್ಳಲಾಗಿತ್ತೆಂದು ತಮಗೆ ತಿಳಿದಿರಲಿಲ್ಲ ಎಂದು ಅಗ್ನಿ ಶಾಮಕ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಬಂಗಲೆ ತೊಳಿಯಬೇಕೆಂದು ನಮಗೆ ಮುಂಚಿತವಾಗಿ ತಿಳಿದಿರಲಿಲ್ಲ. ಹೀಗಾಗಿ ಈ ಅಚಾತುರ್ಯ ನಡೆದುಹೋಗಿದೆ. ಈಗ ನಾವು ತಪ್ಪಿತಸ್ಥರಿಂದ ದಂಡವನ್ನು ವಸೂಲು ಮಾಡಿದ್ದೇವೆಂದು ಇಲಾಖೆ ಸ್ಪಷ್ಟನೆ ನೀಡಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಬೃಹತ್ ಬಂಗಲೆಯೊಂದರ ಎದುರಿಗೆ ಅಗ್ನಿಶಾಮಕ ದಳದ ವ್ಯಾನ್ನಿಂತಿದ್ದು, ಸಿಬ್ಬಂದಿಗಳು ಪೈಪ್ ಹಿಡಿದುಕೊಂಡು ಬಂಗಲೆಯ ಕಂಪೌಂಡ್ ಹಾಗೂ ಗೋಡೆಗಳಿಗೆ ನೀರನ್ನು ಸಿಂಪಡಿಸುವ ಮೂಲಕ ಸ್ವಚ್ಛಗೊಳಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.