

ಹಿಂಗೋಲಿ (ಮಹಾರಾಷ್ಟ್ರ): ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂಬೈನಿಂದ ದೆಹಲಿಗೆ ಬಂದಿಳಿದ ಅಭಿಜೀತ್ ದೀಪ್ಕೆ ಅವರನ್ನು ವಿಮಾನದ ಒಳಗಡೆಯೇ ದೆಹಲಿ ಪೊಲೀಸರು ವಶಕ್ಕೆ ಪಡೆದ ಕೆಲವೇ ಗಂಟೆಗಳಲ್ಲಿ ದುಃಖದ ಸಂಗತಿ ಸಂಭವಿಸಿದೆ. ಅದರಂತೆ, ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಅಜ್ಜಿ ಸಾವಿತ್ರಿಬಾಯಿ ದೀಪ್ಕೆ (85) ಅವರು ಶನಿವಾರ ಮುಂಜಾನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ತಮ್ಮ ಸ್ವಗ್ರಾಮವಾದ ಸಂತುಕ್ ಪಿಂಪ್ರಿಯಲ್ಲಿ ನಿಧನರಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ತಮ್ಮ ಸ್ವಗ್ರಾಮವಾದ ಸಂತುಕ್ ಪಿಂಪ್ರಿಯಲ್ಲಿ, ಸಾವಿತ್ರಿಬಾಯಿಯವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಅಭಿಜೀತ್ ದೀಪ್ಕೆ ಪೋಷಕರಾದ ಭಗವಾನ್ ದೀಪ್ಕೆ ಮತ್ತು ಅನಿತಾ ಸದ್ಯ ಛತ್ರಪತಿ ಸಂಭಾಜಿನಗರದಲ್ಲಿದ್ದಾರೆ. ಅದರಂತೆ, ತಾಯಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹಿಂಗೋಲಿಯತ್ತ ಪ್ರಯಾಣ ಬೆಳೆಸಿದ್ದು, ಇತ್ತ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಂಭಾಜಿನಗರದ ಎಂಐಡಿಸಿ ವಾಲುಜ್ ಪ್ರದೇಶದಲ್ಲಿರುವ ದೀಪ್ಕೆ ನಿವಾಸಕ್ಕೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಬಿಗಿಗೊಳಿಸಲಾಗಿದೆ.
ಏತನ್ಮಧ್ಯೆ, ಕಳೆದ ಒಂದು ವಾರದಿಂದ ಮುಂಬೈ ಹಾಗೂ ದೆಹಲಿ ಚಳವಳಿಯಲ್ಲೇ ನಿರತರಾಗಿದ್ದ ಅಭಿಜೀತ್, ಕೇವಲ ಫೋನ್ ಮೂಲಕವಷ್ಟೇ ಕುಟುಂಬದ ಸಂಪರ್ಕದಲ್ಲಿದ್ದರು. ಪ್ರಸ್ತುತ ಅವರು ದೆಹಲಿ ಪೊಲೀಸರ ಕಸ್ಟಡಿಯಲ್ಲಿ ಇರುವುದರಿಂದ, ಅಜ್ಜಿಯ ಸಾವಿನ ವಿಚಾರ ಅವರಿಗೆ ತಲುಪಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ