ನವದೆಹಲಿ: ಕರ್ನಾಟಕ ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ವೇಳೆ ಕೈಬಿಡಲಾಗಿರುವ ಸುಮಾರು 13.3 ಕೋಟಿ ಮತದಾರರನ್ನು ಪತ್ತೆಹಚ್ಚಲು ಕಾಂಗ್ರೆಸ್ ‘ಮತ ರಕ್ಷಕ’ರನ್ನು ನೇಮಿಸಲು ನಿರ್ಧರಿಸಿದೆ.
ಮತದಾರರ ಪಟ್ಟಿಯಿಂದ ಅಕ್ರಮವಾಗಿ ಕೈಬಿಡಲಾಗಿರುವ ಮತದಾರರನ್ನು ಸಂಪರ್ಕಿಸಿ ಮತ್ತೆ ಮತದಾರರಾಗಿ ನೋಂದಣಿಯಾಗಲು ನೆರವು ನೀಡುವುದು ಈ ಅಭಿಯಾನದ ಉದ್ದೇಶ.
ಅಕ್ಟೋಬರ್ 25ರಿಂದ ನವೆಂಬರ್ 25ರವರೆಗೆ ಮತ ರಕ್ಷಕ ಅಭಿಯಾನ ನಡೆಯಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಎಸ್ಐಆರ್ ಗೂ ಮೊದಲು ಮತ್ತು ನಂತರ ಪ್ರಕಟವಾಗಿರುವ ಮತದಾರರ ಪಟ್ಟಿಗಳನ್ನು ಹೋಲಿಕೆ ಮಾಡಿ, ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಹೆಸರು ಕೈಬಿಡಲಾಗಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಈ ಪಟ್ಟಿಯನ್ನು ‘ವೋಟ್ ರಕ್ಷಕ’ರು ಮತ್ತು ಮತಗಟ್ಟೆ ಮಟ್ಟದ ಏಜೆಂಟ್ ಗಳಿಗೆ (BLA) ನೀಡಲಾಗುತ್ತದೆ.
ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರನ್ನು ‘ವೋಟ್ ರಕ್ಷಕ’ರು ಸಂಪರ್ಕಿಸಲಿದ್ದಾರೆ. ಅವರ ಹೆಸರು ಏಕೆ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದನ್ನು ಪರಿಶೀಲಿಸಲಿದ್ದಾರೆ. ಅಕ್ರಮವಾಗಿ ಅವರ ಹೆಸರು ಕೈಬಿಡಲಾಗಿದೆ ಎಂದು ಕಂಡುಬಂದರೆ, ಮತದಾರರ ಹೇಳಿಕೆಯನ್ನು ದಾಖಲಿಸಿಕೊಂಡು ‘ಫಾರ್ಮ್ 6’ ಮೂಲಕ ಮತ್ತೆ ಮತದಾರರಾಗಿ ನೋಂದಣಿಗೆ ಅರ್ಜಿ ಸಲ್ಲಿಸಲು ನೆರವಾಗಲಿದ್ದಾರೆ.
ಈ ಸಂಪೂರ್ಣ ಪ್ರಕ್ರಿಯೆಯನ್ನು ಕಾಂಗ್ರೆಸ್ ನ ‘ಕನೆಕ್ಟ್ ಸೆಂಟರ್’ ಮೇಲ್ವಿಚಾರಣೆ ಮಾಡಲಿದೆ. ಕನೆಕ್ಟ್ ಸೆಂಟರ್ ಅಗತ್ಯ ಮಾಹಿತಿಯನ್ನು ಒದಗಿಸಿ, ವಿವಿಧ ಘಟಕಗಳ ನಡುವೆ ಸಮನ್ವಯ ಸಾಧಿಸಲಿದೆ. ಒಂದು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ.
ಸದ್ಯ ಕನಿಷ್ಠ 8 ರಾಜ್ಯಗಳಿಗೆ ಸಂಬಂಧಿಸಿದ ದತ್ತಾಂಶ ಕಾಂಗ್ರೆಸ್ ಬಳಿ ಇದೆ. ಶೀಘ್ರದಲ್ಲೇ ಇತರ ರಾಜ್ಯಗಳ ಮಾಹಿತಿಯೂ ಲಭ್ಯವಾಗುವ ನಿರೀಕ್ಷೆಯಿದೆ. ಇತ್ತೀಚೆಗೆ ತೆಲಂಗಾಣದ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿತ್ತು.
ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗಿರುವ 13.3 ಕೋಟಿ ಮತದಾರರನ್ನು ಸಂಪರ್ಕಿಸುವ ನಿರ್ಧಾರವನ್ನು ಕಳೆದ ತಿಂಗಳು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಸೋಮವಾರ ನಡೆದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು ಹಾಗೂ ರಾಜ್ಯ ಘಟಕದ ಅಧ್ಯಕ್ಷರ ಸಭೆಯಲ್ಲಿ ಈ ಕುರಿತ ವಿವರವಾದ ಕಾರ್ಯಯೋಜನೆ ರೂಪಿಸಲಾಗಿದೆ.
‘ವೋಟ್ ಬಚಾವೋ, ದೇಶ್ ಬಚಾವೋ’ ಘೋಷಣೆಯೊಂದಿಗೆ ಅಕ್ಟೋಬರ್ 10ರಿಂದ ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧ ದೇಶದಾದ್ಯಂತ ಅಭಿಯಾನ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ.