ಮಣಿಪುರದಲ್ಲಿ ಹಿಂಸಾಚಾರ 
ದೇಶ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಕಾಮ್‌ಜೋಂಗ್ ಜಿಲ್ಲೆಯ ಚಸ್ಸಾದ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 23 ವರ್ಷದ ಮೈಕೆಲ್ ನ್ಗಮಿನ್‌ಲೆನ್ ಹಾಕಿಪ್ ಅವರನ್ನು ಶಂಕಿತ ಸಶಸ್ತ್ರ ಗುಂಪುಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ..

ಇಂಫಾಲ್: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಶನಿವಾರ ಕಾಮ್‌ಜೋಂಗ್ ಮತ್ತು ಉಖ್ರುಲ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಗುಂಡಿನ ದಾಳಿಗಳಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದೇ ವೇಳೆ, ಕಾಮ್‌ಜೋಂಗ್ ಜಿಲ್ಲೆಯ ಚಸ್ಸಾದ್ ಪ್ರದೇಶದಲ್ಲಿ 10 ಮನೆಗಳು ಮತ್ತು 20 ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಸರಣಿ ಹಿಂಸಾತ್ಮಕ ಘಟನೆಗಳಿಂದ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ನಾಗಾ ಮತ್ತು ಕುಕಿ-ಝೋ ಸಮುದಾಯಗಳ ನಡುವೆ ಇತ್ತೀಚಿನ ದಿನಗಳಲ್ಲಿ ಸಂಘರ್ಷ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್‌ಪೋಕ್ಪಿ ಜಿಲ್ಲೆಯಾದ್ಯಂತ ಶನಿವಾರ ಸಂಜೆ 6 ಗಂಟೆಯಿಂದ 24 ಗಂಟೆಗಳ ಸಂಪೂರ್ಣ ಬಂದ್‌ಗೆ ಬುಡಕಟ್ಟು ಏಕತಾ ಸಮಿತಿ (CoTU) ಕರೆ ನೀಡಿದೆ.

ಕಾಮ್‌ಜೋಂಗ್ ಜಿಲ್ಲೆಯ ಚಸ್ಸಾದ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 23 ವರ್ಷದ ಮೈಕೆಲ್ ನ್ಗಮಿನ್‌ಲೆನ್ ಹಾಕಿಪ್ ಅವರನ್ನು ಶಂಕಿತ ಸಶಸ್ತ್ರ ಗುಂಪುಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಗುಂಡಿನ ದಾಳಿ

ಉಖ್ರುಲ್ ಜಿಲ್ಲೆಯ ಟಿ.ಎಂ. ಕಾಸೋಮ್ ಸಮೀಪದ ಯೌಲನ್ ಪ್ರದೇಶದಲ್ಲಿಯೂ ಮತ್ತೊಂದು ಗುಂಡಿನ ದಾಳಿ ನಡೆದಿದೆ. ಇಲ್ಲಿ 40 ವರ್ಷದ ಸಂದೀಪ್ ರೈ ಅವರು ಚಲಾಯಿಸುತ್ತಿದ್ದ ನಾಲ್ಕು ಚಕ್ರದ ವಾಹನದ ಮೇಲೆ ಶಂಕಿತ ಸಶಸ್ತ್ರ ವ್ಯಕ್ತಿಗಳು ಹೊಂಚು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗುಂಡಿನ ದಾಳಿಯಲ್ಲಿ ಸಂದೀಪ್ ರೈ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯ ಕುರಿತು ತನಿಖೆ ನಡೆಸಲು ಜಿಲ್ಲಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಇದಕ್ಕೂ ಮುನ್ನ ಶುಕ್ರವಾರ ರಾತ್ರಿ ಸುಮಾರು 9.40ರ ವೇಳೆಗೆ ಚಸ್ಸಾದ್ ಪ್ರದೇಶದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಐವರು ಮಕ್ಕಳ ತಾಯಿಯಾದ ಕುಕಿ ಮಹಿಳೆ ಡೊಂಖೋನೇಯಿ ತೌಥಾಂಗ್ ಮೃತಪಟ್ಟಿದ್ದರು ಎಂದು ವರದಿಯಾಗಿದೆ.

ಇದಲ್ಲದೆ, ಮಣಿಪುರ–ಮ್ಯಾನ್ಮಾರ್ ಗಡಿ ಭಾಗದ ಕಾಮ್‌ಜೋಂಗ್ ಜಿಲ್ಲೆಯ ನಿಂಗ್‌ಚೌ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಸುಮಾರು 9.30ರ ವೇಳೆಗೆ ಇಬ್ಬರು ನಾಗಾ ಗ್ರಾಮಸ್ಥರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತರನ್ನು 35 ವರ್ಷದ ಙಚಾನ್ಸೊ ನಿಂಗ್ಶೆನ್ ಮತ್ತು 48 ವರ್ಷದ ಲೈಶಿಶನ್ ಲೈಶದಾಂಗ್ ಎಂದು ಗುರುತಿಸಲಾಗಿದೆ.

ಈ ಗುಂಡಿನ ದಾಳಿಗಳ ಹಿಂದಿನ ಕಾರಣ ಹಾಗೂ ದಾಳಿಕೋರರ ಗುರುತು ತಕ್ಷಣಕ್ಕೆ ತಿಳಿದುಬಂದಿಲ್ಲ. ವರದಿಗಳ ಪ್ರಕಾರ, ಈ ಸರಣಿ ಘಟನೆಗಳಲ್ಲಿ ಐವರು ಮೃತಪಟ್ಟಿದ್ದಾರೆ. ಅವರಲ್ಲಿ ನಾಲ್ವರು ಕಾಮ್‌ಜೋಂಗ್ ಜಿಲ್ಲೆಯಲ್ಲಿ ಹಾಗೂ ಒಬ್ಬರು ನೆರೆಯ ಉಖ್ರುಲ್ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

10 ಮನೆ, 20 ಅಂಗಡಿಗಳಿಗೆ ಬೆಂಕಿ

ಚಸ್ಸಾದ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಕನಿಷ್ಠ 10 ಮನೆಗಳು ಹಾಗೂ 20 ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಆಸ್ತಿಪಾಸ್ತಿಗೆ ಉಂಟಾದ ನಿಖರ ಹಾನಿ ಮತ್ತು ಎಷ್ಟು ಜನರು ಮನೆ ತೊರೆಯಬೇಕಾಯಿತು ಎಂಬ ವಿವರಗಳು ಇನ್ನೂ ಲಭ್ಯವಾಗಿಲ್ಲ. ಪರಿಸ್ಥಿತಿಯನ್ನು ನಿಯಂತ್ರಿಸಲು ಕಾಮ್‌ಜೋಂಗ್ ಜಿಲ್ಲಾಡಳಿತವು ಚಸ್ಸಾದ್ ಪೊಲೀಸ್ ಗೇಟ್ ಜಂಕ್ಷನ್ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದೆ.

ಅಕ್ಟೋಬರ್ 9ರಂದು ಹೊರಡಿಸಿದ ಆದೇಶದಲ್ಲಿ ಜಿಲ್ಲಾಧಿಕಾರಿ ಎಲ್.ಎನ್. ಕಾಶುಂಗ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಸೆಕ್ಷನ್ 163ರ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಿದ್ದಾರೆ. ಜಂಕ್ಷನ್‌ನ 400 ಮೀಟರ್ ವ್ಯಾಪ್ತಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು, ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವುದನ್ನು ಹಾಗೂ ಮನೆಗಳಿಂದ ಹೊರಗೆ ಸಂಚರಿಸುವುದನ್ನು ನಿಷೇಧಿಸಲಾಗಿದೆ.

ಮುಂದಿನ ಆದೇಶದವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರಲಿವೆ. ಭದ್ರತಾ ಸಿಬ್ಬಂದಿ, ಕರ್ತವ್ಯದಲ್ಲಿರುವ ಮ್ಯಾಜಿಸ್ಟ್ರೇಟ್‌ಗಳು, ಅಗತ್ಯ ಸೇವೆಗಳ ಸಿಬ್ಬಂದಿ ಮತ್ತು ವಿಶೇಷ ಅನುಮತಿ ಪಡೆದವರಿಗೆ ವಿನಾಯಿತಿ ನೀಡಲಾಗಿದೆ.

ಕಾಂಗ್‌ಪೋಕ್ಪಿಯಲ್ಲಿ 24 ಗಂಟೆ ಬಂದ್‌ಗೆ ಕರೆ

ಚಸ್ಸಾದ್‌ನಲ್ಲಿ ನಡೆದ ಹತ್ಯೆಗಳು ಹಾಗೂ ಉಖ್ರುಲ್ ಜಿಲ್ಲೆಯ ಯೌಲನ್ ಮತ್ತು ಇಂಫಾಲ್–ತೆಂಗ್ನೌಪಾಲ್ ರಸ್ತೆಯಲ್ಲಿನ ಸಂಘರ್ಷದ ಆರೋಪಗಳನ್ನು ಉಲ್ಲೇಖಿಸಿ, CoTU ಸಾದರ್ ಹಿಲ್ಸ್ ಸಂಘಟನೆಯು ಕಾಂಗ್‌ಪೋಕ್ಪಿ ಜಿಲ್ಲೆಯಾದ್ಯಂತ ಶನಿವಾರ ಸಂಜೆ 6 ಗಂಟೆಯಿಂದ 24 ಗಂಟೆಗಳ ಬಂದ್‌ಗೆ ಕರೆ ನೀಡಿದೆ. ತುರ್ತು ವೈದ್ಯಕೀಯ ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ.

ಕುಕಿ ವರ್ಕರ್ಸ್ ಯೂನಿಯನ್ (KWU) ಡೊಂಖೋನೇಯಿ ತೌಥಾಂಗ್ ಮತ್ತು ಮೈಕೆಲ್ ಙಮಿನ್‌ಲೆನ್ ಹಾಕಿಪ್ ಅವರ ಹತ್ಯೆಗಳನ್ನು ಖಂಡಿಸಿದೆ. ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 103 ಮತ್ತು 105ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು, ಐಆರ್‌ಬಿ (IRB) ಭದ್ರತಾ ಕಾವಲು ಕೇಂದ್ರವನ್ನು ತೆರವುಗೊಳಿಸಬೇಕು ಹಾಗೂ ಸ್ವತಂತ್ರ ತನಿಖೆ ನಡೆಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಭದ್ರತಾ ಪರಿಸ್ಥಿತಿ ಬಗ್ಗೆ ಮಾಜಿ ಸಿಎಂ ಆತಂಕ

ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ರಾಜ್ಯದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಒಂದೇ ದಿನದಲ್ಲಿ ರಾಜ್ಯದ ವಿವಿಧೆಡೆ ನಡೆದ ಹಿಂಸಾತ್ಮಕ ಘಟನೆಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಕಾಮ್‌ಜೋಂಗ್ ಜಿಲ್ಲೆಯ ನಿಂಗ್‌ಚೌ ಗ್ರಾಮದಲ್ಲಿ ನಡೆದ ದಾಳಿ, ಮಕುಯಿ–ಇಂಫಾಲ್–ತಮೆಂಗ್ಲಾಂಗ್ ರಸ್ತೆಯಲ್ಲಿನ ಹಿಂಸಾಚಾರ ಹಾಗೂ ಚಸ್ಸಾದ್‌ನಲ್ಲಿನ ಘಟನೆಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಕಾಮ್‌ಜೋಂಗ್‌ನಲ್ಲಿ ಪೊಲೀಸ್ ಠಾಣೆಯೊಂದಕ್ಕೆ ಬೆಂಕಿ ಹಚ್ಚಿರುವ ವರದಿಯನ್ನೂ ಉಲ್ಲೇಖಿಸಿದ್ದಾರೆ. ಅಲ್ಲದೆ, ಕಾಂಗ್‌ಪೋಕ್ಪಿ ಜಿಲ್ಲೆಯ ಮಕುಯಿ ಅಶಾಂಗ್ ಗ್ರಾಮದ ಇಬ್ಬರು ನಾಗಾ ನಿವಾಸಿಗಳು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸಶಸ್ತ್ರ ಗುಂಪುಗಳು ನಾಗರಿಕರನ್ನು ಹತ್ಯೆ ಮಾಡುವುದು, ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚುವುದು ಹಾಗೂ ಭಾರತೀಯ ರಾಜ್ಯದ ಅಧಿಕಾರಕ್ಕೆ ಸವಾಲು ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿರೇನ್ ಸಿಂಗ್ ಹೇಳಿದ್ದಾರೆ.

ಕಾನೂನು ಸುವ್ಯವಸ್ಥೆಗೆ ಗಂಭೀರ ಸವಾಲು!

ಅಕ್ರಮವಾಗಿ ಇರಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಬೇಕು, ಸಶಸ್ತ್ರ ಗುಂಪುಗಳ ವಿರುದ್ಧ ನಿರ್ಣಾಯಕ ಕಾರ್ಯಾಚರಣೆ ನಡೆಸಬೇಕು ಹಾಗೂ ಭಾರತ–ಮ್ಯಾನ್ಮಾರ್ ಗಡಿಯಲ್ಲಿ ಭದ್ರತೆಯನ್ನು ಬಲಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರದ ಭದ್ರತಾ ಪಡೆಗಳು ವಿಳಂಬವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಅವರು, ಪರಿಸ್ಥಿತಿಯನ್ನು ಆಂತರಿಕ ಭದ್ರತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಗಂಭೀರ ಸವಾಲು ಎಂದು ಬಣ್ಣಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌