ನವದೆಹಲಿ: ದೆಹಲಿ ಪೊಲೀಸರ ವಶದಿಂದ ಬಿಡುಗಡೆಯಾದ ಕೆಲವೇ ಗಂಟೆಗಳ ನಂತರ, ಶನಿವಾರ ತಮ್ಮ ಅಜ್ಜಿ ನಿಧನರಾದ ಹಿನ್ನೆಲೆಯಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಮಹಾರಾಷ್ಟ್ರದಲ್ಲಿರುವ ತಮ್ಮ ಊರಿಗೆ ತೆರಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಅಧಿಕಾರಿಗಳು ತಡೆಹಿಡಿದಿದ್ದರೂ, ತಮ್ಮ ಸಂಘಟನೆಯು 'ಹಿಂದೆ ಸರಿಯುವುದಿಲ್ಲ' ಎಂದ ಅವರು, CJPಯ ಸಹ-ಸಂಯೋಜಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
'ಈ ದುಃಖದ ಸಮಯದಲ್ಲಿ ನನ್ನ ಕುಟುಂಬದೊಂದಿಗೆ ಇರಲು ನಾನು ನನ್ನ ಊರಿಗೆ ಮರಳುತ್ತಿದ್ದೇನೆ. ಸೌರವ್ ಮತ್ತು ಅಶು ಶೀಘ್ರದಲ್ಲೇ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಿಜೆಪಿ ಎಂದಿಗೂ ಹಿಂದೆ ಸರಿಯುವುದಿಲ್ಲ ಅಥವಾ ಬೆದರಿಕೆಗೆ ಮಣಿಯುವುದಿಲ್ಲ. ಅಕ್ಟೋಬರ್ 10 ಈ ಸರ್ವಾಧಿಕಾರದ ಅಂತ್ಯದ ಆರಂಭದ ದಿನವಾಗಿ ದಾಖಲಾಗಲಿದೆ' ಎಂದು ಅವರು 'ಎಕ್ಸ್'ನಲ್ಲಿ ಬರೆದಿದ್ದಾರೆ.
ಸಿಜೆಪಿ ನಾಯಕರ ಬಿಡುಗಡೆ
ಭಾನುವಾರ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ ಅಬಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಬಿಡುಗಡೆ ಮಾಡಲಾಯಿತು. ಜಂತರ್ ಮಂತರ್‌ನಲ್ಲಿ ನಡೆಯಬೇಕಿದ್ದ ಪ್ರತಿಭಟನೆಗೂ ಮುನ್ನ, ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ದೀಪ್ಕೆ ಅವರೊಂದಿಗೆ ಇವರಿಬ್ಬರನ್ನೂ ವಶಕ್ಕೆ ಪಡೆಯಲಾಗಿತ್ತು.
ಒಂದು ವರ್ಷದವರೆಗೆ 'ಶಾಂತಿಭಂಗ' ಮಾಡಬಾರದು ಎಂಬ ಷರತ್ತಿನ ಮೇರೆಗೆ ಈ ಮೂವರು ನಾಯಕರನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿಜೆಪಿಯ ಕಾನೂನು ವ್ಯವಹಾರಗಳ ಮುಖ್ಯಸ್ಥೆ ರತ್ನಾ ಸಿಂಗ್ ತಿಳಿಸಿದ್ದಾರೆ.
ಬಿಡುಗಡೆಯಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ತಮ್ಮ ಮೊದಲ ಪೋಸ್ಟ್‌ನಲ್ಲಿ ದೀಪ್ಕೆ, 'ಪ್ರಧಾನಿಯಾಗಿ ಮೋದಿ ಭಾರತಕ್ಕೆ ಮುಜುಗರವನ್ನುಂಟುಮಾಡುತ್ತಿದ್ದಾರೆ. ಇಷ್ಟು ದೊಡ್ಡ ಹೇಡಿ ಮತ್ತು ದರ್ಪ ತೋರುವ ವ್ಯಕ್ತಿಯನ್ನು ಈ ದೇಶ ಹಿಂದೆಂದೂ ಕಂಡಿಲ್ಲ' ಎಂದು ಕಟುವಾಗಿ ಟೀಕಿಸಿದ್ದರು.
ಶನಿವಾರ ದೆಹಲಿಯಾದ್ಯಂತ ನಡೆದ ಬೃಹತ್ ಭದ್ರತಾ ಕಾರ್ಯಾಚರಣೆ ವೇಳೆ ಅವರನ್ನು ವಶಕ್ಕೆ ಪಡೆಯಲಾಯಿತು. ಜಂತರ್ ಮಂತರ್ ತಲುಪದಂತೆ ತಡೆಯುವ ಸಲುವಾಗಿ, ವಿವಿಧ ಸ್ಥಳಗಳಲ್ಲಿ 7,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಲು ಯೋಜಿಸಿದ್ದ ಸಂದರ್ಭದಲ್ಲಿ ಗುರುಗ್ರಾಮ ಪೊಲೀಸರಿಂದ ವಶಕ್ಕೆ ಪಡೆಯಲ್ಪಟ್ಟಿದ್ದ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ಭಾನುವಾರ ನಸುಕಿನ 3 ಗಂಟೆಗೆ ಬಿಡುಗಡೆ ಮಾಡಿ, ಅವರ ಕುಟುಂಬಕ್ಕೆ ಒಪ್ಪಿಸಲಾಯಿತು.